---Advertisement---

Advertisement

*ಹಿರಿಯ ಸಾಹಿತಿ ಡಾ. ಕೆ.ವಿ.ತಿರುಮಲೇಶ್ ಅವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ* *ಅಪಾರ ನಷ್ಟ-ನಾಡೋಜ ಡಾ.ಮಹೇಶ ಜೋಶಿ*

ಬೆಂಗಳೂರು: ಕನ್ನಡದ ಹಿರಿಯ ಕಥೆಗಾರ, ಕವಿ, ವಿಮರ್ಶಕ, ಭಾಷಾ ವಿಜ್ಞಾನಿ *ಡಾ. ಕೆ.ವಿ.ತಿರುಮಲೇಶ್* ಅವರು ಅಲ್ಪ ಕಾಲದ ಅನಾರೋಗ್ಯದ ನಂತರ ಹೈದರಾಬಾದ್ನ ತಮ್ಮಮಗಳ ನಿವಾಸದಲ್ಲಿ ನಿಧನರಾಗಿದ್ದು ಅವರು ಸಾವು ಕನ್ನಡ ಸಾರಸ್ವತ ಲೋಕಕ್ಕೆ ಆದ ತುಂಬಲಾರದ ನಷ್ಟ. 82 ವರ್ಷ ವಯಸ್ಸಿನ ಡಾ.ಕೆ.ವಿ.ತಿರುಮಲೇಶ್ ಅವರ ನಿಧನದಿಂದ ಕನ್ನಡ ನಾಡಿನ ಹೆಮ್ಮೆಯ ಸಾಹಿತ್ಯದ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ ಎಂದು *ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ* ಸಂತಾಪ ಸೂಚಿಸಿದ್ದಾರೆ.
*ಪ್ರೊ.ಕೆ.ವಿ.ತಿರುಮಲೇಶ್ ೧೯೪೦ರ ಸೆಪ್ಟೆಂಬರ್ ೧೨ರಂದು ಕೇರಳದ ಕಾಸರಗೋಡು ಜಿಲ್ಲೆಯ ಕಾರಡ್ಕ ಗ್ರಾಮದಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮುಗಿಸಿದ್ದರು*. ನಂತರ ಕಾಸರಗೋಡು ಮತ್ತು ತಿರುವಂತಪುರದಲ್ಲಿ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ಕುರಿತು ಅಧ್ಯಯನ ಮಾಡಿ, ಕೇರಳದ ಹಲವು ಕಾಲೇಜುಗಳಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿಯೂ ಕೆಲಸ ಮಾಡಿದ ಅನುಭವವನ್ನು ಹೋದಿದ್ದರು ಡಾ. ಕೆ.ವಿ.ತಿರುಮಲೇಶ್ ಅವರು ಭಾಷಾ ವಿಜ್ಞಾನದಲ್ಲಿ ಪಿಎಚ್.ಡಿ ಪದವಿ ಪಡೆದು, ಇಂಗ್ಲಿಷ ಮತ್ತು ವಿದೇಶಿ ಭಾಷೆಗಳ ಕೇಂದ್ರಿಯ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಅದೇ ಸಂಸ್ಥೆಯಲ್ಲಿ ನಿವೃತ್ತಿಯಾಗಿದ್ದರು ಎಂದು ನಾಡೋಜ ಡಾ. ಮಹೆಶ ಜೋಶಿ ನೆನೆಸಿಕೊಂಡೆರು. .
1975ರಲ್ಲಿ ಇಂಗ್ಲೆಂಡಿನ ರೆಡಿಂಗ್ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷ ವ್ಯಪದವಿಯನ್ನೂ ಪಡೆದುಕೊಂಡು, ಹೈದರಾಬಾದಿಗೆ ತೆರಳಿದ ತಿರುಮಲೇಶ ಅವರು ಭಾಷಾ ವಿಜ್ಞಾನದಲ್ಲಿ ಪಿಎಚ್.ಡಿ ಮಾಡಿದರು. ಕನ್ನಡದ ವಾಕ್ಯರಚನೆ ಮತ್ತು ಕರ್ಮಣೀ ಪ್ರಯೋಗದ ನಿಯೋಗಗಳ ಕುರಿತು ಕ್ರಮಬದ್ಧವಾದ, ಸೂಕ್ಷ್ಮ ಒಳನೋಟಗಳನ್ನೊಳಗೊಂಡ ಭಾಷಾವೈಜ್ಞಾನಿಕ ಅಧ್ಯಯನ ಅವರ ಪಿಎಚ್.ಡಿ ಪ್ರಬಂಧವಾಗಿತ್ತು. ತಿರುಮಲೇಶರು ಸುಮಾರು ಐದು ದಶಕಗಳ ಕಾಲ ಕವಿತೆ, ಕತೆ, ವಿಮರ್ಶೆ ಅನುವಾದ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದರು.
ಅವರು ʻಅವಧʼ, ʻವಠಾರʼ, ʻಮುಖವಾಡಗಳುʼ, ʻಪಾಪಿಯೂʼ ಎಂಬಿತ್ಯಾದಿ ಕವನ ಸಂಕಲನಗಳನ್ನು ರಚಿಸಿ ನಮ್ಮ ನಡುವೆ ಇಟ್ಟು ಹೊಗಿದದಾರೆ. ʻಆರೋಪʼ, ʻಮುಸುಗುʼ ಇವರ ಕಾದಂಬರಿಗಳು. ʻನಾಯಕ ಮತ್ತು ಇತರರುʼ, ʻಕೆಲವು ಕಥಾನಕಗಳುʼ, ʻಕಳ್ಳಿ ಗಿಡದ ಹೂʼ ಇತ್ಯಾದಿಗಳು ಕಥಾಸಂಕಲನಗಳು. ʻಬೇಂದ್ರೆಯವರ ಕಾವ್ಯಶೈಲಿʼ, ʻನಮ್ಮ ಕನ್ನಡʼ, ʻಅಸ್ತಿತ್ವವಾದʼ ಇವು ಇವರ ಮುಖ್ಯ ವಿಮರ್ಶಾ ಕೃತಿಗಳು. ʻಮಾಲ್ಟ ಲೌರಿಡ್ಜ್ ಬ್ರಿಗ್ಗನ ಟಿಪ್ಪಣಿ ಪುಸ್ತಕʼ ಮತ್ತು ʻಪೂರ್ವ ಯಾನʼ ಇವರ ಅನುವಾದಿತ ಕೃತಿಗಳು, ಮಕ್ಕಳಿಗಾಗಿ ಕೂಡ ಅನೇಕ ವಿಶೇಷ ಕೃತಿಗಳನ್ನು ಅವರು ರಚಿಸಿದ್ದರು.ಎಂದು *ನಾಡೋಜ ಡಾ. ಮಹೇಶ ಜೋಶಿ* ನೆನೆಪಿಸಿಕೊಂಡರು
ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಹಾಗೂ ನನ್ನೊಂದಿಗೆ ತಿರುಮಲೇಶ ಅವರು ತೀರಾ ಆತ್ಮೀಯ ಸಂಬಂಧವನ್ನು ಇಟ್ಟುಕೊಂಡಿದ್ದ ತಿರುಮಲೇಶರು ಭಾಷೆಯ ಕುರಿತು ಅಪಾರ ಕಾಳಜಿ ಹೊಂದಿದ್ದರು. ಇತ್ತೀಚೆಗೆ ಹಾವೇರಿಯಲ್ಲಿ ನಡೆದ ೮೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅವರನ್ನು ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಲು ಆಹ್ವಾನಿಸಿದ್ದಾಗ ತಮ್ಮ ಅನಾರೋಗ್ಯದ ಕಾರಣ ಭಾಗವಹಿಸಲು ಸಾಧ್ಯವಾಗದ್ದಕ್ಕೆ ವಿಷಾದಿಸಿ ಸಮ್ಮೇಳನಕ್ಕೆ ಶುಭವನ್ನು ಕೋರಿದ್ದರು ಎಂದು ಸ್ಮರಿಸಿದ *ನಾಡೋಜ. ಡಾ.ಮಹೇಶ ಜೋಶಿಯವರು* ದೊಡ್ಡ ಕವಿಗಳು ಅಗಲಿದಾಗ ಸಾಹಿತ್ಯ ಕ್ಷೇತ್ರದಲ್ಲಿ ನಿರ್ವಾತ ಉಂಟಾಗುತ್ತದೆ ತಿರುಮಲೇಶರಂತಹ ಮೇರು ವ್ಯಕ್ತಿತ್ವದ ಕವಿ ಅಗಲಿರುವುದರಿಂದ ಕನ್ನಡ ಸಾಹಿತ್ಯದಲ್ಲಿ ಉಂಟಾಗುವ ಕೊರತೆ ಅಷ್ಟು ಸುಲಭಕ್ಕೆ ತುಂಬುವಂತಹದಲ್ಲ *ಎಂದು ನಾಡೋಜ. ಡಾ.ಮಹೇಶ ಜೋಶಿಯವರು* ವಿಷಾದಿಸಿದ್ದಾರೆ.
ಹೆಂಡತಿ, ಮೂವರು ಹೆಣ್ಣು ಮಕ್ಕಳನ್ನು ಅಗಲಿರುವ ಅವರು ಅಪಾರ ಕನ್ನಡ ಅಭಿಮಾನಿಗಳನ್ನು, ಸಾಹಿತ್ಯಾಸಕ್ತರನ್ನು, ಅಕ್ಕರೆಯ ವಿದ್ಯಾರ್ಥಿ ಗಣವನ್ನು ಬಿಟ್ಟು ಹೋಗಿದ್ದಾರೆ. ಮಹನೀಯರ ಆತ್ಮಕ್ಕೆ ಶಾಂತಿ ಸಿಗಲಿ, ಮೃತರ ಕುಟುಂಭಕ್ಕೆ ದು:ಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಸಮಸ್ತ ಕನ್ನಡಿಗರ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಕಂಬನಿ ಮಿಡಿಯುತ್ತಿದೆ ಎಂದು *ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ* ಸಂತಾಪ ಸೂಚಿಸಿದ್ದಾರೆ.

By BPN

Leave a Reply

Your email address will not be published. Required fields are marked *