ಕೆಂಗೇರಿ ಬಳಿಯ ವ್ಯಕ್ತಿಯೊಬ್ಬರಿಗೆ ಸೇರಿದ ಸ್ವಿಫ್ಟ್ ಕಾರನ್ನು ಕಿಡಿಗೇಡಿಗಳು ಬಳಸಿರುವುದು ಗೊತ್ತಾಗಿದೆ. ನಂಬರ್ ಪ್ಲೇಟ್ ಬದಲಿಸಿ ಈ ಕೆಲಸ ಮಾಡಲಾಗಿದೆ.
ನಟ ಕಿಚ್ಚ ಸುದೀಪ್ (Kichcha Sudeep) ಅವರು ಬಿಜೆಪಿ ಜೊತೆ ಗುರುತಿಸಿಕೊಂಡ ಬೆನ್ನಲ್ಲೇ ಅವರಿಗೆ ಬೆದರಿಕೆ ಪತ್ರ ಬಂತು. ಅವರ ಖಾಸಗಿ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಲಾಗಿರುವ ಈ ಪತ್ರಗಳ ಹಿಂದಿನ ಕಿಡಿಗೇಡಿಗಳು ಯಾರು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ. ಸದ್ಯಕ್ಕೆ ತನಿಖೆ ಚುರುಕುಗೊಂಡಿದೆ. ಬೆದರಿಕೆ ಪತ್ರ ರವಾನೆ ಆಗಿರುವುದು ದೊಮ್ಮಲೂರು ಅಂಚೆ ಕಚೇರಿಯಿಂದ ಎಂಬುದು ಗೊತ್ತಾಗಿದೆ. ಅದರ ಜಾಲ ಹುಡುಕಿ ಹೊರಟಾಗ ಇನ್ನಷ್ಟು ವಿವರಗಳು ಲಭ್ಯವಾಗಿವೆ. ದುಷ್ಕರ್ಮಿಗಳು ಸ್ವಿಫ್ಟ್ ಕಾರಿನಲ್ಲಿ ಬಂದು ಪೋಸ್ಟ್ ಬಾಕ್ಸ್ಗೆ ಬೆದರಿಕೆ ಪತ್ರ (Threat Letter) ಹಾಕಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಈ ಕಾರಿನ ನಂಬರ್ ಪ್ಲೇಟ್ ನಕಲಿ ಎಂಬುದು ಕೂಡ ತಿಳಿದುಬಂದಿದೆ.
ಕೆಂಗೇರಿ ಬಳಿಯ ವ್ಯಕ್ತಿಯೊಬ್ಬರಿಗೆ ಸೇರಿರುವ ಸ್ವಿಫ್ಟ್ ಕಾರನ್ನು ಕಿಡಿಗೇಡಿಗಳು ಬಳಸಿರುವುದು ಗೊತ್ತಾಗಿದೆ. ಆದರೆ ಬೆದರಿಕೆ ಪತ್ರಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಆ ವ್ಯಕ್ತಿ ಹೇಳಿದ್ದಾರೆ. ನಂಬರ್ ಪ್ಲೇಟ್ ಬದಲಿಸಿ ಕಿಡಿಗೇಡಿಗಳು ಈ ಕೆಲಸ ಮಾಡಿದ್ದಾರೆ. ಬೆದರಿಕೆ ಪತ್ರ ಬರೆದ ದುಷ್ಕರ್ಮಿಗಳಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಆದಷ್ಟು ಬೇಗ ಕಿಡಿಗೇಡಿಗಳು ಪತ್ತೆಯಾಗಲಿ ಎಂದು ಸುದೀಪ್ ಫ್ಯಾನ್ಸ್ ಕಾಯುತ್ತಿದ್ದಾರೆ.
ಬೆದರಿಕೆ ಪತ್ರದ ಬಗ್ಗೆ ಸುದೀಪ್ ಹೇಳಿದ್ದೇನು?
ಬೆದರಿಕೆ ಪತ್ರ ಬಂದಿರುವುದರ ಹಿಂದೆ ರಾಜಕೀಯದವರ ಕೈವಾಡ ಇರಬಹುದು ಎಂದು ಊಹಿಸಲಾಗಿತ್ತು. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸುದೀಪ್ ಅವರು ಏಪ್ರಿಲ್ 5ರಂದು ಪ್ರತಿಕ್ರಿಯೆ ನೀಡಿದ್ದರು. ಬೆದರಿಕೆ ಪತ್ರ ಬರೆದಿರುವುದು ರಾಜಕೀಯದವರಲ್ಲ ಎಂದು ಸುದೀಪ್ ಸ್ಪಷ್ಟನೆ ನೀಡಿದ್ದರು. ‘ಖಂಡಿತ ಇದನ್ನ ಚಿತ್ರರಂಗದವರೇ ಮಾಡಿಸಿದ್ದಾರೆ. ಯಾರು ಅಂತ ಗೊತ್ತಿದ್ದರೂ ಕೂಡ ಈಗ ಸೈಲೆಂಟಾಗಿ ಇರುತ್ತೇನೆ. ಅದಕ್ಕೆ ಹೇಗೆ ಉತ್ತರ ಕೊಡಬೇಕು ಅಂತ ನನಗೆ ಗೊತ್ತಿದೆ. ಇವೆಲ್ಲ ಕಾನೂನಿನ ಪ್ರಕಾರ ಹೋದರೆ ಒಳ್ಳೆಯದು’ ಎಂದು ಸುದೀಪ್ ಹೇಳಿದ್ದರು.