ಗ್ಯಾರೆಂಟಿಗಳ ಜಾರಿಗೆ ರಾಮ್ ಪ್ರಸಾದ್ ಹರ್ಷ;
ಕೊಟ್ಟ ಮಾತು ಉಳಿಸಿಕೊಂಡ ಸಿಎಂ ಸಿದ್ದು ಡಿಸಿಎಂ ಡಿಕೆಶಿರಿಗೆ ಅಭಿನಂದನೆ
ಕೋಲಾರ: ಕಳೆದ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ರಾಜ್ಯದ ಮತದಾರರಿಗೆ ನೀಡಿದ್ದ ಐದು ಗ್ಯಾರೆಂಟಿಗಳನ್ನು ಈಡೇರಿಸುವ ಸಂಬಂಧ ಮಹತ್ವದ ನಿರ್ಧಾರ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕೆಪಿಸಿಸಿ ಕಾರ್ಯದರ್ಶಿ ಕೆ.ವಿ. ರಾಮ್ ಪ್ರಸಾದ್ ಅಭಿನಂದಿಸಿದ್ದು, ಗ್ಯಾರೆಂಟಿಗಳ ತ್ವರಿತ ಜಾರಿಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಮತದಾರರಿಗೆ ನೀಡಿದ್ದ ಆಶ್ವಾಸನೆಯಂತೆ ಕಾಂಗ್ರೆಸ್ ಸರ್ಕಾರವು, ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, 10 ಕೆಜಿ ಅಕ್ಕಿ, ಮನೆಯೊಡತಿಗೆ ಮಾಸಿಕ 2000 ರೂ. ನೀಡುವ ಗೃಹ ಲಕ್ಷ್ಮಿ ಮತ್ತು ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ ನೀಡುವ ಯುವ ನಿಧಿ ಘೋಷಣೆ ಮಾಡಿರುವ ಸರ್ಕಾರದ ಕ್ರಮವನ್ನು ಸ್ವಾಗತಿಸಿರುವ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದೊಡನೆಯೇ ಗ್ಯಾರೆಂಟಿಗಳನ್ನು ಜಾರಿ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದು, ಗ್ಯಾರೆಂಟಿಗಳ ಜಾರಿ ಮೂಲಕ ‘ನಾವು ನುಡಿದಂತೆ ನಡೆಯುವವರು’ ಎಂಬುದನ್ನು ಕಾಂಗ್ರೆಸ್ ಸರ್ಕಾರ ಸಾಬೀತುಪಡಿಸಿದೆ ಎಂದು ನುಡಿದಿದ್ದಾರೆ.
ಕೇಂದ್ರ ಸಚಿವರಾಗಿಯೂ ಕಾರ್ಯನಿರ್ವಹಿಸಿರುವ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಕೆ.ಹೆಚ್. ಮುನಿಯಪ್ಪ ಅವರಿಗೆ ನೀಡಲಾಗಿರುವ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಮೂಲಕ ಪ್ರತಿ ತಿಂಗಳು 10 ಕೆಜಿ ಅಕ್ಕಿ ನೀಡುವ “ಅನ್ನ ಭಾಗ್ಯ” ಯೋಜನೆಯನ್ನು ಜಾರಿ ಮಾಡಲಾಗಿದ್ದು, ಅನುಭವಿ ರಾಜಕಾರಣಿ ಆಗಿರುವ ಕೆ.ಹೆಚ್. ಅವರು ಪಕ್ಷ ನೀಡಿದ್ದ ಭರವಸೆಯಂತೆ 10 ಕೆಜಿ ಅಕ್ಕಿ ಪೂರೈಸುವ ಯೋಜನೆಯನ್ನು ಕಟ್ಟ ಕಡೆಯ ವ್ಯಕ್ತಿವರೆಗೂ ತಲುಪಿಸಲಿದ್ದಾರೆ ಎಂಬ ಭರವಸೆ ತಮ್ಮದು ಎಂದು ರಾಮ್ ಪ್ರಸಾದ್ ಪ್ರತಿಪಾದಿಸಿದ್ದಾರೆ.
ಇನ್ನು ಉಚಿತ ಯೋಜನೆಗಳ ಮೂಲಕ ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿ ಆಗಲಿದೆ ಎಂಬ ವಿಪಕ್ಷಗಳ ಟೀಕೆಗೆ ಪ್ರತ್ಯುತ್ತರಿಸಿರುವ ಕೆಪಿಸಿಸಿ ಕಾರ್ಯದರ್ಶಿ ರಾಮ್ ಪ್ರಸಾದ್, ಈವರೆಗೆ 13 ಬಜೆಟ್‍ಗಳನ್ನು ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಚಿತ ಯೋಜನೆಗಳ ಜಾರಿ ಜತೆಗೆ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸುವ ಅಪಾರ ಅನುಭವ ಇದೆ ಹೀಗಾಗಿ ವಿಪಕ್ಷಗಳು ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಕಿವಿ ಮಾತು ಹೇಳಿದ್ದಾರೆ.