---Advertisement---

Advertisement

ಬೆಂಗಳೂರು- ‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಕನ್ನಡ ಚಳವಳಿ ನೇತಾರರಾಗಿ, ಕನ್ನಡಿಗರಲ್ಲಿ ಜನಜಾಗೃತಿ ಮೂಡಿಸಿ ಕನ್ನಡಾಭಿಮಾನ ಬೆಳೆಸುತ್ತ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ‘ಕಾದಂಬರಿ ಸಾರ್ವಭೌಮʼ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರಾಗಿ ಗುರುತಿಸಿಕೊಂಡಿದ್ದ ಅವರನ್ನು ವಿದ್ವಾಂಸರಾದ ಪ್ರೊ. ಎಲ್.ಎಸ್.ಶೇಷಗಿರಿರಾವ್ ಅವರನ್ನು ʼಕನ್ನಡ ದೀಪಕ್ಕೆ ಅನಕೃ ಅವರು ತೈಲವಾದ ಬದುಕುʼ ಎಂದು ಬಣ್ಣಿಸಿದ್ದನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ನೆನಪಿಸಿಕೊಂಡರು. ಇಂದು ಅನಕೃ ಅವರ ೧೧೫ ನೆಯ ಜನ್ಮದಿನದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಂಪ ಸಭಾಗಂಣದಲ್ಲಿ ಆಯೋಜಿಸಿ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಹೆಸರಾಂತ ಕಾದಂಬರಿಕಾರರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ ೧೯೦೮ರ ಮೇ ೯ರಂದು ಜನಿಸಿದ ಅವರು ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದದ್ದರು. ಬರಹವನ್ನೇ ನಂಬಿ ಬದುಕನ್ನು ಕಟ್ಟಿಕೊಂಡ ಅನಕೃ ಅವರು ಪತ್ರಿಕಾ ರಂಗದಲ್ಲಿ ಗಣನೀಯ ಸಾಧನೆ ಮಾಡಿದ್ದರು. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅವರು ಅಂತರರಾಜ್ಯದ ಪತ್ರಿಕೆಗಳಿಗೂ ಲೇಖನಗಳನ್ನು ಬರೆಯುತ್ತಿದ್ದರು. ೧೯೪೩-೪೪ ರಲ್ಲಿ ಪ್ರಗತಿಶೀಲ ಸಾಹಿತ್ಯದ ಚಳವಳಿಯಲ್ಲಿ ತೊಡಗಿಕೊಂಡಿದ್ದರು. ಆಚಾರ್ಯ ಬಿ.ಎಂ. ಶ್ರೀಕಂಠಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಆರಂಭಿಸಿದ “ಕನ್ನಡ ನುಡಿ” ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು ಎಂದು ನಾಡೋಜ ಡಾ. ಮಹೇಶ ಜೋಶಿ ಅವರು ಅನಕೃ ಅವರ ಕನ್ನಡ ಸೇವೆಯನ್ನು ನೆನೆಸಿಕೊಂಡರು.

 

ಅನಕೃ ಅವರು ತನ್ನ ಅದ್ಭುತ ವಾಕ್‌ ಚಾತುರ್ಯಕ್ಕೆ ಹೆಸರುವಾಸಿಯಾಗಿದ್ದರು. ಈ ಮೂಲಕವೇ ನಾಡಿನ ಜನರ ಮನಸ್ಸನ್ನು ಗೆದ್ದ ಅವರು ತಮ್ಮ ಮೊದಲ ಕಾದಂಬರಿ ʻಗೃಹಲಕ್ಷ್ಮಿʼ ಅಕ್ಷರ ಪ್ರೇಮಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದು ಕೊಂಡವರು. ೧೯೦೭ರಲ್ಲಿ ಮೈಸೂರು ವಿಶ್ವವಿದ್ಯಾಲಯವು ಇವರನ್ನು ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿತು. ೧೯೬೦ರಲ್ಲಿ ಮಣಿಪಾಲದಲ್ಲಿ ನಡೆದ ೪೨ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು. ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೇಗಿರಬೇಕು ಎನ್ನುವ ಮಾರ್ಗಸೂಚಿಯನ್ನು ನೀಡಿದ್ದರು. ಅವರು ಹಾಕಿಕೊಟ್ಟ ಹಾದಿಯಲ್ಲಿ ಇಂದಿಗೂ ಕನ್ನಡ ಸಾಹಿತ್ಯ ಪರಿಷತ್ತು ಮುನ್ನಡೆದು ಕೊಂಡು ಬಂದಿದೆ. ಸಾಹಿತ್ಯ, ಸಂಗೀತ, ಚಿತ್ರಕಲೆ, ನಾಟ್ಯ, ನಾಟಕ ಕಲೆಗಳಲ್ಲಿ ಅಪಾರ ಒಲವು ಹೊಂದಿದ್ದ ಅನಕೃ ಅವರು ಸಾಮಾಜಿಕ ಹಾಗೂ ಐತಿಹಾಸಿಕ ಕಾದಂಬರಿಗಳು, ಕಥಾ ಸಂಕಲನ, ನಾಟಕಗಳು, ಅನುವಾದಿತ ಗ್ರಂಥಗಳು, ಜೀವನ ಚರಿತ್ರೆಗಳು, ಸಂಪಾದಿತ ಗ್ರಂಥಗಳು, ಪ್ರಬಂಧ, ವಿಮರ್ಶೆಗಳು ಹೀಗೆ ಸಾಹಿತ್ಯ ಎಲ್ಲಾ ಆಯಾಮಗಳಲ್ಲಿಯೂ ಅವರು ಸೇವೆ ಸಲ್ಲಿಸಿ ೨೫೦ ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಹೆಗ್ಗಳಿಕೆ ಅನಕೃ ಅವರಿಗೆ ಸಲ್ಲುತ್ತದೆ. ಬೆಂಗಳೂರಿನಲ್ಲಿ ಕನ್ನಡ ಉಳಿಸಿ ಬೆಳೆಸುವುದಕ್ಕಾಗಿ ನಿರಂತರ ಹೋರಾಟ ನಡೆಸಿದ ಅವರು ಕೋಟೆ ರಾಮೋತ್ಸವದಲ್ಲಿ ದಕ್ಷಿಣ ಭಾರತದ ಖ್ಯಾತ ಗಾಯಕಿ ಎಮ್‌. ಎಸ್‌. ಸುಬ್ಬುಲಕ್ಷ್ಮಿ ಅವರು ನಡೆಸಿಕೊಡುತ್ತಿದ್ದ ತಮ್ಮ ಕಚೇರಿಯಲ್ಲಿ ಕನ್ನಡ ಗೀತೆಗಳನ್ನು ಹಾಡದೆ ಇರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಖ್ಯಾತ ಗಾಯಕಿಯ ಕಾರ್ಯಕ್ರಮ ನಿಲ್ಲಿಸುವುದು ಸರಿಯೇ ಎಂದು ಹಿರಿಯ ಬರಹಗಾರ ತೀ.ತಾ.ಶರ್ಮ ಆಕ್ಷೇಪ ವ್ಯಕ್ತಪಡಿಸಿದಾಗ ʻಕನ್ನಡಕ್ಕೆ ನನ್ನಂಥವರು ಅನೇಕರು ಇರಬಹುದು ಆದರೆ ನನಗೆ ಕನ್ನಡ ಒಂದೇʼ ಎಂದು ಹೇಳಿದ್ದರು. ನಿತ್ಯವು ಕನ್ನಡದ ಹೆಮ್ಮೆಯ ಸಾಹಿತ್ಯ ಪರಿಚಾರಕ ಎಂದು ಗುರುತಿಸಿಕೊಂಡ ಅವರು ವರನಟ ಡಾ. ರಾಜಕುಮಾರ ಅವರಿಗೆ ತಮ್ಮ ಚಳುವಳಿಯ ಮೂಲಕ ತಾರಾಮೌಲ್ಯ ನೀಡುವ ಮೂಲಕ ಕನ್ನಡ ನಾಡು ನುಡಿಯ ಅಸ್ಮಿತೆಯಾಗಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅಭಿಪ್ರಾಯ ಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಪ್ರೊ. ಎನ್‌.ಎಸ್‌. ಶ್ರೀಧರ ಮೂರ್ತಿ ಅವರು ಮಾತನಾಡಿ ಕನ್ನಡ ಚಿತ್ರ ರಂಗಕ್ಕೆ ಸ್ವಂತಿಕೆಯನ್ನು ತಂದುಕೊಡುವಲ್ಲಿ ʻಅನಕೃʼ ಅವರು ಪಾತ್ರ ಬಹಳ ಮುಖ್ಯವಾದದ್ದು. ಮಣಿಪಾಲ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠದಿಂದ ಅವರು ಆಡಿದ ಮಾತುಗಳು ಕನ್ನಡ ಚಿತ್ರ ರಂಗಕ್ಕೆ ಜೀವಂತಿಕೆ ನೀಡುವಲ್ಲಿ ಮುಖ್ಯಪಾತ್ರ ವಹಿಸಿದ್ದವು. ಅವರ ಮಾತು ಬೆಂಗಳೂರಿನಲ್ಲಿ ಕನ್ನಡ ಚಳುವಳಿ ಹುಟ್ಟುವಲ್ಲಿ, ಕನ್ನಡಿಗರಿಗೆ ಸ್ವಾಭಿಮಾನ ತುಂಬುವಲ್ಲಿ ಪ್ರೇರಣೆಯಾಗಿತ್ತು. ಕನ್ನಡ ಸಾಹಿತ್ಯ ಎಲ್ಲಾ ವರ್ಗದವರನ್ನು ತಲುಪುವುದರಲ್ಲಿ ಅವರ ಕೊಡುಗೆ ದೊಡ್ಡದು ಎಂದು ಅನಕೃ ಅವರ ಬದುಕಿನ ಕೆಲವು ಸ್ವಾರಸ್ಯಕರ ಘಟನೆಗಳನ್ನು ವಿವರಿಸಿದರು.

ಅನೃಕೃ ಅವರ ಜನ್ಮದಿನ ಹಿನ್ನೆಲೆಯಲ್ಲಿ ಪರಿಷತ್ತಿನಲ್ಲಿ ಹಮ್ಮಿಕೊಂಡ ಪುಷ್ಪನಮನ ಕಾರ್ಯಕ್ರಮದಲ್ಲಿ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ. ರಾಮಲಿಂಗ ಶೆಟ್ಟಿ , ಡಾ. ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಮ್‌. ಪಟೇಲ್‌ ಪಾಂಡು ಸೇರಿದಂತೆ ಇತರ ಪದಾಧಿಕಾರಿಗಳು ಹಾಗೂ ಪರಿಷತ್ತಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

By BPN

Leave a Reply

Your email address will not be published. Required fields are marked *