---Advertisement---

Advertisement

ಆಂತರ್ಯ

ಆಫೀಸಿಗೆ ಹೊರಡಲು ಮಾಲಿನಿಗೆ ಇಂದು ಮೂಡೇ ಇರಲಿಲ್ಲ. ಹೊರಗೆ ಮಳೆ ಬೇರೆ ಜೋರಾಗಿ ಸುರಿಯುತ್ತಿತ್ತು. ಈ ಮಳೆಯಲ್ಲಿ ಬೆಚ್ಚಗೆ ಹೊದ್ದು ಮಲಗುವ ಆಸೆಯಾಗುತ್ತಿತು, ಆಸೆ ಪಟ್ಟಿದ್ದೆಲ್ಲವೂ ನೆರವೇರುವುದೇ ಅಂತ ಅಂದು ಕೊಂಡಳು. ಇವತ್ತೊಂದು ದಿನ ಮನೆಯಲ್ಲಿ ಬೇಕಾದರೆ ಇದ್ದು ಬಿಡಬಹುದು. ಆದರೆ ಎಷ್ಟು ದಿನ ಮನೆಯಲ್ಲಿ ಇರಲು ಸಾಧ್ಯ. ಆಫೀಸಿಗೆ ಹಾಗೆಲ್ಲಾ ರಜೆ ಹಾಕಲು ಸಾಧ್ಯವೇ. ಒಂದ್ರಾಶಿ ಕೆಲಸ ಇದೆ. ಆಫೀಸಿನ ಕೆಲಸಗಳು ಈ ಜನ್ಮಕ್ಕೂ ಮುಗಿಯುತ್ತೊ ಇಲ್ಲವೊ ಅಂತ ಅನ್ನಿಸಿ ಬಿಡುತ್ತದೆ. ಕೆಲಸ, ಕೆಲಸ, ಬರೀ ಕೆಲಸ, ಸಾಕಾಗಿ ಹೋಗಿದೆ. ಆಫೀಸೂ ಬೇಡಾ, ಆ ಕೆಲಸಗಳೂ ಬೇಡಾ ಅಂದುಕೊಂಡಳು. ಆದ್ರೆ ಕೆಲಸ ಬಿಟ್ಟು ಮನೆಯಲ್ಲಿ ಇರಲು ಸಾಧ್ಯವೇ, ಮನೆಯಲ್ಲಿ ಕುಳಿತು ಕೊಂಡರೆ ಯಾರು ಅನ್ನ ಹಾಕುತ್ತಾರೆ, ನನಗೇನು ಗಂಡನೆ, ಮಕ್ಕಳೆ, ಅಪ್ಪ ಅಮ್ಮನೂ ಇಲ್ಲ. ಒಂಟಿ ಪಕ್ಷಿಯಂತೆ ಬದುಕುತ್ತಿದ್ದೆನೆ. ಸಾಯ್ತ ಬಿದ್ದಿದ್ದರೂ ಯಾರೂ ನೋಡುವವರಿಲ್ಲ, ನಂದೂ ಒಂದು ಬದುಕೇ ಬೇಸರ ಪಟ್ಟು ಕೊಳ್ಳುತ್ತಲೇ ಆಫೀಸಿಗೆ ಹೋಗಲು ಸಿದ್ದವಾಗತೊಡಗಿದಳು. ಅರೆಮನಸ್ಸಿನಿಂದಲೇ ಹೊರಟ ಮಾಲಿನಿಗೆ ಸುರಿಯುತ್ತಿರುವ ಮಳೆ ನೋಡಿ ಈ ಮಳೆಯಲಿ ಹೇಗಪ್ಪಾ ಹೋಗುವುದೆಂದು ಚಿಂತೆಯಾಯಿತು. ವಿಧಿಯಿಲ್ಲದೆ ಜರ್ಕಿನ್ ಧರಿಸಿ ತಲೆಗೆ ಕ್ಯಾಪ್ ಹಾಕಿಕೊಂಡು ಹೊಂಡಾವನ್ನು ಹೊರಗೆ ತಂದು ನಿಲ್ಲಿಸಿ ಮನೆಗೆ ಬೀಗ ಹಾಕಿದಳು. ಮಳೆಯಲ್ಲಿಯೆ ಗಾಡಿ ಸ್ಟಾರ್ಟ ಮಾಡಿ ಹೊರಟೆ ಬಿಟ್ಟಳು.
ಆಫೀಸು ತಲುಪಿ ಗಾಡಿಯನ್ನು ಸ್ಟ್ಯಾಂಡಿಗೆ ಹಾಕಿ ಒದ್ದೆಯಾಗಿದ್ದ ಜರ್ಕಿನ್ ಮತ್ತು ಕ್ಯಾಪನ್ನು ಗಾಡಿಯ ಮೇಲೆ ಒಣಗಲು ಇಟ್ಟು ಮಾಲಿನಿ ಒಳಗೆ ನಡೆದಳು. ಸಹಿಹಾಕಿ ತನ್ನ ಸೀಟಿನಲ್ಲಿ ಕೂರುವಾಗ ಒಮ್ಮೆ ಎದಿರು ಸೀಟಿನೆಡೆ ನೋಡಿದಳು. ಅರೆ ಪೊನ್ನಪ್ಪ ಇವತ್ತೂ ಬಂದಾ ಹಾಗಿಲ್ಲ, ಎಲ್ಲಿ ಹೋದ್ರೊ ಈ ಪುಣ್ಯಾತ್ಮ ಅವರು ಬರೊ ತನಕ ಅವರ ಕೆಲಸನೂ ತನ್ನ ತಲೆ ಮೇಲೆ, ನನ್ನ ಕೆಲಸವೆ ಸಾಕಷ್ಟಿದೆ, ಅದರ ಮಧ್ಯೆ ಬೇರೆಯವರ ಕೆಲ್ಸ ಮಾಡೊ ಕರ್ಮ ಬೇರೆ ನನಗೆ. ಇನ್ನು ಇವತ್ತು ಉಸಿರಾಡೊಕೂ ಪುರುಸೊತ್ತಿರುವುದಿಲ್ಲ. ಬೆಳಗ್ಗೆ ಬೆಳಗ್ಗೆನೇ ಡಿಸ್ಟರ್ಬ್ ಆದಳು.
‘ಯಾಕೆ ಮೇಡಂ, ಉಶಾರಿಲ್ಲವಾ’ ಅವಳ ಡಲ್ಲಾದ ಮುಖ ನೋಡಿ ಅಟೆಂಡರ್ ವಾಸು ಕೇಳಿದ.
‘ ಹೌದು ಕಣೋ, ಸ್ವಲ್ಪ ತಲೆನೋವು, ಮಳೆ ಬೇರೆ ಬರ್ತಾ ಇದೆಯಲ್ವಾ, ಶೀತ ಆಗಿದೆ’ ಉತ್ಸಾಹವಿಲ್ಲದ ದನಿಯಲಿ ಹೇಳಿದಳು
‘ಮೇಡಂ. ಗೊತ್ತಾಯ್ತಾ , ಪೊನ್ನಪ್ಪ ಆಫೀಸಿಗೆ ಬಂದಿಲ್ಲ’ ಕೆಳ ದನಿಯಲಿ ಹೇಳಿದ.
ಅದು ಗೊತ್ತಿರುವ ವಿಷಯವೇ ಆದ್ದರಿಂದ ‘ನಾಳೆ ಬರ್ತಾರೆ ಬಿಡು’ ಅಂದಳು.
‘ಮೇಡಂ, ನಾಳೆನೂ ಬರಲ್ಲ, ನಾಡಿದ್ದು ಬರಲ್ಲ, ಈಗಾಗ್ಲೆ ಅವರು ಆಫೀಸಿಗೆ ಬರದೆ ಒಂದು ವಾರ ಆಯ್ತಲ್ವಾ, ಇನ್ನು ನಾಳೆ ಬರ್ತಾರಾ’ ರಾಗವಾಗಿ ಹೇಳಿದ.
‘ ಯಾಕೊ ವಾಸು ಹಾಗೆ ಹೇಳ್ತಾ ಇದ್ದಿಯಾ, ಇದೇನು ಹೊಸದಾ ಪೊನ್ನಪ್ಪ ಹೀಗೆ ಆಫೀಸಿಗೆ ಬರದೆ ತಪ್ಪಿಸಿಕೊಳ್ಳೊದು. ಅವರ ಸರ್ವಿಸ್ಸಿನಲ್ಲಿ ಇದು ಎಷ್ಟನೆ ಬಾರಿಯೊ, ಹೋಗು ಒಂದು ಸ್ಷ್ರಾಂಗ್ ಕಾಫಿ ತಗೊಂಡು ಬಾ, ಈ ಫೈಲ್ ನೋಡಿ ನೋಡಿ ತಲೆ ಸಿಡಿತಾ ಇದೆ’ ಅಂದಳು.
‘ ಮೇಡಂ, ಈ ಬಾರಿ ಹಾಗಲ್ಲ ವಿಷಯ, ಮನೆಯಲ್ಲಿಯೂ ಎಲ್ಲಿ ಹೋಗ್ತಿನಿ ಅಂತ ಹೇಳಿಲ್ಲವಂತೆ, ಎಲ್ಲಿದ್ದಾರೆ ಅಂತನೂ ಗೊತ್ತಿಲ್ಲವಂತೆ, ಮಿಸ್ಸಿಂಗ್ ಅಂತ ಪೋಲಿಸ್ ಕಂಪ್ಲೆಂಟ್ ಬೇರೆ ಆಗಿದೆಯಂತೆ. ಹೀಗೆಲ್ಲ ಹಿಂದೆ ಆಗಿತ್ತಾ’ ಅಂತ ಅವಳ ಸಮೀಪಕ್ಕೆ ಬಂದ ವಾಸು ಅವಳ ಕಿವಿಯ ಬಳಿ ಬಂದು ಮೆಲ್ಲನೆ ಪಿಸುಗುಟ್ಟಿದ.
‘ಹೌದೇನೊ, ಪೋಲೀಸ್ ಕಂಪ್ಲೆಂಟ್ ಆಗಿದೆಯಾ, ಹೊಸ ವಿಷಯಾ ಹಾಗಾದ್ರೆ, ನಿಂಗೆ ಹ್ಯಾಗೆ ಗೊತ್ತಾಯ್ತು’ ಆತಂಕ ಹಾಗೂ ಕುತೂಹಲದಿಂದ ಕೇಳಿದಳು.
‘ ನೆನ್ನೆ ಸಂಜೆ ಪೋಲಿಸು ಬಂದಿದ್ರು, ನೀವು ಬೇಗ ಹೋಗಿಬಿಟ್ಟಿದ್ದಿರಿ, ಎಲ್ಲರನ್ನೂ ವಿಚಾರಣೆ ಮಾಡಿದ್ದರು. ಎಲ್ಲಿ ಹೋಗಿರ ಬಹುದು, ಯಾಕೆ ಹೋಗಿರ ಬಹುದು ಅಂತನೂ ವಿಚಾರಿಸಿದರು. ನಿಮ್ಮ ಫೋನ್ ನಂಬರನ್ನು ಇಸ್ಕೊಂಡಿದ್ದಾರೆ. ನಿಮ್ಮನ್ನೂ ಕರೆಸಿ ವಿಚಾರಣೆ ನಡೆಸ ಬಹುದು’ ಅಂದ.
ಓಹೊ ಇಷ್ಟೆಲ್ಲಾ ಬೆಳವಣಿಗೆ ಆಗಿದೆಯಾ, ಪೋಲೀಸ್ ಕಂಪ್ಲೆಂಟ್ ಆಗಿದೆ ಅಂದ್ರೆ ವಿಷಯ ಗಂಭೀರವೇ ಆಗಿರ ಬಹುದು. ಮನೆಯವರಿಗೂ ಗೊತ್ತಿಲ್ಲ ಅಂದ್ರೆ ಅರ್ಥ ಏನು. ಪೊನ್ನಪ್ಪ ಎಲ್ಲಿ ಹೋಗಿರ ಬಹುದು, ಪಾಪ ಒಳ್ಳೆ ಮನುಷ್ಯನೇ, ಹಣಕಾಸಿನ ವಿಚಾರದಲ್ಲಿ ಶಿಸ್ತಿಲ್ಲ ಅನ್ನೋದು ಬಿಟ್ರೆ ಇನ್ನೆಲ್ಲ ವಿಚಾರದಲ್ಲೂ ಪಾಪದ ಮನುಷ್ಯನೇ, ಏನಾಯ್ತು ಅಂತಹ ಮನುಷ್ಯನಿಗೆ ಚಿಂತಿಸುತ್ತಾ ಕುಳಿತವಳನ್ನು ವಾಸುವೇ ಎಚ್ಚರಿಸಬೇಕಾಯಿತು .
‘ಯಾಕೆ ಮೇಡಂ, ಹಿಂಗೆ ಕುತ್ಕೊಂಡು ಬಿಟ್ರಿ, ನೀವೇನಾದ್ರು ಅವರಿಗೆ ದುಡ್ಡು ಗಿಡ್ಡು ಕೊಟ್ಟಿದ್ರಾ. ಕೊಟ್ಟಿದ್ದರೆ ಮುಂಡಾಮೊಚ್ಕೊಂಡು ಹೋಯ್ತು ಅಂತ ಅಂದ್ಕೊಳ್ಳಿ, ಮತ್ತೆ ಅದು ಖಂಡಿತಾ ವಾಪಸ್ಸು ಬರೊಲ್ಲ’ ಕುಹಕವಾಗಿ ನಕ್ಕಾಗ ವಾಸುವಿನೆಡೆ ತೀಕ್ಷ್ಣವಾಗಿ ನೋಡುತ್ತಾ ‘ವಾಸು, ನಾನ್ಯಾಕೆ ಅವರಿಗೆ ದುಡ್ಡು ಕೊಡಲಿ, ನಂದೇ ಹಾಸಿ ಹೊದೆಯುವಷ್ಟಿದೆ, ಹೋಗು ನಿನ್ನ ಕೆಲಸ ನೋಡಿಕೊ ಹೋಗು’ ಎಂದು ಗದರಿ ಕಳಿಸಿದಳಾದರೂ ಮನಕ್ಕೆ ಆತಂಕ ಅನ್ನೊ ಸುನಾಮಿ ದಿಢೀರನೆ ಬಂದು ಅಪ್ಪಳಿಸಿತ್ತು. ಈ ಪೊನ್ನಪ್ಪ ನಿಜವಾಗಲು ಮತ್ತೆ ಆಫೀಸಿಗೆ ಬರೋದೇ ಇಲ್ವಾ, ಒಂದು ವೇಳೆ ಬರದೆ ಹೋಗಿ ಬಿಟ್ರೆ, ಗಡ ಗಡನೇ ನಡುಗಿದಳು. ಕ್ಷಣ ಹೊತ್ತು ಏನು ಮಾಡಲು ತೋಚದೆ ಹಾಗೆಯೆ ಕುಳಿತು ಬಿಟ್ಟಳು. ಒಬ್ಬೊ¨್ಬರಾಗಿ ಸಹೋದ್ಯೊಗಿಗಳು ಆಫೀಸಿನೊಳಗೆ ಬರಲಾರಂಭಿಸಿದಾಗ ಮನಸ್ಸನ್ನು ಹತೋಟಿಗೆ ತಂದು ಕೊಳ್ಳುತ್ತಾ ಮನಸ್ಸಿನ ಕೋಲಾಹಲವನ್ನು ತೋರದಂತೆ ಕೆಲಸದ ಕಡೆ ಗಮನ ಹರಿಸಿ ಮನದ ಆತಂಕವನ್ನು ದೂರ Àಮಾಡಿಕೊಳ್ಳಲು ಯತ್ನಿಸಿದಳು.
ಮತ್ತೆರಡು ದಿನಗಳು ಉರುಳಿದವು, ಪೊನ್ನಪ್ಪ ಮಾತ್ರಾ ಆಫೀಸಿಗೆ ಬರಲಿಲ್ಲ, ಬದಲಾಗಿ ಪೋಲೀಸಿನವರರಿಂದ ಮಾಲಿನಿಗೆ ಸ್ಟೇಷನ್ನಿಗೆ ಬರುವಂತೆ ಕರೆಬಂದಿತು. ಮನದೊಳಗೆ ಪೊನ್ನಪ್ಪನನ್ನು ಬೈಯ್ದು ಕೊಳ್ಳುತ್ತಲೆ ಹೊರಟಳು. ಮೊಟ್ಟಮೊದಲ ಬಾರಿಗೆ ಪೋಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿದ್ದಳು. ಎದೆ ಢವಢವನೆ ಹೊಡಿದು ಕೊಳ್ಳಲಾರಂಭಿಸಿತ್ತು. ಒಬ್ಬಳೆ ಬೇರೆ ಬಂದಿದ್ದಳು. ಅವಸರದಿಂದ ಬರುವಂತಾಗಿದ್ದರಿಂದ ಯಾರನ್ನು ತನ್ನೊಂದಿಗೆ ಕರೆತಂದಿರಲಿಲ್ಲ. ಬಂದ ತಕ್ಷಣವೆ ಗಾಡಿ ನಿಲ್ಲಿಸುವುದು ಎಲ್ಲಿ ಅಂತ ಒಮ್ಮೆ ಕಣ್ಣಾಡಿಸಿ ಒಂದಿಷ್ಟು ವಾಹನಗಳು ನಿಂತಿದ್ದನ್ನು ನೋಡಿ ಅಲ್ಲಿ ನಿಲ್ಲಿಸಿ ಗಾಡಿಗೆ ಸ್ಟಾಂಡ್ ಹಾಕುತ್ತಿದ್ದಂತೆ ‘ಅಲ್ಲಿ ನಿಲ್ಲಿಸ ಬೇಡ್ರಿ, ಅದು ಸ್ಟಾಪ್‍ನವರಿಗೆ ಮಾತ್ರಾ, ಹೊರಗೆ ನಿಲ್ಲಿಸಿ’ ಅಂತ ಅಶರೀರ ಹೆಣ್ಣು ವಾಣಿ ಎಲ್ಲಿಂದಲೊ ಬಂದಾಗ ಮುಜುಗರಕ್ಕೊಳಗಾಗಿ ಅಲ್ಲಿಂದ ಗಾಡಿ ತೆಗೆಯುತ್ತಲೇ ದ್ವನಿ ಬಂದ ಕಡೆ ನೋಡಿದಳು. ಮಹಿಳಾ ಪೋಲೀಸ್ ಒಬ್ಬಾಕೆ ಬಾಗಿಲ ಬಳಿ ನಿಂತು ತನ್ನತ್ತ ನೋಡುತ್ತಿದ್ದದ್ದು ಕಾಣಿಸಿತು. ಆಕೆಯೇ ಹೇಳಿರ ಬೇಕು ಅಂತ ಅಂದು ಕೊಳ್ಳುತ್ತಾ ಗಾಡಿ ತೆಗೆದು ಹೊರಗೆ ನಿಲ್ಲಿಸಿ ನಿಧಾನವಾಗಿಯೆ ಒಳ ಬಂದಳು. ತನಗೆ ಫೊನ್ ಮಾಡಿದಾತ ಯಾರು ಅಂತ ಹುಡುಕುವ ಯತ್ನದಲ್ಲಿರುವಾಗಲೆ ಅದೇ ಮಹಿಳಾ ಪೋಲೀಸು
‘ನೀವು ಪೊನ್ನಪ್ಪನವರ ಆಫೀಸಿನವರಾ’ ಅಂತ ಕೇಳಿದಳು. ಅವಳು ಉತ್ತರ ಹೇಳುವುದಕ್ಕೂ ಮುನ್ನವೇ ‘ಅಲ್ಲಿ ಹೋಗಿ ಅವರೇ ಎನ್‍ಕ್ವೈರಿ ಮಾಡೊರೊ’ ಎಂದು ಕಂಪ್ಯೂಟರ್ ಇದ್ದ ಕಡೆ ಕೈ ತೋರಿದಳು. ಕಂಪ್ಯೂಟರ್ ಮುಂದೆ ಕುಳಿತಿದ್ದಾತ ಹಿಂದೆ ತಿರುಗಿ ನೋಡುತ್ತಾ ‘ಬನ್ನಿ ಮೇಡಂ, ನೀವು ಮಾಲಿನಿ ಮೇಡಂ ಅಲ್ಲವೆ?’ ಅಂತ ಪ್ರಶ್ನಿಸಿದ. ಹೌದು ಎನ್ನುತ್ತಾ ಅವನ ಬಳಿ ಬಂದು ನಿಂತುಕೊಂಡಳು. ‘ಕುಳಿತು ಕೊಳ್ಳಿ’ ಎಂದು ತನ್ನ ಮುಂದಿದ್ದ ಕುರ್ಚಿಯನ್ನು ತೋರಿಸಿದ.
‘ಮೇಡಂ, ನೀವು ಪೊನ್ನಪ್ಪ ಅವರ ಕೊಲೀಗ್ ಅಲ್ಲವೆ? ಮೊನ್ನೆ ನಿಮ್ಮ ಆಫೀಸಿಗೆ ಬಂದಿದ್ದೆವು. ಎಲ್ಲರ ಹತ್ತಿರನೂ ಹೇಳಿಕೆ ತೆಗೆದುಕೊಂಡಿದ್ದೆವೆ. ನೀವು ಆವತ್ತು ಬಂದಿರಲಿಲ್ಲ. ಅದಕ್ಕೆ ನಿಮ್ಮನ್ನ ಇಲ್ಲಿಗೆ ಕರೆಸ ಬೇಕಾಯಿತು. ತೊಂದ್ರೆ ಕೊಡ್ತಾ ಇದ್ದೆವೆ.’ ಅಂದಾಗ ಅವರ ಸೌಜನ್ಯಕ್ಕೆ ಅವಳ ಆತಂಕವೆಲ್ಲಾ ಹಾರಿ ಹೋಯಿತು.
‘ತೊಂದ್ರೆ ಏನಿಲ್ಲಾ ಬಿಡಿ , ನಿಮ್ಮ ಕರ್ತವ್ಯ ನೀವು ಮಾಡ್ತಾ ಇದ್ದಿರಿ, ಒಟ್ಟಿನಲ್ಲಿ ಪೊನ್ನಪ್ಪ ಎಲ್ಲಿದ್ದಾರೆ ಅಂತ ಗೊತ್ತಾದರೆ ಸಾಕು’ ಅಂದಳು.
‘ಥ್ಯಾಂಕ್ಸ್ ಮೇಡಂ, ನೀವೆಲ್ಲಾ ಸಹಕಾರ ಕೊಟ್ಟರೆ ಖಂಡಿತಾ ಅವರು ಎಲ್ಲಿದ್ದಾರೆ ಅಂತ ಕಂಡು ಹಿಡಿಯ ಬಹುದು. ಅವರು ಎಷ್ಟು ದಿನಗಳಿಂದ ಆಫೀಸಿಗೆ ಬರ್ತಾ ಇಲ್ಲ? ಯಾಕೆ ಬರ್ತಾ ಇಲ್ಲ ಅಂತ ಏನಾದ್ರೂ ನಿಮ್ಗೆ ಗೊತ್ತಿದೆಯಾ, ಅವರು ಆಫೀಸಿನಲ್ಲಿ ಎಲ್ಲರ ಜೊತೆ ಹೇಗಿದ್ದರು, ಅವರ ಸ್ವಭಾವ ಹೇಗಿತ್ತು.ನಿಮ್ಮ ಜೊತೆ ಏನಾದ್ರೂ ಅವರ ವಿಚಾರಗಳನ್ನು ಹೇಳಿಕೊಳ್ತಾ ಇದ್ದಾರಾ?’ ಹೀಗೆ ಒಂದೇ ಸಮನೆ ಪ್ರಶ್ನೆಗಳನ್ನು ಕೇಳಿದಾಗ ತಬ್ಬಿಬ್ಬಾದಳು. ನಿಧಾನವಾಗಿ ಸಾವರಿಸಿಕೊಂಡು ತನಗೆ ಗೊತ್ತಿರುವುದನ್ನು ಹೇಳ ತೊಡಗಿದಳು.
‘ಪೊನ್ನಪ್ಪ ನನ್ನ ಜೊತೆ ಇಪ್ಪತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ, ಒಂದು ವಾರದಿಂದ ಅವರು ಕೆಲಸಕ್ಕೆ ಬರ್ತ ಇಲ್ಲ, ಹೀಗೆ ಅವರು ತುಂಬಾ ಸಲ ಮಾಡಿದ್ದಾರೆ. ಆಮೇಲೆ ಮತ್ತೆ ಕೆಲಸಕ್ಕೆ ಮಾಮೂಲಿನಂತೆ ಬರೊರೋ. ಇದು ಅವರ ಮಾಮೂಲಿ ಚಾಳಿ. ಆದರೆ ಈ ಬಾರಿನೇ ಪೋಲೀಸು ಕಂಪ್ಲೆಂಟು ಆಗಿರೊದು. ಅದೋದು ವಿಚಾರ ಬಿಟ್ಟರೆ ಅವರು ತುಂಬ ಒಳ್ಳೆ ಮನುಷ್ಯನೇ, ಎಲ್ಲರ ಜೊತೆ ಚೆನ್ನಾಗಿಯೇ ಇರುತ್ತಿದ್ದರು, ಮನೆ ವಿಚಾರವನ್ನೇನು ಅಷ್ಟಾಗಿ ಹೇಳಿಕೊಳ್ಳುತ್ತಾ ಇರಲಿಲ್ಲ, ಹಣಕಾಸಿನ ವಿಚಾರದಲ್ಲಿ ಮಾತ್ರಾ ಸ್ವಲ್ಪ ಹೆಸರು ಕೆಡಿಸಿಕೊಂಡಿದ್ದರು. ಒಂದೆರಡು ಬ್ಯಾಡ್ ಹ್ಯಾಬಿಟ್ಸ್ ಇತ್ತು. ಇದೀಷ್ಟೆ ನನಗೆ ಅವರ ಬಗ್ಗೆ ತಿಳಿದಿರೋದು’ ಅಂತ ಅವರ ಮುಖವನ್ನೆ ನೋಡುತ್ತಾ ಹೇಳಿದಳು. ತನಗೆ ಗೊತ್ತಿರುವುದನ್ನೆಲ್ಲ ಹೇಳ ಬೇಕೊ, ಹೇಳ ಬಾರದೊ ಅನ್ನೊ ಗೊಂದಲದಲ್ಲಿದ್ದ ಮಾಲಿನಿ ಅಷ್ಟು ಮಾತ್ರ ಹೇಳಿ ಸುಮ್ಮನಾಗಿ ಬಿಟ್ಟಳು.
ಅವಳು ಹೇಳಿದ್ದೆಲ್ಲವನ್ನು ಸರ ಸರನೆ ಟೈಪ್ ಮಾಡಿಕೊಂಡರು. ‘ಅವರ ಫ್ಯಾಮಿಲಿ ಅವರ ಜೊತೆ ಹೇಗಿದ್ದರು, ಅವರ ಹೆಂಡತಿ ಮಕ್ಕಳು ಜೊತೆ ಪೊನ್ನಪ್ಪ ಚೆನ್ನಾಗಿದ್ದರಾ’ ಮತ್ತೆ ಕೇಳಿದರು.
‘ ಚೆನ್ನಾಗಿ ಇದ್ರು ಅಂತ ಅನ್ನಿಸುತ್ತೆ’ ಅನುಮಾನಿಸುತ್ತಾ ಮೆಲ್ಲನೆ ಹೇಳಿದಳು. ಅವಳತ್ತಾ ದೀರ್ಘವಾಗಿ ನೋಡುತ್ತಾ’ ಸರಿ, ನೀವು ಈ ಹೇಳಿಕೆಗೆ ಸಹಿ ಮಾಡಿ ಹೊರಡಿ, ಮತ್ತೇನಾದ್ರೂ ಗೊತ್ತಾದ್ರೆ ನಮಗೆ ತಿಳಿಸಿ, ನಮಗೇನಾದ್ರೂ ಗೊತ್ತಾದ್ರೆ ನಾವು ನಿಮ್ಮ ಆಫೀಸಿಗೆ ತಿಳಿಸುತ್ತೇವೆ ‘ ಅಂತ ಹೇಳಿ ಅವಳಿಂದ ಸಹಿ ಮಾಡಿಸಿಕೊಂಡು ಕಳುಹಿಸಿಕೊಟ್ಟರು. ಇಷ್ಟೇನಾ ಅಂತ ಸಮಾಧಾನದ ಉಸಿರು ಬಿಡುತ್ತಾ ಹೊರಬಂದಳು. ದೊಡ್ಡ ಗಂಡಾಂತರದಿಂದ ಹೊರ ಬಂದಂತ ರೀಲೀಫ್ ಆಯಿತು. ಮತ್ತೆ ಆಫೀಸಿಗೆ ಹೋಗುವ ಮೂಡ್ ಇಲ್ಲದ ಮಾಲಿನಿ ಇಲ್ಲಿಗೆ ಬರಲು ಆಫೀಸಿನಿಂದ ಹೇಗಿದ್ದರೂ ಪರ್ಮಿಷನ್ ಸಿಕ್ಕಿದೆ, ಹೇಳಿಕೆ ಕೊಟ್ಟಿದ್ದು ಬೇಗನೆ ಮುಗಿದಿದೆ. ಮತ್ತೆ ಆಫೀಸಿಗೆ ಹೋಗುವವರ್ಯಾರು ಅಂದುಕೊಂಡು ಮತ್ತೆ ಆಫೀಸಿಗೆ ಹೋಗುವ ಮನಸ್ಸಿಲ್ಲದೆ ಮಾಲಿನಿ ಮನೆಯತ್ತ ಗಾಡಿ ಓಡಿಸಿದಳು.
ಮನೆಗೆ ಬಂದರೂ ಮನಸ್ಸಿಗೆ ನೆಮ್ಮದಿ ಇಲ್ಲವಾಗಿತ್ತು. ಪೊನ್ನಪ್ಪನ ವಿಚಾರವೇ ಮನದೊಳಗೆ ತುಂಬಿಕೊಂಡು ಎಲ್ಲಿ ಹೋಗಿರ ಬಹುದು ಈ ಮನುಷ್ಯ. ಹೀಗೆ ಯಾರಿಗೂ ಹೇಳದೆ ಹೋಗುವಂತಹ, ಹೋದ ಮೇಲೂ ತಾನು ಎಲ್ಲಿದ್ದೆನೆಂದು ಹೇಳದೆ ಇರುವಂತಹ ಪರಿಸ್ಥಿತಿ ಏನಿರಬಹುದು. ಮನೆಯವರೊಂದಿಗೆ ಅಷ್ಟೇನು ಒಳ್ಳೆಯ ಸಂಬಂಧ ಇರಲಿಲ್ಲ ಅಂತ ಗೊತ್ತಿತ್ತು. ಅದರೆ ಮನೆಯನ್ನೆ ಬಿಟ್ಟು ಹೋಗುವಂತಹ ಸಂದರ್ಭ ಬಂದಿತ್ತೆ, ಮನೆಯವರ ಬಗ್ಗೆ ಬೇಸರವಾಗಿದ್ದರೂ, ಹೊರಗೆ ಇರಬಹುದಿತ್ತಲ್ಲ, ಮನೆಯವರ ಬಗ್ಗೆ ಸಿಟ್ಟು ಮಾಡಿಕೊಂಡು ಬೇಕಾದಷ್ಟು ಸಲ ಹೊರಗಡೆ ಗೆಳೆಯರ ಜೊತೆ ಅವರ ರೂಮುಗಳಲ್ಲಿ ಉಳಿದಿರೊದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಅದರೆ ಆಫೀಸಿಗೂ ಬಾರದೆ ಯಾರಿಗೂ ಹೇಳದೆ ಹೋಗಿರುವುದರೂ ಎಲ್ಲಿಗೆ, ಮತ್ತೆ ಯಾವಾಗ ಬರ್ತರೆ ನನ್ನತ್ರನೂ ಯಾವ ವಿಚಾರವನ್ನು ಹೇಳಿಲ್ಲ. ಎಲ್ಲಾ ವಿಚಾರವನ್ನು ನನ್ನತ್ರ ಹೇಳದಿದ್ದರೂ ಕೆಲವೊಮ್ಮೆ ತುಂಬಾ ಖುಶಿಯಾದ ವಿಚಾರವನ್ನೊ, ತುಂಬಾ ಬೇಸರದ ವಿಚಾರವನ್ನೊ ಯಾವಾಗಲಾದರೂ ಒಮ್ಮೊಮ್ಮೆ ಹೇಳುತ್ತಿದ್ದದ್ದುಂಟು. ಅದರೆ ಆತ ಹೋಗುವ ಮುನ್ನ ಏನನ್ನು ಯಾರೊಂದಿಗೂ ಹೇಳಿರಲಿಲ್ಲ ಅನ್ನೊದು ತನಗೆ ಚೆನ್ನಾಗಿ ಗೊತ್ತಿತ್ತು. ಆಫೀಸಿಗೆ ಬರುವಷ್ಟು ದಿನವೂ ಖುಶಿಯಾಗಿಯೇ ಇದ್ದ ಹಾಗಿತ್ತು, ಬೇಸರವಾಗಿದ್ದಂತೆ ಏನೂ ಕಾಣಿಸಲಿಲ್ಲ. ಇತ್ತೀಚೆಗೆ ಯಾವ ಸಂಕಷ್ಟಗಳೂ ಇರಲಿಲ್ಲ. ಹಣ ಕಾಸಿನ ವಿಚಾರದಲ್ಲೂ ಚೆನ್ನಾಗಿಯೇ ಇದ್ರು. ಮತ್ತೆ ಎಲ್ಲಿ ಹೋಗಿರ ಬಹುದು. ಚಿಂತಿಸುತ್ತಲೇ ಅಂದೆಲ್ಲ ಕಳೆದಳು.
ಬೆಳಗ್ಗೆ ಆಫೀಸಿಗೆ ಬಂದಾಗಲೂ ಮಾಲಿನಿಗೆ ಉತ್ಸಾಹವೇನು ಇರಲಿಲ್ಲ. ಅದರೆ ಹೊಸ ವಿಷಯವೊಂದು ಬೆಳಕಿಗೆ ಬಂದಿತ್ತು, ಅವಳು ಬರುವಷ್ಟರಲ್ಲಿ ಫೈನಾನ್ಸಿನವರು ಆಫೀಸಿಗೆ ಬಂದಿದ್ದರು. ಪೊನ್ನಪ್ಪ ಅವರ ಫೈನಾನ್ಸಿನಲ್ಲಿ ಎರಡು ಲಕ್ಷ ಸಾಲ ಪಡೆದು ಇದುವರೆಗೂ ಬಡ್ಡಿ ಕಟ್ಟುತ್ತಿದ್ದು ಈ ತಿಂಗಳು ಕಟ್ಟಿಲ್ಲ ಅಂತ ಹುಡುಕಿಕೊಂಡು ಅಫೀಸಿನವರೆಗೂ ಬಂದಿದ್ದರು. ಅವರು ಆಫೀಸಿಗೂ ಬರ್ತ ಇಲ್ಲ ಅಂತ ಗೊತ್ತಾದ ಮೇಲೆ ಉದ್ವಿಗ್ನರಾಗಿದ್ದರು. ತಮ್ಮ ಹಣ ಬರುವುದೊ ಇಲ್ಲವೊ ಅನ್ನೊ ಚಿಂತೆಯಲ್ಲಿ ಎಲ್ಲರನ್ನು ವಿಚಾರಿಸುತ್ತಿದ್ದರು. ಮಾಲಿನಿಯನ್ನು ಕಂಡ ಕೂಡಲೆ ಅವಳನ್ನೂ ಪೊನ್ನಪ್ಪನ ಬಗ್ಗೆ ಕೇಳಿ ಎಲ್ಲರೂ ಕೊಟ್ಟ ಉತ್ತರವನ್ನೆ ಮಾಲಿನಿಯೂ ಕೊಟ್ಟಾಗ ಹತಾಶೆಗೊಂಡರು. ಮಾಲಿನಿಗೂ ಕೂಡಾ ಇದು ಹೊಸ ವಿಷಯವೇ ಆಗಿತ್ತು. ಹಿಂದೆಲ್ಲಾ ಪೊನ್ನಪ್ಪ ಸಾಲ ಸೋಲ ಮಾಡಿ ಅದನ್ನು ತೀರಿಸಲಾರದೆ ರಂಪ ರಾದ್ದಾಂತಗಳನ್ನು ಮಾಡಿಕೊಂಡಿದ್ದ ವಿಚಾರ ಇಡೀ ಆಫೀüಸಿಗೆ ಗೊತ್ತಿದ್ದ ಸಂಗತಿಯಾಗಿತ್ತು. ಅದರೆ ಕೆಲವು ವರ್ಷಗಳಿಂದಿಚೆಗೆ ಸಾಲಗಳನ್ನೆಲ್ಲಾ ತೀರಿಸಿಕೊಂಡು ಒಂದಿಷ್ಟು ಹಣವನ್ನು ಕೈಯಲ್ಲಿಟ್ಟುಕೊಂಡು ಬಡ್ಡಿ ವ್ಯವಹಾರ ನಡೆಸುತ್ತಾ ದಿಲ್‍ದಾರನಂತೆ ಇದ್ದುದ್ದನ್ನು ಮಾಲಿನಿಯೇ ಕಂಡಿದ್ದಳು. ಪೊನ್ನಪ್ಪ ಹಾಗೂ ಮಾಲಿನಿ ಒಂದೆ ವರ್ಷದಲ್ಲಿ ಇಲ್ಲಿ ಕೆಲಸಕ್ಕೆ ಸೇರಿದ್ದರು. ಒಂದೇ ಸರ್ವಿಸ್ಸು ಇಬ್ಬರಿಗೂ. ಹಾಗಾಗಿಯೇ ಒಂದಿಷ್ಟು ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಿದ್ದರು. ಮಾಲಿನಿಯ ಒಂಟಿ ಬದುಕಿನ ಬಗ್ಗೆ ಪೊನ್ನಪ್ಪನಿಗೆ ಅನುಕಂಪ, ಎರಡು ತಿಂಗಳ ಹಿಂದೆ ನಡೆದದ್ದು ನೆನಪಾಯಿತು ಮಾಲಿನಿಗೆ.
ಆವತ್ತು ಎಂದಿನಂತೆ ಆಫೀಸಿಗೆ ಬಂದಿದ್ದ ಮಾಲೀನಿಗೆ. ಪೊನ್ನಪ್ಪ ಬೇಗ ಬಂದಿರುವುದು ಆಶ್ಚರ್ಯ ತರಿಸಿತ್ತು. ಅರೆ ಪೊನ್ನಪ್ಪ ಇವತ್ತೆನು ಬೇಗ ಬಂದು ಬಿಟ್ಟಿದ್ದಾರೆ, ದಿನಾ ಲೇಟಾಗಿ ಬಂದು ಬಾಸ್ ಜೊತೆ ಬೈಸಿಕೊಳ್ಳದಿದ್ದರೆ ತಿಂದ ಅನ್ನ ಜೀರ್ಣವಾಗಲ್ವಾ ಅಂತ ತಾನೆ ರೇಗಿಸುತ್ತಿದ್ದದುಂಟು. ಇವತ್ತು ಸೂರ್ಯ ಯಾವ ದಿಕ್ಕಿನಲ್ಲಿ ಹುಟ್ಟಿದ್ದಾನೊ, ಅದರೆ ಏನೂ ಉದ್ದೇಶವಿಲ್ಲದೆ ಈ ಪ್ರಾಣಿ ಬೇಗಂತೂ ಬರೊದಿಲ್ಲ, ಇನ್ನು ಆಫೀಸಿಗೆ ಯಾರೂ ಬಂದಿಲ್ಲ, ಫೈಲಿನಲ್ಲಿ ಹುದುಗಿಸಿದ್ದ ತಲೆಯನ್ನು ಎತ್ತಿ ಪೊನ್ನಪ್ಪ ‘ಅರೆ ಯಾವಾಗ ಬಂದ್ರಿ ಮಾಲಿನಿ ಮೇಡಂ, ನಾನು ನಿಮ್ಮನ್ನೆ ಕಾಯ್ತಾ ಇದ್ದೆ, ಒಂದು ಒಳ್ಳೆ ವಿಚಾರ ಹೇಳ್ತಿನಿ ಕೇಳಿ. ನನ್ನ ಗೆಳೆಯ ಒಬ್ಬನಿದ್ದಾನೆ ತುಂಬಾ ಒಳ್ಳೆ ವ್ಯಕ್ತಿ , ಇತ್ತೀಚೆಗೆ ಪಾಪ ಅವರ ಹೆಂಡತಿ ತೀರಿಕೊಂಡರು. ಅವರ ಮನೆಯವರು ಮತ್ತೊಂದು ಮದ್ವೆ ಆಗು ಅಂತ ಒತ್ತಾಯ ಮಾಡ್ತಾ ಇದ್ದಾರೆ. ಅದಕ್ಕೆ ನಾನು ನಿಮ್ಮನ್ನ ಅವರಿಗೆ ಪ್ರಪೋಸ್ ಮಾಡೋಣ ಅಂತ ಇದ್ದೆನೆ. ಮೊದಲು ನೀವು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಈಗಾ ಅವನು ಬರ್ತನೆ. ಕ್ಯಾಷ್ಯೂವಲ್ ಆಗಿ ಪರಿಚಯ ಮಾಡಿಸ್ತಿನಿ’ ಅಂತ ಹೇಳಿದಾಗ ತಬ್ಬಿಬ್ಬಾಗಿದ್ದಳು. ಅವಳು ಏನಾನ್ನಾದ್ರೂ ಹೇಳಬೇಕು ಅನ್ನುವಷ್ಟರಲ್ಲಿ ಆ ಗೆಳೆಯ ಒಳ ಬಂದಾಗಿತ್ತು. ಪರಸ್ಪರ ಪರಿಚಯವಾಗಿತ್ತು. ನಂತರ ಪೊನ್ನಪ್ಪ ಗೆಳೆಯನೊಂದಿಗೆ ಹೊರ ಹೋಗಿ ಮತ್ತೆ ಆಫೀಸಿಗೇ ಬಂದಿರಲಿಲ್ಲ.
ಮಾರನೆ ದಿನ ಪೊನ್ನಪ್ಪ ಅವಳೊಂದಿಗೆ ಮಾತನಾಡಲೆಂದೆ ಬೇಗ ಬಂದ ಹಾಗಿತ್ತು. ಅವಳನ್ನು ಕಂಡೊಡನೆ ಹತ್ತಿರ ಬಂದು ‘ ನೆನ್ನೆ ನಾನು ಹೇಳಿದ ವಿಚಾರ ಏನು ಮಾಡಿದ್ದರಿ, ಯಾವುದಕ್ಕೂ ಬೇಗ ತೀರ್ಮಾನಕ್ಕೆ ಬನ್ನಿ,ಎಲ್ಲರ ಮುಂದೆ ವಿಷಯ ಎತ್ತೊದು ಬೇಡಾ ಅಂತಾನೆ ಬೇಗ ನಾನು ಬಂದಿರೊದು’ ಮೆಲ್ಲನೆ ಕೇಳಿದಾಗ ಏನು ಹೇಳುವುದೆಂಡು ತಿಳಿಯದೆ ಒದ್ದಾಡಿದಳು.
‘ಯಾಕ್ರಿ, ಸುಮ್ಮನಿದ್ದಿರಿ,ಗಂಡು ನಿಮಗೆ ಇಷ್ಟವಾಗಲಿಲ್ವಾ’ ನಿರೀಕ್ಷೆ ತುಂಬಿದ ದನಿಯಲ್ಲಿ ಕೇಳಿದ .
‘ಅದು ಹಾಗಲ್ಲ ಸರ್, ಈ ವಯಸ್ಸಿನಲ್ಲಿ ನಂಗೆ ಇನ್ನೊಂದು ಮದುವೆನಾ ಸಾರ್, ಯೋಚನೆ ಮಾಡೋಕೂ ಕಷ್ಟವಾಗುತ್ತೆ’
‘ನಿಮಗೇನ್ರಿ ಅಂತ ವಯಸ್ಸಾಗಿರೊದು, ಇನ್ನು ಮೂವತ್ತು ವರ್ಷದವರಂತೆ ಕಾಣ್ತಿರಾ, ಈ ಕಾಲದಲ್ಲಿ ಇಂತದೆಲ್ಲಾ ಸಹಜ ಕಣ್ರಿ. ಕಟ್ಟಿಕೊಂಡವನು ನಿಮ್ಮನ್ನ ಚೆನ್ನಾಗಿ ನೋಡಿಕೊಂಡಿದ್ದಿದ್ದರೆ ನೀವ್ಯಾಕೆ ಹೀಗೆ ಒಂಟಿಯಾಗಿರುತ್ತಿದ್ದಿರಿ, ಅವನು ಮಾಡಿದ ತಪ್ಪಿಗೆ ನೀವ್ಯಾಕೆ ಜನ್ಮ ಪೂರ್ತಿ ಒಂಟಿಯಾಗಿ ಕಷ್ಟ ಅನುಭವಿಸ ಬೇಕು. ನೋಡಿ ನನ್ನ ಮಾತು ಕೇಳಿ, ನಾನು ತೋರಿಸಿದ ಗಂಡು ತುಂಬಾ ಒಳ್ಳೆಯವನು, ನಿಮ್ಮನ್ನ ಸುಖವಾಗಿ ಇಟ್ಟುಕೊಳ್ಳುತ್ತಾನೆ, ಅವನಿಗೂ ಇದು ಎರಡನೆ ಮದುವೆ. ಹೆಂಡತಿನಾ ಕಳ್ಕೊಂಡು ನೋವು ಅನುಭವಿಸಿದ್ದಾನೆ, ನೀವೂ ನೊಂದಿದ್ದಿರಾ, ಸುಮ್ನೆ ಮದುವೆಗೆ ಒಪ್ಪಿಕೊಳ್ಳಿ, ಮತ್ತೆ ಇಂತ ಅವಕಾಶ ಸಿಗಲ್ಲ,ಎಷ್ಟು ದಿನ ಅಂತ ಒಂಟಿಯಾಗಿರುತ್ತಿರಾ, ನಾಳೆ ವಯಸ್ಸಾದ ಮೇಲೆ ಯಾರು ನಿಮ್ಮನ್ನ ನೋಡಿಕೊಳ್ಳುತ್ತಾರೆ, ಯೋಚ್ನೆ ಮಾಡಿ’ ನಿರ್ಧಾರವನ್ನು ಅವಳಿಗೆ ಬಿಟ್ಟ.
ರಾತ್ರೆಯೆಲ್ಲಾ ಆ ಕುರಿತು ಚೆನ್ನಾಗಿ ಯೋಚನೆ ಮಾಡಿದ್ದಳು. ಮತ್ತೊಂದು ಮದುವೆ ಬಗ್ಗೆ ಯಾವತ್ತೂ ಯೋಚಿಸಿರಲಿಲ್ಲ. ಮೊದಲ ಮದುವೆಗೇ ಅಷ್ಟೊಂದು ಕಷ್ಟವಾಗಿತ್ತು, ಕಷ್ಟ ಪಟ್ಟಿದ್ದರೂ ಆ ಮದುವೆಯೂ ಉಳಿದಿರಲಿಲ್ಲ. ಕಟ್ಟಿಕೊಂಡವನಿಗೆ ಅದು ಬಲವಂತದ ಮದುವೆಯಾಗಿತ್ತು. ನೀನು ಚೆನ್ನಾಗಿಲ್ಲ ಅಂತ ಹಂಗಿಸುತ್ತಲೆ ಇದ್ದ. ಚೆನ್ನಾಗಿರುವವಳು ಸಿಕ್ಕಿದೊಡನೆ ಬಿಟ್ಟು ಹೊರಟೇ ಬಿಟ್ಟಿದ್ದ. ಗಂಡ ತನ್ನನ್ನು ಒಂಟಿಯಾಗಿ ಬಿಟ್ಟು ಹೋದ ಮೇಲೆ ಮಾಲಿನಿಗೆ ಗಂಡು ಕುಲದ ಬಗ್ಗೆಯೇ ತಿರಸ್ಕಾರ ಮೂಡಿತ್ತು. ಆವತ್ತಿನಿಂದ ಇವತ್ತಿನವರೆಗೂ ಒಂಟಿಯಾಗಿಯೇ ಬದುಕುತ್ತಿದ್ದ ಮಾಲಿನಿಗೆ ಗಂಡ ಜೊತೆಯಲ್ಲಿ ಇಲ್ಲ ಅನ್ನೊ ಕೊರತೆ ಬಿಟ್ಟರೆ ತಾನು ನೆಮ್ಮದಿಯಾಗಿಯೇ ಇದ್ದೆನೆ ಅಂತ ಅನ್ನಿಸಿದ್ದಂತೂ ನಿಜಾ. ಒಮ್ಮೊಮ್ಮೆ ಒಂಟಿತನ ಕಾಡಿದರೂ ಆ ಬದುಕೇ ಒಗ್ಗಿಹೋಗಿತ್ತು.. ಈಗಾ ಮತ್ತೆ ಮದುವೆ ಅನ್ನೊ ಬಲೆಯಲ್ಲಿ ಬೀಳಬೇಕೆ, ಬೇಡವೇ ಬೇಡಾ ಅಂತ ಅನ್ನಿಸಿ ಬಿಟ್ಟಿತ್ತು. ಅದರಲ್ಲೂ ಈ ಪೊನ್ನಪ್ಪ ತೋರಿಸೊ ಗಂಡು ಅಂದ್ರೆ ಸರಿಯಾಗಿರುತ್ತಾನೆ ಅಂತ ಯಾವ ಗ್ಯಾರಂಟಿ, ಬೆಂಕಿಯಿಂದ ಬಾಂಡ್ಲಿಗೆ ಬೀಳುವಂತಾದರೆ, ಮೊದಲೆ ನನ್ನ ಅದೃಷ್ಟ ಸರಿಯಿಲ್ಲ, ಮತ್ತೆ ಆ ಅದೃಷ್ಟನ್ನ ಪರೀಕ್ಷೆ ಮಾಡುವುದು ಬೇಡವೆಂದು ತೀರ್ಮಾನಿಸಿದ್ದಳು. ಅದನ್ನು ನೆರವಾಗಿಯೇ ಪೊನ್ನಪ್ಪನ ಬಳಿ ಹೇಳಿಬಿಟ್ಟಳು. ಪೊನ್ನಪ್ಪನಿಗೆ ಮಾಲಿನಿಯ ನಿರ್ಧಾರ ಬೇಸರ ತರಿಸಿದರೂ ಮತ್ತೆ ಮತ್ತೆ ಒತ್ತಾಯ ಮಾಡಿದ. ಆದರೆ ಮಾಲಿನಿ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದಾಗ ಪೆಚ್ಚಾಗಿ ಮುಂದೆ ಅಂತಹ ಪ್ರಸ್ತಾಪವನ್ನು ಯಾವತ್ತೂ ಮಾಡುವ ಪ್ರಯತ್ನಕ್ಕೆ ಹೋಗಲಿಲ್ಲ. ಅದನ್ನು ನೆನಸಿಕೊಂಡು ಆತ ಒಳ್ಳೆಯದಕ್ಕೆ ಮಾಡಿದ್ದನೊ ಕೆಟ್ಟದಕ್ಕೆ ಮಾಡಿದ್ದನೊ ಅಂತೂ ನಾನಂತೂ ಆ ಬಲೆಯಲ್ಲಿ ಬೀಳಲಿಲ್ಲ. ಆದರೆ ಮತ್ತೊಂದು ಪ್ರಪಾತಕ್ಕೆ ಬಿದ್ದು ಬಿಟ್ಟಿದ್ದೆನೆಯೇ ಅಂತ ದಿಗಿಲುಗೊಂಡಳು.
ತಿಂಗಳಾಯಿತು, ಎರಡು ತಿಂಗಳಾಯಿತು ಪೊನ್ನಪ್ಪ ಎಲ್ಲಿರುವನೆಂದು ಪತ್ತೆಯಾಗಲೆ ಇಲ್ಲಾ, ಪೋಲೀಸಿನವರಿಗೂ ಪತ್ತೆಮಾಡಲಾಗಲಿಲ್ಲ. ಮಾಲಿನಿಗೂ ಆಶ್ಚರ್ಯ, ಎಲ್ಲಿ ಹೋಗಿರಬಹುದು, ಈ ಊರಿನಲ್ಲಂತೂ ಖಂಡಿತಾ ಇಲ್ಲಾ. ಇದ್ದಿದ್ದರೆ ಯಾರ ಕಣ್ಣಿಗಾದರೂ ಬೀಳುತ್ತಿರಲಿಲ್ಲವೇ. ಯಾವುದೊ ಊರಿಗೆ ಹೋಗಿರ ಬಹುದು. ಇವತ್ತಲ್ಲ ನಾಳೆ ಬಂದೆ ಬರುತ್ತಾನೆ ಅನ್ನೊ ನಂಬಿಕೆ ಹುಸಿಯಾಗುತ್ತಾ ಬರತೊಡಗಿತು. ದಿನಗಳು ಕಳೆದಂತೆ ಪೊನ್ನಪ್ಪನ ಒಂದೊಂದೆ ಅನಾಹುತಗಳು ಬೆಳಕಿಗೆ ಬರತೊಡಗಿದವು. ದಿನಕ್ಕೊಬ್ಬರು ಅವನನ್ನು ಹುಡುಕಿಕೊಂಡು ಬರತೊಡಗಿದರು. ಆಫೀಸಿನ ಕಷ್ಟಮರ್ ಒಬ್ಬರು ಗೋಳಾಡುತ್ತ ಬಂದು ಪೊನ್ನಪ್ಪನಿಮದ ತಮಗೆ ಒದಗಿದ ಗಂಡಾಂತರವನ್ನು ಹೇಳಿಕೊಂಡು ಗೋಳಾಡಿದರು. ಕೆಲವು ದಿನಗಳ ಹಿಂದೆ ಪೊನ್ನಪ್ಪ ಯಾರಿಗೊ ಕೊಟ್ಟಿದ್ದ ಚೆಕ್, ಬೌನ್ಸ್ ಆದ ಸಂಬಂಧದಲ್ಲಿ ಅರೆಷ್ಟ್ ವಾರೆಂಟ್ ಬಂದು ಬಿಟ್ಟಿದೆ, ತನಗೆ ಜಾಮೀನು ನೀಡುವಂತೆ ಬೇಡಿಕೊಂಡಿದ್ದರಿಂದ ಅದರಿಂದ ತನಗೇನು ತೊಂದರೆಯಾಗುವುದಿಲ್ಲ ಅಂತ ನಂಬಿಸಿದ್ದರಿಂದ ತಾನು ಬಾಂಡ್ ಪೇಪರಿನಲ್ಲಿ ಸಹಿ ಮಾಡಿ ಕೊಟ್ಟಿದ್ದು, ಇದೀಗ ಪೊನ್ನಪ್ಪ ನಾಪತ್ತೆ ಆಗಿರುವುದರಿಂದ ತಾನೇ ಆ ಹಣವನ್ನು ತೀರಿಸ ಬೇಕು ಇಲ್ಲದಿದ್ದಲ್ಲಿ ತಾನು ಜೈಲಿಗೆ ಹೋಗ ಬೇಕಾಗಿದೆ, ಆಸ್ತಿ ಪಾಸ್ತಿ ಮಾರಿ ಒಂದು ಲಕ್ಷ ಕಟ್ಟಬೇಕಾಗಿದೆ, ಏನು ಮಾಡಲಿ, ನನ್ನ ಹತ್ತಿರ ಅಷ್ಟೊಂದು ಹಣವಿಲ್ಲ. ಅವರ ಮನೆ ತೋರಿಸಿ ಅವರ ಹೆಂಡತಿ ಮಕ್ಕಳ ಬಳಿ ಈ ವಿಷಯ ತಿಳಿಸಿ ಅವರಿಂದ ಏನಾದರು ನೆರವು ಸಿಗುತ್ತದೆಯೇನೊ ಅನ್ನೊ ನಿರೀಕ್ಷೆಯಲ್ಲಿದ್ದ ಅವರಿಗೆ ಆಫೀಸಿನವರು ಪೊನ್ನಪ್ಪನ ಮನೆಯ ವಿಳಾಸ ನೀಡಿ ಕಳುಹಿಸಿ ಕೊಟ್ಟರು. ಅದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದ ಮಾಲಿನಿಗೆ ಪೊನ್ನಪ್ಪನ ಹೆಂಡತಿಯ ಸ್ವಾಭಾವದ ಬಗ್ಗೆ ತಿಳಿದಿದ್ದರಿಂದ ಪಾಪ ಆತನಿಗೇನು ಉಪಯೋಗವಿಲ್ಲವೆಂದು ಊಹಿಸಿದಳು.
ಪೊನ್ನಪ್ಪನಿಗೂ ಆತನ ಹೆಂಡತಿಗೂ ಅಂತಹ ಅನ್ಯೋನ್ಯತೆ ಇಲ್ಲವೆಂಬುದು ಇಡೀ ಆಫೀಸಿಗೆ ಗೊತ್ತಿತ್ತು. ಪೊನ್ನಪ್ಪನಿಗೆ ಒಬ್ಬನೆ ಮಗಾ ಮತ್ತು ಒಬ್ಬಳೇ ಮಗಳು, ಮಕ್ಕಳ ಓದಿಗಾಗಿ ಪೊನ್ನಪ್ಪ ತಲೆ ಕೆಡಿಸಿಕೊಂಡಿರಲಿಲ್ಲ, ಸರ್ಕಾರಿ ಕೆಲಸದಲ್ಲಿದ್ದ ಹೆಂಡತಿಯೇ ಮಕ್ಕಳನ್ನು ಓದಿಸುತ್ತಿದ್ದು, ಆ ವಿಷಯವಾಗಿ ಮನೆಯಲ್ಲಿ ಆಗ್ಗಾಗ್ಗೆ ಜಗಳ ನಡೆಯುತ್ತಿದೆ ಅಂತ ಪೊನ್ನಪ್ಪ ತುಂಬಾ ಬೇಸರಗೊಂಡಿದ್ದಾಗ ಎಲ್ಲರ ಮುಂದೂ ಆಫೀಸಿನಲ್ಲಿ ಹೇಳಿಕೊಂಡಿದ್ದುಂಟು. ತನಗೆ ಮುಂಚೆ ಯಾವ ಕೆಟ್ಟ ಆಭ್ಯಾಸಗಳೂ ಇರಲಿಲ್ಲ, ಆಫೀಸು ಮುಗಿದ ಕೂಡಲೆ ಮನೆ ಸೇರುತ್ತಿದ್ದೆ, ರಜಾ ದಿನಗಳಲ್ಲೂ ಹೊರಗೆ ಹೋಗುತ್ತಿರಲಿಲ್ಲ. ಅದಕ್ಕಾಗಿಯೇ ಹೆಂಡತಿ ಸಿಡಿಮಿಡಿಗೊಳ್ಳುತ್ತಿದ್ದು, ಗಂಡಸು ಯಾವಾಗಲೂ ಮನೆಯಲ್ಲಿ ಇದ್ರೆ ಏನು ಚೆನ್ನಾಗಿರುತ್ತೆ, ನಮ್ಮಣ್ಣ ಒಂದಂಕಿ ಲಾಟರಿ ಆಡಿ ಹೇಗೆ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾನೆ, ನೀನು ನೋಡಿದ್ರೆ ಮನೆಯಲ್ಲಿ ಮಲಗಿ ಕಾಲ ಹಾಕುತ್ತಿಯಾ ಅಂತ ಬೈಯ್ದು ಬೈಯ್ದು ಲಾಟರಿ ಆಡುವಂತೆ ಬಲವಂತವಾಗಿ ಉತ್ತೇಜಿಸಿ ಕಳಿಸಿದ್ದರಿಂದಲೇ ತಾನು ಆ ಚಟಕ್ಕೆ ಬಿದ್ದಿದ್ದು, ಯಾವಾಗಲೂ ಗೆಲ್ಲೊಕೆ ಸಾಧ್ಯನೆ ಒಂದು ಸಲ ಗೆದ್ದರೆ ಹತ್ತು ಸಲ ಹಣ ಕಳೆದು ಕೊಳ್ಳುತ್ತಿದ್ದೆ, ಮತ್ತೆ ಆಡಲು ಸಾಲ ಸೋಲ ಮಾಡಿಕೊಂಡು ಹಾಳಾದೆ, ಈಗಾ ಮನೆಗೆ ಬರಬೇಡಾ ಅಂತಾಳೆ, ದುಡ್ಡು ಕೊಟ್ರೆ ಮಾತ್ರಾ ಮನೆಯಲ್ಲಿರು ಅಂತಾಳೆ. ನಾನು ಮನೆಗೇ ಹೋಗಲ್ಲಾ ಅಂತ ಪೊನ್ನಪ್ಪ ಎಲ್ಲರೊಂದಿಗೆ ಹೇಳಿಕೊಂಡಿದ್ದನು. ಮನೆಯಿಂದ ಹೊರಗೆ ಯಾವುದೊ ಸಂ¨ಂಧ ಕೂಡಾ ಇದೆ ಅಂತ ಆಫೀಸಿನಲ್ಲಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು.
ಒಟ್ಟಿನಲ್ಲಿ ಮನೆಯವರೊಂದಿಗೆ ಪೊನ್ನಪ್ಪ ಚೆನ್ನಾಗಿರಲಿಲ್ಲ. ಇತ್ತೀಚಿಗೆ ಮಗನ ಮದುವೆ ನಡೆದಿತ್ತು .ಆಫೀಸಿನವರೆಲ್ಲಾ ಆ ಮದುವೆಗೆ ಹೋಗಿದ್ದರೂ ಮಗಳ ಮದುವೆ ಮಾಡದೆ ಮಗನ ಮದುವೆ ಏನು ಅವಸರವಾಗಿತ್ತು ಅಂತ ಅಂದು ಕೊಂಡಿದ್ದರು. ಮಗಳ ಮದುವೆ ಆಗಲಿಲ್ಲವಲ್ಲ ಅನ್ನೊ ಕೊರಗು ಕೂಡಾ ಪೊನ್ನಪ್ಪನಿಗೆ ಇತ್ತು. ಮಗಳ ಮದುವೆಗಾಗಿ ತುಂಬನೆ ಪ್ರಯತ್ನ ಪಡುತ್ತಿದ್ದ ಪೊನ್ನಪ್ಪ ಇದ್ದಕಿದ್ದಂತೆ ಕಾಣೆಯಾಗಿದ್ದನು. ಆತ ಕಾಣೆಯಾಗಿರುವ ಬಗ್ಗೆ ಕೂಡಾ ಅವರು ತಲೆಕೆಡಿಸಿಕೊಂಡಿರಲಿಲ್ಲ. ಆ ಬಗ್ಗೆ ಮನೆಗೆ ಹೋಗಿ ಯಾರಾದ್ರೂ ವಿಚಾರಿಸಿದರೆ ಪೊನ್ನಪ್ಪನ ಹೆಂಡತಿ ಎಲ್ಲಿ ಹೋಗ್ತಾರೆ, ಬರ್ತರೆ ಬಿಡಿ ಅಂತ ಉದಾಸೀನ ತೋರಿಸಿದ್ದು ಉಂಟು. ಹಿಂದೆ ಕೂಡಾ ಹಾಗೆ ಹೋಗಿ ಎಲ್ಲೊ ಇದ್ದು ಬಂದಿರುವುದು ಕೂಡಾ ನಿಜಾನೇ, ಆದರೆ ಈ ಬಾರಿ ಎಲ್ಲಿದ್ದಾನೆ ಅಂತ ಕೂಡಾ ಯಾರಿಗೂ ತಿಳಿದಿರಲಿಲ್ಲ.
ಹೀಗೆ ಪೊನ್ನಪ್ಪ ಕಾಣೆಯಾಗಿ ವರ್ಷವೇ ಕಳೆದು ಹೋಯಿತು. ಬದುಕಿದ್ದನೊ ಸತ್ತಿದ್ದಾನೊ ಅನ್ನೊದೇ ತಿಳಿಯಲಿಲ್ಲ. ಮಾಲಿನಿಗೆ ದಿನೆ ದಿನೆ ಚಡಪಡಿಕೆ ಹೆಚ್ಚಾಗುತ್ತಿತ್ತು. ಮಲಗಿದರು ನಿದ್ದೆಯೇ ಬರುತ್ತಿರಲಿಲ್ಲ. ಗೊತ್ತಿದ್ದು ಗೊತ್ತಿದ್ದು ಅಂತಹ ವ್ಯಕ್ತಿಯನ್ನು ನಂಬಿ ಹಾಳಾದೆನಲ್ಲ ಅನ್ನೊ ಕೊರಗು ಮಾಲಿನಿಯನ್ನು ಕಾಡತೊಡಗಿತು. ಹೀಗೆ ಕೊರಗುತ್ತಿರುವಾಗಲೇ ಪೊನ್ನಪ್ಪನ ಬಗ್ಗೆ ಮತ್ತೊಂದು ವಿಚಾರ ಗೊತ್ತಾಯಿತು. ಅದನ್ನು ಕೂಡಾ ವಾಸುವೇ ತಿಳಿಸಿದ್ದು.
ಪೊನ್ನಪ್ಪನ ಮಗ ಬೆಳೆದು ನಿಂತಿದ್ದ ತಂಗಿಯ ಮದುವೆಗಾಗಿ ಕಾಯದೆ ತಂದೆ, ತಾಯಿ, ತಂಗಿಯನ್ನು ಬಲವಂತವಾಗಿ ಒಪ್ಪಿಸಿ ತಾನು ಮೆಚ್ಚಿದ್ದ ಹುಡುಗಿಯನ್ನು ಮದುವೆ ಆಗಿದ್ದು, ಮದುವೆ ಖರ್ಚಿಗಾಗಿ ಅಪ್ಪ ಹಣ ಕೊಡಲೆ ಬೇಕೆಂದು ಮಗ ಹಟ ಹಿಡಿದಿದ್ದು, ಬಡ್ಡಿಗೆಂದು ಗೆಳೆಯನ ಬಳಿ ಕೊಟ್ಟಿದ್ದ ಹಣ ಸಕಾಲಕ್ಕೆ ಸಿಗದೆ ಮಗನನ್ನು ಎದಿರು ಹಾಕಿಕೊಳ್ಳಲಾರದೆ ಪೊನ್ನಪ್ಪ ಫೈನಾನ್ಸಿನಲ್ಲಿ ಹಣ ತೆಗೆದು ಕೊಟ್ಟಿದ್ದು, ಬಡ್ಡಿ ಆಸೆಗೆ ಸಾಲ ಕೊಟ್ಟಿದ್ದ ಪೊನ್ನಪ್ಪ ಗೆಳೆಯನಿಂದ ಮೋಸ ಹೋಗಿದ್ದು ಅದನ್ನು ತೀರಿಸಲು ಕಷ್ಟವಾಗಿ ಮಗನಲ್ಲಿ ಕೇಳಿದಾಗ ಮಗ ಸಿಟ್ಟಿಗೆದ್ದು ಪೊನ್ನಪ್ಪನಿಗೆ ಚೆನ್ನಾಗಿ ಹೊಡೆದು ಮನೆಯಿಂದ ಆಚೆಗಟ್ಟಿದ್ದನಂತೆ, ಗೆಳೆಯ ಮೋಸ ಮಾಡಿದ್ದು, ಫೈನಾನ್ಸಿನವರ ಒತ್ತಡ, ಮಗ ತನ್ನ ಮೇಲೆ ಕೈ ಮಾಡಿದ್ದು ಹೀಗೆ ಎಲ್ಲವೂ ಸೇರಿಕೊಂಡು ಪೊನ್ನಪ್ಪನನ್ನು ಹಣ್ಣು ಮಾಡಿ ಮನ ನೊಂದು ಎಲ್ಲೊ ದೂರ ಹೋಗಿ ಸತ್ತಿರ ಬಹುದು, ತಾನು ಸತ್ತ ನಂತರ ಆಫೀಸಿನಿಂದ ಯಾವುದೆ ಹಣ ಮನೆಯವರಿಗೆ ಸಿಗಬಾರದೆಂದು ಯೋಚಿಸಿ ತಾನು ಸತ್ತಿರುವುದು ಯಾರಿಗೂ ತಿಳಿಯ ಬಾರದೆಂದು ಹಾಗೆ ಮಾಡಿಕೊಂಡಿರ ಬಹುದು, ಅದಕ್ಕೆ ಪೊನ್ನಪ್ಪನಾಗಲಿ ಆತನ ಹೆಣವಾಗಲಿ ಸಿಕ್ಕಿಲ್ಲ ಅಂತ ಹೇಳಿದಾಗ ಮಾಲಿನಿ ನಿಸ್ತೇಜಳಾಗಿ ಕುಳಿತು ಬಿಟ್ಟಳು. ಪೊನ್ನಪ್ಪ ಸತ್ತೆ ಹೋಗಿರುವನೇ, ಹಾಗಾದರೆ ತಾನು ಕೊಟ್ಟ ಹಣ, ಇಡೀ ಜೀವ ಮಾನವೆಲ್ಲಾ ಕಾಸಿಗೆ ಕಾಸು ಸೇರಿಸಿ ಉಳಿಸಿದ್ದ ಹಣ , ಮುಂದೆ ತನ್ನ ಆಪತ್ಕಾಲಕ್ಕಾಗುವುದೆಂದು ಇಟ್ಟಿದ್ದ ಹಣವನ್ನೆಲ್ಲ ಬಡ್ಡಿ ಆಸೆಗೆ ಅವನ ಕೈಗೆ ಹಾಕಿದ್ದು , ಮುಂದೆ ಒಂದು ಸೂರು ಮಾಡಿಕೊಳ್ಳ ಬೇಕೆಂದಿದ್ದ ಹಣ ಅವನ ಜೊತೆಗೆ ಹೋಗಿ ಬಿಟ್ಟಿತೆ, ಅಯ್ಯೊ ದೇವರೆ, ನಾನು ಮುಳುಗಿ ಹೋದೆನೆ. ತಾನು ಹಣ ಕೊಟ್ಟಿದ್ದನ್ನು ಯಾರಿಗೂ ಹೇಳದೆ ಇದ್ದದ್ದು, ತಾನೀಗ ಹಣ ಕಳೆದು ಕೊಂಡು ಮೋಸ ಹೋಗಿರುವುದು ಎಲ್ಲವೂ ಕಣ್ಮುಂದೆ ಬಂದು ತಲೆ ಸುತ್ತಿದಂತಾಗಿ ಟೇಬಲ್ ಮೇಲೆ ತಲೆ ಇರಿಸಿ ಕುಳಿತು ಬಿಟ್ಟಳು. ವಾಸು ‘ ಮೇಡಂ ಮೇಡಂ, ಏನಾಯ್ತು , ಏನಾಯ್ತು’ ಅಂತ ಕೇಳುತ್ತಿದ್ದದ್ದು ಮಾಲಿನಿಗೆ ಪಾತಾಳದೊಳಗಿನಿಂದ ಕೇಳುತ್ತಿರುವಂತೆ ಭಾಸವಾಗುತ್ತಿತ್ತು.

ಶೈಲಜಾ ಹಾಸನ್ .

 

ಓದಿದ್ರಲ್ಲ ಪ್ರಿಯರೇ

ಮತ್ತೆ ಮುಂದಿನ ವಾರ  ಮತ್ತೊಂದು ಕಥೆ ಯೊಂದಿಗೆ ಸಿಗೋಣ

ನಿಮ್ಮ ಪ್ರೀತಿಯ ಸ್ಟೀಫನ್ ಜೇಮ್ಸ್

Belagaviphotonews.com

 

ಕಳೆದ ವಾರದ  ಓದುಗರ  ಪತ್ರ :-

ಈ ವಾರದ ಕಥೆ ತಾಯಿಯ ಕರೆ ಈ ಕಥೆ ನನ್ನ ಮನಸ್ಸಿಗೆ ತುಂಬಾ ಹತ್ತಿರವಾಯಿತು ಮಕ್ಕಳು ಉನ್ನತ ಶಿಕ್ಷಣ ಇರಬಹುದು ವೃತ್ತಿಯನ್ನು ಅರಸಿ ಇರಬಹುದು ಹೆತ್ತವರೊಂದಿಗೆ ದೂರವಾಗಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಹೋಗುತ್ತಾರೆ ಅವರಿಗಾಗಿ ಇಲ್ಲಿ ಅವರ ಹೆತ್ತವರು ಕೊರಗಿನಿಂದ ನೀರಸ ಬದುಕು ಸಾಗಿಸುತ್ತಿರುವ ಈ ಕಥೆ ನೋಡಿದಾಗ ನಮ್ಮ ಮಗಳು ವಿದೇಶಕ್ಕೆ ಹೋಗಿ 7 ವರ್ಷಗಳು ಆಗಿರುವುದರಿಂದ ಈ ಕಥೆ ನಮ್ಮ ಕುಟುಂಬಕ್ಕೆ ಹತ್ತಿರವಾಗಿದೆ ಇಂಥ ಸುಂದರ ಕಥೆ ರಚಿಸಿದ ಶೈಲಜಾ ಹಾಸನ ಮೇಡಂ ಅವರಿಗೂ ಹಾಗೂ ಇಂಥ ಕಥೆ ಪ್ರಕಟಿಸಿದ್ದಕ್ಕಾಗಿ ಬೆಳಗಾವಿ ಪೋಟೋ ನ್ಯೂಸ್ ಚಾನಲ್ ಸಂಚಾಲಕರು ಸ್ಟೀಫನ್ ಸರ ನಿಮಗೂ ಕೂಡ ಹೃದಯ ಪೂರ್ವಕ ಧನ್ಯವಾದಗಳು ಸರ್.

ಅರುಣ್ ದೇಶಪಾಂಡೆ ನವನಗರ ಹುಬ್ಬಳ್ಳಿ 

By BPN

Leave a Reply

Your email address will not be published. Required fields are marked *