---Advertisement---

Advertisement

 

ಓದಿದ ಸರ್ಕಾರಿ ಕನ್ನಡ ಶಾಲೆಗೆ ಜೀವಕಳೆ ತುಂಬಿದ ಹಳೆ ವಿದ್ಯಾರ್ಥಿಗೆ ಅಭಿನಂದಿಸಿದ
ಕನ್ನಡ ಸಾಹಿತ್ಯ ಪರಿಷತ್ತು

ಬೆಂಗಳೂರು: ದಾವಣಗೆರೆ ತಾಲೂಕಿನ ಹಳೇ ಬಿಸಲೇರಿ ಗ್ರಾಮದ ಕುಂದುರ್‌ ಮುರಿಗೆಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಖಾಸಗಿ ಶಾಲೆಗಳು ನಾಚಿಸುವಂತೆ ಅಭಿವೃದ್ಧಿಪಡಿಸಿರುವ ವಿದ್ಯಮಾನ ಸ್ವಾಗತಾರ್ಹ. ಶಾಲೆಯ ಹಳೆ ವಿದ್ಯಾರ್ಥಿ ಬಸವನಗೌಡ ಅವರು ತಾವು ಓದಿದ ಶಾಲೆಗೆ ಜೀವಕಳೆ ತುಂಬುವ ಹಿನ್ನೆಲೆಯಲ್ಲಿ ಸಂಪೂರ್ಣ ಶಿಥಿಲಗೊಂಡಿದ್ದ ಶಾಲೆಯನ್ನು ಪುನರ್‌ನಿರ್ಮಾಣ ಮಾಡುವ ಮೂಲಕ ಕನ್ನಡದ ಶಾಲೆಯ ಉಳಿವಿಗಾಗಿ ಕೆಲಸ ಮಾಡಿದವರಿಗೆ ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪರವಾಗಿ ಅಭಿನಂದಿಸುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ, ಮಹೇಶ ಜೋಶಿ ಹೇಳಿದ್ದಾರೆ.

 

ಹಳೇ ಬಿಸಲೇರಿ ಗ್ರಾಮದ ಕುಂದುರ್‌ ಮುರಿಗೆಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಖಾಸಗಿ ಶಾಲೆಯನ್ನೂ ನಾಚಿಸುವಂತೆ ಅಭಿವೃದ್ಧಿಗೊಂಡಿದೆ. ಶಾಲೆಯ ಹಳೆ ವಿದ್ಯಾರ್ಥಿ ಶ್ರೀ ಬಸವನಗೌಡ ಅವರು ಸಂಪೂರ್ಣ ಶಿಥಿಲಗೊಂಡಿದ್ದ ಶಾಲೆಯನ್ನು ಪುನರ್‌ನಿರ್ಮಾಣ ಮಾಡುವ ಮೂಲಕ ತಾವು ಓದಿದ ಶಾಲೆಗೆ ಜೀವಕಳೆ ತುಂಬಿದ್ದಾರೆ ಎನ್ನುವ ಸುದ್ದಿ ಮಾಧ್ಯಮದಲ್ಲಿ ಸಚಿತ್ರ ಸಹಿತ ವರದಿಯಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಿ ಎನ್ನುವ ಮಹತ್ತರ ಉದ್ದೇಶದೊಂದಿಗೆ ನಾಡಿನಾಧ್ಯಂತ ಕನ್ನಡ ಶಾಲೆಗಳ ಉಳಿವಿಗೆ ಕೆಲಸ ಮಾಡುತ್ತಿದೆ. ಇದೇ ಕಾರಣಕ್ಕೆ ನಾಡಿನ ಹಿರಿಯ ಸಾಹಿತಿ ಸರಸ್ವತಿ ಸಮ್ಮಾನ ಪುರಸ್ಕೃತ ನಾಡೋಜ ಡಾ. ಎಸ್‌. ಎಲ್‌. ಬೈರಪ್ಪ ಅವರ ನೇತ್ರತ್ವದಲ್ಲಿ ಶಿಕ್ಷಣ ಸಚಿವರು, ನಾಡಿನ ಅನೇಕ ಶಿಕ್ಷಣ ತಜ್ಞರು, ಮಠಾಧೀಶರು, ಸೇರಿದಂತೆ ಹಲವರನ್ನೊಳಗೊಂಡ ʻದುಂಡು ಮೇಜಿನ ಸಭೆʼಯನ್ನು ನಡೆಸಿ `*ಕನ್ನಡ ಶಾಲೆ ಉಳಸಿ – ಕನ್ನಡ ಬೆಳೆಸಿ*ʼ ಎನ್ನುವ ಘೋಷವಾಕ್ಯದೊಂದಿಗೆ ಮಹತ್ವದ ಆರು ನಿರ್ಣಯಗಳನ್ನು ಸರಕಾರಕ್ಕೆ ನೀಡಲಾಗಿದೆ. ಇದರ ಜೊತೆಗೆ ಕನ್ನಡ ಭಾಷೆ ಉಳಿದರೆ ಮಾತ್ರ ನಾಡಿನಲ್ಲಿ ನಾವೆಲ್ಲಾ ಉಳಿಯುತ್ತೇವೆ. ಅದಕ್ಕೆ ಮೊದಲು ಕನ್ನಡ ಶಾಲೆಗಳು ಉಳಿಯಬೇಕು. ಅವುಗಳನ್ನು ನಾವೆಲ್ಲಾ ತ್ರಿಕರ್ಣಪೂರ್ವಕ ಶ್ರದ್ಧೆಯಿಂದ ಬೆಳಸಬೇಕು ಎನ್ನುವ ಮೂಲ ಉದ್ದೇಶವನ್ನು ಪರಿಷತ್ತು ಹೊಂದಿದೆ. ಪರಿಣಾಮ ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕ-೨೦೨೨ವನ್ನು ಕಾನೂನಾಗಿ ಮಾಡಿಸುವಲ್ಲಿ ಪ್ರಮುಖ ಪಾತ್ರವನ್ನು ಪರಿಷತ್ತು ವಹಿಸಿಕೊಂಡಿತ್ತು ಎನ್ನುವುದನ್ನು ಈ ಸಂದರ್ಭದಲ್ಲಿ ನಾಡೋಜ ಡಾ. ಮಹೇಶ ಜೋಶಿ ನೆನಪಿಸಿಕೊಂಡಿದ್ದಾರೆ.

 

ಮಾನ್ಯ ಶ್ರೀ ಬಸವನಗೌಡ ಅವರು ಸಿವಿಲ್‌ ಎಂಜಿನಿಯರಿಂಗ್‌ ಪದವೀಧರ. ಸದ್ಯ ಬೆಂಗಳೂರಿನಲ್ಲಿ ಕುಂದುರ್‌ ಕನ್‌ಸ್ಟ್ರಕ್ಷನ್ಸ್‌ ಕಂಪನಿ ನಡೆಸುತ್ತಿರುವ ಇವರು, ನೂರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಹುಟ್ಟಿದ ಊರು, ಶಾಲೆ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಅವರು, ಯಾವುದೇ ಪ್ರತಿಫಲಾಪೇಕ್ಷೆಯೂ ಇಲ್ಲದೆ ತಮ್ಮ ಸ್ವಂತ ಹಣದಲ್ಲಿ ತಾವು ಕಲಿತಿರುವ ಕುಂದುರ್‌ ಮುರಿಗೆಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಾಗಿ ಸುಸಜ್ಜಿತ ಕಟ್ಟಡ ಹಾಗೂ ಸಮುದಾಯ ಭವನ ನಿರ್ಮಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಇವರು ನಿರ್ಮಾಣ ಮಾಡಿರುವ ನೂತನ ಶಾಲಾ ಕಟ್ಟಡದಲ್ಲಿ, ವಿಶಾಲವಾದ ತರಗತಿಗಳು, ಕಂಪ್ಯೂಟರ್‌ ಲ್ಯಾಬ್‌, ಗ್ರಂಥಾಲಯ, ಅಡುಗೆ ಕೋಣೆ, ಸಭಾಂಗಣ ಸೇರಿ ಒಟ್ಟು ೧೬ ಕೊಠಡಿಗಳನ್ನು ೧.೨೦ಕೋಟಿ ರೂ. ವೆಚ್ಚದಲ್ಲಿ ಬಸವನಗೌಡರೇ ಮುತುವರ್ಜಿವಹಿಸಿ ನಿರ್ಮಿಸಿಕೊಟ್ಟಿರುವುದು ಕನ್ನಡಿಗರ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ.

ತಾನು ಕಲಿತ ಕನ್ನಡ ಶಾಲೆಯೊಂದಿಗೆ ಅಂಗನವಾಡಿ ಕೇಂದ್ರಕ್ಕೂ ಇಲ್ಲಿಯೇ ಕೊಠಡಿ ನಿರ್ಮಾಣ ಮಾಡಲಾಗಿದೆ. ಕಟ್ಟಡಗಳನ್ನು ಹೊರತು ಪಡಿಸಿ, ೧ ಪ್ರೊಜೆಕ್ಟರ್‌, ೪ ಕಂಪ್ಯೂಟರ್‌ಗಳು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಟೇಬಲ್‌, ಕುರ್ಚಿ ಹಾಗೂ ಕಪಾಟು, ತರಗತಿಗಳಿಗೆ ಫ್ಯಾನ್‌, ಶುದ್ಧ ಕುಡಿಯುವ ನೀರಿನ ಘಟಕ, ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಕೈ ತೊಳೆಯಲು ಅಗತ್ಯ ವ್ಯವಸ್ಥೆ ಕಲ್ಪಿಸಿದ್ದಾರೆ. ಕಳೆದ ೧೭ ವರ್ಷಗಳಿಂದ ಶಾಲೆ ಆರಂಭದಲ್ಲಿ ಎಲ್ಲ ಮಕ್ಕಳಿಗೂ ಲೇಖನ ಸಾಮಗ್ರಿ, ೭ನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಗೆ ತಲಾ ೫,೦೦೦ ರೂ. ಪ್ರೋತ್ಸಾಹಧನ ನೀಡುತ್ತ ಬಂದಿದ್ದಾರೆ. ಇವರ ಕೆಲಸದಿಂದ ಸ್ಫೂರ್ತಿಗೊಂಡ ಶಾಲೆಯ ಶಿಕ್ಷಕಿ ಶ್ರೀಮತಿ ಮಂಜುಳಾ ಅವರು ತಮ್ಮ ಸ್ವಂತ ಹಣದಲ್ಲಿ ನಲಿ–ಕಲಿ ಕೊಠಡಿಯನ್ನು ವಿದ್ಯಾರ್ಥಿಗಳ ಕಲಿಕೆಗೆ ನೆರವಾಗುವಂತೆ ರೂಪಿಸಿ ಕೊಟ್ಟಿರುವುದಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸುತ್ತಿದೆ ಎಂದು ನಾಡೋಜ ಡಾ. ಮೇಹೇಶ ತಿಳಿಸಿದ್ದಾರೆ.
ಕೊಡುಗೈ ದಾನಿಯಾಗಿರುವ ಶ್ರೀ ಬಸವನಗೌಡರು ಅವರು ಗ್ರಾಮಸ್ಥರು ತಮ್ಮ ಮಕ್ಕಳ ಮದುವೆಗಳನ್ನು ನಡೆಸಲು ಅನುಕೂಲವಾಗಲಿ ಎಂದು ಶಾಲೆಯ ಹತ್ತಿರದಲ್ಲಿಯೇ ಸಮುದಾಯ ಭವನ ನಿರ್ಮಿಸಿಕೊಟ್ಟಿದ್ದಾರೆ. ಸಮುದಾಯ ಭವನದಿಂದ ಬಂದಿರುವ ಆದಾಯವನ್ನು ಶಾಲೆಯ ಅಭಿವೃದ್ಧಿ ಕೆಲಸಗಳಿಗೇ ವಿನಿಯೋಗಿಸುತ್ತಾರೆ. ಜೊತೆಗೆ ಪರಿಶಿಷ್ಟರ ಕಾಲೊನಿಯವರಿಗೆ ದೇವಸ್ಥಾನ ನಿರ್ಮಿಸಿಕೊಟ್ಟಿದ್ದಾರೆ. ಲಾಭದ ನಿರೀಕ್ಷೆ ಇಲ್ಲದೆ ಕೆಲಸ ಮಾಡುವ ಬಸವನಗೌಡರು ಕನ್ನಡ ನಾಡಿನ ಹೆಮ್ಮೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹೆಮ್ಮೆ ವ್ಯಕ್ತ ಪಡಿಸಿದ್ದಾರೆ.

 

By BPN

Leave a Reply

Your email address will not be published. Required fields are marked *