ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆಮಾಡಲು ನೇಮಿಸಿರುವ ‘ಸೀನಿಂಗ್ ಸಮಿತಿ’ ಗುರುವಾರ ತಡರಾತ್ರಿಯವರೆಗೂ ಸಭೆ ನಡೆಸಿದ್ದು, ಬಾಕಿ ಉಳಿದಿರುವ 100 ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಿದೆ. ಮೊದಲ ಹಂತದಲ್ಲಿ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಪ್ರಕಟಿಸಿದೆ. ಬಾಕಿ ಉಳಿದಿರುವ 100 ಕ್ಷೇತ್ರಗಳ ಪೈಕಿ 37 ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಕಳೆದ ವಾರ ಅಂತಿಮಗೊಳಿಸಲಾಗಿತ್ತು. ಉಳಿದ 67 ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ದೊಡ್ಡಬಳ್ಳಾಪುರ ಸಮೀಪದ ರೆಸಾರ್ಟ್‌ನಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆಗೆ ಆರಂಭವಾದ ಸಭೆ ತಡರಾತ್ರಿಯವರೆಗೂ ನಡೆಯಿತು. ಸೀನಿಂಗ್ ಸಮಿತಿ ಅಧ್ಯಕ್ಷ ಮೋಹನ್ ಪ್ರಕಾಶ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಕೆ ಪಾಟೀಲ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಜಿ. ಪರಮೇಶ್ವರ್ ಸೇರಿದಂತೆ ಹಲವು ಪ್ರಮುಖ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಅರಸೀಕೆರೆಯ ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಕಾಂಗ್ರೆಸ್ ‘ಸ್ಟೀನಿಂಗ್ ಸಮಿತಿ’ ಸಭೆಗೆ ಹಾಜರಾಗಿದ್ದಾರೆ. ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎನ್.ವೈ. ಗೋಪಾಲಕೃಷ್ಣ ಕಾಂಗ್ರೆಸ್‌ಗೆ ಮರಳ ನಿರ್ಧರಿಸಿದ್ದಾರೆ. ಅವರನ್ನು ಮೊಳಕಾಲುರು ಕ್ಷೇತ್ರದಿಂದ ಕಣಕ್ಕಿಳಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ಮರಳಿರುವ ಬಾಬುರಾವ್ ಚಿಂಚನಸೂರ್ ಅವರನ್ನು ಗುರುಮಠಕಲ್‌ನಿಂದ ಕಣಕ್ಕಿಳಿಸುವ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಗೊತ್ತಾಗಿದೆ.
ದೇವರ ಹಿಪ್ಪರಗಿಗೆ ಎಸ್.ಆರ್. ಪಾಟೀಲ, ಧಾರವಾಡ ಉತ್ತರಕ್ಕೆ ಮೋಹನ್ ಲಿಂಬಿಕಾಯಿ, ಬೊಮ್ಮನಹಳ್ಳಿಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ಯಲಹಂಕಕ್ಕೆ ಕೇಶವ ರಾಜಣ್ಣ ಹೆಸರು ಮುಂಚೂಣಿಯಲ್ಲಿವೆ. ಪಿ.ಜಿ.ಆರ್. ಸಿಂಧ್ಯ ಅವರ ಹೆಸರನ್ನು ಪದ್ಮನಾಭನಗರ ಕ್ಷೇತ್ರಕ್ಕೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ ಎಂಬ ಮಾಹಿತಿ BPN ಗೆ ಲಭಿಸಿದೆ.