*ಆಯವ್ಯಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ೨೫.೦೦ ಕೋಟಿ ರೂ. ಅನುದಾನಕ್ಕೆ ಮನವಿ*
ಬೆಂಗಳೂರು: ಸಮಗ್ರ ಕನ್ನಡಿಗರ ಏಕೈಕ ಪ್ರಾತಿನಿಧಿಕ ಹಾಗೂ ಎಲ್ಲ ಕನ್ನಡ ಸಂಘ-ಸಂಸ್ಥೆಗಳ ಮಾತೃ ಸಂಸ್ಥೆಯಾದ *ಕನ್ನಡ ಸಾಹಿತ್ಯ ಪರಿಷತ್ತನ್ನು ‘ಜನಸಾಮಾನ್ಯರ ಪರಿಷತ್ತನ್ನಾಗಿಸುವ’* ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಪರಿಷತ್ತಿನ ಕಾರ್ಯಚಟುವಟಿಕೆಗಳು ಸೇರಿದಂತೆ, ಕಟ್ಟಡಗಳ ನವೀಕರಣ ಹಾಗೂ ಅಭಿವೃದ್ಧಿ ಕೆಲಸಗಳಿಗಾಗಿ ವಿಶೇಷ ಅನುದಾನದ ಅವಶ್ಯಕತೆ ಇದ್ದು ಅದಕ್ಕಾಗಿ ಈ ಬಾರಿಯ ಮಂಡಿಸುತ್ತಿರುವ *ಆಯವ್ಯಯದಲ್ಲಿ ೨೫.೦೦ (ಇಪ್ಪತ್ತೈದು) ಕೋಟಿ ರೂಪಾಯಿಗಳನ್ನು ಕಾಯ್ದಿರಿಸುವಂತೆ* ಕೋರಿ *ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ . ಬಸವರಾಜ ಬೊಮ್ಮಾಯಿ* ಅವರಿಗೆ *ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ* ಮನವಿ ಸಲ್ಲಿಸಿದ್ದಾರೆ.
ಪ್ರತಿ ವರ್ಷ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಾಗಿ ಕರ್ನಾಟಕ ಘನ ಸರಕಾರ ಅನುದಾನವಾಗಿ ೧೦.೦೦ ಕೋಟಿ ರೂಪಾಯಿಗಳನ್ನು ನೀಡುತ್ತಿದೆ. ಈ ಬಾರಿ ಎಂದಿನಂತೆ ಪರಿಷತ್ತಿನ ಕಾರ್ಯಚಟುವಟಿಕೆಗಳಿಗೂ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಕಟ್ಟಡ ಮತ್ತು ಆಡಳಿತ ಕಟ್ಟಡಕ್ಕೆ ಬಣ್ಣ ಹಚ್ಚುವಿಕೆ, ಪಂಪ ಸಭಾಂಗಣ ನವೀಕರಣ, ಅಕ್ಕಮಹಾದೇವಿ ಸಭಾಂಗಣದ ಧ್ವನಿ ತಂತ್ರಜ್ಞಾನ ವ್ಯವಸ್ಥೆ ಸರಿಪಡಿಸುವುದು, ಶತಮಾನೋತ್ಸವ ಭವನದಲ್ಲಿ ಸಾಹಿತಿ ಹಾಗೂ ಕಲಾವಿದರಿಗೆ ಅತಿಥಿಗೃಹ ವ್ಯವಸ್ಥೆ ಕಲ್ಪಿಸುವುದು, ಬಿ.ಎಂ. ಶ್ರೀ ಅಚ್ಚುಕೂಟ, ಸರಸ್ವತಿ ಗ್ರಂಥಭಂಡಾರ, ಪುಸ್ತಕ ಮಾರಾಟ ಕೇಂದ್ರ ಇವುಗಳ ಕಟ್ಟಡಗಳ ನವೀಕರಣ ಮತ್ತು ಅಭಿವೃದ್ಧಿಗೆ, ಗ್ರಂಥಗಳ ಡಿಜಿಟಲೀಕರಣ, ತಂತ್ರಾಂಶ ಅಳವಡಿಕೆ ಮತ್ತು ಅಭಿವೃದ್ಧಿಗಾಗಿ ವಿಶೇಷ ಅನುದಾನವಾಗಿ ೨೫.೦೦ ಕೋಟಿ ರೂಪಾಯಿ ಅನುದಾನದ ಅವಶ್ಯಕತೆ ಇದೆ. ಈ ಬಾರಿ ಸರಕಾರ ಮಂಡಿಸಲಿರುವ ಆಯ-ವ್ಯಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ವಿಶೇಷ ಕಾಳಜಿ ವಹಿಸಿ ೨೫.೦೦ ಕೋಟಿ ರೂಪಾಯಿ ಅನುದಾನವನ್ನು ಕಾಯ್ದಿರಿಸಬೇಕೆಂದು *ನಾಡೋಜ ಡಾ. ಮಹೇಶ್ ಜೋಶಿ* ಅವರು ಪತ್ರದ ಮೂಲಕ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
*ಕನ್ನಡ ಸಾಹಿತ್ಯ ಪರಿಷತ್ತಿನ ಮಹಾಪೋಷಕರಾದ* ಮಾನ್ಯ ಮುಖ್ಯಮಂತ್ರಿಗಳಲ್ಲಿ ಪರಿಷತ್ತಿನ ಪರವಾಗಿ ಈಗಾಗಲೇ ಚರ್ಚಿಸಲಾಗಿದ್ದು ಅವರು ಪ್ರಸ್ತುತ ವರ್ಷದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳ ಕುರಿತಂತೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ವರ್ಷ ಕನ್ನಡ ಸಾಹಿತ್ಯ ಪರಿಷತ್ತಿಗೆ ಸರ್ಕಾರದ ವತಿಯಿಂದ ವಿಶೇಷ ಅನುದಾನವನ್ನು ಒದಗಿಸುವ ಭರವಸೆಯನ್ನು ಸಹ ನೀಡಿದ್ದಾರೆ. ಕಳೆದ ವರ್ಷದಲ್ಲಿ ಪರಿಷತ್ತಿನ ಕಾರ್ಯಚಟುವಟಿಕೆಗಳಿಗಾಗಿ ಆಯವ್ಯಯ ಪಟ್ಟಿಯಲ್ಲಿ ರೂ. ೧೦.೦೦ ಕೋಟಿಗಳನ್ನು ನೀಡಿದ್ದನ್ನು ಸಮಸ್ತ ಕನ್ನಡಿಗರ ಪರವಾಗಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಕೃತಜ್ಞತಾಪೂರ್ವಕವಾಗಿ ಸ್ಮರಿಸಬಯಸುತ್ತೇವೆ ಎಂದು *ನಾಡೋಜ ಡಾ.ಮಹೇಶ ಜೋಶಿ* ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತನ್ನು ‘*ಜನಸಾಮಾನ್ಯರ ಪರಿಷತ್ತನ್ನಾಗಿಸುವ*’ ನಿಟ್ಟಿನಲ್ಲಿ ವಿವಿಧ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸರಕಾರ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗೆ ಇದ್ದು ಈ ಬಾರಿಯ ಆಯುವ್ಯಯದಲ್ಲಿ ಪರಿಷತ್ತಿನ ಬೇಡಿಕೆಯನ್ನು ಈಡೇರಿಸುವ ಮೂಲಕ ಕೈ ಜೋಡಿಸಲಿದೆ ಎಂದು *ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ* ತಿಳಿಸಿದ್ದಾರೆ.