ಕನ್ನಡ ಭಾಷೆಯನ್ನುಕಡೆಗಣಿಸಿದ ಜನಪ್ರತಿನಿಧಗಳ ನಡೆ ಖಂಡಿಸಿದ ಕನ್ನಡ ಸಾಹಿತ್ಯ ಪರಿಷತ್ತು
ಬೆಂಗಳೂರು: ಕೆಲವು ಜನಪ್ರತಿನಿಧಿಗಳು ನಾಡು-ನುಡಿಯ ಅಭಿಮಾನ ಮರೆತು, ಕನ್ನಡದ ಅಸ್ಮಿತೆಗೆ ಅಡ್ಡಿ ತರುವಂತೆ ವರ್ತಿಸುತ್ತಿದ್ದಾರೆ. ಕನ್ನಡ ಭಾಷೆ, ಸಂಸ್ಕೃತಿಯನ್ನು ಕಡೆಗಣಿಸುವುದು ಎಂದರೆ ತನ್ನ ಸ್ವಂತ ತಾಯಿಯನ್ನು ಕಡೆಗಣಿಸಿದಂತೆ ಎನ್ನುವ ಭಾವನೆ ಅರಿತು ಕೊಳ್ಳಬೇಕು. ನೂತನವಾಗಿ ಆಯ್ಕೆಯಾಗಿರುವ ಶಾಸಕರು ಹಾಗೂ ಸಚಿವರು ಪ್ರಮಾಣವಚನ ಸಂದರ್ಭದಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿ ಅನ್ಯಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿರುವುದು ಅಕ್ಷಮ್ಯ . ಇದನ್ನು ಕನ್ನಡಿಗರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರು ಬೇಸರ ವ್ಯಕ್ತ ಪಡಿಸಿದ್ದಾರೆ.
ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಶ್ರೀ ಜಮೀರ್ ಅಹಮ್ಮದ್ ಖಾನ್ ಅವರು ಆಂಗ್ಲ ಭಾಷೆಯಲ್ಲಿ ಪ್ರಮಾಣವಚನವನ್ನು ಸ್ವೀಕರಿಸಿದ್ದರು. ಈ ಹಿಂದೆ ಮೂರು ಬಾರಿ ಪ್ರಮಾಣವಚನ ಸ್ವೀಕರಿಸುವಾಗಲೂ ಇಂತಹದ್ದೆ ತಪ್ಪು ಮಾಡಿ ನಂತರ ಕನ್ನಡಿಗರಲ್ಲಿ ಕ್ಷಮೆಯಾಚಿಸಿ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವ ಭರವಸೆಯನ್ನು ನೀಡಿದ್ದರು. ಸ್ವತಃ ಕನ್ನಡ ನಾಡಿನ ಹೆಮ್ಮೆಯ ಹಾಗೂ ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸ್ಥಾನ ಹೊಂದಿರುವ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಶ್ರೀ ಜಮೀರ್ ಅಹಮ್ಮದ್ ಖಾನ್ ಅವರಿಗೆ ಕನ್ನಡದ ಬಗ್ಗೆ ಅಭಿಮಾನ ಇಲ್ಲ ಎನ್ನುವುದು ಖೇದಕರ ಸಂಗತಿ. ಜಮೀರ್ ಅವರು ಪ್ರತಿನಿಧಿಸುವ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಹುಪಾಲು ಕನ್ನಡಿಗರೇ ಇರುವುದು. ಜೊತೆಗೆ ಕನ್ನಡದ ನಾಡು ನುಡಿಗೆ ತಮ್ಮ ಸರ್ವಸ್ವವನ್ನೇ ಮುಡಿಪಾಗಿಟ್ಟ ಅನೇಕ ಕನ್ನಡ ಕಣ್ಮಣಿಗಳು ಓಡಾಡಿದ ಪುಣ್ಯ ನೆಲವನ್ನು ಅವರು ಪ್ರತಿನಿಧಿಸುತ್ತಿದ್ದಾರೆ. ಕನ್ನಡದ ಕಟ್ಟಾಳುಗಳು ಓಡಾಡಿದ ನೆಲವನ್ನು ವಿಧಾನಸೌಧದಲ್ಲಿ ಪ್ರತಿನಿಧಿಸುವ ವ್ಯಕ್ತಿ ಜವಾಬ್ದಾರಿಯುತವಾಗಿ, ಕನ್ನಡಕ್ಕೆ ಗೌರವ ನೀಡಲೇಬೇಕು, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಕಾಯ್ದುಕೊಳ್ಳುವ ಹೊಣೆಗಾರಿಕೆಯನ್ನು ಸಹ ವಹಿಸಿಕೊಳ್ಳಬೇಕಾಗುತ್ತದೆ ಎಂದು ನಾಡೋಜ ಡಾ. ಮಹೇಶ ಜೋಶಿ ಅವರು ತಿಳಿಸಿದ್ದಾರೆ.
ನೂತನವಾಗಿ ಆಯ್ಕೆಯಾಗಿರುವ ೨೨೪ ಶಾಸಕರ ಪೈಕಿ ೧೮೧ ಶಾಸಕರು ವಿಧಾನಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ತಮ್ಮ ಕರ್ತವ್ಯವನ್ನು ಆರಂಭಿಸಿದ್ದಾರೆ. ಅವರ ಪೈಕಿ ನಾಲ್ವರು ಮಾತ್ರ ಕನ್ನಡ ಭಾಷೆಯನ್ನು ಕಡೆಗಣಿಸಿದ್ದಾರೆ. ಕನ್ನಡ ನಾಡಿನಲ್ಲಿ ನಮ್ಮ ಭಾಷೆ ಸಂಸ್ಕೃತಿಯನ್ನು ತಳ ಮಟ್ಟದಿಂದ ಉಳಿಸಿ ಬೆಳಸಬೇಕು ಎನ್ನುವುದು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಧ್ಯೇಯವಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಸರ್ಕಾರದಲ್ಲಿ ‘*ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕ -೨೦೨೨*’ ವನ್ನು ಕಾನೂನಾಗಿ ಅಂಗೀಕಾರ ಮಾಡಿರುವುದು.
ದೇಶದ ಗಣರಾಜ್ಯದ ಎಪ್ಪತ್ತಮೂರನೇ ವರ್ಷದಲ್ಲಿ ಕರ್ನಾಟಕ ವಿಧಾನಮಂಡಳದಿಂದ, ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ, ಕನ್ನಡಿಗರಿಗೆ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳನ್ನು ಮತ್ತು ಕಲ್ಯಾಣ ಕ್ರಮಗಳನ್ನು ಕಲ್ಪಿಸುವುದಕ್ಕಾಗಿ *’ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕ -೨೦೨೨’ವನ್ನು ʻಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ -೨೦೨೨*ʼ ಎಂದು ಸದನದಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಈ ವಿಧೇಯಕವನ್ನು ಮೇಲ್ಮನೆಯಲ್ಲೂ ಅಂಗೀಕಾರವಾಗಿ ಘನ ರಾಜ್ಯಪಾಲರ ಅಂಕಿತದ ನಂತರ ಕಾನೂನಾಗಿದೆ. ಕನ್ನಡ ಭಾಷೆಯನ್ನು ಸಮರ್ಪಕವಾಗಿ ಬಳಕೆ ಮಾಡಬೇಕು ಎನ್ನುವ ಮೂಲ ಉದ್ದೇಶದಿಂದ ಸಿದ್ಧಪಡಿಸಿರುವ ಕಾನೂನಿನಲ್ಲಿ ಸರಕಾರದ ಎಲ್ಲಾ ಕ್ಷೇತ್ರಗಳಲ್ಲಿ, ಸಚಿವಾಲಯಗಳಲ್ಲಿ, ನ್ಯಾಯಾಲಯಗಳಲ್ಲಿ, ಸ್ಥಳೀಯ ಸಂಘ ಸಂಸ್ಥೆಗಳಲ್ಲಿ, ರಾಜ್ಯದಲ್ಲಿ ಇರುವ ಖಾಸಗಿ ವಲಯದಲ್ಲಿ ಕನ್ನಡವನ್ನು ಕಡ್ಡಾಯ ಮಾಡಲಾಗಿದೆ. ಕನ್ನಡ ಬಾರದವರಿಗೆ ಕನ್ನಡ ಕಲಿಸಿಯಾದರೂ ಕನ್ನಡದಲ್ಲಿಯೇ ವ್ಯವಹಾರ ನಡೆಸಬೇಕು, ಜೊತೆಗೆ ನ್ಯಾಯಾಲಯದಲ್ಲಿಯೂ ಕನ್ನಡವನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು ಎಂಬುವುದು ಸ್ಪಷ್ಟಪಡಿಸಲಾಗಿದೆ ಎಂದು *ನಾಡೋಜ ಡಾ. ಮಹೇಶ ಜೋಶಿ* ತಿಳಿಸಿದ್ದಾರೆ.
ನೂತನವಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವು ಸಚಿವರಿಗೆ ಹಾಗೂ ಶಾಸಕರಿಗೆ ಕನ್ನಡ ಬಾರದೇ ಇದ್ದ ಪಕ್ಷದಲ್ಲಿ ಕನ್ನಡ ಭಾಷೆಯನ್ನು ಕಲಿತಾದರೂ ಸದನದಲ್ಲಿ ಕನ್ನಡ ಮಾತನಾಡಬಹುದಾಗಿತ್ತು. ಆದರೆ ಕನ್ನಡ ಕಲಿಯುವ ಪ್ರಯತ್ನವನ್ನೂ ಮಾಡದಿರುವ ಜನಪ್ರತಿನಿಧಿಗಳ ಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಕನ್ನಡ ಇದ್ದರೆ ಮಾತ್ರ ಕರ್ನಾಟಕ ಇರಲಿದೆ. ನಾಡು ನುಡಿಯೇ ಇಲ್ಲದ ಮೇಲೆ ಎಲ್ಲಿಯ ಅಧಿಕಾರ..? ಎಲ್ಲಿಯ ಜನ ಸೇವೆ.. ? ಕನಿಷ್ಠ ಈ ಸತ್ಯವನ್ನು ಅರಿತಾದರೂ ಮುಂದಿನ ದಿನಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು ಎನ್ನುವುದು *ಕನ್ನಡ ಸಾಹಿತ್ಯ ಪರಿಷತ್ತಿನ* ಕಳಕಳಿಯಾಗಿದೆ. ಅಧಿಕೃತವಾಗಿ ಕನ್ನಡ ಬಳಸದೇ ಇದ್ದ ಶಾಸಕರಿಗೆ ಕನ್ನಡ ಬಳಸದಿರುವ ಬಗ್ಗೆ ಕಾರಣ ಕೇಳುವ ಮೂಲಕ, ಒಂದು ವೇಳೆ ಅಂಥವರಿಗೆ ಕನ್ನಡ ಬಾರದಿದ್ದರೆ, ಪರಿಷತ್ತೇ ಕನ್ನಡ ಕಲಿಸುವ ಕೆಲಸವನ್ನು ಮಾಡುವುದು ಎಂದು ನಾಡೋಜ ಡಾ. ಮಹೇಶ ಜೋಶಿ ಕಟುವಾಗಿ ಹೇಳಿದ್ದಾರೆ.