ಪ್ರಿಯಾ ಓದುಗರೇ ಬೆಳಗಾವಿ ಫೋಟೋ ನ್ಯೂಸ್ ನ ವಾರಕ್ಕೊಂದು ಕಥೆ ಮಾಲಿಕೆಯ ಪ್ರತಿ ವಾರ ಓದುಗರ ಸಂಖ್ಯೆ ಹೆಚ್ಚುತ್ತಿದ್ದು ಜನಪ್ರಿಯತೆ ಗೊಂಡು ಎಲ್ಲರ ಮನೆ ಮಾತಾಗಿದೆ. ಅದರಂತೆಯೇ belagaviphotonews. com ನ ಮತ್ತೊಂದು ಸ್ಫೂರ್ತಿದಾಯಕ ಕಥೆಗಳ ಮಾಲಿಕೆಯಲ್ಲಿ ಯುವ ಲೇಖಕಿಯ ಕಥೆಯನ್ನು ಪ್ರಕಟಿಸುತ್ತಿದ್ದೇವೆ.ಸ್ಫೂರ್ತಿದಾಯಕ ಕಥೆಯು ಪ್ರತಿ ಬುಧವಾರ ಪ್ರಕಟಿಸಲಾಗುವುದು.
ಹೌದು ಪ್ರಿಯರೇ ರಾಯಚೂರಿನ ಯುವ ಲೇಖಕಿ ಆರ್. ಬಿ. ಪ್ರಿಯಾಂಕಾ ರವರ ಸ್ಫೂರ್ತಿದಾಯಕ ಕಥೆಯನ್ನು ನಿಮ್ಮ ಮುಂದೆ ಪ್ರಕಟಿಸುತ್ತಿದ್ದೇವೆ.
2021ನೇ ವರ್ಷ ” ಧರೆಗಿಳಿದು ಬಾ ಮಳೆಯೇ “ ಎಂಬ ಕವನ ಸಂಕಲನ ಕೃತಿ ಜಿಲ್ಲಾ ಸಾಹಿತ್ಯ ಪರಿಷತ್ ರಾಯಚೂರು ವತಿಯಿಂದ ಬಿಡುಗಡೆ ಆಗಿದೆ.
2021 ರಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ
” ಹೆಮ್ಮೆಯ ಕನ್ನಡತಿ “
ಪ್ರಶಸ್ತಿ ಪುರಸ್ಕಾರ ಲಭಿಸಿದೆ.
” ಅದ್ಭುತಗಳಲ್ಲೊಂದಾದವರು “ ಎಂಬ ಕವಿತೆ ರಾಜ್ಯ ಮಟ್ಟದಲ್ಲಿ ಆಯ್ಕೆ ಆಗಿ “ಮತ್ತೆ ಮತ್ತೆ ಗಾಂಧಿ” ಎಂಬ ಪುಸ್ತಕದಲ್ಲಿ ಪ್ರಕಟವಾಗಿದೆ.ಮತ್ತು ರವಿಕವಿ ಪ್ರಕಾಶನ ಅಥಣಿ ಇವರ ಸಂಯೋಗದಲ್ಲಿ ಹೊರಬಂದ ರಾಜ್ಯ ಮಟ್ಟದ ಕವನ ಸಂಕಲನ ಕೃತಿಯಾದ ಕಾವ್ಯಾಮೃತ ಎಂಬ ಕವನ ಸಂಕಲನಕ್ಕೆ ಪ್ರಿಯಾಂಕಾ ರವರ ಎರಡು ಕವನಗಳು ಆಯ್ಕೆ ಆಗಿವೆ,
ಹಾಗೂ ರಾಯ್ಕರ್ ಪಬ್ಲಿಕೇಷನ್ಸ್
ದಾವಣಗೆರೆ.
ಅ೦ತ:ಕರಣದೊಡೆಯ
“ಅಪ್ಪುಗೆ”
-ನೂರೊ೦ದು ಭಾವ ನಮನಗಳು…
ಎಂಬ ಕೃತಿಯಲ್ಲಿ ಪ್ರಿಯಾಂಕಾ ರವರ ಕವಿತೆ ಆಯ್ಕೆ ಆಗಿದೆ…ಕಾಲಪಕ್ಷಿ ಹಾಗೂ ಕಾವ್ಯಾಮೃತ ಎಂಬ ಕವನ ಸಂಕಲನದಲ್ಲಿಯೂ ಕವಿತೆಗಳು ಆಯ್ಕೆ ಆಗಿವೆ….
ಹಾಗೆಯೇ ” ಸಖಿ ಕಥಾ “ ಎಂಬ ಕಥಾ ಸಂಕಲನದಲ್ಲಿಯೂ ಕಥೆ ಆಯ್ಕೆ ಆಗಿ ಪ್ರಕಟಣೆ ಗೊಂಡಿದೆ.
ಹಾಗೆಯೇ ಇನ್ನೂ ಇತರ ರಾಜ್ಯ ಮಟ್ಟದ ಕವನ ಸಂಕಲನಗಳಲ್ಲಿಯೂ , ಕವನಗಳು ಆಯ್ಕೆ ಆಗಿವೆ…
ಸೀತಾಳು ಸ್ಮಿತಾ ಳಾದ ಕತೆ
ಇತ್ತೀಚಿಗೆ ನನ್ನ ಗೆಳತಿ ಕಾರ್ಯಕ್ರಮವೊಂದಕ್ಕೆ ಹೋದಾಗ ಅಲ್ಲಿ ನಡೆದ ಘಟನೆಯೊಂದನ್ನು ನನಗೆ ಹೇಳುತ್ತಾ ಹೀಗೆ ಆರಂಭಿಸಿದಳು….
ನಾನು ಸನ್ಮಾನ ಕಾರ್ಯಕ್ರಮವೊಂದಕ್ಕೆ ಹೋದಾಗ ಅಲ್ಲಿ ಗೀತಾ ಎಂಬುವವಳು ಪರಿಚಯವಾದಳು.ಅವಳು ಹೀಗೆ ಮಾತನಾಡುತ್ತಾ ನಮ್ಮ ತಂದೆ -ತಾಯಿ ದೊಡ್ಡ ಶಾಲೆಗೆ ಕಳುಹಿಸಿದ್ದರೆ , ನಾನೂ ಸಹ ಇಂದು ದೊಡ್ಡ ಸಾಧನೆ ಮಾಡಿರುತ್ತಿದ್ದೆ. ನನಗೆ ಒಳ್ಳೆಯ ಗುರುಗಳೂ ಸಿಗಲಿಲ್ಲ, ಮಾರ್ಗದರ್ಶನ ಮಾಡುವವರು ಇರಲಿಲ್ಲ ಎನ್ನುತ್ತಿದ್ದಳು.ಆಗ ನಾನು ನನ್ನ ಪ್ರಕಾರ ಸಾಧನೆ ಮಾಡಲು ಇವ್ಯಾವು ಕಾರಣಗಳೇ ಅಲ್ಲ ಎಂದೇ.
ಹಾಗಾದರೆ ಒಬ್ಬ ಹೆಣ್ಣು ಜೀವನದಲ್ಲಿ ಸಾಧನೆ ಮಾಡಬೇಕಾದರೆ ಒಳ್ಳೆಯ ಶಾಲೆ, ಮಾರ್ಗದರ್ಶನ, ಕುಟುಂಬದವರ ಸಹಕಾರ ಬೇಕಲ್ಲವೇ?.ಇವುಗಳಲ್ಲಿ ಒಂದು ಇರದಿದ್ದರೂ ಸಾಧನೆ ಸಾಧ್ಯವಿಲ್ಲ…! ಎಂದಳು ಗೀತಾ.ಆಗ ನಾನು ಇವೆಲ್ಲದರ ಮೀರಿದ ಸಮಸ್ಯೆಗಳನ್ನು ಎದುರಿಸಿಯೂ ಸಾಧನೆ ಮಾಡಿದವರು ಇದ್ದಾರೆ. ಎನ್ನುತ್ತಾ ಸೀತಾಳ ಕತೆಯನ್ನು ಆರಂಭಿಸಿದೆ…..
ಇಲ್ಲೇ ಪಕ್ಕದ ಸಣ್ಣ ಹಳ್ಳಿ ರಂಗಪುರ. ಹೆಚ್ಚು ಮೂಲಭೂತ ಸೌಕರ್ಯಗಳಿಲ್ಲದ ಊರು.
ತಂದೆ, ತಾಯಿ, ಐದು ಜನ ಮಕ್ಕಳು. ಅದರಲ್ಲಿ ಸೀತಾಳೇ ಹಿರಿಯವಳು, ಅವಳಿಗೆ ಒಬ್ಬ ತಮ್ಮ, ಮೂವರು ತಂಗಿಯರು ಇದ್ದರು. ಇದ್ದ ಒಂದು ಎಕರೆಯಲ್ಲಿ ವ್ಯವಸಾಯ ಮಾಡುತ್ತಿದ್ದರು.ತುಂಬಾ ಬಡತನ ಅಲ್ಲದಿದ್ದರೂ ಊಟಕ್ಕೆ ಕೊರತೆ ಇರಲಿಲ್ಲ.ಸೀತಾಳು ಹತ್ತನೇ ತರಗತಿಯನ್ನು ಊರಲ್ಲಿಯೇ ಮುಗಿಸಿದಳು. ಮುಂದಿನ ವಿದ್ಯಾಭ್ಯಾಸಕ್ಕಾಗಿ ಪಕ್ಕದ ಊರಿಗೆ ಹೋಗಬೇಕಿತ್ತು. ಮನೆಗೆ ಇವಳೇ ಹಿರಿ ಮಗಳಾಗಿದ್ದರಿಂದ ಮನೆಗೆಲಸ ಇವಳೇ ನೋಡಿಕೊಳ್ಳಬೇಕಿತ್ತು. ಹಾಗಾಗಿ, ಓದುವುದು ಇಲ್ಲಿಗೆ ಸಾಕೆಂದು ತಾಯಿ ತಿಳಿ ಹೇಳಿದಳು. ಆದರೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಛಲ ಹೊತ್ತ ಸೀತಾಳಿಗೆ ಈ ಮಾತು ನುಂಗಲಾರದ ತುತ್ತಾಯಿತು. ಹಾಗಾಗಿ ಅವಳು ತನ್ನ ತಂದೆ ತಾಯಿ ಮನವೊಲಿಸಿದಳು.ಆದರೂ ಮನೆಯಲ್ಲಿ ವಿರೋಧಿಸಿದರು.ಮನೆಯವರ ವಿರೋಧದ ನಡುವೆಯೂ ಮುಂದಿನ ವ್ಯಾಸಂಗಕ್ಕೆ ಸೇರಿಕೊಂಡಳು.
ಅವಳು ದಿನನಿತ್ಯ ಮನೆ ಕೆಲಸ ಮುಗಿಸಿ ಶಾಲೆಗೆ ಹೋಗುತ್ತಿದ್ದಳು. ಪುನಃ ಮನೆಗೆ ಬಂದು ಉಳಿದೆಲ್ಲಾ ಕೆಲಸ ಮಾಡುತ್ತಿದ್ದಳು. ನಿಜ ಹೇಳಬೇಏಕೆಂದರೆ ಅವಳ ಓದಿಗೆ ಮನೆಯಲ್ಲಿ ಯಾವುದೇ ಪ್ರೋತ್ಸಾಹ ಸಿಕ್ಕಿರಲಿಲ್ಲ. ಓದಿ ಉದ್ಧಾರ ಆದವರು ಯಾರೂ ಇಲ್ಲ. ನೀನು ಎಷ್ಟು ಓದಿದರೂ ಕೊಟ್ಟ ಮನೆಗೆ ಹೋಗಲೇ ಬೇಕು. ಎಂದು ದಿನವೂ ಇಂತಹ ಮಾತು ಕೇಳಿ ಅವಳಿಗೆ ಜೀವನದ ಮೇಲೆಯೇ ಜಿಗುಪ್ಸೆ ಬಂದಿತ್ತು…! ನನ್ನವರೇ ನನಗೆ ಓದಲು ಬಿಡುತ್ತಿಲ್ಲ ಎಂಬ ನೋವು ಅವಳಿಗೆ ಯಾವಾಗಲೂ ಕಾಡುತ್ತಿತ್ತು. ಎಷ್ಟೋ ಬಾರಿ ಅವಳು ಜೀವನವೇ ಸಾಕೆಂದುಕೊಂಡಾಗ ಅವಳಿಗೆ ತನ್ನ ತಮ್ಮ, ತಂಗಿಯರ ಭವಿಷ್ಯ ನೆನಪಾಗಿ ನೋವನ್ನು ಸಹಿಸಿಕೊಳ್ಳುತ್ತಿದ್ದಳು.
ಮನೆಯಲ್ಲಿ ಕೆಲಸ ಮಾಡಿದರೂ, ಮಾಡದಿದ್ದರೂ ಬೈಯುತ್ತಿದರು, ಯಾವುದೇ ತಪ್ಪಿಗೂ ಅವಳ ಓದನ್ನೇ ಕಾರಣ ಮಾಡುತ್ತಿದ್ದರು.ಇನ್ನೊಂದು ಅವಳ ಸಮಸ್ಯೆ ಎಂದರೆ ಅವಳು ಯಾರೊಂದಿಗೂ ಹೆಚ್ಚು ಮಾತಾಡುತ್ತಿರಲಿಲ್ಲ. ಏನೇ ಸಮಸ್ಯೆ ಇದ್ದರೂ ನೋವಿದ್ದರೂ ಯಾರೊಂದಿಗೂ ಹೇಳಿಕೊಳ್ಳುತ್ತಿರಲಿಲ್ಲ. ಈ ಎಲ್ಲಾ ಸಮಸ್ಯೆ ನಡುವೆಯೂ ಚೆನ್ನಾಗಿ ಓದಿ ಪಿ. ಯು. ಸಿ. ಯಲ್ಲಿ ಮೊದಲ ಸ್ಥಾನದೊಂದಿಗೆ ಉತ್ತಿರ್ಣಳಾದಳು. ಎಂದಾಗ ಗೀತಾಳು ನಿಜಕ್ಕೂ ಸೀತಾ ಗ್ರೇಟ್ ಅಷ್ಟು ಕಷ್ಟದ ನಡುವೆಯೂ ಮೊದಲ ಸ್ಥಾನ ದಲ್ಲಿ ಪಾಸಾಗುವುದು ಸುಲಭವಲ್ಲ ಎಂದಳು. ಆಗ ನಾನು ಕಥೆ ಇನ್ನೂ ಮುಗಿದಿಲ್ಲ,ಅವಳಿಗೆ ನಿಜವಾದ ಸಮಸ್ಯೆಗಳು ಇಲ್ಲಿಂದಲೇ ಆರಂಭವಾಗುತ್ತವೆ…! ಎಂದೆ.
ಅವಳು ಮೊದಲ ಸ್ಥಾನ ದಲ್ಲಿ ಪಾಸಾಗಿದ್ದು ಸ್ವಲ್ಪರಮಟ್ಟಿಗೆ ತಂದೆ, ತಾಯಿಗೆ ಖುಷಿ ನೀಡಿತು. ಸೀತಾಳಿಗೂ ಒಂದೆಡೆ ಖುಷಿ ಏನೆಂದರೆ ತನ್ನ ಮುಂದಿನ ಓದಿಗೆ ಸಹಕರಿಸುತ್ತಾರೆಂದು.ಆದರೆ ಅವಳ ನಿರೀಕ್ಷೆ ಸುಳ್ಳಾಗಿತ್ತು. ಒಳಗೊಳಗೇ ಅವಳಿಗೆ ಗಂಡು ಹುಡುಕಿ ಮದುವೆ ಮಾಡುವ ಪ್ರಯತ್ನ ನಡೆದಿತ್ತು.ಈ ವಿಷಯ ತಿಳಿದ ಅವಳಿಗೆ ಒಂದು ನಿಮಿಷ ಜೀವ ಹೋಗಿ ಬಂದಂತಾಯಿತು. ಏಕೆಂದರೆ ಅವಳು ಅಧಿಕಾರಿಯಾಗಬೇಕೆಂಬ ಕನಸನ್ನು ಈ ಮೊದಲೇ ತಂದೆ ತಾಯಿಗೆ ತಿಳಿಸಿದ್ದಳು. ಸ್ವಲ್ಪ ಕಲಾವಕಾಶ ಕೊಡಿ ಎಂದೂ ಬೇಡಿಕೊಂಡಿದ್ದಳು. ಆದರಿಂದಲೇ ಎಷ್ಟೇ ನೋವು ನೀಡಿದರೂ ಸಹಿಸಿಕೊಂಡು, ಚೆನ್ನಾಗಿ ಓದಿ ಉತ್ತಮ ಅಂಕ ತೆಗೆದಿದ್ದಳು.
ಹೀಗೆ ಎಲ್ಲವನ್ನೂ ತಿಳಿದ ತಂದೆ ತಾಯಿಗಳೇ ಅವರಿವರ ಮಾತುಗಳನ್ನು ಕೇಳಿ ದೂರದ ಊರಿಗೆ ಮದುವೆ ಮಾಡಲು ಪ್ರಯತ್ನಿಸುತ್ತಿರುವುದು ಅವಳಿಗೆ ಸಹಿಸಿಕೊಳ್ಳಲಾಗಲಿಲ್ಲ.ಅವಳ ಮನದಲ್ಲಿ ಒಂದೇ ಗುರಿ ಹೇಗಾದರೂ ಮಾಡಿ ಚೆನ್ನಾಗಿ ಓದಿ ಅಧಿಕಾರಿಯಾಗಬೇಕು. ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಎಲ್ಲಾ ರೀತಿಯಿಂದಲೂ ಹಿಂದುಳಿದ ನಮ್ಮ ಸಮಾಜವನ್ನು ಮುಂದೆ ತರಬೇಕು, ನಮ್ಮ ಊರಿಗೆ ಮೂಲಭೂತ ಸೌಕರ್ಯ ಸಿಗುವಂತೆ ಮಾಡಬೇಕು…! ಎಂದು.ಹಾಗಾಗಿ ಅವಳು ಹೇಗಾದರೂ ಮಾಡಿ ನಾನೂ ಓದಲೇಬೇಕು, ಓದಿ ಓದಿ ಸತ್ತರು ಚಿಂತೆಯಿಲ್ಲ, ಏನಾದರೂ ಸಾಧನೆ ಮಾಡಿಯೇ ಸಾಯುತ್ತೇನೆ ಎಂದು ದೃಢ ನಿರ್ಧಾರ ಮಾಡಿದಳು.
ಇನ್ನೂ ಅವಳ ಸಂಬಂಧಿಕರು ಅವಳನ್ನು ನೋಡುವ ರೀತಿಯೇ ಬೇರೆಯಿತ್ತು!. ಅವಳು ಓದುವುದು ಯಾವುದೇ ಕಾರಣಕ್ಕೂ ಅವರು ಸಹಿಸುತ್ತಿರಲಿಲ್ಲ. ಇಲ್ಲ ಸಲ್ಲದ ಆರೋಪ ಹೊರಿಸಿ ತಂದೆ ತಾಯಿಗಳಿಗೆ ದ್ವೇಷ ಹೆಚ್ಚಾಗುವಂತೆ ಮಾಡುತ್ತಿದ್ದರು. ಮನೆಯವರಿಂದಲೂ, ಹೊರಗಿನವರಿಂದಲೂ ಆರೋಪ, ತಿರಸ್ಕಾರ, ಅವಮಾನಗಳು, ನೋವು ತಾಳಲಾಗದೆ, ಯಾರ ಮುಂದೆಯೂ ಹೇಳಲಾಗದೆ ಕೊರಗಿ ಬೆಂದುಹೋದಳು.ಕೊನೆಗೆ ಅವಳು ಮನೆ ತೊರೆಯುವ ನಿರ್ಧಾರ ಮಾಡಿದಳು. ಇನ್ನು ಮುಂದೆ ಇವರು ನನ್ನನ್ನು ಓದಲು ಬಿಡುವುದಿಲ್ಲ ಎಂದುಕೊಂಡು. ಪತ್ರ ಬರೆದಿಟ್ಟು ಮನೆ ತೊರೆದಳು..!
ಸಿಟಿ ಗೆ ಬಂದು ತನ್ನ ಗೆಳತಿ ಮನೆಯಲ್ಲಿ ಉಳಿದುಕೊಂಡಳು.ಅಲ್ಲಿಯೂ ಅವಳು ಹೆಚ್ಚು ಕಾಲ ಉಳಿಯಲಿಲ್ಲ. ಅವಳ ಗೆಳತಿ ಸಹಾಯದಿಂದ ಉಚಿತ ಹಾಸ್ಟೆಲ್ ಗೆ ಅರ್ಜಿಯನ್ನು ಹಾಕಿದಳು. ನಂತರ ಹಾಸ್ಟೆಲ್ ಗೆ ಸೇರಿಕೊಂಡಳು. ಕೆಲ ದಿನಗಳ ಕಾಲ ಮನೆಗೆಲಸಗಳನ್ನು ಮಾಡಿ ಬಂದ ಹಣದಿಂದ ಸರ್ಕಾರಿ ಕಾಲೇಜಿಗೆ ಡಿಗ್ರಿ ಅಡ್ಮಿಶನ್ ಮಾಡಿಸಿದಳು. ಅವಳು ಹಾಜರಾತಿಯಲ್ಲಿದ್ದ ತನ್ನ ಹೆಸರನ್ನು ” ಸೀತಾಳಿಂದ ಸ್ಮಿತಾ “
ಎಂದು ಬದಲಾಯಿಸಿದಳು. ಏಕೆಂದರೆ ಯಾವುದೇ ಕಾರಣಕ್ಕೂ ತಾನು ಇಲ್ಲಿ ಓದುತ್ತಿರುವ ವಿಷಯ ತನ್ನವರಿಗಾಗಲಿ, ಊರಿನವರಿಗಾಗಲಿ ತಿಳಿಯಬಾರದೆಂದು ಬದಲಾಯಿಸಿದಳು.ಕೆಲಸ ಮಾಡಿದ ಇನ್ನುಳಿದ ಹಣದಿಂದ ಪುಸ್ತಕಗಳನ್ನು ಕೊಂಡುಕೊಂಡಳು.ಇವಳು ತನ್ನ ಕುಟುಂಬವನ್ನು ತೊರೆದ ನೋವು ಇವಳನ್ನು ಕಾಡುತ್ತಲೇ ಇತ್ತು. ಅವಳ ಪುಸ್ತಕದ ಪ್ರತಿ ಪುಟಗಳೂ ಅವಳ ಕಣ್ಣೀರ ಕಥೆ ಹೇಳುತ್ತಿದ್ದವು.ಆದರೂ ಆತ್ಮವಿಶ್ವಾಸ ಕಳೆದುಕೊಳ್ಳದೆ, ಈ ಸಮಯವನ್ನು ವ್ಯರ್ಥ ಮಾಡದೆ ಸದುಪಯೋಗ ಪಡಿಸಿಕೊಳ್ಳಬೇಕು. ಬೇಗ ಅಧಿಕಾರಿಯಾಗಿ ನನ್ನವರನ್ನು ಕಾಣಬೇಕು ಎಂದು ಧೈರ್ಯ ಹೇಳಿಕೊಂಡು ತನ್ನ ಪ್ರಯತ್ನ ಮುಂದುವರೆಸಿದಳು.
ಒಮ್ಮೆ ಇವಳು ಕಾಲೇಜಿನಿಂದ ಬರುವಾಗ ರಸ್ತೆಯಲ್ಲಿ ಆಯಾ ತಪ್ಪಿದ ವಾಹನವೊಂದು ಇವಳನ್ನು ಗುದ್ದಿ ಬಿಟ್ಟಿತು, ರಸ್ತೆಯಲ್ಲಿ ಕೆಲವರು ಇವಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಕೊಡಿಸಿದರು. ಆದರೆ ಅಪಘಾತದಿಂದ ಇವಳ ಬಳಗಾಲಿಗೆ ಹೆಚ್ಚು ಪೆಟ್ಟಾಗಿದ್ದರಿಂದ ಸುಲಭವಾಗಿ ನಡೆಯಲು ಬಾರದಹಾಗಾಯಿತು. ಇತ್ತ ಇವಳ ಪರಿಸ್ಥಿತಿ ಕಂಡು ಹೀಯಾಳಿಸಲು ಶುರು ಮಾಡಿದರು. ಹಾಸ್ಟೆಲ್ ನ ವಾತಾವರಣವೂ ಇವಳ ಓದಿಗೆ ವಿರೋಧವಾಯಿತಾದರೂ ದೃತಿಗೆಡದೆ ಕಠಿಣ ಪರಿಶ್ರಮ ಹಾಕಿ ನಿರಂತರ ಪ್ರಯತ್ನ ನಡೆಸಿದಳು.
ಕೊನೆಗೊಂದು ದಿನ ಅವಳ ಡಿಗ್ರಿ ಮುಗಿಯಿತು, ಅದೇ ವರ್ಷ ಅವಳ ಕನಸಿನ ಲೋಕ ಸೇವಾ ಆಯೋಗದ ಪರೀಕ್ಷೆ ಬರೆದಳು. ಕೆಲ ದಿನಗಳ ನಂತರ ಮುಖ್ಯ ಪರೀಕ್ಷೆ ಬರೆದಳು, ಕೆಲವೇ ದಿನಗಳಲ್ಲಿ ಸಂದರ್ಶನಕ್ಕೂ ಹಾಜರಾದಳು. ಇನ್ನು ಕೊನೆ ಫಲಿತಾಂಶಕ್ಕಾಗಿ ಕಾಯುತ್ತಿದ್ದಳು…! ಅಂದು ರಾತ್ರಿ ಅವಳ ಫಲಿತಾಂಶ ಬಂದಿತು, ಉನ್ನತ ಸ್ಥಾನದೊಂದಿಗೆ ಐಎಎಸ್ ಹುದ್ದೆಗೆ ಆಯ್ಕೆ ಆಗಿದ್ದಳು.
ಆಗ ಅವಳಿಗಾದ ಸಂತೋಷ ಅಷ್ಟಿಷ್ಟಲ್ಲ. ಅವಳು ಇಷ್ಟು ದಿನ ಅನುಭವಿಸಿದ ಎಲ್ಲಾ ನೋವು ಒಮ್ಮೆಲೇ ಅಗ್ನಿಯ ಜ್ವಾಲೆಯಂತೆ ಉಕ್ಕಿತು.
ಇನ್ನು ಕೆಲವೇ ಕೆಲ ದಿನಗಳಲ್ಲಿ ಸರ್ಕಾರಿ ಕಾರಿನಲ್ಲಿ ತನ್ನ ಊರಿಗೆ ಹೋದಳು. ತಾನು ಅಧಿಕಾರಿಯಾದ ವಿಷಯ ತಂದೆ ತಾಯಿಗೆ ತಿಳಿಸಿ ಆಶೀರ್ವಾದ ಪಡೆದಳು. ಅವರ ತಂದೆ ತಾಯಿಗಳಿಗೆ ತಮ್ಮ ತಪ್ಪಿನ ಅರಿವಾಯಿತು.ಇಷ್ಟೆಲ್ಲಾ ನೋವಿನ ನಡುವೆಯೂ ಸಾಧನೆ ಮಾಡಿದ ಮಗಳನ್ನ ಕಂಡು ಹೆಮ್ಮೆ ಆಯಿತು.
ತನ್ನ ಕನಸಿನಂತೆ ತನ್ನ ಸಮಾಜಕ್ಕೆ ಹಾಗೂ ಊರಿಗೆ ಸವಲತ್ತುಗಳನ್ನು ಒದಗಿಸಲು ಆರಂಭಿಸಿದಳು ಈಗಲೂ ಓದುವ ಮಕ್ಕಳಿಗೆ ಪ್ರೋತ್ಸಾಹಿಸುತ್ತಿದ್ದಾಳೆ.ಎಂದು ಕಥೆಯನ್ನು ನಿಲ್ಲಿಸಿದೆ .
ಈ ಮಾತುಗಳನ್ನು ಕೇಳಿದ ಗೀತಾ ಕಣ್ಣಲ್ಲಿ ನೀರು ತುಂಬಿಕೊಂಡು ನಿಜಕ್ಕೂ ಅವಳ ಸಾಧನೆ ಅಸಮಾನ್ಯ,ಹೊರಗಿನ ಸಮಸ್ಯೆ ಒಂದೆಡೆಯಾದರೆ, ಮನೆಯವರ ವಿರೋಧ ಒಂದೆಡೆ ಅಷ್ಟೆಲ್ಲಾ ಕಷ್ಟಗಳಿದ್ದರೂ ಅವ್ಯಾವು ಅವಳ ಸಾಧನೆಗೆ ಅಡ್ಡಿ ಅಲ್ಲ..! ಎಂದು ತೋರಿಸಿದಳು. ಎಲ್ಲಾ ರೀತಿಯ ಸಮಸ್ಯೆ ಮೆಟ್ಟಿನಿಂತು ಸಾಧನೆ ಮಾಡಿದ ಅವಳು ಎಲ್ಲರಿಗೂ ಮಾದರಿ. ಎನ್ನುತ್ತಾ ಮಾತಿನಲ್ಲಿ ಬಿದ್ದು ನಿಮ್ಮ ಹೆಸರೇ ಕೇಳಲಿಲ್ಲ,ಇಷ್ಟಕ್ಕೆ ನಿಮ್ಮ ಹೆಸರು ಏನು ಎನ್ನುತ್ತಿರುವಾಗ….. ಕಾರ್ಯಕ್ರಮ ಆರಂಭವಾಗಿ ‘ನಮ್ಮ ಮಾದರಿ ಸಾಧಕಿ, ಹಾಗೂ ಕಾರ್ಯಕ್ರಮದ ಕೇಂದ್ರ ಬಿಂದು ನಮ್ಮ ಹೆಮ್ಮೆಯ ಕುಮಾರಿ ಸ್ಮಿತಾ ಐಎಎಸ್’ ಅವರು ವೇದಿಕೆ ಮೇಲೆ ಬರಬೇಕು ಎಂದಾಗ ನಾನು ಎದ್ದು ಹೋದೆ.
ಇದನ್ನು ಕಂಡು ಗೀತಾಳು ಆಶ್ಚರ್ಯಳಾಗಿ ಎದ್ದು ನಿಂತಳು.
ಇನ್ನು ಸ್ಮಿತಾ ತನ್ನ ಅನಿಸಿಕೆ ಹಂಚಿಕೊಳ್ಳಬೇಕು ಎಂದು ಕರೆಯಲಾಯ್ತು, ಆಗ ನಾನು ಸಾಧನೆ ಕುರಿತು ಒಂದೇ ಒಂದು ಕಿವಿಮಾತು ಹೇಳಿದೆ, ನಾನು ಇಂದು ಈ ಸ್ಥಾನಕ್ಕೆ ಬರಲು ಒಂದೇ ಉದ್ದೇಶ, ನಾನು ಎಲ್ಲಾ ರೀತಿಯಿಂದಲೂ ಮುಖ್ಯವಾಗಿ ಶೈಕ್ಷಣಿಕವಾಗಿ ಅನೇಕ ಸವಾಲು ಎದುರಿಸಿದ್ದೇನೆ. ಇಂತಹ ಸಮಸ್ಯೆಗಳು ಎದುರಿಸುವವರಿಗೆ ನಾನು ಮಾದರಿಯಾಗಬೇಕು. ಮತ್ತು ಅವರಿಗೆ ಮಾರ್ಗದರ್ಶನ ಮಾಡಿ, ಮುಂದೆ ತರುವಲ್ಲಿ ಪ್ರಯತ್ನಿಸುವುದಾಗಿದೆ, ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ನನ್ನ ಮೂಲ ಗುರಿ ಎಂದು ಹೇಳಿ, ನನ್ನ ಎರಡು ಮಾತು ಮುಗಿಸಿದೆ. ಎಂದು ಹೇಳಿ ಕಾರ್ಯಕ್ರಮದಲ್ಲಿ ನಡೆದ ಘಟನೆಯನ್ನು ವಿವರಿಸಿದಳು ಸ್ಮಿತಾ.
ಹೀಗೆ ಸ್ಮಿತಾಳ ಜೀವನದಲ್ಲಿ ಎದುರಾದಂತ ಸಮಸ್ಯೆ ಎಷ್ಟೋ ಹೆಣ್ಣುಮಕ್ಕಳು ಎದುರಿಸುತ್ತಿರುತ್ತಾರೆ. ಕೆಲ ಕುಟುಂಬಗಳಲ್ಲಿ ಸಹಕಾರ ಇರುತ್ತದೆ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇನ್ನು ಕೆಲ ಕುಟುಂಬದಲ್ಲಿ ಸಹಕಾರ ಇರುವುದಿಲ್ಲ. ಸ್ಮಿತಾ ಳು ಒಂದು ಉದಾಹರಣೆ ಅಷ್ಟೇ. ಸಾಧನೆ ಮಾಡಲೆಂದು ಹೊರಟವರಿಗೆ ಕೌಟುಂಬಿಕ ಸಮಸ್ಯೆ, ಸಮಾಜ ನಮ್ಮನ್ನು ನೋಡುವಂತ ದೃಷ್ಟಿಕೋನ,ಆರ್ಥಿಕ ಸಮಸ್ಯೆ, ಅವಮಾನ, ತಿರಸ್ಕಾರ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಎದುರಿಸಲೇಬೇಕಾಗುತ್ತದೆ. ಓದುವ ಸಮಯದಲ್ಲಿ ದೊಡ್ಡ ದೊಡ್ಡ ಬೆಟ್ಟದಂತೆ ಕಂಡ ಕಷ್ಟ,ಅವಮಾನ, ತಿರಸ್ಕಾರಗಳು ಸಾಧನೆ ನಂತರ ಚಿಕ್ಕ ಚಿಕ್ಕ ಧೂಳಿನ ಕಣದಂತೆ ಕಾಣುತ್ತವೆ.
ಸಮಸ್ಯೆಗಳೆಂಬ ಹಕ್ಕಿಗಳು ಆಗಾಗ ಬರುತ್ತವೆ ಮತ್ತೆ ಹಾರಿ ಹೋಗುತ್ತವೆ ಆದರೆ ಅವನ್ನು ಅಲ್ಲೇ ಗೂಡು ಕಟ್ಟಲು ಬಿಡಬೇಡಿ. ಮುಂದೆ ಸಾಧನೆ ಮಾಡಬೇಕಾದರೆ ಇಂದಿನ ಕೆಲವನ್ನು ತ್ಯಜಿಸಲೇಬೇಕು. ಪ್ರಯತ್ನ ಮಾಡಿ ಸೋಲಾದರೆ ಅದು ಸೋಲಲ್ಲ, ಪ್ರಯತ್ನವೇ ಮಾಡದಿದ್ದರೆ ಅದೇ ನಿಜವಾದ ಸೋಲು,ಹಾಗಾಗಿ ನಿರಂತರ ಪ್ರಯತ್ನದಿಂದ ಸಾಗೋಣ….!
ಆರ್. ಬಿ. ಪ್ರಿಯಾಂಕ
ರಾಯಚೂರು
ALL COPY RIGHTS FROM R.B.PRIYANKA RAYACHURU @ Belagaviphotonews.com 2023/24 stephenjamesbgm
Belagaviphotonews.com