ಮೂಡಲಗಿ – ಕಾಂಗ್ರೆಸ್ ವರಿಷ್ಠರು ಮತ್ತೊಮ್ಮೆ ಸ್ಪರ್ಧಿಸಲು ನನಗೆ ಅವಕಾಶ ಕೊಟ್ಟಿದ್ದಾರೆ. ಕಳೆದ ಸಲ ನಾನು ಚುನಾವಣೆಯಲ್ಲಿ ಸೋತಿದ್ದರೂ ಐದು ವರ್ಷಗಳ ಕಾಲ ಹೋರಾಟ ಮಾಡಿ, ಬೂತ್ ಮಟ್ಟದಿಂದ ಪಕ್ಷವನ್ನು ಸದೃಢ ಮಾಡಿದ್ದೇವೆ. ನನ್ನ ಪ್ರಾಮಾಣಿಕ ಹೋರಾಟ ಗುರುತಿಸಿ ನನಗೆ ಹೈಕಮಾಂಡ್ ಟಿಕೆಟ್ ಕೊಟ್ಟಿದೆ ಅದಕ್ಕಾಗಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ, ಎಮ್ ಬಿ ಪಾಟೀಲ ಅವರಿಗೆಲ್ಲ ಧನ್ಯವಾದ ಹೇಳುತ್ತೇನೆ ಎಂದು ಅರಭಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅರವಿಂದ ದಳವಾಯಿ ಹೇಳಿದರು.
ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಕೆ ಮಾಡಿದ ನಂತರ ಪತ್ರಕರ್ತರೊಡನೆ ಅವರು ಮಾತನಾಡಿದರು.
೨೦೧೮ ರಲ್ಲಿ ಪಕ್ಷ ಪೂರ್ತಿ ನಿರ್ನಾಮ ಆಗಿತ್ತು. ಬೇರೆಯವರ ಮನೆಯಲ್ಲಿ ಕುಳಿತಿತ್ತು ಅಂಥ ಪಕ್ಷವನ್ನು ಬಲಗೊಳಿಸುವ ಪಣ ತೊಟ್ಟು ಈ ಸಲ ಸ್ಪರ್ಧಿಸಿದ್ದೇನೆ. ಅರಭಾವಿ ಕ್ಷೇತ್ರದಲ್ಲಿ ನನಗೆ ಈ ಸಲ ಗೆಲುವು ಖಚಿತ ಅಲ್ಲದೆ ರಾಜ್ಯದಲ್ಲಿ ಕೂಡ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಃಸಿದ್ಧ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಬಲಗೊಂಡಿದೆ. ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ ಅಂಥವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಬಂದರು. ದೇಶದಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಅಂತ ಹೊರಟ ಬಿಜೆಪಿಯೇ ಮುಕ್ತ ಆಗುವುದರಲ್ಲಿ ಸಂದೇಹವಿಲ್ಲ ಎಂದು ಅವರು ಹೇಳಿದರು.
ಅರಭಾವಿ ಕ್ಷೇತ್ರದಲ್ಲಿ ಯಾರಿಗೇ ಟಿಕೆಟ್ ಸಿಕ್ಕರೂ ಎಲ್ಲರೂ ಒಂದಾಗಿ ಚುನಾವಣೆ ಎದುರಿಸೋಣ ಎಂದು ಮಾತನಾಡಿದ ಕಾಂಗ್ರೆಸ್ ಮುಖಂಡರಾರೂ ಅಲ್ಲಿ ಹಾಜರಿರಲಿಲ್ಲ. ಟಿಕೆಟ್ ಆಕಾಂಕ್ಷಿಗಳಾಗಿದ್ದ ಬಿ ಬಿ ಹಂದಿಗುಂದ, ಭೀಮಪ್ಪ ಗಡಾದ, ಲಕ್ಕಣ್ಣ ಸವಸುದ್ದಿ, ರಮೇಶ ಉಟಗಿ, ಮಲ್ಲಿಕಾರ್ಜುನ ಕಬ್ಬೂರ ಇವರ್ಯಾರೂ ಅಲ್ಲಿ ಉಪಸ್ಥಿತರಿರಲಿಲ್ಲ.
ಈ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲರಿಗೂ ಭೇಟಿಯಾಗಿದ್ದೇನೆ ಮಾತಿನ ಪ್ರಕಾರ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದೇನೆ. ನಮ್ಮ ಗುರಿ ಬಾಲಚಂದ್ರ ಜಾರಕಿಹೊಳಿಯವರನ್ನು ಕೆಳಗಿಳಿಸಬೇಕು ಎಂಬುದು ಇದಕ್ಕೆ ಎಲ್ಲರೂ ಕೈಜೋಡಿಸಬೇಕು ನಾನು ವಿನಂತಿ ಮಾಡಿಕೊಂಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಅರವಿಂದ ದಳವಾಯಿಯವರ ಧರ್ಮಪತ್ನಿ, ವಕೀಲರು, ಕೆ ಟಿ ಗಾಣಿಗೇರ, ಎಸ್ ಆರ್ ಸೋನವಾಲಕರ, ಅರಭಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಮಗದುಮ್, ಪ್ರಕಾಶ ಅರಳಿ, ವಿ ಬಿ ಮುಗಳಖೋಡ, ಸಲೀಮ ಇನಾಮದಾರ, ರವಿ ಮೂಡಲಗಿ ಇದ್ದರು.