ಬೆಳಗಾವಿ, ಸರಕಾರಿ ಸೇವೆ ಎಂಬುದು ನಮಗೆ ಸಿಕ್ಕ ದೇವರ ಆಶೀರ್ವಾದ ಇದ್ದಂತೆ. ಹುದ್ದೆ ಯಾವುದೇ ಇರಲಿ ಪ್ರಾಮಾಣಿಕತೆ, ಸಕಾರಾತ್ಮಕ ಮನೋಭಾವ ಹಾಗೂ ಜನರಿಗೆ ಒಳಿತು ಮಾಡಬೇಕು ಎಂಬ ಆಶಯವಿದ್ದರೆ ಯಶಸ್ಸು, ಕೀರ್ತಿ ಹಾಗೂ ಸಂತೃಪ್ತ ಭಾವನೆ ನಮ್ಮ ಜತೆಗಿರುತ್ತದೆ ಎಂದು ಪ್ರಾದೇಶಿಕ ಆಯುಕ್ತರಾದ ಎಂ.ಜಿ.ಹಿರೇಮಠ ಅವರು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ ವತಿಯಿಂದ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು
ಯಾವುದೇ ಕೆಲಸ ಇರಲಿ; ನಮ್ಮ ಸಾಧನೆಯು ಉನ್ನತ ಹುದ್ದೆಗೆ ಅವಕಾಶ ಕಲ್ಪಿಸಿಕೊಡುತ್ತದೆ ಎಂಬುದಕ್ಕೆ ನಾನೇ ಉದಾಹರಣೆ ಎಂದರು.
ತವರು ಜಿಲ್ಲೆಯಲ್ಲಿಯೇ ನಿವೃತ್ತಿಯಾಗಬೇಕು ಎಂಬ ಇಚ್ಛೆಗೆ ಸರಕಾರ ಕೂಡ ಅನುವು ಮಾಡಿಕೊಟ್ಟಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಭೌತಶಾಸ್ತ್ರ ಹಾಗೂ ಗಣಿತ ವಿಷಯದಲ್ಲಿ ಪರಿಣಿತನಾಗಿದ್ದ ನನಗೆ ಉಪನ್ಯಾಸ ವೃತ್ತಿಯಲ್ಲಿದ್ದಾಗ ಸರಕಾರಿ ಸೇವೆ ಕೈಬೀಸಿ ಕರೆಯಿತು.
ಹುಬ್ಬಳ್ಳಿ-ಧಾರವಾಡದಲ್ಲಿ ಜಾರಿಗೆ ತಂದ ಬಿ.ಆರ್.ಟಿ.ಎಸ್. ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸಂತೃಪ್ತಿ ಇದೆ.
ಗದಗ ಜಿಲ್ಲೆಯ 34 ಎಕರೆ ಜಾಗೆಯಲ್ಲಿನ ಅಕ್ರಮವನ್ನು ತೆರವುಗೊಳಿಸಿ ಸರಕಾರದ ಸುಪರ್ದಿಗೆ ಹಿಂದಿರುಗಿಸಿದ ಕೆಲಸವನ್ನು ಮೆಚ್ಚಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಭಿನಂದನ ಪತ್ರ ನೀಡಿದ್ದನ್ನು ಮೆಲುಕುಹಾಕಿದರು.
.ಜಿಲ್ಲಾಧಿಕಾರಿಯಾಗಿರುವರು ನಾಯಕತ್ವ ವಹಿಸಿದಾಗ ಮಾತ್ರ ಸಮಸ್ಯೆಗೆ ಪರಿಹಾರ ದೊರಕಿಸಲು ಸಾಧ್ಯ. ಪ್ರವಾಹಪೀಡಿತ ಚಿಕ್ಕೋಡಿ, ಕಾಗವಾಡ ಮತ್ತಿತರ ತಾಲ್ಲೂಕುಗಳಲ್ಲಿ ಮುಖ್ಯಮಂತ್ರಿಗಳ ನೆರವಿನೊಂದಿಗೆ 183 ಕೋಟಿ ಮೊತ್ತದ ಅನುದಾನ ಹಾಗೂ 8 ಸಾವಿರ ಮನೆಗಳನ್ನು ಒದಗಿಸಿರುವುದನ್ನು ನೆನಪಿಸಿಕೊಂಡರು.
ಕೋವಿಡ್ ಲಸಿಕೆ ಸಂದರ್ಭದಲ್ಲಿ ಒಂದೇ ದಿನದಲ್ಲಿ ಮೂರು ಲಕ್ಷ ಲಸಿಕೆಯನ್ನು ಹಾಕುವ ಮೂಲಕ ಇಡೀ ದೇಶಕ್ಕೆ ದ್ವೀತಿಯ ಸ್ಥಾನ ಗಳಿಸಿರುವುದನ್ನು ಸ್ನರಿಸಿದ ಅವರು, ಇಂತಹ ಅವಕಾಶ ಬೆಳಗಾವಿ ಜಿಲ್ಲೆಯಲ್ಲಿ ಮಾತ್ರ ಲಭಿಸುತ್ತದೆ ಎಂದರು
ಹರ್ಷಲ್ ಭೋಯರ್ ಅವರು ಮಾತನಾಡಿ, ಅನೇಕ ಸಂದರ್ಭಗಳಲ್ಲಿ ಅವರ ಮಾರ್ಗದರ್ಶನ ಪಡೆದುಕೊಂಡಿರುವುದನ್ನು ಸ್ಮರಿಸಿದರು.
ಪ್ರವಾಹ ಮತ್ತು ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಅವರು ತೆಗೆದುಕೊಂಡ ನಿರ್ಧಾರಗಳು ಜನರಿಗೆ ಅತ್ಯಂತ ಪ್ರಯೋಜನಕಾರಿಯಾಗಿವೆ ಎಂದರು.
ಸಮಾರಂಭದ ಕೊನೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಹಿರೇಮಠ ಅವರ ಸ್ನೇಹಿತರು, ಹಿತೈಷಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಎಂ.ಜಿ.ಹಿರೇಮಠ ದಂಪತಿಗೆ ಸನ್ಮಾನಿಸಿ, ಹೂಗುಚ್ಛ ನೀಡಿ ಆತ್ಮೀಯವಾಗಿ ಬೀಳ್ಕೊಟ್ಟರು.
BPN ಸುದ್ಧಿ Belagaviphotonews.com