---Advertisement---

Advertisement

ಒಗ್ಗಟ್ಟಾಗಿ ಶ್ರಮಿಸುವಂತೆ ಬಾಲಚಂದ್ರ ಜಾರಕಿಹೊಳಿ ಕರೆ

ಗೋಕಾಕ : ಮೇ 10 ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲೀಡ್ ನೀಡಲು ಪ್ರತಿ ಮತಗಟ್ಟೆಗಳ ಪ್ರಮುಖರು ಹಾಗೂ ಮುಖಂಡರು ಒಗ್ಗಟ್ಟಾಗಿ ಶ್ರಮಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು

ಶನಿವಾರದಂದು ನಗರದ ಹೊರವಲಯದಲ್ಲಿರುವ ಗೋಕಾಕ ಸಪ್ಲಾಯರ್ಸ್ ಭವನದಲ್ಲಿ ಜರುಗಿದ ಅರಭಾವಿ ಕ್ಷೇತ್ರದ 281 ಮತಗಟ್ಟೆಗಳ ಪ್ರಮುಖರ ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಮತಗಟ್ಟೆಗಳ ಮೂಲಕ ಕೆಲಸ ನಿರ್ವಹಿಸಿದರೆ ನಮ್ಮ ಚುನಾವಣೆಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹೇಳಿದರು.

2019 ರಲ್ಲಿ ನಡೆದ ಗೋಕಾಕ ವಿಧಾನಸಭಾ ಉಪಚುನಾವಣೆಯಲ್ಲಿ ನಮ್ಮ ಕ್ಷೇತ್ರದ ಸುಮಾರು ಸಾವಿರ ಜನರನ್ನು ಮತಗಟ್ಟೆಗಳ ಪ್ರಮುಖರನ್ನಾಗಿ ನಿಯೋಜಿಸಿ ರಮೇಶ ಜಾರಕಿಹೊಳಿ ಅವರ ಗೆಲುವಿಗೆ ಕಾರಣಿಕರ್ತರಾಗಿದ್ದಾರೆ.
ಅದೇ ಮಾದರಿಯಲ್ಲಿ ನಾವು ಚುನಾವಣೆಯನ್ನು ಎದುರಿಸಬೇಕಾಗಿದೆ. ಇದರಿಂದ ಸ್ಥಳೀಯ ಮಟ್ಟದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತ ಬೀಳಲು ಅನುಕೂಲವಾಗುತ್ತದೆ. ಪ್ರತಿ ಮತಗಟ್ಟೆಯಿಂದ 15 ರಿಂದ 20 ಜನ ಪ್ರಮುಖರನ್ನು ನಿಯೋಜಿಸಿದರೆ ಪ್ರಚಾರಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ. ಪೇಜ್ ಪ್ರಮುಖರ ಯಾದಿಯನ್ನು ಸಹ ಅತೀ ಬೇಗನೆ ಸಿದ್ಧಪಡಿಸುವಂತೆ ಅವರು ತಿಳಿಸಿದರು.

ಈ ಸಾರ್ವತ್ರಿಕ ಚುನಾವಣೆಯನ್ನು ನಾವು ಅಧಿಕ ಅಂತರದಲ್ಲಿ ಗೆಲ್ಲಬೇಕಾಗಿದೆ. ಕಾರ್ಯಕರ್ತರು ತಮ್ಮ ವೈಯಕ್ತಿಕ ಕೆಲಸಗಳನ್ನು ಬದಿಗಿಟ್ಟು 20 ದಿನಗಳವರೆಗೆ ನಮಗಾಗಿ ನಿಮ್ಮ ಸಮಯವನ್ನು ಮೀಸಲಿಡಬೇಕು. ಎದುರಾಳಿ ಅಭ್ಯರ್ಥಿ ಯಾರೇ ಆದರೂ ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ಕೇವಲ ಐತಿಹಾಸಿಕ ಜಯ ಒಂದೇ ನಿಮ್ಮ ಮುಂದಿರಲಿ. ಆ ಗುರಿಯನ್ನು ತಲುಪಲು ಮತದಾರರ ಮನೆ ಮನೆಗೆ ತೆರಳಿ ಬಿಜೆಪಿ ಕಾರ್ಯಕ್ರಮಗಳ ಯೋಜನೆಯನ್ನು ಪ್ರಚಾರಪಡಿಸುವಂತೆ ಹೇಳಿದರು.

ಈಗಾಗಲೇ ಕೆಲವು ಎಲೆಕ್ಟ್ರಾನಿಕ್ಸ್ ಮಾಧ್ಯಮಗಳು ಚುನಾವಣೆಯ ಸಮೀಕ್ಷೆಗಳನ್ನು ಮಾಡಿವೆ. ಅದರಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ತೋರಿಸಿದ್ದಾರೆ. ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ.  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಗಳನ್ನು ತಿಳಿಸಬೇಕಾಗಿದೆ. ನಾನು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಸಹ ಜನರಿಗೆ ಮನವರಿಕೆ ಮಾಡಿಕೊಡಲು ಕಾರ್ಯಕರ್ತರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ, ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ವಿಸ್ತಾರಕ ವೆಂಕಟ ಲಾಳಿ, ಮಂಡಲ ಪ್ರಧಾನ ಕಾರ್ಯದರ್ಶಿ ಪರಸಪ್ಪ ಬಬಲಿ, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಮತಗಟ್ಟೆಗಳ ಪ್ರಮುಖರು ಹಾಗೂ ಕ್ಷೇತ್ರದ ಸಾವಿರಾರು ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.

ತುಕ್ಕಾನಟ್ಟಿ, ಹಳ್ಳೂರ, ವಡೇರಹಟ್ಟಿ, ಮೆಳವಂಕಿ, ಕೌಜಲಗಿ, ಯಾದವಾಡ ಜಿಲ್ಲಾ ಪಂಚಾಯತಗಳು, ಮೂಡಲಗಿ ಪುರಸಭೆ, ನಾಗನೂರ, ಕಲ್ಲೋಳಿ, ಅರಭಾವಿ ಪಟ್ಟಣ ಪಂಚಾಯತಿಗಳ ವ್ಯಾಪ್ತಿಯ ಎಲ್ಲ ಬಿಜೆಪಿ ಮುಖಂಡರು, ಕಾರ್ಯಕರ್ತರ ಸಭೆಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರತ್ಯೇಕವಾಗಿ ನಡೆಸಿದರು.

SPECIAL REPORT BPN NEWS BELAGAVI

 

By BPN

Leave a Reply

Your email address will not be published. Required fields are marked *