---Advertisement---

Advertisement

 

ನೀವು ಸಿನಿಮಾಗೆ ಸಂಬಂಧಿಸಿದ ವ್ಯಕ್ತಿಯಾಗಿದ್ದರೆ,
ಕಷ್ಟ ಪಟ್ಟಾದ್ರೂ ಸಿನಿಮಾ ಮಾಡಲೇ ಬೇಕೆಂದು ನಿರ್ಧಾರ ಮಾಡಿದ್ರೆ,
ಸಿನಿಮಾ ಮಾಡಲು ನಿಮಗೆ ಬೆಂಬಲವಾಗಿ ನಿಲ್ಲಲು ಯಾರೂ ಇಲ್ಲದಿದ್ದರೆ,
ಹೊಸದಾಗಿ ನಿರ್ದೇಶನ ಮಾಡಬೇಕೆಂದು ಹೊರಟವರಾಗಿದ್ರೆ…
ದಯವಿಟ್ಟು ಇದೊಂದು ಅನುಭವವನ್ನು ಓದಿ…

ಸಿನಿಮಾ ಹುಚ್ಚು ಅನ್ನೋದು ಎಂಥವರನ್ನೂ ಬಿಡದ ಮಾಯೆ. ಅದಕ್ಕೆ ಸ್ಪಷ್ಟ ಉದಾಹರಣೆ ಅಂದ್ರೆ ಈ ವ್ಯಕ್ತಿ. ನೋಡೋದಿಕ್ಕೆ ಕುಳ್ಳಗೆ ಕಂಡ್ರೂ ಇವರೊಳಗೆ ಇರುವ ಚಿತ್ರರಂಗದ ಬಗೆಗಿನ ಅರಿವು ಅಗಾಧ. ಎರಡು ವರುಷದ ಹಿಂದೆ ಇವರು ಕರೆಮಾಡಿ ಇವರದೇ ಕಥೆ-ಚಿತ್ರಕಥೆ-ಸಂಭಾಷಣೆ,ನಿರ್ಮಾಣ, ನಿರ್ದೇಶನದ #ಆನೋವು ಹೆಸರಿನ ಕಿರುಚಿತ್ರದ ಕಥೆ ಹೇಳಿ, ಒಂದು ಪಾತ್ರದ ಬಗ್ಗೆ ವಿವರಿಸಿ, ಆ ಪಾತ್ರವನ್ನು ನಾನೇ ಮಾಡಬೇಕೆಂದು ವಿನಂತಿಸಿದಾಗ ಪ್ರೀತಿಯಿಂದಲೇ ಒಪ್ಕೊಂಡಿದ್ದೆ. ಚಿತ್ರೀಕರಣ ಮುಗಿದು, ಯೂ ಟ್ಯೂಬಲ್ಲಿ ಬಿಡುಗಡೆ ಆದ ಸ್ವಲ್ಪ ದಿನಕ್ಕೇ ಮತ್ತೆ ಕರೆ ಮಾಡಿ ‘ಈ ಸಲ ದೊಡ್ಡ ಪರದೆಗೆ ಸಿನಿಮಾ ಮಾಡೋದಾಗಿಯೂ, ಚಿತ್ರದ ಟೈಟಲ್ #ಯಜಮಾನ್ರೆ_ನಿಮಗೊಂದು_ಕಥೆ_ಹೇಳ್ಲಾ ಎಂದಿಟ್ಟಿದ್ದೇನೆಂದೂ, ಇದರಲ್ಲಿ ಬರುವ ಯಜಮಾನರ ಪಾತ್ರ ನೀವೇ ಮಾಡಬೇಕು’ ಅಂದಾಗ ಸಂತಸದಿಂದ್ಲೆ ಒಪ್ಪಿ “ಡೇಟ್ ಯಾವಾಗ ಇರತ್ತೆ ಶಂಕ್ರಣ್ಣ?” ಅಂದಿದ್ದೆ. “ಸರ್… ಈ ಚಿತ್ರಾನ ನಾನು ತಿಂಗ್ಳಲ್ಲಿ ಒಂದು ಅಥವಾ ಎರಡು ದಿನ ಮಾತ್ರ ಶೂಟಿಂಗ್ ಮಾಡ್ತೀನಿ. ಹಾಗಾಗಿ ಇಂಥಹದ್ದೇ ದಿನ ಅಂತ ಪ್ಲ್ಯಾನ್ ಮಾಡ್ಕೊಳ್ಳೋಕೆ ಆಗ್ತಿಲ್ಲ ಮಠ ಸರ್. ಚಿತ್ರೀಕರಣ ಮಾಡೋಕಿಂತ ಎರಡ್ಮೂರು ದಿನ ಮೊದ್ಲು ತಿಳಿಸ್ತೀನಿ.” ಅಂದಾಗ ನನ್ನಲ್ಲಿ ಪ್ರಶ್ನೆಗಳ ಮತಾಪು. ಎಲ್ಲಾ ಪ್ರಶ್ನೆಗಳನ್ನು ಒಂದೇ ಸಲ ಕೇಳುವ ಬದಲಿಗೆ “ನಿರ್ಮಾಪಕರು ಯಾರು ಶಂಕ್ರಣ್ಣ?” ಎಂದು ಕೇಳಿದ್ದೆ. “16 ವರ್ಷ ನಾಗಾಭರಣ ಸರ್ ಗರಡಿಯಲ್ಲಿ ಪಳಗಿದ ನಿಮಗೇ ನಿರ್ಮಾಪಕರು ಸಿಗದಿರುವಾಗ, ನನ್ನಂಥ ಹೊಸಬರಿಗೆ ನಿರ್ಮಾಪಕರು ಯಾರು ಸಿಗ್ತಾರೆ ಮಠ ಸಾರ್. ಹಾಗಂತ ನನ್ನೊಳಗೆ ಗರ್ಭಕಟ್ಟಿರೋ ಕಥೇನ ಹಾಗೇ ಸಮಾಧಿ ಆಗ್ಲೀಂತ ಬಿಡೋಕೆ ಮನಸ್ಸಿಲ್ಲ. ಹಾಗಾಗಿ ನಾನೇ ಇದರ ನಿರ್ಮಾಪಕ…” ಅಂದ್ರು. ಒಂದೊಂದೇ ಪ್ರಶ್ನೆ ಕೇಳ್ತಾ ಹೋಗ್ತಿದ್ದ ಹಾಗೇ ನಾನು ಬೆಚ್ಚಿ ಬೀಳುವಂಥ ಸತ್ಯ ಹೇಳ್ತಾ ಹೋದ್ರು…

ಈ ಶಂಕರ್ ಹೆಸರಿನ ಸಿನಿಮಾ ಹುಚ್ಚ ಕೆಲಸ ಮಾಡ್ತಿರೋದು ಒಂದು ಕಂಪನಿಯಲ್ಲಿ. ಅದೂ ಪರ್ಮನೆಂಟ್ ಕೆಲಸ ಅಲ್ಲ. ತಿಂಗಳು ಪೂರ್ತಿ ಒಂದು ದಿನಾನೂ ರಜೆ ಹಾಕದೆ ದುಡಿದು, ತಿಂಗಳ ಕೊನೆಯಲ್ಲಿ ಸಿಗುವ ಸಂಬಳದಲ್ಲಿ ಎರಡು ಮೂರು ದಿನ ಚಿತ್ರೀಕರಣ ಮಾಡೋದಾಗಿ ಹೇಳಿದ್ರು.

…. ಅಲ್ಲಿ ನೂರಾರು ಜನರ ಓಡಾಟ ಇರಲಿಲ್ಲ, ಜನರುಗಳ ಮಾತಿನ ಗಲಾಟೆ ಇರಲಿಲ್ಲ, ರಾಶಿ ಕಲಾವಿದರುಗಳ ಮೊಬೈಲ್ ಭರಾಟೆ ಇರಲಿಲ್ಲ, ವಾಹನಗಳ ನಾಗಾಲೋಟ ಇರಲಿಲ್ಲ, ಕ್ಯಾರವಾನ್ ಇರಲಿಲ್ಲ, ಜನರೇಟರ್ ವಾಹನ ಇರಲಿಲ್ಲ… ಕ್ಯಾಮರಾ ಇತ್ತು, ಕ್ಯಾಮರಾಮ್ಯಾನ್ ಇದ್ರು, ನಿರ್ದೇಶಕರು ಇದ್ರು, ನಾಯಕ ಇದ್ರು, ನಾಯಕಿ ಇದ್ರು, ನಾನು ಇದ್ದೆ… ತಿಂಗಳಲ್ಲಿ ಎರಡು – ಮೂರು ದಿನ ಚಿತ್ರೀಕರಣ ಮಾಡ್ತಾ ಮಾಡ್ತಾ “ಯಜಮಾನ್ರೆ ನಿಮಗೊಂದು ಕಥೆ ಹೇಳ್ಲ” ಚಿತ್ರದ ಚಿತ್ರೀಕರಣ ಮುಗಿದು ಈಗ ಸಂಕಲನದಲ್ಲಿದೆ. ಪ್ರಾಂಜಲ ಮನಸ್ಸು, ಮಾಡಿಯೇ ತೀರುತ್ತೇನೆ ಎಂಬ ಛಲ ಇದ್ರೆ ತಿಜೋರಿ ತುಂಬಾ ಹಣ ಇಲ್ಲದೆಯೂ ಚಿತ್ರ ಮಾಡಬಹುದು ಅನ್ನೋದಿಕ್ಕೆ ಈ ಚಿತ್ರ ಸ್ಪಷ್ಟ ಉದಾಹರಣೆ.

ಕಥೆ ಮಾಡೋದಿಕ್ಕೇ ತಿಂಗಳಾನುಗಟ್ಲೆ ಸ್ಟಾರ್ ಹೋಟೆಲಲ್ಲಿ ರೂಂ ಹಾಕಿ ನಿರ್ಮಾಪಕರ ದುಡ್ಡಲ್ಲಿ ಮಜಾ ಉಡಾಯಿಸುವವರಿಗಿಂತ, ಅವಶ್ಯಕಥೆ ಇಲ್ಲದಿದ್ರೂ ಆಫೀಸ್ ಹೆಸರಲ್ಲಿ ಮನೆ ಮಾಡ್ಕೊಂಡು ನಿರ್ಮಾಪಕರ ಜೇಬಿಂದ ಹಣ ಪೀಕಿಸುವವರಿಗಿಂತ, ಆಡಿಷನ್ ಹೆಸರಲ್ಲಿ ಹೊಸದಾಗಿ ಚಿತ್ರರಂಗಕ್ಕೆ ಬರುವ ಹೆಣ್ಮಕ್ಕಳಿಗೆ ನರಕ ತೋರಿಸುವುದಕ್ಕಿಂತ ತಾನು ಕಷ್ಟಪಟ್ಟು ದುಡಿದ ಹಣದಲ್ಲಿ ತನ್ನ ಇಷ್ಟದಂತೆ ಸಿನಿಮಾ ಮಾಡುವ ಇಂಥ ನಿರ್ದೇಶಕರುಗಳು ಸಿಗೋದು ಅಪರೂಪ ಅಲ್ವೆ!!??. ಇಂಥವರಿಗೆ ನಿರ್ಮಾಪಕರು ಸಿಗುವುದೇ ಇಲ್ಲ!!.

“ಯಜಮಾನ್ರೆ ನಿಮಗೊಂದು ಕಥೆ ಹೇಳ್ಲ” ಚಿತ್ರದ ನಿರ್ಮಾಪಕ-ನಿರ್ದೇಶಕ ವ್ಯಕ್ತಿ ಚಿತ್ರೀಕರಣಕ್ಕೆ ಬರುವಾಗ್ಲೆಲ್ಲ ಚಪ್ಲಿ ಹಾಕ್ಕೊಂಡೇ ಬರ್ತಿದ್ರು. ಚಪ್ಪಲಿ ಅಲ್ಲಲ್ಲಿ ಬಿರುಕು ಬಿಟ್ಟಿತ್ತು. ನನ್ನ ಚಪ್ಪಲೀದೂ ಅದೇ ಸ್ಥಿತಿ ಆಗಿರೋದ್ರಿಂದ ನಾನದರ ಬಗ್ಗೆ ಕೇಳೋಕೆ ಹೋಗ್ಲಿಲ್ಲ. ಆದ್ರೆ ನಮ್ಮ ನಾಯಕ ನಟ #ಆಕಾಶ್ “ಶಂಕರ್ ಸರ್… ಚಪ್ಲಿ ಹರ್ದೋಗಿದೆ‌. ಒಂದು ಜೊತೆ ಹೊಸಾ ಚಪ್ಲಿ ತಗೊಳ್ಳೋದಲ್ವ” ಅಂದ್ರು. ಮುಗ್ಧತೆಯ ಮುಗುಳ್ನಕ್ಕ ನಿರ್ದೇಶಕರು “ಆಕಾಶ್… ಚಪ್ಲಿ ತಗೊಬೋದು. ಚಪ್ಲಿಗೆ ಇನ್ವೆಸ್ಟ್ ಮಾಡೋ ದುಡ್ಡನ್ನ ಶೂಟಿಂಗ್ ಬಳಸ ಬಹುದಲ್ಲಾಂತ ತಗೊಳ್ಳಿಲ್ಲ. ಮೊದ್ಲು ನಮ್ಮ ಸಿನಿಮಾ ಮುಗೀಲಿ, ಆಮೇಲೆ ಚಪ್ಲಿ ಬಗ್ಗೆ ಯೋಚ್ನೆ ಮಾಡಿದ್ರಾಯ್ತು” ಅಂದಾಗ ದೂರದಲ್ಲಿ ಕೂತು ಇವರುಗಳ ಮಾತು ಕೇಳಿಸ್ಕೊಳ್ತಿದ್ದ ನಾನು ಮೂಕನಾಗಿದ್ದೆ…

ಇನ್ನಷ್ಟು ಬರೆಯೋದಿತ್ತು. ಅದನ್ನ ಮುಂದೆ ಯಾವತ್ತಾದ್ರೂ ಈ ಚಿತ್ರದ ನಿರ್ದೇಶಕರೇ ಹೇಳಿಯಾರು. ಅಂದಹಾಗೆ ದುಡಿದ ದುಡ್ಡಲ್ಲಿ, ಸೀಮಿತ ಚೌಕಟ್ಟಿನಲ್ಲಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ನಿರ್ಮಿಸಿ ನಿರ್ದೇದೇಶಿಸಿರುವ ಆ ಪುಣ್ಯಾತ್ಮರ ಹೆಸರು Shankar G.

ನಾಯಕ: Akash Hagaragi
ನಾಯಕಿ: Deekshitha Deeksha
ಯಜಮಾನ: M.K.Mata
ಛಾಯಾಗ್ರಹಣ: ವಿಶ್ವಾಸ್. ಆರ್
ಸಂಕಲನ: ದಯಾ ಎಂ.ಬಿ

ಸಧ್ಯದಲ್ಲೆ ನಿಮ್ಮ ಮುಂದೆ ಬರ್ತೀವಿ.
ನಿಮ್ಮ ಹರಕೆ, ಹಾರೈಕೆ, ಆಶೀರ್ವಾದ, ಬೆಂಬಲ ಇರಲಿ…….ಎಂ. ಕೆ. ಮಠ 

By BPN

Leave a Reply

Your email address will not be published. Required fields are marked *