---Advertisement---

Advertisement

ಪ್ರಿಯ ಓದುಗರೇ ಈ ವಾರದ , ವಾರಕ್ಕೊಂದು ಕಥೆಯಲ್ಲಿ

 

ಶ್ರೀಮತಿ ಶೈಲಜಾ ಹಾಸನ್ ರವರ  .

               ರೇಶಿಮೆ ಲಂಗ

 

ರಾತ್ರಿಯೆಲ್ಲಾ ಮುಸಿ ಮುಸಿ ಅಳುತ್ತಲೇ ಕಳೆದಿದ್ದಳು. ಇಡೀ ರಾತ್ರಿ ಕಣ್ಮುಚ್ಚಿರಲಿಲ್ಲ .ಬೆಳಗಿನ ಜಾವದಲ್ಲಿ ನಿದ್ರೆ ಹತ್ತಿತ್ತು. ಕನಸಿನ ತುಂಬಾ ರೇಷ್ಮೆ ಲಂಗವೇ ರಂಗು ರಂಗಾಗಿ ಕಾಡಿತ್ತು. ಅಪ್ಪ ಒಪ್ಪಿ ಕೆಂಪು ಬಣ್ಣದ ರೇಷ್ಮೆ ಲಂಗ ಹೊಲಿಸಿದಂತೆ, ಅದನ್ನು ತೊಟ್ಟು ತಾನು ಶಾಲೆಗೆ ಹೋದಂತೆ , ಪ್ರತಿ ದಿನಾ ರೇಷ್ಮೆ ಲಂಗದಲ್ಲಿ ಬರುವ ರಾಗಿಣಿ ,ತನ್ನ ರೇಷ್ಮೆ ಲಂಗ ಕಂಡು ಹೊಟ್ಟೆಕಿಚ್ಚು ಬರಿಸಿಕೊಂಡಂತೆ ಕನಸೇ ಕನಸು. ಬೆಳಗ್ಗೆ ಕಣ್ಣು ಬಿಟ್ಟಾಗ ಅದೆಲ್ಲವೂ ಕನಸೆಂದು ತಿಳಿದು ಹಾಸಿಗೆ ಮೇಲೆ ಜೋರಾಗಿ ಅತ್ತಿದ್ದಳು ವೇಣೆ .

 

” ಬೆಳ ಬೆಳಗ್ಗೆಯೇ ಇದೇನೇ ಕೂಸು ನಿಂದು ರಂಪಾಟ, ಎದ್ದೇಳು ನೋಡುವ ಮುಂದಿನ ಗೌರಿ ಹೊತ್ತಿಗಾದರೂ ರೇಷ್ಮೆ ಲಂಗ ತರುವ “ಎನ್ನುವ ಅಪ್ಪನ ಮಾತು, ”

ನೀ ಏನು ರಾಜಕುಮಾರಿಯ ,ನೀ ಕೇಳಿದ್ದೆಲ್ಲ ತಂದು ಕೊಡೋಕೆ ,ಎದ್ದೇಳೆ ಮೇಲೆ, ನೀ ಹೀಗೆ ಅಳ್ತಾ ಇದ್ರೆ ಸೊಟ್ಟುಗ ಸುಟ್ಟು ಬರೆಯಾಕ್ತಿನಿ ನೋಡು”.

ಅಮ್ಮನ ಬೈಗಳ ಯಾವುದು ವೇಣಿಯ ಕಿವಿ ಮೇಲೆ ಬೀಳುತ್ತಿಲ್ಲ .ಅವಳ ಮನಸ್ಸಿನ ತುಂಬಾ ರೇಷ್ಮೆ ಲಂಗವೇ ನಲಿದಾಡ್ತಾ ಇದೆ. ಅಪ್ಪ ಯುಗಾದಿಗೆ ಹೊಲಸ್ತೀನಿ ಅಂದಿದ್ದ. ಯುಗಾದಿಯ ದಿನಕ್ಕಾಗಿ ಕಾದು ಕುಳಿತಿದ್ದ ವೇಣಿ ಎಲ್ಲರಿಗೂ ಹೇಳಿಬಿಟ್ಟಿದ್ದಳು. ಈ ಬಾರಿ ಯುಗಾದಿಗೆ ಅಪ್ಪ ನನಗೆ ರೇಷ್ಮೆಲಂಗ ತರ್ತಾರೆ .

ಈ ರಾಗಿಣಿ ಒಬ್ಳೆನಾ ರೇಷ್ಮೆ ಲಂಗ ಹಾಕೋದು .ನಾನು ಹಾಕಿಕೊಂಡು ಬರ್ತೀನಿ ನೋಡ್ತೀರಿ ಎಂದು ಶಾಲೆಯ ಗೆಳತಿಯರಿಗೆಲ್ಲ ಸಾರಿಕೊಂಡಿದ್ದಳು .ಆದರೆ ಅಪ್ಪ ರಾತ್ರಿ ಬಂದವನೇ ಹಬ್ಬಕ್ಕೆ ತಂದಿದ್ದ ಬಟ್ಟೆನೆಲ್ಲಾ ಹರಡಿ ತೋರಿಸುವಾಗ ತನ್ನ ರೇಷ್ಮೆ ಲಂಗ ಕಾಣದೆ ಕಂಗಾಲಾಗಿದ್ದಳು. ಯಥಾ ಪ್ರಕಾರ ಹಸಿರು ಹೂವಿನ ಚೀಟಿ ಬಟ್ಟೆ ನೋಡಿದ ಕೂಡಲೇ ಹೋ ಎಂದು ಆಲಾಪನೆ ಶುರು ಮಾಡಿದ್ದಳು.

“ನೋಡೇ ಕೂಸು, ಇಷ್ಟೆಲ್ಲ ಬಟ್ಟೆಗಾಗುವಷ್ಟು ದುಡ್ಡು ರೇಷ್ಮೆ ಲಂಗಕ್ಕೆ ಬೇಕಾಗಿತ್ತು ನನ್ನತ್ರ ಅಷ್ಟೊಂದು ದುಡ್ಡು ಎಲ್ಲಿತ್ತು ಮಗಳೇ ,ಅಜ್ಜಿಗೆ ಔಷಧಿ, ಅಕ್ಕಂಗೆ ಬಾಣಂತನಕ್ಕೆ ಹಣ ಎಲ್ಲಾನು ಹೊಂದಿಸ್ಬೇಕಲ್ಲ ಮುಂದಿನ ಸಾರಿ ಖಂಡಿತ ತರ್ತೀನಿ .ಈಗ ಇದನ್ನು ಹೊಲಿಸಿಕೊಂಡು ಬಿಡು “ಅಪ್ಪ ಏನೇನು ಹೇಳಿ ಸಮಾಧಾನ ಸಿದ್ದರು . ಹಸಿರು ಚೀಟಿ ಲಂಗದ ಬಟ್ಟೆಯನ್ನು ರೊಯ್ಯನೆ ಎಸೆದು ಮುಸಿಮುಸಿ ಅಳುತ್ತಾ ಹಾಸಿಗೆ ಸೇರಿಕೊಂಡಿದಳು. ಮನೆಯವರಾರಿಗೂ ರಾತ್ರಿ ಊಟಕ್ಕೆ ಅವಳನ್ನು ಏಳಿಸುವ ಧೈರ್ಯ ಸಾಲದೆ ಸುಮ್ಮನೆ ಇದ್ದುಬಿಟ್ಟಿದ್ದರು.

 

ಹಾಸಿಗೆ ಬಿಟ್ಟು ಮೇಲೆ ಏಳದ ಮಗಳನ್ನು ಕಂಡು ತಾಯಿ ಕರುಳು ಚುರುಕೆಂದರೂ ಅದನ್ನು ತೋರಕೊಡದೆ “ಎಲೆ ದಾಂಡೇಲಿ ಬಸವಿ, ಎದ್ದು ಶಾಲೆಗೆ ಹೋಗೋದು ಬಿಟ್ಟು ಇದೇನೇ ನಿಂದು ಬಯಲಾಟ .ನೀನೊಬ್ಬಾಕೀನೇನೆ ನೀನು ಮನೇಲಿ ಇರೋದು. ಆ ಶಾಮ ನೋಡು ಹೇಗೆ ಸುಮ್ಮನಿದ್ದಾನೆ .ನಿನ್ಗಿಂತ ಚಿಕ್ಕವನು .ತಂದಿರೋ ಬಟ್ಟೆ ನೋಡ್ಕೊಂಡು ಖುಷಿ ಪಡುತ್ತಾ ಇಲ್ಲೇನು, ನಿಂದೇನು ಪೊಗರು, ರೇಷ್ಮೆ ಲಂಗ ಬೇಕಂತೆ ರೇಷ್ಮೆ ಲಂಗ ,ಈಗ ಏಳ್ದೆ ಇದ್ರೆ ನೋಡು ಮತ್ತೆ ” ಒಂದೇ ಸಮ ಕೂಗಾಡ ಹತ್ತಿದಾಗ ಅಮ್ಮನನ್ನೇ ದುರುದುರು ನೋಡುತ್ತಾ ಇವಳದೇ ಎಲ್ಲ ಕಿತಾಪತಿ .ಇವಳೇ ತರೋದು ಬೇಡ ಎಂದಿದ್ದಾಳೆ .ಅಕ್ಕನ ಮದುವೆಗೆ ಮಾತ್ರ ರೇಷ್ಮೆ ಸೀರೆ ತರ್ಸಿದ್ಳು, ತಾನು ತೊಗೊಂಡು ಮೆರೆದಾಡಿದ್ಲು .ಈಗ ನಾನು ಮಾತ್ರ ರೇಷ್ಮೆ ಲಂಗ ಕೇಳಬಾರದಂತೆ. ಇವಳು ಯಾಕಾದ್ರೂ ನಮ್ಮಮ್ಮ ಆದ್ಲೋ, ಮನಸ್ಸಿನಲ್ಲಿಯೇ ರಾಶಿ ರಾಶಿ ಬೈದುಕೊಳ್ಳುತ್ತಾ ಎದ್ದು ಬಚ್ಚಲ ಮನೆ ಕಡೆಗೆ ನಡೆದಳು.

 

ಅದೇ ನೀಲಿ ಲಂಗ , ಹಳದಿ ರವಿಕೆ ಹಾಕಿಕೊಂಡು ಚೀಲನ ಹೆಗಲಿಗೆರಿಸಿಕೊಂಡು ಯಾರಿಗೂ ಹೇಳದೆ ಹೊರಗಡೆ ಹೊರಟಳು.ಇನ್ನು ಹೊತ್ತಾಗಿರಲಿಲ್ಲ .ಹೊಟ್ಟೆ ಬೇರೆ ಹಸಿತ ಇತ್ತು .ರಾತ್ರಿನೂ ಊಟ ಮಾಡಿರಲಿಲ್ಲ .ಬೆಳಿಗ್ಗೆ ಅಮ್ಮನ ಮೇಲಿನ ಸಿಟ್ಟಿಗೆ ತಿಂಡಿನು ತಿನ್ನದೇ ಬಂದಾಗಿತ್ತು .ಆದರೆ ಈಗ ಹೊಟ್ಟೆಯಲ್ಲಿ ಸಂಕಟ ಶುರುವಾದಂತಾಗಿ ಮುಂದೆ ಹೆಜ್ಜೆ ಇಡಲು ಆಗಲ್ಲ ಅನ್ನಿಸಿ ಅಂಗಡಿಯ ಜಗಲಿಯ ಜಗಲಿಯ ಮೇಲೆ ಕುಕ್ಕರಿಸಿದಳು . ಬ್ಯಾಗನೆಲ್ಲ ತಡಕಾಡಿದಾಗ ಐದು ರೂಪಾಯಿ ಕಾಯಿನ್ ಸಿಕ್ತು .ಮೊನ್ನೆ ಮಾಮ ಊರಿಗೆ ಹೋಗುವಾಗ ಕೊಟ್ಟಿದ್ದ ಹಣ .ಅದೇ ದುಡ್ಡಿನಲ್ಲಿ ಪುರಿ ಕೊಂಡ್ಕೊಂಡು ಮುಂದೆ ಹೆಜ್ಜೆ ಹಾಕಿದ್ದಾಳೆ .ನಾನು ಪುರಿ ತಿಂತಾ ಹೋದ್ರೆ ಗೆಳತಿಯಾರು ಯಾರಾದ್ರೂ ನೋಡಬಹುದು ಎಂದುಕೊಂಡವಳೆ ಸ್ವಲ್ಪ ಮುಂದೆ ಹೋಗಿ ಸಿಕ್ಕಿದ ತೋಪಿನೊಳಗೆ ನಡೆದಳು .ಮರದ ಕೆಳಗೆ ಕುಳಿತು ಪುರಿ ತಿನ್ನುತ್ತಾ ತಿನ್ನುತ್ತಾ ಅಳು ಒತ್ತರಿಸಿಕೊಂಡು ಬಂದಿತು .ನೆನ್ನೆ ಅಪ್ಪ ರೇಷ್ಮೆ ಲಂಗ ತಂದಿದ್ರೆ ಇವತ್ತು ಸ್ಕೂಲಿಗೆ ಹೋಗಿ ಎಲ್ಲರತ್ರನು ಹೇಳಿಕೊಂಡು ಜಂಬ ಪಡಬಹುದಿತ್ತು. ಈಗ ಸ್ಕೂಲಿಗೆ ಹೋಗುವ ಹಾಗಿಲ್ಲ .ಎಲ್ಲರೂ ಅಣಕಿಸಿಕೊಂಡು ನಗುತ್ತಾರೆ .

 

ರಾಗಿಣಿ ಮೊದಲೇ ಜಂಬದವಳು .ಈಗ ನನ್ನ ಮಾತೆಲ್ಲವೂ ಸುಳ್ಳು ಅಂತ ಗೊತ್ತಾದ್ರೆ ಎಲ್ಲರೂ ಕೈಲು ಹೇಳಿಕೊಂಡು ಆಡಿ ಕೊಳ್ತಾಳೆ .ಥೂ ನಾನು ಸ್ಕೂಲಿಗೆ ಹೋಗಲ್ಲ .ರೇಷ್ಮೆ ಲಂಗ ಇಲ್ಲದೆ ಹೇಗೆ ಹೋಗಲಿ .ಅವರಿಗೆಲ್ಲ ಹೇಗೆ ಮುಖ ತೋರಿಸಲಿ. ಹಸಿರು ಒಡಲಿನಾ ಕೆಂಪು ಅಂಚಿನ ಸಣ್ಣ ಸಣ್ಣ ನಕ್ಷತ್ರ ಜರಿಯ ಲಂಗದ ಮೇಲೆ ನನಗೆ ಅದೆಷ್ಟು ಆಸೆಯಾಗಿತ್ತು .ಅಂತಹ ಲಂಗ ಇಲ್ಲದ ತಾನು ಅದು ಹೇಗೆ ಜೀವಿಸಿರುವುದು .ಆ ಚೀಟಿ ಲಂಗ ನನಗೆ ಬೇಡ .ಕೊಡಿಸಿದರೆ ರೇಷ್ಮೆಲಂಗ ಕೊಡಿಸಲಿ .ಇಲ್ಲದಿದ್ದರೆ ತನಗೆ ಹೊಸ ಬಟ್ಟೆಯೇ ಬೇಡ .ರಾಗಿಣಿ ಹತ್ತಿರ ಎಷ್ಟೊಂದು ರೇಷ್ಮೆ ಲಂಗ ಗಳಿವೆ ಎಲ್ಲಾ ಬಣ್ಣದ್ದು ,ಎಲ್ಲ ಡಿಸೈನ್ ನ ಬಾರ್ಡರ್ ದು ಇದೆ. ದಿನಕ್ಕೊಂದರಂತೆ ಹಾಕಿಕೊಂಡು ಮೆರೆಯುತ್ತಾಳೆ ಜೊತೆಗೆ ತನ್ನ ಹತ್ತಿರವೇ ಇರುವುದು ಬೇರೆಯವರ ಹತ್ತಿರ ಇಲ್ಲ ಎಂದು ಬೀಗುತ್ತಾಳೆ .ಅವಳ ಜಂಬ ಮುರಿಯಲೇಬೇಕು ಅವಳ ಕೊಬ್ಬಿಗೆ ಪಾಠ ಕಲಿಸಲೇಬೇಕು .ಇಡೀ ಕ್ಲಾಸ್ ಗೆ ತಾನೊಬ್ಬಳೇ ಶ್ರೀಮಂತೆ ಎಂದು ಮೆರೆಯುವ ಅವಳ ಮುಂದೆ ತಾನು ರೇಷ್ಮೆಲಂಗ ಹಾಕಿಕೊಂಡು ಬೀಗಲೇಬೇಕು .ಏನಾದರೂ ಆಗಲಿ ಈ ಬಾರಿ ಮಾತ್ರ ನಾನು ಸೋಲಲಾರೆ. ಅಪ್ಪ ರೇಷ್ಮೆಲಂಗ ತರಬೇಕು .ಅಲ್ಲಿವರೆಗೂ ತಾನು ಊಟ, ತಿಂಡಿಯನ್ನು ಮುಟ್ಟುವುದಿಲ್ಲ .

 

ಈ ಯೋಚನೆಯಲ್ಲಿ ಸಮಯ ಎಷ್ಟಾಯಿತೆಂದು ತಿಳಿಯದೆ ಚಡಪಡಿಸಿದಳು. ರಾತ್ರಿ ಎಲ್ಲಾ ನಿದ್ರೆ ಇಲ್ಲದ್ದರಿಂದ ನಿದ್ರೆ ಒತ್ತರಿಸಿಕೊಂಡು ಬಂದು ಕಂಬಕೊರಗಿ ನಿದ್ರಿಸಿಬಿಟ್ಟಳು. ಅದೆಷ್ಟು ಹೊತ್ತು ನಿದ್ರಿಸಿದ್ದಳೊ. ಎಚ್ಚರವಾಗುವ ವೇಳೆಗೆ ಬಿಸಿಲು ಚೆನ್ನಾಗಿ ಏರಿತ್ತು .ಮತ್ತೆ ಹಸಿವು ಶುರುವಾಯಿತು. ಸಂಕಟ ತಡೆಯಲಾರದೆ ಅಳು ಬಂದಿತು .ಎದ್ದು ತೋಪಿನ ತುಂಬಾ ಓಡಾಡಿದಳು .ಸೀಬೆ ಗಿಡ ಕಂಡಿತು. ಗಿಡದ ತುಂಬಾ ಸೀಬೆಕಾಯಿ. ಕಲ್ಲು ಆರಿಸಿಕೊಂಡು ಹಣ್ಣಿಗೆ ಗುರಿ ಇಟ್ಟು ಬೀಸಿದಳು .ಊಹೂ ಒಂದೂ ಗುರಿ ಮುಟ್ಟಲಿಲ್ಲ. ಹಣ್ಣು ತಿನ್ನುವ ಆಸೆಯನ್ನು ಅಲ್ಲಿಗೆ ಕೈ ಬಿಟ್ಟು ಮೊದಲು ಕುಳಿತ ಜಾಗಕ್ಕೆ ಬಂದು ಕುಳಿತಳು .ಸಮಯ ಎಷ್ಟಾಗಿರಬಹುದು, ನಾನು ಸ್ಕೂಲಿಗೆ ಹೋಗಿಲ್ಲ ಅಂತ ಗೊತ್ತಾದ್ರೆ ಅಮ್ಮ ಹೊಡೆಯುತ್ತಾಳೆ .ಹೊಡೆಯಲಿ ನನಗೇನು ಭಯ ಇಲ್ಲ .ಕೂತು ಕೂತು ಬೇಸರವಾಯಿತು .ಬ್ಯಾಗ್ ಏರಿಸಿಕೊಂಡವಳೆ ತೋಪಿನಿಂದ ಹೊರ ನಡೆದಳು .ಪುಣ್ಯಕ್ಕೆ ಯಾರೂ ಎದುರಿಗೆ ಸಿಗಲಿಲ್ಲ .ಹಾಗೆ ನಡೆಯುತ್ತಾ ನಡೆಯುತ್ತಾ ಹೊಳೆದಂಡೆಗೆ ಬಂದಳು .ಒಂದಿಷ್ಟು ಹೊತ್ತು ನೀರಿನಲ್ಲಿ ಆಟವಾಡಿದಳು .ಅದು ಬೇಸರವಾಗಿ ಮರಳನ್ನು ಗುಡ್ಡೆ ಮಾಡಿ ಕಪ್ಪೆಗೂಡು ಕಟ್ಟಿದಳು .ಬೀಳಿಸಿದಳು .ಮತ್ತೊಂದು ಕಟ್ಟಿದಳು. ಗೂಡು ಕಟ್ಟುವ ಆಟವು ಬೇಸರ ತರಿಸಿತು .ಥೂ ಈ ಅಪ್ಪ ರೇಷ್ಮೆ ಲಂಗ ತಂದು ಬಿಟ್ಟಿದ್ದರೆ ನಾನು ಎಂದಿನಂತೆ ಶಾಲೆಗೆ ಹೋಗಬಹುದಿತ್ತು .ಹೀಗೆ ಶಾಲೆ ತಪ್ಪಿಸಿ ಎಲ್ಲೆಲ್ಲೋ ಕುಳಿತು ಕಾಲ ತಳ್ಳುವ ಕಷ್ಟವೇ ಇರುತ್ತಿರಲಿಲ್ಲ .ಯಾವುದೋ ಧ್ಯಾನದಲ್ಲಿದ್ದವಳಗಿ

” ಅರೆ ಭಟ್ರು ಮಗಳಲ್ವಾ ,ಇದ್ಯಾಕೆ ಕುಂತಿಯವ್ವ , ಇಸ್ಕೂಲಿಗೆ ಹೋಗಾಕಿಲ್ವಾ ,ಹೊಳೆ ಹತ್ರ ಒಬ್ಬಳೇ ಏನ್ ಮಾಡ್ತಾ ಇದ್ದಿ ತಾಯಿ ” ಕೆಂಪಿಯ ಮಾತಿನಿಂದ ಬೆಚ್ಚಿ ಎದ್ದು ನಿಂತಳು .

 

“ಮತ್ತೆ ಮತ್ತೆ ಸಂಡಾಸಿಗೆ ಬಂದಿದ್ದೆ .ಈಗ ಹೋಗ್ತೀನಿ” ಎಂದವಳೇ ದಡ ದಡನೆ ಅಲ್ಲಿಂದ ಓಡಿದಳು.

“ಇಷ್ಟು ಬೇಗ ಸ್ಕೂಲ್ ಬಿಡ್ತೇನೆ ,ಬೇಗ ಬಂದಿದ್ದೀಯಾ “ಅಮ್ಮನ ಮಾತಿಗೆ ಉತ್ತರಿಸದೆ ಸೀದಾ ಒಳಗೆ ಬಂದು ಬ್ಯಾಗನ್ನು ಅಲ್ಲಿಯೇ ಹೆಸೆದು ಹಿತ್ತಲಿಗೆ ಹೋಗಿ ಬಾವಿ ಕಟ್ಟೆ ಮೇಲೆ ಕೂತ್ಕೊಂಡಳು .ಎಷ್ಟು ಹೊತ್ತಾದರೂ ಮಗಳು ಒಳಗೆ ಬರದೇ ಇದ್ದಾಗ ಅವಳನ್ನು ಹುಡುಕಿಕೊಂಡು ಬಂದು ಬಾವಿಕಟ್ಟೆ ಮೇಲೆ ಮಗಳು ಕುಳಿತಿರುವುದನ್ನು ಕಂಡು “ಅಲ್ಲಿ ಯಾಕೆ ಕುಂತಿದಿಯ ಉಣ್ಣೊ ಯೋಚನೆ ಇಲ್ವಾ ಬೆಳಗ್ಗೆನೂ ಹಾಗೆ ಹೊರಟೆ, ನೀ ಏನು ಅಮೃತ ಕುಡ್ದಿದ್ದೀಯಾ? ಎದ್ದು ಕಾಲ್ ತೊಳ್ಕೊಂಡು ಬಾ,ಉಣ್ಣಾಕ್ ಇಡ್ತೀನಿ “ಒರಟಾಗಿಯೇ ಕರೆದಳು .

“ನೀನೆ ಉಣ್ಕೊ ,ನಂಗೇನ್ ಬೇಡ “ಮುಖ ತಿರುವಿದಳು .”ಅಲ್ವೇ ನೀ ಏನು ಎಳೆ ಮಗುನಾ. ಮನೆ ಕಷ್ಟ ಸುಖ ಅರ್ಥ ಆಗಲ್ವಾ.ನೀನು ಕೇಳಿದ್ದೆಲ್ಲ ತೆಕ್ಕೋಡಕ್ಕೆ ನಾವೇನು ಶ್ರೀಮಂತರಾ, ಹಾಸಿಗೆ ಇದ್ದಷ್ಟು ಕಾಲು ಚಾಚ ಬೇಕು .ಈಗ ನಿನ್ನ ಸ್ಕೂಲಿಗೆ ಕಳಿಸ್ತಾ ಇರೋದೇ ಹೆಚ್ಚು .ಜಾನಕಿ ಮದುವೆನೇ ನಮಗೆ ಸಾಕಷ್ಟು ಹೊರೆಯಾಗಿದೆ .ಆ ಸಾಲಾನೆ ಬೆಟ್ಟದಂಗೆ ತಲೆ ಮೇಲೆ ಕೂತಿದೆ .ಇನ್ನು ಈ ಸಾರಿ ಬಟ್ಟೆ ತರೋದೇ ಬೇಡ ಅಂದಿದ್ದೆ .ಆದ್ರೂ ಮಕ್ಕಳು ಆಸೆ ಪಡುತ್ತವೆ ಅಂತ ನಿಮ್ಮಪ್ಪ ಮತ್ತೆ ಸಾಲ ಮಾಡಿ ತಂದಿದ್ದಾರೆ .ನೀನು ನೋಡಿದ್ರೆ ಹೀಗೆ ಕುಳಿತಿದಿಯಾ .ಏನು ಅಂತ ನನ್ನ ಹೊಟ್ಟೆಯಲ್ಲಿ ಹುಟ್ಟಿಬಿಟ್ಟೆ ನೀನು .ಜಾನಕಿ ನಿಂತರ ಹೀಗೆಲ್ಲ ಆಡಿದೊಳೆ ಅಲ್ಲ .ಆ ಶಾಮಂಗಿರೋ ಬುದ್ಧಿನೂ ನಿಂಗಿಲ್ಲ .ಏನಾದರೂ ಮಾಡ್ಕೋ. ಅದೆಷ್ಟು ದಿನ ಉಪವಾಸ ಇರ್ತಿಯೋ ನೋಡ್ತೀನಿ “ಸಿಡುಕಿ ಬೈದುಕೊಳ್ಳುತ್ತಲೇ ಅಲ್ಲಿಂದ ಹೊರಟು ಹೋದ ಮೇಲೆ ಬೈಯ್ಯಿ ,ಚೆನ್ನಾಗಿ ಬೈಯ್ಯಿ, ನನ್ನ ಬೈದರೆ ತಾನೇ ನಿನಗೆ ತೃಪ್ತಿ. ನಾನೇನು ನಿನ್ನ ಹೊಟ್ಟೆಯಲ್ಲಿಯೆ ಹುಟ್ಟಬೇಕು ಅಂತ ವರ ಬೇಡಿದ್ನ ಮನದೊಳಗೆ ಅಮ್ಮನಿಗೆ ಬೈದಳು.

ತಡವಾಗಿ ಬಂದ ಭಟ್ಟರು “ಮಗು ಊಟ ಮಾಡ್ತೇನೆ, ಬೆಳಗ್ಗೆ ಬೇರೆ ಏನು ತಿನ್ನದೇ ಸ್ಕೂಲಿಗೆ ಹೋಗಿತ್ತು ” ವಿಚಾರಿಸಿಕೊಂಡರು. ” ಅವಳೆಲ್ಲಿ ಊಟ ಮಾಡ್ತಾಳೆ, ಜಗಮುಂಡಿ ,ನಮ್ಮ ಮನೆಯಲ್ಲಿ ಯಾಕೆ ಇದು ಹುಟ್ಟಿತೋ, ಯಾರಾದ್ರೂ ಶ್ರೀಮಂತರ ಮನೆಯಲ್ಲಿ ಹುಟ್ಟಿದರೆ ಚೆನ್ನಾಗಿತ್ತು”

“ಬಲವಂತ ಮಾಡಿ ತಿನ್ನಿಸಬೇಕಿತ್ತು .ನೆನ್ನೆಯಿಂದ ಉಪವಾಸ ಇದಿಯಲ್ಲ ಇರು ನಾನು ಏಳುಸ್ತೀನಿ ”

“ಬೇಡ ಬೇಡ ಈಗಾಗ್ಲೇ ನಿದ್ದೆ ಮಾಡ್ತಾ ಇದ್ದಾಳೆ, ಎಂಥ ಮಗಳನ್ನು ಹೆತ್ತಿ ಬಿಟ್ಟೆ ನಾನು “ಮುಸಿಮುಸಿ ಅಳುತ್ತಿದ್ದ ಹೆಂಡತಿಗೆ

” ಇಷ್ಟಕ್ಕೆಲ್ಲ ಅಳ್ತರಏನಎ, ಚಿಕ್ಕ ಹುಡುಗಿ ಅವಳು,ಅದಕೆ ಏನೂ ಗೊತ್ತಾಗಲ್ಲ .ನೀನು ಯಾಕೆ ಬೇಸರ ಮಾಡ್ಕೋತಿಯ. ನಾಳೆ ನಾನೇ ಕೂರಿಸಿಕೊಂಡು ಬುದ್ಧಿ ಹೇಳುತ್ತೇನೆ ” ಅಂತ ಹೇಳಿದಾಗ

” ಮೀರಿದ್ದಾಳೆ ಅವಳು ,ನಿಮಗೆ ಗೊತ್ತಾ ಇವತ್ತು ಸ್ಕೂಲಿಗೆ ಹೋಗಿಲ್ಲ . ಹೊಳೆ ಹತ್ತಿರ ಇದ್ದಳಂತೆ.ರೇಷ್ಮೆ ಲಂಗ ಕೊಡಿಸಲಿಲ್ಲ ಅನ್ನೊ ನಿರಾಶೆಯಲ್ಲಿ ಎಲ್ಲಿ ಪ್ರಾಣ ಕಳೆದು ಕೊಳ್ಳುತ್ತಾಳೊ ಅಂತ ಭಯ ಆಗ್ತಾ ಇದೆ. ಸಂಜೆ ಬಾವಿಕಟ್ಟೆ ಮೇಲೆ ತುಂಬಾ ಹೊತ್ತು ಕೂತಿದ್ಲು .ನೋಡಿ ಈ ಹುಡುಗಿ ಕೆಟ್ಟ ಹಠದಲ್ಲಿ ಏನಾದ್ರೂ ಮಾಡಿಕೊಂಡುಬಿಟ್ಟರೆ .ಜಾನಕಿ ಮದುವೆಯಲ್ಲಿ ತಗೊಂಡಿದ್ನಲ್ಲ ಆ ರೇಷ್ಮೆ ಸೀರೆಯಲ್ಲಿ ಲಂಗ ಹೊಲ್ಸಿಬಿಡಿ .ಆದರೆ ಆಸೆಯನ್ನು ತೀರಿದ ಹಾಗೆ ಆಗುತ್ತೆ ” ಆಘಾತಗೊಂಡ ಭಟ್ಟರು ಇದೇನು ಹೇಳ್ತಾ ಇದ್ದೀಯ ನೀನು, ಸುಮ್ನೆ ಏನೇನೋ ಯೋಚನೆ ಮಾಡಬೇಡ .ನಾನೆಲ್ಲ ಸರಿ ಮಾಡ್ತೀನಿ ”

“ನಿಮಗೆ ಗೊತ್ತಾಗಲ್ಲ ,ನಾಳೆನೇ ಸೀರೆ ತಗೊಂಡ್ ಹೋಗಿ ಅವಳಿಗೆ ಲಂಗ ಹೊಲಸ್ಕೊಂಡು ಬನ್ನಿ” ಒತ್ತಾಯಿಸಿದಳು. “ಅಲ್ವೇ ನಿಂಗಿರೋದು ಅದೊಂದೇ ರೇಷ್ಮೆ ಸೀರೆ ಅದೂ ಬಯಸಿ ಬಯಸಿ ತಗೊಂಡಿದ್ದು ”

ನೆನಪುಗಳು ಉತ್ತರಿಸಿ ಬಂದವು. ಹೌದು ನನಗೆ ಇರೋದು ಅದೊಂದೇ ರೇಷ್ಮೆ ಸೀರೆ .ರೇಷ್ಮೆ ಸೀರೆ ಗಾಗಿ ಅದೆಷ್ಟು ಆಸೆ ಪಟ್ಟಿದ್ದೆ .ಮದುವೆಯಲ್ಲೂ ಕೂಡ ರೇಷ್ಮೆ ಸೀರೆ ತಂದಿರಲಿಲ್ಲ .ಯಾವ ಮದುವೆಗೆ ಹೋದರೂ ಸಾದಾ ಸೀರೆಯಲ್ಲಿ ಹೋಗಬೇಕಿತ್ತು .ನೆಂಟರು ,ಇಷ್ಟರು, ನೆರೆಹೊರೆಯವರ ತಾತ್ಸಾರದ ದೃಷ್ಟಿ ನನ್ನ ಮೇಲೆ .

ಬಹುದಿನದ ಆಸೆ ಜಾನಕಿ ಮದುವೆಯಲ್ಲಿ ಕೈಗೂಡಿತ್ತು .ಅದು ಬೀಗರು ತಂದಿದ್ದು .ಬೀಗರು ಕೊಟ್ಟ ಸೀರೆ ಉಡುಗರೆಯಾಗಿ ಬಂದ ಸೀರೆಯನ್ನು ಅಂಗಡಿಗೆ ವಾಪಸ್ಸು ಮಾಡಿ ತನಗೆ ಇಷ್ಟವಾಗಿದ್ದ ಎಲೆ ಹಸಿರಿನ ಸೀರೆ ತೆಗೆದುಕೊಂಡಿದ್ದು ಮಗಳ ಮದುವೆಯಲ್ಲಿ ಉಡಲಾಗದಿದ್ದರೂ ಬೇರೆಲ್ಲ ಮದುವೆ ಮನೆಗೂ ಹೆಮ್ಮೆಯಿಂದ ಉಟ್ಟುಕೊಂಡು ಹೋಗುತ್ತಿದ್ದ ತನ್ನ ಪ್ರೀತಿಯ ಅಚ್ಚುಮೆಚ್ಚಿನ ಇರುವ ಒಂದೇ ಒಂದು ರೇಷ್ಮೆ ಸೀರೆಯನ್ನು ಮಗಳಿಗಾಗಿ ಕೊಡಲು ಮನಸ್ಸು ಸಿದ್ಧವಾಗಿತ್ತು .

“ಬೇಡ ಕಣೆ, ಈ ಜೀವನದಲ್ಲಿ ಮತ್ತೆ ನೀನು ಹೊಸ ರೇಷ್ಮೆ ಸೀರೆ ಉಡೋಕೆ ಆಗುತ್ತೋ ಇಲ್ವೋ .ಈ ಕುಚೇಲನ್ನ ಕಟ್ಟಿಕೊಂಡಿದ್ದಕ್ಕೆ ನಿನ್ನ ಬದುಕಿಲ್ಲ ಹೀಗೆ ಕಳೆದು ಹೋಯಿತು. ಹೇಗೋ ಅದೊಂದು ಸೀರೆನಾದರೂ ಇದೆ .ಅದನ್ನ ಮಗಳಿಗೆ ಅಂತೀಯಲ್ಲ ಬೇಡ ಕಣೆ ಬೇಡ ”

“ಅಯ್ಯೋ ಬಿಡಿ ಉಟ್ಕೊಂಡು ನನ್ನ ಆಸೆ ತೀರಿಸಿಕೊಂಡಾಯಿತಲ್ಲ .ಈಗ ಮಗಳು ಸಂತೋಷ ಪಡಲಿ” ನಿಟ್ಟುಸಿರು ಬಿಟ್ಟರು .

ಇದಾವುದರ ಅರಿವು ಇಲ್ಲದ ವೇಣಿ ಹಬ್ಬದ ದಿನ ರೇಷ್ಮೆ ಲಂಗ ಹಾಕಿಕೊಂಡು ಗೆಳತಿಯರಿಗೆಲ್ಲ ತೋರಿಸಿಕೊಂಡು ನಲಿದಾಡಿದಳು .ಅದೆಷ್ಟು ವರ್ಷಗಳ ಕಾಲ ಅದನ್ನು ಜೋಪಾನವಾಗಿ ಹೊನ್ನಿನಂತೆ ಕಾಪಾಡಿಕೊಂಡಿದ್ದಳು .

” ಮಮ್ಮಿ ಏನಿದು ಈ ಹಳೆ ಬಟ್ಟೆನ ತೊಡೆ ಮೇಲೆ ಇಟ್ಕೊಂಡು ಫ್ಲಾಶ್ ಬ್ಯಾಕ್ ಗೆ ಹೋಗಿದ್ದೀಯಾ? ಏನು ಸೆಂಟಿಮೆಂಟ್ಸ್ .ಇಡೀ ಬೀರುವಿನ ಬಟ್ಟೆಗಳನ್ನೆಲ್ಲ ಮಂಚದ ಮೇಲೆ ಹರವಿ ಒಂದನ್ನೂ ಆಯ್ಕೆ ಮಾಡಲಾಗದೆ ಬೇಸತ್ತು ಸೃಷ್ಟಿ ಅಮ್ಮನ ಮೇಲೆ ರೇಗಿದಳು. ಕಾಲೇಜಿನ ಫಂಕ್ಷನ್ ಗೆ ಸೀರೆ ಉಡಲು ಗೆಳತಿಯರೆಲ್ಲ ನಿರ್ಧರಿಸಿದ್ದರಿಂದ ಸೀರೆಗಾಗಿ ಅಮ್ಮನ ಬೀರುವಿನ ಸೀರೆಗಳನ್ನೆಲ್ಲ ಕೆದಕಿದ್ದಳು ,ಜೊತೆಗೆ ಹಳೆ ನೆನಪನ್ನು ಕೂಡಾ.

” ಹಳೆ ಬಟ್ಟೆ ಅನ್ನ ಬೇಡ್ವೇ ,ಈ ಬಟ್ಟೆಯಲ್ಲಿ ನನ್ನಮ್ಮನ ತ್ಯಾಗ ಅಡಗಿದೆ .ನಿಂಗೊತ್ತಿಲ್ಲ ,ಒಂದೇ ಒಂದು ರೇಷ್ಮೆ ಲಂಗಕ್ಕಾಗಿ ತಾನೆಷ್ಟು ಹಂಬಲಿಸಿದ್ದೆ. ನನ್ನ ಆಸೆ ಈಡೇರಿಸಲು ನನ್ನಮ್ಮ ತನ್ನ ಹತ್ತಿರವಿದ್ದ ಬಯಸಿ ಎಷ್ಟೋ ವರ್ಷಗಳ ನಂತರ ತೆಗೆದುಕೊಂಡಿದ್ದ ತನ್ನ ಬಳಿ ಇದ್ದ ಒಂದೇ ಒಂದು ರೇಷ್ಮೆ ಸೀರೆಯಲ್ಲಿ ನನಗಾಗಿ ಲಂಗ ಹೊಲಿಸಿ ತನ್ನಾಸೆಯನ್ನೆಲ್ಲ ತ್ಯಾಗ ಮಾಡಿದ್ದಳು. ಅದು ಬರಿ ರೇಷ್ಮೆ ಲಂಗವಲ್ಲ .ನನ್ನಮ್ಮನ ಆತ್ಮ. ನನ್ನ ಅಮ್ಮ ಮತ್ತೆ ರೇಷ್ಮೆ ಸೀರೆ ಉಡಲೇ ಇಲ್ಲ .ಆಗ ನನಗೇನು ಅರ್ಥವಾಗದ ವಯಸ್ಸು .ಅರ್ಥವಾಗುವ ವೇಳೆಗೆ ಅಮ್ಮ ಬದುಕಿರಲೇ ಇಲ್ಲ .ಈಗ ಇದ್ದಿದ್ದರೆ ಅಮ್ಮನಿಗೆ ರೇಷ್ಮೆ ಸೀರೆಗಳಿಂದ ಅಭಿಷೇಕ ಮಾಡಿ ಬಿಡುತ್ತಿದ್ದೆ .ಅದೊಂದು ಕೊರಗು ನನ್ನಲ್ಲಿ ಉಳಿದೆ ಬಿಟ್ಟಿದೆ .ರೇಷ್ಮೆ ಲಂಗವನ್ನು ಎದೆಗೊತ್ತಿಕೊಂಡಳು.ಅಮ್ಮನನ್ನೇ ಅಪ್ಪಿಕೊಂಡಂತಾಗಿ ಮೈ ಮರೆತಳು.

 

ಮತ್ತೆ ಮುಂದಿನ ಭಾನುವಾರ ಮತ್ತೊಂದು ಕಥೆಯೊಡನೆ  ಸಿಗೋಣ ನಮಸ್ಕಾರ

BPN ಸುದ್ಧಿ

ವಾರಕ್ಕೊಂದು ಕಥೆ ವಿಭಾಗ, belagaviphotonews.com

By BPN

Leave a Reply

Your email address will not be published. Required fields are marked *