---Advertisement---

Advertisement

ಮರೆಯಾದ ಮಾಣಿಕ್ಯ ವೀರಣ್ಣ ಹೊಸೂರ

 

ಮೂಡಲಗಿ: ಸಹಕಾರ, ಶಿಕ್ಷಣ, ಕೃಷಿ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದ ಮೂಡಲಗಿಯ ಕೊಡುಗೈ ದಾನಿ ಎಂದು ಹೆಸರುವಾಸಿಯಾಗಿದ್ದ ವೀರಣ್ಣ ಈಶ್ವರಪ್ಪ ಹೊಸೂರ ಅವರು ಇದೇ ಮೇ ೧೪ರಂದು ನಿಧನರಾಗಿರುವುದು ಸಮಾಜಕ್ಕೆ ಬಹುದೊಡ್ಡ ನಷ್ಟವಾಗಿದೆ.

ಮೂಡಲಗಿಯ ಸಂಸ್ಕೃತ ಕುಟುಂಬದ ಈಶ್ವರಪ್ಪ ಹೊಸೂರ ಮತ್ತು ಶಕುಂತಲಾ ಇವರ ಉದರದಲ್ಲಿ ಫೆ. ೨೦, ೧೯೬೬ರಲ್ಲಿ ಜನನವಾಗಿದ್ದು, ಅವರಿಗೆ ನಾಲ್ವರು ಹಿರಿಯ ಸಹೋದರಿಯರು ಇರುವರು. ಬೆಳಗಾವಿ ಲಿಂಗರಾಜ ಕಾಲೇಜುದಲ್ಲಿ ಬಿ.ಕಾಮ್ ಪದವಿ ಕಲಿಯುವಾಗ ತಂದೆಯ ನಿಧನದಿಂದಾಗಿ ಮನೆತನದ ಜವಾಬ್ದಾರಿಯನ್ನು ವೀರಣ್ಣ ಅವರು ಹೊರಬೇಕಾಗಿದ್ದರಿಂದ ಶಿಕ್ಷಣವನ್ನು ಮುಂದುವರಿಸದೆ ಮರಳಿ ಮೂಡಲಗಿಗೆ ಬಂದು ತಂದೆಯ ಉದ್ಯೋಗ ಮತ್ತು ಕೃಷಿ ಕಾಯಕದಲ್ಲಿ ತೊಡಗಿ ಪ್ರಗತಿಯನ್ನು ಸಾಧಿಸಿದರು.

 

ಶಿಕ್ಷಣ ಪ್ರೀತಿ: ವೀರಣ್ಣ ಹೊಸೂರ ಅವರಿಗೆ ತಮ್ಮ ಉದ್ಯೋಗ ಮತ್ತು ಕೃಷಿ ಕಾಯಕದೊಂದಿಗೆ ಶಿಕ್ಷಣದ ಬಗ್ಗೆ ಅಪಾರ ಪ್ರೀತಿ, ಕಾಳಜಿಯನ್ನು ಹೊಂದಿದ್ದರು. ಮೂಡಲಗಿ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡಬೇಕು ಎನ್ನುವ ಕನಸು ಇತ್ತು. ಅದಕ್ಕಾಗಿ

ಮೂಡಲಗಿಯಲ್ಲಿ ಈಗಾಗಲೇ ಅಸ್ಥಿತ್ವದಲ್ಲಿದ್ದ ವಿ.ಬಿ. ಸೋನವಾಲಕರ ಆಂಗ್ಲ ಮಾಧ್ಯಮ ಶಾಲೆಯನ್ನು ಸುಧಾರಣೆ ಮಾಡಿ ಅದನ್ನು ಮುಂದುವರಿಸಿಕೊಂಡು ಬರುವಲ್ಲಿ ಹಗಲಿರುಳು ಶ್ರಮಿಸಿದರು. ಶಾಲೆಯಲ್ಲಿ ಶೈಕ್ಷಣಿಕ ಗುಣಮಟ್ಟ ವೃದ್ಧಿಸುವ ಸಲುವಾಗಿ ಹಲವಾರು ಹೊಸ ಪ್ರಯೋಗಗಳನ್ನು ಮಾಡಿದರಲ್ಲದೆ ಮೂಡಲಗಿ ಭಾಗದಲ್ಲಿ ಶಾಲೆಯಲ್ಲಿ ಡಿಜಿಟಲ್ ಕ್ಲಾಸ್‌ರೂಮ್‌ಗಳನ್ನು ಅನುಷ್ಠಾನಗೊಳಿಸಿದ ಮೊದಲಿಗರೆನ್ನುವ ಹೆಗ್ಗಳಿಕೆ ಅವರದು.

ಮೂಡಲಗಿ ಮತ್ತು ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡುವಲ್ಲಿ ಅವರ ಪರಿಶ್ರಮವು ಅಪೂರ್ವವಾದದ್ದು. ವಿ.ಬಿ. ಸೋನವಾಲಕರ ಶಾಲೆಯಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ವೈದ್ಯರು, ಎಂಜಿನಿಯರ್‌ಗಳಾಗಿದ್ದಾರೆ. ವಿದೇಶಗಳಲ್ಲಿ ಮತ್ತು ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳಾಗಿ ಬದುಕು ಕಟ್ಟಿಕೊಂಡಿದ್ದಾರೆ. ವಿಬಿಎಸ್ ಆಂಗ್ಲ ಮಾಧ್ಯಮ ಶಾಲೆಗೆ ತಮ್ಮ ಸ್ವಂತ ನಿವೇಶನದಲ್ಲಿ ಸುಸಜ್ಜಿತವಾದ ಮತ್ತು ಕೇಂದ್ರಿಯ ಶಿಕ್ಷಣ ಮಂಡಳಿ ನಿಯಮಾನುಸಾರ ೨-೩ ಕೋಟಿ ಖರ್ಚು ಮಾಡಿ ಸುಸಜ್ಜಿತವಾದ ಕಟ್ಟಡವನ್ನು ಕಟ್ಟಿದ್ದಾರೆ. ಶಿಕ್ಷಣಕ್ಕಾಗಿ ಇಷ್ಟೋಂದು ಸ್ವಂತ ಹಣವನ್ನು ಖರ್ಚು ಮಾಡಿದ್ದು ಅವರ ಶಿಕ್ಷಣ ಪ್ರೀತಿಯನ್ನು ಬಿಂಬಿಸುತ್ತದೆ. ಪ್ರತಿಷ್ಠಿತ ಮೂಡಲಗಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾಗಿ ಹಾಗೂ ಶಿವರಾಮ ದಾದಾ ಶಾಲೆಗೆ ಪುನ:ಶ್ಚೇತನ ನೀಡುವ ಮೂಲಕ ಶಿಕ್ಷಣ ಬೆಳವಣಿಗೆಗ ಅನುಪಮ ಸೇವೆ ಸಲ್ಲಿಸಿದ್ದಾರೆ.

ವೀರಣ್ಣ ಹೊಸೂರ ಅವರು ಮೂಡಲಗಿಯ ಪುರಸಭೆಯ ಅಧ್ಯಕ್ಷರಾಗಿ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿರುವುದು ಅವರ ಸಾಮಾಜಿಕ ಕಳಕಳಿಯನ್ನು ತೋರಿಸುತ್ತದೆ. ಅವರು ಪುರಸಭೆಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮೂಡಲಗಿಯಲ್ಲಿ ಬರಗಾಲದಿಂದಾಗಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿತ್ತು. ಅಂಥ ಸಂದರ್ಭದಲ್ಲಿ ಹಲವಾರು ಕೊಳವೆ ಬಾವಿಗಳನ್ನು ತೆಗಿಯಿಸಿ ನೀರಿನ ಮೂಲಗಳನ್ನು ಹುಡುಕಿದರು. ನೀರು ದೊರೆಯುವ ಕೊಳವೆ ಬಾವಿಗಳನ್ನು ಹುಡುಕಿ ಅವುಗಳಿಂದ ನೀರನ್ನು ಸಂಗ್ರಹಿಸಿ ಮೂಡಲಗಿ ಪಟ್ಟಣದ ಜನರಿಗೆ ಪೂರೈಸುವ ಮೂಲಕ ಆಧುನಿಕ ಭಗೀರಥ ಎನಿಸಿಕೊಂಡಿರುವುದನ್ನು ಜನರು ನೆನಪಿಸಿಕೊಳ್ಳುತ್ತಾರೆ.

ಮೂಡಲಗಿಯಲ್ಲಿ ಆಧ್ಯಾತ್ಮಿಕ ಸತ್ಸಂಗ ಪರಂಪರೆಗೆ ಪುಷ್ಟಿ ನೀಡಿದ ಕೀರ್ತಿ ವೀರಣ್ಣ ಹೊಸೂರ ಅವರಿಗೆ ಸಲ್ಲುತ್ತದೆ. ಕಳೆದ ಮೂರು ದಶಕಗಳಿಂದ ಆಧ್ಯಾತ್ಮಿಕ ಸಮಾನ ಮನಸ್ಕರೊಂದಿಗೆ ಸಂಘಟಿಸಿ ಬೀದರದ ಪೂಜ್ಯ ಶಿವಕುಮಾರ ಸ್ವಾಮೀಜಿಗಳು ಸೇರಿದಂತೆ ಅನೇಕ ಮಹಾತ್ಮರನ್ನು ಕರೆಯಿಸಿ ವಿಶ್ವಶಾಂತಿಗಾಗಿ ಸತ್ಸಂಗ ಮಾಡುವ ಮೂಲಕ ಆಧ್ಯಾತ್ಮಿಕ ಪರಂಪರೆಯನ್ನು ಬೆಳಿಸಿದ್ದಾರೆ. ಮಧ್ಯದಲ್ಲಿ ಕೆಲವು ಕಾರಣದಿಂದ ಸ್ಥಗಿತಗೊಂಡಿದ್ದ ಸತ್ಸಂಗವನ್ನು ಕಳೆದ ನಾಲ್ಕು ವರ್ಷಗಳಿಂದ ಪುನ: ಮುಂದುವರಿಸಿಕೊಂಡು ಬಂದಿದ್ದಾರೆ.

ಮೂಡಲಗಿಯಲ್ಲಿ ನೂತನವಾಗಿ ನಿರ್ಮಿಸಿತ್ತಿರುವ ಸಾಯಿ ಮಂದಿರದ ಕಾಂಕ್ರಿಟ್ ಸ್ಲಾಬ್‌ದ ನಿರ್ಮಿಸುವ ಸಲುವಾಗಿ ರೂ.೧೫ ಲಕ್ಷ ಭಕ್ತಿ ಕಾಣಿಕೆಯನ್ನು ನೀಡಿರುವುದು ಅವರ ದೈವಭಕ್ತಿಯನ್ನು ಬಿಂಬಿಸುತ್ತದೆ.

ಕ್ರೀಡೆ, ಸಾಂಸ್ಕೃತಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಮತ್ತು ಕೌಟುಂಬಿಕವಾಗಿ ಕಷ್ಟದಲ್ಲಿರುವ ಅನೇಕ ಜನರಿಗೆ ಕೊಡಗೈ ದಾನಿಯಾಗಿ ವೀರಣ್ಣ ಹೊಸೂರ ಅವರು ಕೈಹಿಡಿದಿದ್ದಾರೆ.

ನೇರ ನುಡಿ, ನಿಷ್ಟುರತೆಯ ವೀರಣ್ಣ ಹೊಸೂರ ಅವರದು ಮಗುವಿನ ಮನಸ್ಸು. ಪ್ರೀತಿಗೆ ಪ್ರೀತಿ ಕೊಡುವ, ಹೆಗಲಿಗೆ ಹೆಗಲು ಕೊಡುವ ಸಹೃದಯದ ವ್ಯಕ್ತಿತ್ವ ಅವರದಾಗಿತ್ತು. ವೀರಣ್ಣ ಹೊಸುರ ದೈಹಿಕವಾಗಿ ಅಗಲಿದ್ದರೂ ಸಹ ಅವರು ಹುಟ್ಟುಹಾಕಿದ್ದ ಸಂಸ್ಥೆಗಳು, ಮಾಡಿರುವ ಸಮಾಜಮುಖಿ ಕಾರ್ಯಗಳ ಮೂಲಕ ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಸದ್ಗುಣಿ ಪತ್ನಿ ಸುನಿತಾ ಪತಿಯ ನೆರಳಾಗಿದ್ದರೆ, ಪುತ್ರ ಶಿವು ಮತ್ತು ಶ್ರಾವಣಿ ಸಹ ತಂದೆಯ ಅನುರೂಪರಾಗಿದ್ದಾರೆ.

ಇಂದು ದಿನಾಂಕ ೨೬, ಮೇ, ೨೦೨೩ರಂದು ವೀರಣ್ಣ ಹೊಸೂರ ಅವರ ಅಗಲಿಕೆಗೆ ಅವರ ಸ್ವ-ಗೃಹದಲ್ಲಿ ಕುಟುಂಬದವರು ಶಿವಗಣಾರಾಧನೆ ಏರ್ಪಡಿಸಿರುವರು.

By BPN

Leave a Reply

Your email address will not be published. Required fields are marked *