---Advertisement---

Advertisement

 

ಆತ್ಮೀಯ ಓದುಗರೇ ಇಂದಿನ ವಿಶೇಷ ಲೇಖನವನ್ನು  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ  ರಾಜ್ಯಧ್ಯಕ್ಷ ಶಿವಾನಂದ ತಗಡೂರು ರವರಿಂದ 

ಕಾಣದ ಕಡಲಿಗೆ

ಹಂಬಲಿಸಿದೆ ಮನ…

 

ನಿಜ

ಈ ಹಾಡು ಕೇಳದವರಿಲ್ಲ.

ಅಷ್ಡರಮಟ್ಟಿಗೆ ಈ ಹಾಡು ಅದೆಷ್ಟು ಕನ್ನಡಾಭಿಮಾನಿಗಳ ಎದೆಯಾಳಕ್ಕೆ ಇಳಿದಿದೆಯೊ ಲೆಕ್ಕವಿಲ್ಲ.

 

ಹೌದು.‌

ಈ ಹಾಡಿಗೆ ಭಾವ ತುಂಬಿ ಹಾಡಿದ್ದು ಮಾತ್ರ ಕನ್ನಡ ನಾಡು ಎಂದೂ ಮರೆಯಲಾಗದ ಸ್ವರ ಸಾಮ್ರಾಜ್ಯದ ಮಾಣಿಕ್ಯ ಸಿ.ಅಶ್ವಥ್ ಅವರು.

ಅವರ ಧ್ವನಿಯಲ್ಲಿ ಅದೆಷ್ಟು ಭಾವಗೀತೆಗಳು ಭಾವ ತುಂಬಿಕೊಂಡಿವೆಯೊ? ಜಾನಪದ ಗೀತೆಗಳು ಮೈದುಂಬಿಕೊಂಡಿವೆಯೊ? ಲೆಕ್ಕಹಾಕುವವರು ಯಾರು?

 

ನಿಜ ಹೇಳಬೇಕು ಅಂದರೆ, ಭಾವಗೀತೆಗಳ ಲೋಕವನ್ನು ಅರ್ಥಪೂರ್ಣವಾಗಿದೆ ವಿಸ್ತಾರ ಮಾಡಿದ ಕನ್ನಡದ ಸ್ವರ ಸಾಮ್ರಾಟರಲ್ಲಿ ಸಿ.ಅಶ್ವಥ್ ಮೇಲ್ಪಂಕ್ತಿಯಲ್ಲಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

 

ಸಿ.ಅಶ್ವಥ್ ಎಲ್ಲಿಯವರು? ಎನ್ನುವ ಕುತೂಹಲ ನನಗೂ ಇತ್ತು. ಅವರು ನಮ್ಮ ಚನ್ನರಾಯಪಟ್ಟಣ ದವರು ಎನ್ನುವ ಅಭಿಮಾನ ಹೆಚ್ಚಿತ್ತು.

ಅದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕು ಎನ್ನುವುದು ನನ್ನಂತೆ ಹಲವರ ಭಾವನೆಯಾಗಿತ್ತು.

 

ಅದೊಂದು ದಿನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರಕ್ಕೆ ಹೋಗಿದ್ದಾಗ ಅಲ್ಲೊಬ್ಬರು ಖ್ಯಾತ ಗಾಯಕ ಸಿ.ಅಶ್ವಥ್ ನಮ್ಮ ಚನ್ನರಾಯಪಟ್ಟಣ ದವರು ಸಾರ್. ನೀವೊಮ್ಮೆ ಆ ಊರಿಗೆ ಬರಬೇಕು ಎಂದರು.

 

ಅರೆ,

ಇಲ್ಲೊಂದು ಚನ್ನರಾಯಪಟ್ಟಣ ಇದೆಯಾ? ಕೇಳಿದೆ. ಹೌದು ಸಾರ್ ಎಂದರು. ಕಾರಣಾಂತರಗಳಿಂದ ಅಲ್ಲಿಗೆ ಅಂದು ಹೋಗಲಾಗಲಿಲ್ಲ. ಇದೆಲ್ಲ ಘಟನಾವಳಿಗಳಿಗೆ ವರುಷಗಳೇ ತುಂಬಿವೆ.

ದೇವನಹಳ್ಳಿ ತಾಲ್ಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಯಕ್ರಮಕ್ಕೆ ಹೋಗಿದ್ದಾಗ ಮತ್ತೆ ಚನ್ನರಾಯಪಟ್ಟಣ ನೆನಪಿಗೆ ಬಂತು.

ಸಿ.ಅಶ್ವಥ್ ಹುಟ್ಟಿದೂರಿಗೆ ಹೋಗಲೇಬೇಕು ಎಂದು ಹೊರಟೆವು. ವಿಜಯಪುರದಿಂದ ಎಂಟತ್ತು ಕಿ.ಮೀ. ದೂರ ಅಷ್ಟೇ.

 

ಚನ್ನರಾಯಪಟ್ಟಣ ಸರ್ಕಲ್ ನಲ್ಲಿ ಇಳಿದು ಆಚೀಚೆ ಅಡ್ಡಾಡಿದೆವು. ಗಾನಕೋಗಿಲೆಯಾಗಿ ಜನಸಮುದಾಯದ ಮನ ಗೆದ್ದ ಅಶ್ವಥ್ ಊರಿನಲ್ಲಿ ಅವರ ಹೆಸರಿನಲ್ಲಿ ಒಂದು ಆಗಲೋ ಈಗಲೋ‌ ಬೀಳುವ ಬಸ್ ನಿಲ್ದಾಣ ಬಿಟ್ಟರೆ ಬೇರೇನೂ ಕಾಣಲಿಲ್ಲ.

ಸಿ.ಅಶ್ವಥ್ ಕುಟುಂಬ ಈಗಲೂ ಅಲ್ಲಿನ ದೇವಸ್ಥಾನಕ್ಕೆ ಬರುವ ಸಂಗತಿಯನ್ನು ಊರಿನವರು ತಿಳಿಸಿದರು. ಅಶ್ವಥ್ ಅವರೇ ಈ ದೇವಸ್ಥಾನದ‌ ವಿಗ್ರಹ ಪ್ರತಿಷ್ಟಾಪನೆ ಮಾಡಲು ಬಂದಿದ್ದರು ಎಂದು ನೆನಪಿಸಿದರು. ಸುಬ್ರಹ್ಮಣ್ಯ ದೇವಾಲಯ ಜೀರ್ಣೋದ್ಧಾರ ಘಟನೆಗಳ ಮೆಲುಕು ಹಾಕಿದರು. ಇಡೀ ಊರು ಮೊದಲು ಗಲಾಟೆಮಯವಾಗಿತ್ತು. ಈಗ ಶಾಂತಿಯುತವಾಗಿದೆ ಎಂದು ಅಲ್ಲೊಂದು ಪೊಲೀಸ್ ಠಾಣೆ ಇರುವ ಬಗ್ಗೆ ಮಾಹಿತಿ ನೀಢಿದರು. ಊರಿನಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ.

ಗ್ರಾಮ ಪಂಚಾಯತಿ ಕಚೇರಿ ಕಟ್ಟಡವೇ ಭರ್ಜರಿಯಾಗಿದೆ.

 

ಅಲ್ಲಿ,

ಟೀ ಕುಡಿಯುತ್ತ ಈ ಊರಿನ ಪ್ರತಿಭೆ ದೇಶ ವಿದೇಶಗಳ ಉದ್ದಗಲಕ್ಕೂ ಕನ್ನಡ ಭಾವಗೀತೆಗಳನ್ನು ಉಣಬಡಿಸಿದೆ. ಆ ಪ್ರತಿಭೆ ಸಿ.ಅಶ್ವಥ್ ಅವರ ಹೆಸರಿನಲ್ಲಿ ಪುತ್ಥಳಿ ಸ್ಥಾಪಿಸಿ ಸದಾ ಅವರನ್ನು ನೆನೆಯುವ ಕೆಲಸ ಮಾಡಿ ಎಂದು ನೀಡಿದ ಸಲಹೆಯನ್ನು ಅಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಗ್ರಾಮಸ್ಥರು ಅಭಿಮಾನದಿಂದ ಸ್ವೀಕರಿಸಿದರು. ನಮಗೂ ಅಲ್ಲಿಗೆ ಭೇಟಿ ನೀಡಿದ ಸಾರ್ಥಕ ಭಾವ ಮೂಡಿತು.

 

ಸಿ.ಅಶ್ವಥ್ ಅವರ ಹೆಸರಿನಲ್ಲಿ ಚನ್ನರಾಯಪಟ್ಟಣದಲ್ಲಿ ಏನಾದರೊಂದು ಶಾಶ್ವತ ನೆನಪು ಉಳಿಯುವ ಕೆಲಸ ಖಂಡಿತವಾಗಿ ಆಗಬೇಕಿದೆ.

ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಸುಗಮ ಸಂಗೀತ ಬಳಗದವರು ಪ್ರಯತ್ನ ನಡೆಸಲು ಮುಂದಾಗಬೇಕು. ಈ ಎಲ್ಲಾ ಪ್ರಯತ್ನಗಳಿಗೆ ಅಲ್ಲಿನ ಪತ್ರಕರ್ತರು ಸಾಥ್ ನೀಡಲು ಸಿದ್ಧರಾಗಿದ್ದಾರೆ. ಅಶ್ವಥ್ ಅಭಿಮಾನಿಗಳು ಕೂಡ ಬೆಂಬಲವಾಗಿದ್ದಾರೆ. ಈ ಕೆಲಸ ಆಗಲಿ ಎಂದು ಬಯಸಿ ಚನ್ನರಾಯಪಟ್ಟಣದಿಂದ ಬೆಂಗಳೂರು ಕಡೆಗೆ ಹೊರಟಾಗ ಮತ್ತೆ

ಕಾಣದ ಕಡಲಿಗೆ,

ಹಂಬಲಿಸಿದೆ ಮನ…

ಹಾಡಿನ ಅಶ್ವಥ್ ಅವರ ಧ್ವನಿ ಕಿವಿಯಲ್ಲಿ ಗುನುಗುಡುತಿತ್ತು…

By BPN

Leave a Reply

Your email address will not be published. Required fields are marked *