ಸಮಸ್ಯೆಯ ಮಗು
ಅವತ್ತು ದಾಸ್ ಆಫೀಸಿನಿಂದ ಬಂದು ಬೇಗ ಊಟ ಮಾಡಿ ಸುಸ್ತಾಗಿದೆ ಅಂತ ಟಿವಿ ನೋಡೊದನ್ನ ಕ್ಯಾನ್ಸಲ್ ಮಾಡಿದನು. ಮಲಗೋಣ ಅಂತ ಸಿದ್ದವಾಗ್ತ ಇರುವಾಗಲೇ ಅಡುಗೆ ಮನೆಯಿಂದ ಜೋರಾಗಿ ಗಲಾಟೆ ಕೇಳಿಸಿತು.ಟಬ್ಬು ಅಜ್ಜಿಯ ಜೊತೆ ರಗಳೆ ಮಾಡುತ್ತಿದ್ದಾಳೆ.ಯಾವಾಗ ಈ ಟಬ್ಬು ಸರಿಹೋಗುತ್ತಾಳೊ ಅಂದು ಕೊಳ್ಳುತ್ತಾ ,ಟಬ್ಬುವಿನ ಗಲಾಟೆಗೂ ತನಗೂ ಯಾವ ಸಂಬಂಧವೂ ಇಲ್ಲ ಎಂಬಂತೆ ಮಡದಿ ಮಗನಿಗೆ ಹೋವರ್ಕ್ ಮಾಡಿಸುತ್ತಾ ಕುಳಿತಿದ್ದನ್ನು ನೋಡಿ ನಿಟ್ಟುಸಿರು ಬಿಡುತ್ತಾ ಇನ್ನೂ ಅವಳ ರಗಳೆ ನಿಂತಿಲ್ಲ.ಟಬ್ಬು ಇವತ್ಯಾಕೊ ತುಂಬಾ ರಗಳೆ ಮಾಡ್ತಾ ಇದ್ದಾಳೆ. ಇನ್ನು ಇವತ್ತು ಬೇಗ ಮಲಗಿದ ಹಾಗೆಯೇ ಎಂದು ಕೊಂಡ ದಾಸ್ ರೂಮಿನಿಂದ ಹೊರ ಬಂದು ಅಡುಗೆ ಮನೆಯತ್ತ ನಡೆದ.
“ನೋಡೊ, ಇವಳನ್ನ, ನುಗ್ಗೆಕಾಯಿ ಸಾಂಬಾರ್ ಅಂತ ಊಟಾನೇ ಬೇಡಾ ಅಂತ ಇದ್ದಾಳೆ. ಬೆಳಗ್ಗೆ ಲಂಚ್ ಬಾಕ್ಸ್‍ಗೆ ಹಾಕಿದ್ದ ತಿಂಡಿನೂ ತಿಂದಿಲ್ಲ. ಸಂಜೆ ಸ್ನ್ಯಾಕ್ಸ್ ಕೂಡಾ ಮುಟ್ಟಿಲ್ಲ.ಈಗ ಊಟನೂ ಬೇಡ ಅಂತ ಇದ್ದಾಳೆ. ನುಗ್ಗೆಕಾಯಿ ಸಾಂಬರನ್ನ ಇವಳು ಮೊದಲ್ಲೆಲ್ಲ ತಿಂನ್ತ ಇರಲಿಲ್ಲವಾ, ಈಗಾ ನೋಡು ಹೇಗೆ ಹಠ ಮಾಡ್ತಾ ಇದ್ದಾಳೆ. ದಿನಾ ಒಂದೊಂದು ರಗಳೆ ಇವಳ್ದು” ಬೇಸರದ ಧ್ವನಿಯಲ್ಲಿ ಸುಮಿತ್ರ ಮಗನಿಗೆ ವರದಿ ಒಪ್ಪಿಸಿದರು.
“ನಂಗೆ ಊಟಬೇಡ ಹೋಗೇ” ಅಂತ ಜೋರಾಗಿ ಅಳುತ್ತಿದ್ದ ಟಬ್ಬು ಅಜ್ಜಿಯನ್ನು ಎಳೆದಾಡುತ್ತಿರುವುದನ್ನು ನೋಡಿ ದಾಸ್ ಅವಳನ್ನು ಎತ್ತಿಕೊಂಡು ಮುದ್ದಿಸುತ್ತಾ ಸಮಾಧಾನಿಸಲು ಪ್ರಯತ್ನಿಸಿದ.
“ಬೆಳಗ್ಗೆಯಿಂದ ಹಸ್ಕೊಂಡಿದ್ದೆಯಲ್ಲ, ಖಾಯಲೆ ಬರಲ್ವ ನಿಂಗೆ, ನೋಡು ಚಿನ್ನು, ಚೆನ್ನಾಗಿ ಊಟ ಮಾಡಿದರೆ ತಾನೇ, ತಿಂಡಿ ತಿಂದರೆ ತಾನೇ ನಿಂಗೆ ಶಕ್ತಿ ಬರೋದು, ಶಕ್ತಿ ಇದ್ರೆ ತಾನೇ ಚೆನ್ನಾಗಿ ಓದಿ ಫಸ್ಟ್ ರ್ಯಾಂಕ್ ಬರೋಕೆ ಆಗೋದು, ನೀನು ಹೀಗೆಲ್ಲಾ ಮಾಡಿದರೆ ಅಜ್ಜಿಗೆ ಕಷ್ಟವಾಗುತ್ತೆ ಅಲ್ವಾ. ನೋಡು, ಚೋಟು ಆಗಲೆ ಊಟಾ ಮಾಡಿ ಹೋಂವರ್ಕ್ ಮಾಡ್ತಾ ಇದ್ದಾನೆ. ಅವನ ತರಾ ಜಾಣ ಆಗಲ್ವಾ ನೀನು.ಊಟಾ ಮಾಡು ಟಬ್ಬು” ಟಬ್ಬು ವನ್ನು ರಮಿಸುತ್ತಾ ಅವಳನ್ನು ಟೇಬಲ್ ಮೇಲೆ ಕೂರಿಸಿ ಅಳುತ್ತಿದ್ದ ಅವಳ ಕಣ್ಣೀರು ಒರೆಸಿ ಮುದ್ದು ಮಾಡುತ್ತಾ ತಟ್ಟೆಯಲ್ಲಿದ್ದ ಊಟವನ್ನು ತುತ್ತು ಮಾಡಿ ತಿನ್ನಿಸಲು ಪ್ರಯತ್ನಿಸಿದನು. ”
“ಚೋಟುಗೆ ಅವರಮ್ಮ ಊಟ ಮಾಡಿಸುತ್ತಾರೆ, ನಂಗ್ಯಾಕೆ ನಮ್ಮಮ್ಮ ಊಟಾ ಮಾಡಿಸೊಲ್ಲ” ಅಳುತ್ತಲೇ ಟಬ್ಬು ಮಾಮನನ್ನು ಕೇಳಿದಳು.
“ನಿಮ್ಮ ಅಮ್ಮ ಇಲ್ಲಿ ಇಲ್ವಲ್ಲ ಟಬ್ಬು, ಶನಿವಾರ ಬರ್ತಳಲ್ಲ ಆಗಾ ಅವಳ ಕೈಲೇ ಊಟಾ ಮಾಡಿಸಿಕೊಳ್ಳುವಂತೆ, ಅಷ್ಟಕ್ಕೂ ನೀನೇನು ಇನ್ನು ಸಣ್ಣವಳಾ, ನಿಂಗ್ಯಾಕೆ ಬೇರೆಯವರು ಊಟಮಾಡಿಸ ಬೇಕು, ನಮ್ಮ ಟಬ್ಬು ಎಷ್ಟು ದೊಡ್ಡವಳಾಗಿದ್ದಾಳೆ, ಈ ಅಮ್ಮಂಗೆ ಗೊತ್ತಾಗುವುದೇ ಇಲ್ಲಾ, ಅವಳು ತಾನೇ ಊಟ ಮಾಡುತ್ತಾಳೆ, ಅಲ್ವಾ ಮುದ್ದು ” ಮುದ್ದು ಮಾಡಿದನು. ಮಾಮನ ಮುದ್ದಿಗೆ ಕರಗಿದ ಟಬ್ಬು ಬಿಕ್ಕಳಿಸುತ್ತಲೆ ಊಟಮಾಡಿದಳು. ಅವತ್ತೇನೊ ಟಬ್ಬು ಸಮಾಧಾನ ಹೊಂದಿ ಶಾಂತಳಾಗಿ ಮಲಗಿದಾಗ ಸುಮಿತ್ರಮ್ಮನಿಗೆ ಯುದ್ಧವೊಂದರಲ್ಲಿ ಜಯಿಸಿದಷ್ಟು ಸಮಾಧಾನವಾಯಿತು.
“ದಾಸು ನೀನೇನೊ ಇವತ್ತು ಇವಳಿಗೆ ಸಮಾಧಾನ ಮಾಡಿದೆ, ಆದ್ರೆ ನಾಳೆ ನೀನು ಊರಿಗೆ ಹೋದ ಮೇಲೆ ನಾನೇನು ಮಾಡಲಪ್ಪ” ಚಿಂತಿತರಾಗಿ ನುಡಿದರು.
“ನಂಗೂ ಅದೇ ಚಿಂತೆ ಆಗ್ತಾ ಇದೆಯಮ್ಮ, ಆದ್ರೆ ನಾನು ನಾಳೆ ಬೆಂಗಳೂರಿಗೆ ಹೋಗಲೇ ಬೇಕಲ್ಲ. ಆಫೀಸ್ ಕೆಲ್ಸ ಆಗಲ್ಲ ಅನ್ನೊಕೆ ಆಗಲ್ಲ.ನಾಲ್ಕು ದಿನವಷ್ಟೆ ಅಲ್ವಾ, ಬೇಗ ಬಂದು ಬಿಡುತ್ತೆನೆ.ರೇಖ ಇರ್ತಾಳಲ್ವಾ, ಹೇಗೊ ಆಗುತ್ತೆ ಬಿಡು” ಅಂತ ದಾಸ್ ಅಮ್ಮನನ್ನು ಸಮಾಧಾನಿಸಿದ. ಟಬ್ಬುವಿನ ಮೇಲೆ ರೇಖಾಗೂ ಅಸಹನೆ ಎಂಬುದನ್ನು ಬಲ್ಲ ದಾಸ್ ಅಮ್ಮನ ಬಗ್ಗೆ ಪರಿತಾಪ ಪಟ್ಟ. ಟಬ್ಬುವನ್ನು ನಿಭಾಯಿಸಲಾರದೆ ಬಳಲುತ್ತಿದ್ದ ಅಮ್ಮನ ಬಗ್ಗೆ ಕನಿಕರ ಉಕ್ಕಿ ಬಂತು. ಸೊಸೆ ಮಾಡಿಟ್ಟಿದ್ದನ್ನು ತಿಂದುಂಡು ಆರಾಮಾಗಿ ಇರಬೇಕಾದ ಈ ವಯಸ್ಸಿನಲ್ಲಿ ಮೊಮ್ಮಗಳನ್ನು ನೋಡಿಕೊಳ್ಳುತ್ತ ಅವಳ ಕೋಪ, ತಾಪ, ಹಟವನ್ನು ಸಹಿಸಿಕೊಳ್ಳಲಾರದೆ ದಿನ ದಿನಕ್ಕೆ ಸೊರಗಿ ಹೋಗುತ್ತಿರುವುದನ್ನು ನೋಡಲೂ ಆಗದೆ, ಬಿಡಲೂ ಆಗದೆ ತಾನೂ ಒಳಗೊಳಗೆ ಚಡಪಡಿಸಿದ.
ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಹೊರಡಬೇಕಾಗಿರುವುದರಿಂದ “ಅಮ್ಮ ನಾನು ಮಲಗುತ್ತೆನೆ, ನೀನೂ ಊಟಾ ಮಾಡಿ ಮಲಗಿ ಬಿಡು” ಎಂದು ಹೇಳಿ ಮಲಗಲು ಹೋದನು. ಮಗುವನ್ನು ಮಲಗಿಸುತ್ತಿದ್ದ ರೇಖ ಅಡುಗೆ ಮನೆಯಲ್ಲಾದ ಟಬ್ಬುವಿನ ಗಲಾಟೆ ಬಗ್ಗೆ ಒಂದೂ ಮಾತಾಡದೆ ತನ್ನ ಕಾರ್ಯದಲ್ಲಿ ಮಗ್ನಳಾಗಿದ್ದನ್ನು ಕಂಡು ದಾಸ್ ತಾನೂ ಕೂಡಾ ಏನನ್ನು ಮಾತಾಡದೆ ಅವಳ ಪಕ್ಕ ಉರುಳಿದ. ಟಬ್ಬುವಿನ ಕೋಪ ಹಟ,ಮೊಂಡುತನ ಎಲ್ಲವೂ ರೇಖಳನ್ನೂ ರೋಸಿಹೋಗುವಂತೆ ಮಾಡಿದೆ ಎಂದು ತಿಳಿದು ಕೊಂಡಿದ್ದ ದಾಸ್ ಯಾವುದನ್ನೂ ಕೆದಕದೆ ನಿದ್ರೆ ಮಾಡಲು ಪ್ರಯತ್ನಿಸಿದ.
ಬೆಳಗ್ಗೆ ಬೇಗನೆ ಎದ್ದು ಹೊರಟ ದಾಸ್ ಮಡದಿಗೆ “ರೇಖ, ನಿನ್ನ ಪಾಡಿಗೆ ನೀನು ಇದ್ದು ಬಿಡಬೇಡಾ, ನಾನೂ ಇರಲ್ಲ. ಅಮ್ಮ ಒಬ್ಳೆ ಟಬ್ಬುನಾ ಸುಧಾರಿಸೋಕೆ ಆಗಲ್ಲ.ನೀನು ಸ್ವಲ್ಪ ಹೆಲ್ಪ್ ಮಾಡು, ಮೊದಲೇ ಟಬ್ಬುಗೆ ಅಪ್ಪ ಅಮ್ಮಾ ತನ್ನ ಜೊತೆ ಇಲ್ಲ ಅಂತ ಕೋಪ,ಕೋಪದಲ್ಲಿ ಏನಾದ್ರೂ ಹೆಚ್ಚು ಕಡಿಮೆ ಮಾಡಿಕೊಂಡರೆ ನಮಗೆ ಕೆಟ್ಟ ಹೆಸರು. ಸಿಟ್ಟಿನಲ್ಲಿ ಟಬ್ಬು ಮೊನ್ನೆ ತಲೆನಾ ಗೋಡೆಗೆ ಬಡಿದು ಕೊಂಡು ರಕ್ತ ಬರಿಸಿಕೊಂಡಿದ್ದನ್ನ ಮರೆಯ ಬೇಡಾ, ಆದಷ್ಟು ಅವಳಿಗೆ ಕೋಪ ಬರದ ಹಾಗೆ ನೋಡಿಕೊಳ್ಳಿ. ಒಂದು ಮಗುನಾ ಸುಧಾರಿಸೊಕೆ ಆಗಲ್ವಾ ಅಂತ ನಿಷ್ಠೂರ ಮಾಡ್ತರೆ, ಜೋಪಾನ. ಚೋಟುನ ಹೊರಗೆ ಆಡೊಕೆ ಒಬ್ಬನನ್ನೆ ಕಳಿಸ ಬೇಡಾ, ಅವನ ಕೈಕಾಲು ಒಂದು ಕಡೆ ನಿಲ್ಲೊಲ್ಲ. ಜೋಪಾನ ,ಇಬ್ರೆ ಇರ್ತಿರಾ” ಅಂತ ಪದೇ ಪದೇ ಹೇಳುತ್ತಾಮಡದಿಗೆ ಆ ಬಗ್ಗೆ ಮನನ ಮಾಡಿ ಹೊರಟ.
ದಾಸ್ ಹೋಗಿದ್ದ ದಿನ ಮನೆಯಲ್ಲಿ ಯಾವ ಗಲಾಟೆಯೂ ನಡೆಯದೆ ದಿನ ಕಳೆಯಿತು. ರೇಖಾ ಕೂಡಾ ಗಂಡನ ಮಾತನ್ನು ನೆನಪಿನಲ್ಲಿ ಇಟ್ಟುಕೊಂಡು ಕೊಂಚ ಹೆಚ್ಚಾಗಿಯೇ ಟಬ್ಬುವಿ ಬಗ್ಗೆ ಮುತುವರ್ಜಿ ವಹಿಸಿದಳು. ಟಬ್ಬುವಿಗೆ ಪೂಸಿ ಹೊಡೆಯುತ್ತಾ ತಿಂಡಿ ತಿನ್ನಿಸಿ ,ಶಾಲೆಗೆ ಸಾಗಹಾಕಿದಳು. ಸಂಜೆ ಅವಳಿಗಿಷ್ಟವಾದ ತಿಂಡಿ ಮಾಡಿ ತಿನ್ನಿಸಿ, ಇಬ್ಬರನ್ನೂ ಹತ್ತಿರದ ಪಾರ್ಕಿಗೆ ಕರೆದೊಯ್ದು ಆಟವಾಡಿಸಿದಳು.ಆಟವಾಡಿ ದಣಿದಿದ್ದ ಟಬ್ಬು ಮತ್ತು ಚೋಟು ಹೆಚ್ಚು ಹೇಳಿಸಿಕೊಳ್ಳದೆ ಊಟ ಮಾಡಿ ಹೋವರ್ಕ್ ಮುಗಿಸಿ ಮಲಗಿ ಬಿಟ್ಟರು.
ಆದರೆ ಮಾರನೆ ದಿನ ರೇಖಾ ತಂದೆಗೆ ಹುಷಾರಿಲ್ಲ ಅಂತ ಫೋನ್ ಬಂದ ಕೂಡಲೆ ಅತ್ತೆಗೂ, ದಾಸ್‍ಗೂ ತಿಳಿಸಿ ಮಗನನ್ನು ಕರೆದು ಕೊಂಡು ತೌರಿಗೆ ಹೊರಟು ಬಿಟ್ಟಳು. ಮನೆಯಲ್ಲಿ ಸುಮಿತ್ರ ಮತ್ತು ಟಬ್ಬು ಇಬ್ಬರೆ. ಮತ್ತೆ ಟಬ್ಬುವಿನ ಹಟ ಮೊಂಡಾಟ ಶುರುವಾಯಿತು. ನೆವಗಳನ್ನು ತೆಗೆದು ಸಣ್ಣ ಮಗುವಿನಂತೆ ರಚ್ಚೆ ಹಿಡಿಯುತ್ತಿದ್ದಳು. ಅಂದೇನೊ ಹರಸಾಹಸ ಪಟ್ಟು ಅವಳು ಹೇಳಿದಂತೆಲ್ಲ ಕೇಳುತ್ತಾ ಸುಮಿತ್ರ ಮೊಮ್ಮಗಳನ್ನು ನೋಡಿಕೊಂಡರು. ಹೇಗೊ ಆ ದಿನವೂ ಕಳೆಯಿತು. ಆದರೆ ಮಾರನೇ ದಿನ ಟಬ್ಬುನಿನ ರಂಪಾಟ ಮತ್ತೆ ಶುರುವಾಯಿತು. ಸಣ್ಣ ಸಣ್ಣದಕ್ಕೆಲ್ಲ ಕಿರುಚಾಡುತ್ತ ಕೂಗಾಡುತ್ತಾ ತಿಂಡಿನೂ ತಿನ್ನದೆ ಹಾಗೆಯೇ ಶಾಲೆಗೆ ಹೋಗಿ ಬಿಟ್ಟಾಗ ಸುಮಿತ್ರ ನೊಂದು ಕೊಂಡರು. ಸಂಜೆ ಟಬ್ಬು ಬರುವುದನ್ನೇ ಕಾಯುತ್ತಾ ಸೊಸೆ ಮಾಡಿದಂತೆ ಅವಳಿಗಿಷ್ಟವಾದ ತಿಂಡಿಯನ್ನೇ ಮಾಡಿ ತಿನ್ನಿಸಲು ಹೋದರೆ ನನಗೆ ಬೇಡಾ ನೀನೇ ತಿನ್ನು ಅಂತ ಮುನಿಸಿನಿಂದ ರೂಮ್ ಸೇರಿಬಿಟ್ಟಳು. ರಾತ್ರಿಯಾದರೂ ಟಬ್ಬುವಿನ ಹಠ ಕಡಿಮೆಯಾಗದೆ ಮುಂದುವರೆದಿತ್ತು.
” ಟಬ್ಬು ಏನೂ ತಿಂದಿಲ್ಲ, ಹಿಂಗಾದ್ರೆ ಹೆಂಗೆ, ಊಟನಾದ್ರೂ ಮಾಡು ಬಾ” ಅಂತ ಕರೆದರೆ ಮಾತಾಡದೆ ಟಿವಿ ನೋಡ್ತಾ ಟಬ್ಬು ಅಜ್ಜಿಯ ಮಾತುಗಳು ಕೇಳಿಸಲಿಲ್ಲ ಅನ್ನೊ ಹಾಗೆ ಕುಳಿತಿದ್ದಳು. ತನ್ನ ಮಾತಿಗೆ ಲಕ್ಷ ಕೊಡದೆ ಟಿವಿ ನೋಡುತ್ತಿದ್ದ ಟಬ್ಬುವುನ ಮೇಲೆ ಸುಮಿತ್ರಾಗೆ ಕೋಪವುಕ್ಕಿ ಬಂತು.
” ಸುಮ್ನೆ ಟಿವಿ ನೋಡ್ತಾ ಕೂತ್ಕೊಂಡಿದ್ದಿಯಲ್ಲ, ನಿಮ್ಮಪ್ಪ ನಿಂಗೆ ಅಂತ ಈ ಟಿವಿ ತಂದು ಕೊಟ್ಟು ಹಾಳು ಮಾಡಿದ್ರು, ಟಿವಿ ಆಫ್ ಮಾಡಿ ಹೋಂವರ್ಕ್ ಮಾಡ್ಕೊ ಬಾರದೆ” ಅಂತ ರೇಗಿದರು.
“ನಾನು ಹೋವರ್ಕ್‍ನೂ ಮಾಡಲ್ಲ, ಊಟಾನೂ ಮಾಡಲ್ಲ, ಹೋಗು ನೀನು” ಮೊಂಡಾಟ ಮಾಡಿದಳು.
ಅವಳ ಮೊಂಡಾಟಕ್ಕೆ ರೋಸಿ ಹೋಗಿದ್ದ ಸುಮಿತ್ರ ಟಿವಿ ಆಫ್ ಮಾಡಿ ಅವಳನ್ನು ಹೊರಗೆ ಎಳೆದುಕೊಂಡು ಬಂದು “ಹಠಮಾಡ್ತಿಯಾ, ಮನೆಯಿಂದ ಹೊರಗೆ ಹಾಕ್ತಿನಿ ಇರು” ಅಂತ ಜೋರು ಮಾಡಿದರು, ಟಿವಿ ಆಫ್ ಮಾಡಿದಕ್ಕೆ ಕಿರುಚಾಡುತ್ತ ” ನಾನ್ಯಾಕೆ ಮನೆ ಬಿಟ್ಟು ಹೋಗಲಿನೀನೇ ಮನೆ ಬಿಟ್ಟು ಹೋಗೆ” ಅಂತ ಕೂಗುತ್ತಿದ್ದ ಟಬ್ಬುವನ್ನು ಕಂಡು ಕೋಪದಿಂದ ” ನನ್ನೇ ಮನೆ ಬಿಟ್ಟು ಹೋಗು ಅಂತಿಯಾ, ತಾಳು ನಿಂಗೆ ಮಾಡ್ತಿನಿ. ಇವತ್ತೇಲ್ಲಾ ಹೊರಗೆ ಇದ್ದರೆ ನಿಂಗೆ ಬುದ್ದಿ ಬರುತ್ತೆ” ಅಂತ ಸುಮಿತ್ರ ಟಬ್ಬುವನ್ನು ಗೇಟಿನಿಂದಾಚೆ ತಳ್ಳಿ ಗೇಟು ಹಾಕಿಕೊಂಡರು.
ಸಮಾಧಾನ ಮಾಡುತ್ತಾ ಮುದ್ದು ಮಾಡಿ ಊಟಾ ಮಾಡಿಸಲು ಮುದ್ದಿನ ಮಾಮ ಇವತ್ತು ಮನೆಯಲ್ಲಿ ಇಲ್ಲ. ಹಾಗಂತಲೇ ಅವಳ ಹಠ ಜಾಸ್ತಿಯಾಗಿತ್ತು
“ನಿಂದಾ ಮನೆ, ನನ್ಯಾಕೆ ಆಚೆಗೆ ಹಾಕ್ತಿಯಾ” ಅಂತ ಗೇಟು ಬಡಿಯುತ್ತಾ ಟಬ್ಬು ಕೂಗಿಕೊಳ್ಳುತ್ತಿರುವುದು ಇಡಿ ರಸ್ತೆಗೆ ಕೇಳಿಸುತ್ತಿತ್ತು. ಇದು ಹೊಸದೇನು ಅಲ್ಲವಾದ್ದರಿಂದ ನೆರೆಹೊರೆಯವರಾರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಇದು ಪ್ರತಿದಿನ ನಡೆಯುತ್ತಲೇ ಇರುವ ಪುಕ್ಕಟೆ ಶೋ ಅಂತ ಎಲ್ಲರಿಗೂ ಗೊತ್ತಿತ್ತು. ಒಂದಿಷ್ಟು ಕೂಗಾಡಿದ ಮೇಲೆ, ಹೊಟ್ಟೆ ಚುರುಗುಟ್ಟತೊಡಗಿದ ಮೇಲೆ ಅವಳಾಗಿಯೇ ” ಅಜ್ಜಿ ಗೇಟು ತೆಗೆ, ನಂಗೆ ಹಸಿವಾಗ್ತ ಇದೆ, ನಾನು ಗಲಾಟೆ ಮಾಡಲ್ಲ, ನಿನ್ನ ಮನೆ ಬಿಟ್ಟು ಹೋಗು ಅಂತ ಅನ್ನಲ್ಲ, ಸುಮ್ನೆ ಊಟ ಮಾಡ್ತಿನಿ ” ಅಂತ ಗೋಗರೆದ ಮೇಲೆಯೇ ಸುಮಿತ್ರ ಬಾಗಿಲು ತೆರೆದ್ದದ್ದು.
ಟಬ್ಬು ಸುಮಿತ್ರಳ ಮೊಮ್ಮಗಳು, ಮಗಳ ಮಗಳು. ಮಗಳು ವಿನೀತ ಹಾಗು ಅವಳ ಗಂಡ ಇಬ್ಬರೂ ಸಾಪ್ಟವೇರ್ ಇಂಜನೀಯರುಗಳು. ಮಗುವನ್ನು ನೋಡಿಕೊಳ್ಳಲು ಸಾಧ್ಯವಾಗದೆ ಸುಮಿತ್ರಳ ಬಳಿ ಟಬ್ಬುವನ್ನು ಬಿಟ್ಟಿದ್ದರು. ಟಬ್ಬು ಬೆಳೆಯುತ್ತಿದ್ದಂತೆ ಹಠಮಾರಿಯಾಗುತ್ತಿದ್ದಳು. ಮನೆಯಲ್ಲಿರುವಷ್ಟೂ ವೇಳೆಯೂ ಎಲ್ಲದಕ್ಕೂ ಹಟ, ಕೋಪ, ಇವಳ ಈ ಸ್ವಭಾವದಿಂದಾಗಿ ಸುಮಿತ್ರ ಮೊಮ್ಮಗಳನ್ನು ಸುಧಾರಿಸಲಾರದೆ ಹೈರಣಾಗಿ ಹೊಗುತ್ತಿದ್ದರು. ಮನೆಯಲ್ಲಿ ಮಗ, ಸೊಸೆ, ಮೊಮ್ಮಗ ಇದ್ದಾರೆ. ಮಗ ಸೊಸೆಗೇ ಇದು ಇರಿಸು ಮುರಿಸು ತರುತ್ತಿದೆ ಅಂತ ಗೊತ್ತಿದ್ದರೂ, ಹೇಳಿದ ಮಾತು ಕೇಳದ , ಸದಾ ಹಟ ಮಾಡುವ, ದೊಡ್ಡವರು ಅಂತ ಕೂಡಾ ನೋಡದೆ ಮಾವ ಅತ್ತೆ ಅಜ್ಜಿಗೆ ಎದುರುತ್ತರ ಕೋಡುತ್ತಾ, ಎಲ್ಲರಿಗೂ ಬೇಸರ ತರಿಸುವ ಸಮಸ್ಯೆಯ ಮಗುವೇ ಆಗಿಹೋಗಿರುವ ಟಬ್ಬುವನ್ನು ನಿರ್ದಾಕ್ಷಣ್ಯವಾಗಿ ಮಗಳಿಗೆ ” ನಿನ್ನ ಮಗಳನ್ನು ಕರೆದುಕೊಂಡು ಹೋಗು ಅಂತ ಅನ್ನಲಾರದೆ, ಟಬ್ಬುವನ್ನು ನಿಯಂತ್ರಿಸಲೂ ಆಗದೆ ಏನಪ್ಪ ಮಾಡಲಿ ಅಂತ ಸುಮಿತ್ರ ದಿನೇ ದಿನೆ ಚಿಂತಿತಳಾಗುತ್ತಿದ್ದಾರೆ. ಇದು ಹೀಗೆ ಮುಂದುವರಿದರೇ ತಾನು ಸಧ್ಯದಲ್ಲಿಯೇ ಬಿಪಿ, ಶುಗರ್ ಪೇಷಂಟ್ ಆಗಿಬಿಡುತ್ತೆನೆನೋ ಅನ್ನೋ ಆತಂಕದಲ್ಲಿದ್ದಾರೆ.
ಟಬ್ಬುವಿಗೆ ಇಲ್ಲಿರಲು ಬೇಸರ. ತನ್ನ ಎಲ್ಲಾ ಫ್ರೆಂಡ್ಸ್ ತಮ್ಮ ಮಮ್ಮಿ ಡ್ಯಾಡಿಯ ಜೊತೆಯಲ್ಲಿರುವಾಗ ತಾನೇಕೆ ಅಜ್ಜಿಯ ಜೊತೆ ಇರಬೇಕು, ಅಜ್ಜಿಯೇ ಏಕೆ ತನಗೆ ಎಲ್ಲವನ್ನು ಮಾಡಬೇಕು, ನನಗೆ ಮಮ್ಮಿ ಡ್ಯಾಡಿ ಇಲ್ಲವಾ, ಮಾಮ ಅತ್ತೆ ಅವರ ಪಾಪೂನಾ ಅವರೇ ನೋಡಿಕೊಳ್ಳುತ್ತ ಇಲ್ಲವೇ. ಪಾಪು ಜುಮ್ಮಂಥ ಅವನ ಅಪ್ಪನ ಬೈಕಿನಲ್ಲಿ ಸ್ಕೂಲಿಗೆ ಹೋಗ್ತಾನೆ, ನಾನು ಮಾತ್ರ ಸ್ಕೂಲ್ ವ್ಯಾನ್‍ಲ್ಲಿ ಹೋಗ ಬೇಕು. ಪಾಪೂಗೆ ಅವರ ಮಮ್ಮಿ ದಿನಾ ಮುದ್ದು ಮಾಡ್ತರೆ, ಮುದ್ದು ಮಾಡ್ತನೇ ಊಟ ಮಾಡಿಸ್ತರೆ, ಬಟ್ಟೆ ಹಾಕ್ತರೆ. ಹೊರಗೆ ಕರ್ಕೋಂಡು ಹೋಗ್ತರೆ. ನಾನು ಮಾತ್ರ ಈ ಅಜ್ಜಿ ಜೊತೆ ಬೈಯ್ಸಿಕೊಳ್ತ ಊಟಮಾಡಬೇಕು, ಅಜ್ಜಿಗೆ ಸರಿಯಾಗಿ ಹೋಮ್ ವರ್ಕ ಮಾಡಿಸೊಕೂ ಬರಲ್ಲ. ಮಮ್ಮಿ ಆದ್ರೆ ಎಲ್ಲವನ್ನು ಸರಿಯಾಗಿ ಮಾಡಿಸ್ತರೆ. ನಂಗೆ ಮಮ್ಮಿ ಬೇಕು. ಹೊರಗೆ ಸುತ್ತಾಡಿಸಿ, ಸ್ಕೂಲಿಗೆ ಪಪ್ಪನೇ ನನ್ನ ಕರ್ಕೊಂಡು ಹೋಗಬೇಕು, ನಾನು ಮಮ್ಮಿ ಪಪ್ಪನ ಹತ್ರನೇ ಹೋಗ್ತಿನಿ ಅಂತ ಟಬ್ಬುವಿನ ಹಠ.
ಆದ್ರೆ ಬೆಂಗಳೂರಿನಂತ ದೊಡ್ಡ ನಗರದಲ್ಲಿ ಬೆಳಗ್ಗೆ ಬೇಗ ಮನೆ ಬಿಟ್ಟು ರಾತ್ರೆ ತಡವಾಗಿ ಮನೆಗೆ ಬರುವ ಅವಳ ಮಮ್ಮಿ ಪಪ್ಪನ ಪರಿಸ್ಥಿತಿ ಆ ಪುಟ್ಟ ಮನಸ್ಸಿಗೆ ಅರ್ಥವಾಗುತ್ತಿಲ್ಲ, ಎಲ್ಲರಂತೆ ನಾನು ಕೂಡಾ ನನ್ನ ಮಮ್ಮಿ ಪಪ್ಪನ ಜೊತೆ ಇರಬೇಕು ಅಂತ ಅಷ್ಟೇ ಅವಳ ಹಠ. ಆದರೆ ತಮ್ಮ ಮಗಳು ಇಲ್ಲೆಯೇ ಚೆನ್ನಾಗಿ ಇರುತ್ತಾಳೆ ಅನ್ನೊ ನಂಬಿಕೆ ಅವಳ ಹೆತ್ತವರಿಗೆ. ತಮ್ಮೊಂದಿಗೆ ಕರೆದೊಯ್ದರೆ ಟಬ್ಬು ದಿನವಿಡೀ ತಮ್ಮ ಬರುವಿಕೆಗಾಗಿ ಕಾಯುತ್ತಲೇ ಇರಬೇಕಾಗುತ್ತದೆ, ಹೊತ್ತು ಹೊತ್ತಿಗೆ ಊಟ, ತಿಂಡಿ ಮಾಡಿಸುವವರಿಲ್ಲ. ಅವಳ ಹೋಮ್ ವರ್ಕ ಮಾಡಿಸುವುದು, ಶಾಲೆಗೆ ರೆಡಿ ಮಾಡಿ ಕಳಿಸುವುದು, ಅಲ್ಲಿ ಅವಳ ಬಗ್ಗೆ ವಿಚಾರಿಸುವುದು, ಟ್ಯೂಷನ್‍ಗೆ ಕಳಿಸಿ ಕರೆತರುವುದು , ಅವಳ ಆರೋಗ್ಯ ಸರಿಇಲ್ಲದಿದ್ದಾಗ ಅವಳನ್ನು ಆಸ್ಪತ್ರೆಗೆ ಕರೆದೊಯ್ದ ಚಿಕಿತ್ಸೆ ಕೊಡಿಸಿ ಕಾಲಕಾಲಕ್ಕೆ ಔಷಧಿ ನೀಡಿ ಎಚ್ಚರಿಕೆಯಿಂದ ನೋಡಿಕೊಳ್ಳುವುದು, ಅವಳ ಬೇಕು ಬೇಡಗಳನೆಲ್ಲ ನೋಡಿಕೊಳ್ಳುವುದು ತಮ್ಮಿಂದ ಸಾಧ್ಯವೇ ಎಂದು ಆಲೋಚಿಸಿಯೇ ಟಬ್ಬು ವನ್ನು ಇಲ್ಲಿ ಬಿಡಲು ನಿರ್ಧರಿಸಿದ್ದರು. ಅಜ್ಜಿಯ ಪ್ರೀತಿಯ, ವಾತ್ಸಲ್ಯದ ಮಡಿಲಿನಲಿ ತಮ್ಮ ಮಗಳು ಚೆನ್ನಾಗಿ ಬೆಳೆಯುತ್ತಿದ್ದಾಳೆ ಅನ್ನೋ ನೆಮ್ಮದಿಯಿಂದಿರುವಾಗಲೇ ಟಬ್ಬು ಹೊಸ ಸಮಸ್ಯೆಯಾಗುತ್ತಿದ್ದಾಳೆ. ಇದು ವಿನೀತ ಮತ್ತು ಅವಳ ಪತಿಗಷ್ಟೆ ಅಲ್ಲದೇ ಸುಮಿತ್ರಳಿಗೂ ನುಂಗಲಾರದ ತುತ್ತಾಗಿದೆ. ಮನೆಯಲ್ಲಿರುವ ಮಗ ಸೊಸೆಗೂ ಇದು ಇರಿಸು ಮುರಿಸು ತರುತ್ತಿದೆ ಅಂತ ಗೊತ್ತಾಗುತ್ತಿದ್ದರೂ ಏನು ಮಾಡಲು ತೋಚದೆ ಮೊಮ್ಮಗಳನ್ನು ಸಹಿಸಿಕೊಳ್ಳುತ್ತಲೇ ಇದ್ದಾರೆ.
ಅವತ್ತೂ ಹಾಗೇಯೇ ಮೊಮ್ಮಗಳ ಜೊತೆ ಹೊರಗೆ ಬಂದು ನಾಯಿ ಬೆಕ್ಕು ತೋರಿಸುತ್ತ ಊಟಮಾಡಿಸಲು ಪ್ರಯತ್ನಿಸುತಿದ್ದರು. ಊಟ ಮಾಡದ ಅವಳನ್ನು ” ನೀನು ಊಟ ಮಾಡದೆ, ಓದಿಕೊಳ್ಳದೆ ಎಲ್ಲದಕ್ಕೂ ಹಟ ಮಾಡ್ತ ಇದ್ದರೆ ಮನೆಯಿಂದ ಹೊರಗೆ ನಿಲ್ಲಿಸುತ್ತೆನೆ. ನಿನ್ನ ಮನೆಗೆ ಸೇರಿಸುವುದೇ ಇಲ್ಲ. ನಾನು, ಪಾಪು, ಮಾಮ ,ಅತ್ತೆ ಮಾತ್ರ ಈ ಮನೆಯಲ್ಲಿ ಇರ್ತಿವಿ, ಈಗಾ ಊಟಮಾಡದೆ ಇದ್ರೆ ನಾನು ಒಳಗೆ ಹೋಗಿ ಬಾಗಿಲು ಹಾಕಿಕೊಳ್ತನಿ , ಆಗ ನೀನೊಬ್ಬಳೆ ಕತ್ತಲೆಯಲ್ಲಿ ಇರಬೇಕು” ಅಂತ ಹೆದರಿಸಲು ನೋಡಿದರು. ತಕ್ಷಣವೇ ಟಬ್ಬು ” ನಾನ್ಯಾಕೆ ಹೊರಗೆ ಇರಲಿ. ನನ್ಯಾಕೆ ಮನೆಗೆ ಸೇರಿಸೊಲ್ಲ. ಈ ಮನೆ ಕಟ್ಟೋಕೆ ನಮ್ಮ ಮಮ್ಮಿ ಪಪ್ಪ ದುಡ್ಡು ಕೊಟ್ಟಿದ್ದಾರೆ. ಈ ಮನೆ ನಂದು. ನಿಮ್ದಲ್ಲ” ಗುಂಡಿನಂತೆ ಆಡಿಬಿಟ್ಟಳು. ಸುಮಿತ್ರ ದಂಗಾಗಿ ನಿಂತು ಬಿಟ್ಟರು.
ಆರು ವರ್ಷದ ಮಗುವಿನ ಬಾಯಿಯಲ್ಲಿ ಬರುವ ಮಾತೆ ಇದು. ಈ ಮನೆ ಕಟ್ಟುವಾಗ ಮಗಳು ಅಳಿಯ ಹಣ ಕೊಟ್ಟಿದ್ದು ನಿಜಾ, ಅದು ಮಗುವಿಗೆ ಈ ರೀತಿ ಅರ್ಥವಾಗಿದೆಯೇ. ತನ್ನ ಅಸಮಾಧಾನವನ್ನು ಟಬ್ಬು ಹೀಗೆ ಹೊರಹಾಕುತ್ತಿದ್ದಾಳೆ. ಈ ಪುಟ್ಟ ತಲೆಯಲ್ಲಿ ಏನೆಲ್ಲಾ ಆಲೋಚನೆಗಳು ಹೊಳೆಯುತ್ತವೆಯೊ. ಟಬ್ಬುವಿನ ಮಾತಿನಿಂದ ಸುಮಿತ್ರ ತುಂಬಾ ನೊಂದು ಕೊಂಡರು. ದುಃಖವುಕ್ಕಿ ಬಂದು ಅತ್ತೆ ಬಿಟ್ಟರು.
ಪತಿ ಸತ್ತ ಮೇಲೆ ಕಷ್ಟುಪಟ್ಟು ಮಕ್ಕಳನ್ನು ಓದಿಸಿದ್ದರು.ಮಗಳು ವಿನುತ ಜಾಣೆ ಚೆನ್ನಾಗಿ ಓದಿ ಇಂಜಿನೀಯರಾದಳು. ಓದು ಮುಗಿದ ಕೂಡಲೆ ಕಲಸ ಸಿಕ್ಕಿತ್ತು. ತಮ್ಮನನ್ನು ತಾನೆ ಓದಿಸಿ ಅವನು ಕೆಲಸಕ್ಕೆ ಸೇರಿದ ಮೇಲೆ ಮದುವೆಯಾಗಿದ್ದಳು.ಮದುವೆ ಲೇಟ್ ಆಗಿದ್ದರಿಂದ ಮಗು ಆಗುವುದು ಕಷ್ಟವಾಗಿತ್ತು. ಏನೆಲ್ಲ ಟ್ರೀಟ್‍ಮೆಂಟ್ ತಗೊಂಡ ಮೇಲೆಯೇ ಟಬ್ಬು ಹುಟ್ಟಿದ್ದು. ಅವಳನ್ನು ಮುಚ್ಚಟೆಯಿಂದ ಸಾಕುತ್ತಿದ್ದರು, ಹಾಗೆಂದೆ ಅವಳನ್ನು ತನ್ನ ಬಳಿ ಇಟ್ಟು ಕೊಳ್ಳುವ ಧೈರ್ಯ ಮಾಡದೆ ಅಮ್ಮನ ಮಡಿಲಿಗೆ ಹಾಕಿದ್ದಳು. ಅಮ್ಮನ ಮಡಿಲಲಿ ತನ್ನ ಕಂದ ಸುರಕ್ಷಿತ ಅನ್ನುವ ಭಾವದಿಂದ ನೆಮ್ಮದಿಯಿಂದಿದ್ದಳು. ಆದರೆ ಟಬ್ಬವಿಗೆ ಇದ್ಯಾವುದೂ ಅರ್ಥವಾಗುವಂತಿರಲಿಲ್ಲ. ಮಗಳ ಹಟ,ಕೋಪ ಗೊತ್ತಿದ್ದರೂ ದಿಗಳು ಕಳೆದಂತೆ ಸರಿಹೋಗುತ್ತಾಳೆ, ತಾವೂ ಕೂಡಾ ವಾರದ ಎರಡು ದಿನ ಅವಳ ಬಳಿಯೇ ಇರುತ್ತೆವಲ್ಲ, ಕೆಲಸ ಬಿಡುವಂತಿಲ್ಲ, ತಮ್ಮ ಮನೆ ಕಟ್ಟುವಾಗ , ತಾವು ಮನೆ ಕೊಳ್ಳಲು ಸಾಕಷ್ಟು ಲೋನ್ ತೆಗೆದುದ್ದಾಗಿದೆ. ಅದನ್ನು ತೀರಿಸಲು ಇಬ್ಬರೂ ದುಡಿಯಲೇ ಬೇಕು, ಟಬ್ಬು ದೊಡ್ಡವಳಾಗುತ್ತ ಹೋದ ಹಾಗೆ ಅವಳಿಗೇ ಅದೆಲ್ಲಾ ಗೊತ್ತಾಗಿ ಸರಿಹೋಗುತ್ತಾಲೆ ಅನ್ನೊ ಧೈರ್ಯದಲ್ಲಿ ಇದ್ದರು. ಸುಮಿತ್ರ ಕೂಡಾ ಟಬ್ಬುವು ಮಾಡುತ್ತಿದ್ದದ್ದೆಲ್ಲವನ್ನೂ ಮಗಳಿಗೆ ವರದಿ ಮಾಡುತ್ತಿರಲಿಲ್ಲ. ಅಪ್ಪ ಅಮ್ಮ ಬಂದಾಗ ವಿಧೇಯ ವಿದ್ಯಾರ್ಥಿಯಂತೆ ಇರುತ್ತಿದ್ದ ಟಬ್ಬು ಕೂಡ ಅದರ ಸುಳಿವು ಕೊಡದಂತೆ ಇರುತ್ತಿದ್ದಳು. ಜೊತೆಗೆ ಅವಳ ಹಠ, ಅವಿಧೇಯ ವರ್ತನೆಗಳಿಗೆ ಅಪ್ಪ ಸೊಪ್ಪು ಹಾಕದೆ ಏಟಿನ ರುಚಿ ತೋರಿಸುತ್ತಿದ್ದರಿಂದ ಅಪ್ಪನಿಗೆ ಹೆದರುತ್ತಿದ್ದಳು. ಅವಳ ಹಟ ಕೋಪ ಏನಿದ್ದರು ಅಜ್ಜಿಯ ಬಳಿ ಮಾತ್ರ. ದೊಡ್ಡವಳಾದ ಮೇಲೆ ಸರಿಹೋಗುತ್ತಾಳೆ ಅಂತ ಸುಮಿತ್ರ ಕೂಡಾ ಸಹಿಸಿಕೊಳ್ಳುತ್ತಿದ್ದರು.
ಅಪ್ಪನನ್ನು ನೋಡಿಕೊಂಡು ಅತ್ತೆ ಒಬ್ಬರೆ ಇದ್ದಾರೆಂದು ರೇಖಾ ಮಾರನೇ ದಿನವೇ ಬಂದು ಬಿಟ್ಟಳು. ಅಪ್ಪನ ಅನಾರೋಗ್ಯ ಅವಳನ್ನು ಕಾಡುತ್ತಿದ್ದರಿಂದ ಟಬ್ಬುವಿನ ಕಡೆ ಅವಳಿಗೆ ಗಮನ ಹರಿಸಲಾಗಲಿಲ್ಲ. ತನ್ನನ್ನು ಅತ್ತೆ ಗಮನಿಸುತ್ತಿಲ್ಲ ಅಂತ ಟಬ್ಬುಗೆ ಅಸಮಾಧಾನ ಆಗೇ ಬಿಟ್ಟಿತು. ಅದು ಅಲ್ಲಿಗೆ ನಿಲ್ಲಲಿಲ್ಲ. ಅಂದು ಬೆಳಗ್ಗೆ ಅತ್ತೆ ಪಾಪುವಿಗೆ ಮೊದಲು ತಿಂಡಿ ಕೊಟ್ಟರು ಅಂತ ಸಿಟ್ಟು ಮಾಡಿಕೊಂಡು ತಿಂಡಿಯನ್ನು ತಿನ್ನದೆ ಶಾಲೆಗೆ ಹೋಗಿಬಿಟ್ಟಳು. ಅದೇ ಕೋಪದಲ್ಲಿ ಟಬ್ಬು ಸಂಜೆ ತಾನು ಬರುವ ಸ್ಕೂಲ್ ವ್ಯಾನ್ ಹತ್ತಲೇ ಇಲ್ಲ. ದಾಸ್ ಕೂಡಾ ಆಗಷ್ಟೆ ಮನೆಗೆ ಬಂದಿದ್ದ. ಮಗು ಮನೆಗೆ ಬಂದಿಲ್ಲ ಅಂತ ತಿಳಿದು ಆತಂಕಗೊಂಡ. ಶಾಲೆಗೆ ಫೋನ್ ಮಾಡಿದ್ರೆ ಸಂಜೆ ಎಲ್ಲಾ ಮಕ್ಕಳಂತೆ ಹೊರ ಹೋದಳು ಅಂತ ಅಂದರು. ಮತ್ತಷ್ಟು ಆತಂಕಗೊಂಡು ವ್ಯಾನ್ ಡ್ರೈವರ್ಗೆ ಫೋನ್ ಮಾಡಿದ್ರು. ಇವತ್ತು ಸಂಜೆ ಟಬ್ಬು ವ್ಯಾನ್ ಹತ್ತಿಲ್ಲ ಅಂತ ಹೇಳಿದನು. ಅವನ ಆತಂಕ ಹೆಚ್ಚಾಯಿತು.ಏನೇನೊ ಆಲೋಚನೆಗಳು ಮುತ್ತಿ ಕಂಗಾಲಾದನು.ಯಾರಾದರೂ ಮಗುವನ್ನು ಅಪಹರಿಸಿದರೆ, ಅಥವಾ ಮಗುವಿನ ಮೇಲೆ ಏನಾದರೂ ಆಗಬಾರದ್ದು ಆಗಿ ಕೊಂದು ಬಿಟ್ಟರೆ, ಅಯ್ಯೊ ದೇವರೆ ಏನಾಯಿತಪ್ಪ ನಮ್ಮ ಮನೆಯ ಮಗುವಿಗೆ ಅಂತ ಕಂಗೆಟ್ಟು ಹೋದರು, ಸುಮಿತ್ರ ಆಗಲೇ ಏನೆನೊ ನೆನೆದುಕೊಂಡು ಅಳಲಾರಂಭಿಸಿದರು.
ಮನೆಗೇ ಬಾರದ ಮಗುವಿಗಾಗಿ ಮನೆಯವರು ಎಲ್ಲಾ ಕಡೆ ಹುಡುಕಾಡುತ್ತಿದ್ದಾರೆ. ಮಗು ಎಲ್ಲಿಯೂ ಪತ್ತೆಯಿಲ್ಲ. ಆತಂಕದಿಂದ ಮಗಳಿಗೂ ಅಳಿಯನಿಗೂ ಫೋನ್ ಮಾಡು ಅಂತ ಮಗನಿಗೆ ಹೇಳಿದರು.ದಾಸ್ ಅಕ್ಕನಿಗೂ ಭಾವನಿಗೂ ಅಳುಕುತ್ತಲೇ ಸುದ್ದಿ ಮುಟ್ಟಿಸಿದ. ಅವರು ಗಾಭರಿ ಆತಂಕದಿಂದ ತಕ್ಷಣವೇ ಹೊರಟಿದ್ದಾರೆ.
ಇನ್ನು ಕಾಯುವಂತಿಲ್ಲ ಪೋಲಿಸ್ ಕಂಪ್ಲೆಂಟ್ ಕೊಟ್ಟು ಬಿಡೋಣವೆಂದು ದಾಸ್ ಸ್ಷೇಷನ್ಗೆ ಬಂದರೆ ಟಬ್ಬು ಅಲ್ಲಿಯೇ ಇದ್ದಾಳೆ. ಸ್ವರ್ಗವೇ ಕೈಗೆಟುಕಿದಷ್ಟು ಖುಷಿಯಾಗಿ ಟಬ್ಬುವನ್ನು ತಬ್ಬಿ ಮುತ್ತಿಕ್ಕಿ “ಅಯ್ಯೊ ಟಬ್ಬು ಇಲ್ಲಿದ್ದಿಯಾ, ನಿನ್ನ ಅದೆಷ್ಟು ಹುಡುಕಿದೆವು. ಇಲ್ಲಿಗೆ ಹೇಗೆ ಬಂದೆ”ಅಂತ ಕೇಳಿದನು. ಅವಳು ಅವನನ್ನು ತಬ್ಬಿ ಜೋರಾಗಿ ಅಳುತ್ತಾ” ಮಾಮಾ ನನ್ನ ಮನೆಗೆ ಕರ್ಕೊಂಡು ಹೋಗು, ನಾನು ಅಮ್ಮಅಪ್ಪನ ಬಳಿ ಹೋಗ್ತಿನಿ.ನಾನು ಇಲ್ಲಿರಲ್ಲ” ಅಂತ ಹೇಳ ತೊಡಗಿದಳು. “ಆಯ್ತು ಚಿನ್ನು, ನಿನ್ನ ಅಲ್ಲಿಗೆ ಕಳಿಸ್ತಿವಿ, ಸಮಾಧಾನ ಮಾಡ್ಕೊ. ಅಳಬೇಡಾ.ನನೇ ನಿನ್ನ ಅಕ್ಕ ಭಾವನಿಗೆ ಹೇಳಿ ಕಳಿಸ್ತಿನಿ ಆಯ್ತಾ, ಈಗ ಸುಮ್ಮನಿರು” ಅಂತ ಸಮಾಧಾನಿಸಿ, ನಂತರ ಪೋಲೀಸರತ್ತ ತಿರುಗಿ “ಸರ್ ಇವಳು ನಮ್ಮ ಅಕ್ಕನ ಮಗಳು , ಇವಳಿಗಾಗಿ ಎಲ್ಲ ಕಡೆ ಹುಡುಕಿ ,ಕಂಪ್ಲೇಂಟ್ ಕೊಡೋಣ ಅಂತ ಬಂದೆ, ಅಬ್ಬಾ ಇಲ್ಲಿಯೇ ಸಿಕ್ಕಿದಳಲ್ಲ.ನಾವು ತುಂಬಾ ಹೆದರಿಕೊಂಡಿದ್ವಿ” ವಿವರಣೆ ನೀಡಿದ.
ಟಬ್ಬು ಬಸ್ ಸ್ಟಾಂಡಿನಲ್ಲಿ ಬೆಂಗಳೂರಿಗೆ ಹೋಗುವ ಬಸ್ಸು ಯಾವುದು ಅಂತ ಕೇಳ್ತ ಇದ್ದದ್ದನ್ನು ನೋಡಿದ ಅಪರಿಚಿತರೊಬ್ಬರು ಟಬ್ಬುವನ್ನು ಪೋಲಿಸ್ ಸ್ಟೇಷನ್ಗೆ ಕರೆತಂದಿದ್ದಾರೆ. ಮಗುವಿನ ಹೆಸರು ಕೇಳಿ ಅವಳ ತಂದೆ ತಾಯಿ ಯಾರು, ಮನೆ ಎಲ್ಲಿದೆ ಅಂತ ವಿಚಾರಿಸುತ್ತಿರುವಾಗಲೆ ದಾಸ್ ಕಂಪ್ಲೆಂಟ್ ಕೊಡಲು ಸ್ಟೇಷನ್ನಿಗೆ ಬಂದಿದ್ದ. ಅವನು ಇಲ್ಲಿಗೆ ಬಂದಿದ್ದು, ಟಬ್ಬು ಇಲ್ಲಿಯೇ ಇದ್ದದ್ದು ಎಲ್ಲವೂ ಕಾಕತಾಳಿಯವಾಗಿತ್ತು. ಬೆಟ್ಟದಂತೆ ಬಂದಿದ್ದ ಸಮಸ್ಯೆ ಮೋಜಿನಂತೆ ಕರಗಿ ಹೋಗಿತ್ತು, ತಕ್ಷಣವೇ ಮನೆಗೆ ಮತ್ತು ಅಕ್ಕನಿಗೆ ಫೋನ್ ಮಾಡಿ ತಿಳಿಸಿದನು. ಅವರ ಮನೆ ಮಗು ಅಂತ ಖಾತ್ರಿ ಆದ ಮೇಲೆ ಮಗುವನ್ನು ದಾಸ್ ಜೊತೆ ಕಳಿಸಿಕೊಟ್ಟರು.ದಾಸ್ ಟಬ್ಬವನ್ನು ಮನೆಗೆ ಕರೆದು ಕೊಂಡು ಬಂದ ಮೇಲೆ ಅವಳನ್ನು ನೋಡಿ ಸಂತೋಷದಿಂದ ಸುಮಿತ್ರ ಕಣ್ಣಿರಿಟ್ಟರು. ಯಾವ ಅನಾಹುತವೂ ಆಗದೆ ಟಬ್ಬು ಮನೆಗೆ ಬಂದಿದ್ದು ಎಲ್ಲರಿಗೂ ಜೀವ ಬಂದಂತಾಯಿತು.
ಆದರೆ ಮತ್ತೆ ಟಬ್ಬುವನ್ನು ಇಲ್ಲಿ ಇಟ್ಟುಕೊಳ್ಳುವ ಧೈರ್ಯ ಸುಮಿತ್ರಗೆ ಇರಲಿಲ್ಲ. ಪ್ರಕರಣ ಸುಖಾಂತವಾಯಿತೇನೊ ಸರಿ, ಆದರೆ ಏನಾದರೂ ಹೆಚ್ಚು ಕಡಿಮೆ ಆಗಿ ಬಿಟ್ಟಿದ್ರೆ ಮಗಳು ಅಳಿಯ ನನ್ನ ಕ್ಷಮಿಸುತ್ತಿದ್ದರೆ? ನಾನಾದರೂ ನೆಮ್ಮದಿಯಿಂದ ಸಾಯಲು ಆಗುತ್ತಿತ್ತೆ. ನೆನಸಿಕೊಂಡೇ ನಡುಗಿಹೋದರು. ಮಗಳು ಬಂದ ಕೂಡಲೇ ಅವಳನ್ನು ಹಿಡಿದು ಜೋರಾಗಿ ಅತ್ತು ಬಿಟ್ಟರು, ಅವಳಿಗೂ ಅರ್ಥವಾಗಿತ್ತು.
“ಅಮ್ಮ ನಿಂಗೆ ಇನ್ನು ತೊಂದರೆ ಕೊಡಲ್ಲ, ಟಬ್ಬುವನ್ನು ನಾನೇ ಕರ್ಕೊಂಡು ಹೋಗ್ತಿನಿ, ಇಬ್ಬರು ಸ್ವಲ್ಪ ಸ್ವಲ್ಪ ದಿನ ರಜೆ ಹಾಕಿ ಟಬ್ಬುವನ್ನು ನೋಡಿಕೊಳ್ತಿವಿ. ಆಮೇಲೆ ಏನಾದ್ರು ಅರೆಂಜ್ ಮಾಡ್ತವಿ” ಅಂತ ಹೇಳಿ ಸುಮಿತ್ರಳ ಎದೆ ಭಾರವನ್ನು ಇಳಿಸಿದಳು.
ಶೈಲಜಾ ಹಾಸನ್.
ಮತ್ತೆ ಮುಂದಿನ ಭಾನುವಾರ ಮತ್ತೊಂದು ಕಥೆಯೊಡನೆ
ನಿಮ್ಮ ಪ್ರೀತಿಯ ಸ್ಟೀಫನ್ ಜೇಮ್ಸ್ BPN ವಾರಕ್ಕೊಂದು ಕಥೆ ವಿಭಾಗ.