---Advertisement---

Advertisement

          ನಿಗೂಢ

“ಶಶಾಂಕ, ಏನಿದು, ಇವತ್ತೂ ನೀವು ಹೀಗೆ ಕಂಪ್ಯೂಟರ್ ಮುಂದೆ ಕುಳಿತು ಬಿಟ್ಟರೆ, ನಾನೊಬ್ಬಳೆ ಎಲ್ಲಾ ಮಾಡಿಕೊಳ್ಳೊಕೆ ಸಾಧ್ಯಾನಾ, ಪಾಪು ಬೇರೆ ಅಳ್ತಿದ್ದಾಳೆ ಎದ್ದೇಳಿ, ನೀವು ಪಾಪುನಾ ಎತ್ಕೊಂಡ್ರೆ ನಾನು ಬೇರೆ ಕೆಲಸ ಮಾಡಿಕೊಳ್ತಿನಿ” ಅಂತ ವಿನಂತಿ ಗಂಡನನ್ನು ಏಳಿಸಲು ನೋಡಿದಳು. “ಸ್ವಲ್ಪ ಇರು ವಿನಂತಿ, ಆಗಿ ಹೋಯಿತು. ಇನ್ನೊಂದು ಹತ್ತು ನಿಮಿಷ,ನಾಳೆನೇ ರಿಪೋರ್ಟ್ ಕೊಡಬೇಕು.  ಇವತ್ತೆ ರಿಪೋರ್ಟ್ ಕಳಿಸಿ ಬಿಟ್ರೆ , ನಾನು ಫ್ರೀಯಾಗಿ ಬಿಡ್ತಿನಿ, ಆಮೇಲೆ  ನೀನು ಹೇಳಿದ ಕೆಲಸ ಮಾಡೊಕೆ ಈ ಸೇವಕ ಸಿದ್ದವಾಗುತ್ತಾನೆ.

ಇವೆತ್ತೇಲ್ಲ ಸಿದ್ದತೆ ಮಾಡಿಕೊಂಡು ,ನಾಳೆ ನಿನ್ನ ಮಗಳ ಬರ್ತಡೇನಾ ಗ್ರ್ಯಾಂಡಾಗಿ ಮಾಡೋಣ” ಶಶಾಂಕನ ಮಾತಿಗೆ  ” ಯಾಕೆ ನನ್ನ ಮಗಳು ಮಾತ್ರನಾ, ನಿಮ್ಮ ಮಗಳು ಅಲ್ವ,” ಹುಸಿ ಮುನಿಸು ತೋರಿದಳು. ತನ್ನ ಕೆಲಸ ಮುಗಿಸಿದ ಶಶಾಂಕ್ ಲ್ಯಾಪ್‍ಟ್ಯಾಪ್ ಮುಚ್ಚಿಟ್ಟು
ವಿನಂತಿಯ ಅಪ್ಪುಗೆಯಲ್ಲಿದ್ದ ಮುದ್ದು ಮಗಳನ್ನು ಎತ್ತಿಕೊಳ್ಳುತ್ತ ” ಅಲ್ಲ ಅಂತ ಯಾರು ಹೇಳಿದ್ದು, ಆದ್ರೆ ನಿನ್ನನ್ನ ಕಂಡ್ರೆ ತಾನೆ ಈ ಚಿನ್ನಾರಿಗೆ ತುಂಬಾ ಪ್ರೀತಿ, ನೋಡು ನನ್ನ ಹತ್ರ ಬಂದ ಕೊಡಲೆ  ಹೇಗೆ ಅಳ್ತ ಇದ್ದಾಳೆ. ಅಪ್ಪನ್ನ ಕಂಡ್ರೆ ಇವಳಿಗೆ ಪ್ರೀತಿನೇ ಇಲ್ಲ” ಮಗಳನ್ನು ದೂರಿದ. “ಅಯ್ಯೊ ಇದಿನ್ನು ಎಳೇ ಮಗು ಕಣ್ರಿ , ನಿಮ್ಮನ್ನಿನ್ನು ಸರಿಯಾಗಿ ಅಭ್ಯಾಸ ಮಾಡಿಕೊಂಡಿಲ್ಲ, ಅಮ್ಮನ ಮನೆಯಲ್ಲಿ ಇರೊವರೆಗೆ ನೀವು ಬಂದದ್ದೆ ಕಡಿಮೆ. ಯಾವಾಗಲೂ ಕೆಲಸ ಕೆಲಸ ಅಂತ ಬರ್ತನೇ ಇರಲಿಲ್ಲ, ಬಂದ್ರೂ ನೀವೇನು ಅವಳ್ನ  ಎತ್ತಿ ಕೊಳ್ಳುತ್ತಾ ಇದ್ರಾ . ಎಳೆ ಮಗುನಾ ಎತ್ತಿಕೊಳ್ಳುಕೆ ಬರಲ್ಲ ಅಂತ ದೊರದಿಂದಲೇ ಮಾತಾಡಿಸುತ್ತಿದ್ದಿರಿ. ಇನ್ನು ಇಲ್ಲಿಗೆ ಬಂದು ನಾನು ಮೂರು ತಿಂಗಳಾಯಿತು. ನೀವು ಹೋಗುವಾಗ ಅವಳಿನ್ನು ಎದ್ದೆ ಇರಲ್ಲಾ. ಇನ್ನು ರಾತ್ರಿ ನೀವು ಬರೋಷ್ಟರಲ್ಲಿ ನಿಮಗೆ ಆಯಾಸ, ಜೊತೆಗೆ ಅವಳಿಗೆ ನಿದ್ದೆ ಟೈಂ, ಇನ್ನ ಹೇಗೆ ನಿಮ್ಮನ್ನ ಅಭ್ಯಾಸ ಮಾಡಿಕೊಳ್ತಾಳೆ. ನಾನು ಬಂದು ಮೂರು ತಿಂಗಳಾಯಿತಲ್ಲ, ನೀವು ನಿಮ್ಮ ಮಗಳೊಂದಿಗೆ ಎಷ್ಟು ಸಮಯ ಕಳೆದಿದ್ದಿರಿ ಹೇಳಿ, ನೀವು ಅವಳ ಜೊತೆ ಇದ್ದರೆ ತಾನೆ ಅವಳು ನಿಮ್ಮ ಜೊತೆ ಹೊಂದಿಕೊಳ್ಳೊದು” ಅಸಮಾಧಾನದಿಂದ ಮೂತಿ ಉಬ್ಬಿಸಿದಳು.
“ಅಯ್ಯೊ, ಮಾರಾಯ್ತಿ ನೀನು ಈ ಹೀಗೆ ಮುಖ ಊದಿಸಿ ಕೊಳ್ಳ ಬೇಡಾ ಕಣೇ, ನೀನು ಹೀಗೆ ಮುಖ ಊದಿಸಿಕೊಂಡರೆ ಹನುಮಂತನ ತಂಗಿ ತರ ಕಾಣ್ತೀಯ, ನನ್ನ ಕೈಲಿ ನೋಡೊಕೆ ಆಗಲ್ಲ .ಇನ್ನು ಮೇಲೆ ನಾನು ಪ್ರತಿದಿನ ಬೇಗ ಮನೆಗೆ ಬರ್ತಿನಿ, ರಜಾ ದಿನಗಳಲ್ಲಿ ಎಲ್ಲೂ ಹೋಗದೆ ಈ ರಾಜಕುಮಾರಿ ಜೊತೆನೇ ಕಳಿತಿನಿ, ನೋಡ್ತಾ ಇರು ನೀನೆ ಹೊಟ್ಟೆ ಕಿಚ್ಚು ಪಡ ಬೇಕು, ಹಾಗೆ ನನ್ನ ಮಗಳನ್ನ ಬದಲಾಗೊ ಹಾಗೆ ಮಾಡ್ತಿನಿ, ಅವಳು ಯಾವಾಗಲೂ ಅಪ್ಪಾ ಅಪ್ಪಾ ಅಂತನೇ ಇರ ಬೇಕು,” ಅಂತ ಹೇಳಿ ಮಗಳತ್ತ ತಿರುಗಿ ” ಬಂಗಾರಿ ನೀನು ಇನ್ನು ಮೇಲೆ ಅಮ್ಮನ ಹತ್ರ ಹೋಗಲೆ ಬೇಡಾ ಪುಟ್ಟಾ, ನಾನೇ ನಿನಗೆ ಊಟಾ ಮಾಡಿಸಿ ತಾಚಿ ಮಾಡಿಸ್ತಿನಿ” ಅಂತ ಮಗಳನ್ನು ಮುದ್ದು ಮಾಡಿದ.  ಅಪ್ಪ ಮಗಳ ಆಟ ನೋಡುತ್ತಾ ನಿಂತ  ವಿನಂತಿ ನಾಳೆ ಮಗಳ ಬರ್ತಡೆ ಪಾರ್ಟಿ ಇದೆ ಎನ್ನುವುದನ್ನೆ ಕ್ಷಣ ಮರೆತು ಬಿಟ್ಟಳು.

ಪುಟ್ಟ ನಿಶಾ ಹುಟ್ಟಿ ನಾಳೆಗೆ ಒಂದು ವರ್ಷ. ನಿಶಾಳ ನಾಮಕರಣ ವಿನಂತಿಯ ತೌರು ಮನೆಯಲ್ಲಿ  ಸರಳವಾಗಿ ನಡೆದದ್ದರಿಂದ ಹುಟ್ಟು ಹಬ್ಬವನ್ನು ಗ್ರ್ಯಾಂಡಾಗಿಯೇ ಮಾಡಬೇಕೆಂದು ವಿನಂತಿ ಬಯಸಿದ್ದಳು. ಪ್ರೀತಿಯ ಮಡದಿಯ ಯಾವ ಆಸೆಯನ್ನು ತಳ್ಳಿ ಹಾಕದ ಶಶಾಂಕ ಮಗಳ ಹುಟ್ಟು ಹಬ್ಬದ ಆಚರಣೆಗಾಗಿ ಅಡ್ಡಿ ಬರಲಿಲ.್ಲ ಒಳ್ಳೆ ಹೋಟಲಿನಲ್ಲಿ  ಪಾರ್ಟಿ ಅರೆಂಜ್ ಮಾಡಿದ್ದನು. ಎಲ್ಲರಿಗೂ ಫೋನ್ ಮೂಲಕವೇ ಆಹ್ವಾನಿಸಿದ್ದರು. ಸುಮಾರು ಇನ್ನೂರು ಜನ ಬರುವ ನಿರೀಕ್ಷೆ ಇತ್ತು . ಮನೆಗೆ ಹತ್ತಿರದ ನೆಂಟರು ಇವತ್ತೇ ಬರುವವರಿದ್ದರು. ಹಾಗಾಗಿ ಅವರಿಗಾಗಿ ಮನೆಯನ್ನು ಸಿದ್ದ ಪಡಿಸ ಬೇಕಿತ್ತು. ಮಧ್ಯಾಹ್ನದ ಅಡುಗೆ ಆಗ ಬೇಕಿತ್ತು. ಹೆಚ್ಚು ಅನುಭವ ವಿಲ್ಲದ ವಿನಂತಿ ಒತ್ತಡದಲ್ಲಿದ್ದಳು. ಮಗುವನ್ನು ಸುಧಾರಿಸಿಕೊಂಡು ಮನೆ ಕೆಲಸ ಮಾಡಲು ಸಾಧ್ಯವಿಲ್ಲವೆಂದೇ ಶಶಾಂಕನನ್ನು ಇಂದು ಮನೆಯಲ್ಲಿಯೇ ಇರಿಸಿಕೊಂಡಿದ್ದಳು. ಆಫೀಸಿನಲ್ಲಿ ಕೆಲಸ ಸಾಕಷ್ಟಿದ್ದರೂ ಹೆಂಡತಿಗಾಗಿ ಎರಡು ದಿನ ರಜೆ ಮಾಡಿದ್ದ.

ಮಗಳನ್ನು ಹೆಗಲ ಮೇಲೆ ಹಾಕಿ ಕೊಂಡು” ವಿನಂತಿ, ನಿನ್ನ ಮಗಳ ಜವಾಬ್ದಾರಿ ಇನ್ನು ನನ್ನದು, ನೀನು  ನಿಶ್ಚಿಂತೆಯಿಂದ ಕೆಲಸ ಮಾಡಿಕೊ. ಸಂಜೆಗೆ ಕ್ಯಾಂಟರಿಂಗ್‍ನವರಿಗೆ ಊಟಕ್ಕೆ ಹೇಳಿದ್ದಿನಿ. ಇವತ್ತು ಸೇರಿ ನಾಳೆ  ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟಾ, ಇನ್ನು  ಫಂಕ್ಷನ್‍ದು ಸೇರಿ ಒಟ್ಟಿಗೆ ಮಾತನಾಡಿದ್ದೆನೆ . ಅಡುಗೆ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡಾ. ರಾತ್ರಿ ಅಡುಗೆ ಮಾಡುವ ಶ್ರಮನೂ ಬೇಡಾ, ಬಂದವರೂ  ನಾಳೆಗೆ ರೆಡಿ ಮಾಡಿಕೊಂಡ್ರೆ ಆಯಿತು.” ಅಂತ ಹೇಳಿದಾಗ,
” ಅಯ್ಯೊ ಇವತ್ತು, ನಾಳೆಗೆ ಯಾಕೆ ಕ್ಯಾಟರಿಂಗಿಗೆ ಹೇಳೊಕೆ ಹೋದ್ರಿ , ನಾಳೆ  ಪಾರ್ಟಿಗೆ ಮಾತ್ರ  ಅಡುಗೆಗೆ ಹೇಳಿದ್ರೆ ಆಗಿತ್ತು. ಇವತ್ತು ಅಮ್ಮಾ ,ಅತ್ತೆ ಎಲ್ಲಾ ಬರ್ತಾ ಇದ್ದಾರೆ ಅಲ್ವ, ಅವರೆ ಅಡುಗೆ ಮಾಡುತ್ತಿದ್ದರು. ಎಷ್ಟು ಜನಕ್ಕೆ ಮಾಡೋಕೆ. ಎಲ್ಲಾ ಸೇರಿ ಹತ್ತು ಜನನೂ ಆಗ್ತಾರೊ ಇಲ್ಲವೊ, ಅಷ್ಟು ಜನಕ್ಕೆ ಅಡುಗೆ ಮಾಡೊಕೆ ಆಗಲ್ವ ನನಗೆ, ನೀವೊಬ್ಬರು ಸುಮ್ನೆ ಖರ್ಚು ಮಾಡ್ತಾ ಇದ್ದಿರಿ.” ಆಕ್ಷೇಪಿಸಿದಳು.

” ಯಾರಿಗೆ ಖರ್ಚು ಮಾಡ್ತ ಇದ್ದಿನಿ ಹೇಳು. ನಾನು ದುಡಿಯುತ್ತಿರುವುದು ಯಾರಿಗಾಗಿ ನನ್ನ ಮನೆಗೆ ತಾನೇ. ನಿಮ್ಮ ಅಮ್ಮ ,ನಮ್ಮ ಅಮ್ಮ ಇಲ್ಲಿ ಬಂದು ನೆಂಟರಿಗೆಲ್ಲಾ ಅಡುಗೆ ಮಾಡಬೇಕಾ,  ಹಾಯಾಗಿ ಮಾತುಕತೆ ಆಡಿಕೊಂಡು ಇರಲಿ ಬಿಡು. ” ಅಂತ ಹೇಳಿದಾಗ ತನ್ನವನ ಮನಸ್ಸು ಎಷ್ಟೋಂದು ಒಳ್ಳೆಯದು  ಎಂದು ಕೊಂಡು ಅಭಿಮಾನದಿಂದ ನೋಡಿದಳು.
ಮಗಳನ್ನು ಶಶಾಂಕನಿಗೆ ಒಪ್ಪಿಸಿ ನಿಶ್ಚಿಂತೆಯಿಂದ ತನ್ನ ಕೆಲಸದಲ್ಲಿ ಮುಳುಗಿ ಹೋದಳು. ಶಶಾಂಕ ಮಗಳನ್ನು ಆಟ ಆಡಿಸುತ್ತಾ ಇರುವುದನ್ನು ನೋಡುತ್ತಾ ಅವನಿಂದ ಒಂದೊಂದು  ಕೆಲಸಗಳಿಗೆ
ಸಲಹೆ ಕೇಳುತ್ತಾ ಸಂಭ್ರಮಿಸುತ್ತಿದ್ದಳು. ಮನೆಗೆ ನೆಂಟರು ಬರುವಷ್ಟರಲ್ಲಿ ನೆರೆ ಹೊರೆಯವರನ್ನು ಬರ್ತಡೆಗೆ ಕರೆದು ಬಂದು ಬಿಡುತ್ತೇನೆ, ಎಲ್ರೂ ಬಂದ್ರೆ ಹೋಗೊಕೆ ಆಗೊಲ್ಲ ಅಂತ ಹೇಳಿ ಹೊರಟು ನಿಂತಳು. ಪಾಪು ತೂಕಡಿಸುತ್ತಿರುವುದನ್ನು ನೋಡಿ  ಅವಳಿಗೆ ನಿದ್ದೆ ಬಂದಿದೆ ಅಂತ ಗೊತ್ತಾಗಿ ಮಗುವನ್ನು ಎತ್ತಿಕೊಂಡು ರೂಮಿನಲ್ಲಿ ಮಲಗಿಸಿ ” ಜೋರಾಗಿ ಟಿವಿ ಹಾಕ್ಕೊ ಬೇಡಿ ಮಗು ಎದ್ದು ಬಿಡುತ್ತೆ, ನೀವು ಬೇಕಾದ್ರೆ ಮಲಗಿ ಕೊಳ್ಳಿ, ನಾನು ಹೊರಗಡೆಯಿಂದ ಲಾಕ್ ಮಾಡಿಕೊಂಡು ಹೋಗಿರುತ್ತೆನೆ. ಬೇಗ ಬಂದು ಬಿಡುತ್ತೆನೆ ” ಅಂತ ಹೇಳಿ ಹೋದಳು. ಶಶಾಂಕನೂ ಮಲಗಲು ಪಕ್ಕದ ರೂಮಿಗೆ ಹೋದ, ಮಲಗಿದೊಡನೆ ಒಳ್ಳೆಯ ನಿದ್ದೆ ಬಂದು ಬಿಟ್ಟಿತು.  ಬೇಗ ಬರುವುದಾಗಿ ಹೇಳಿದ್ದರೂ ವಿನಂತಿಗೆ ಸ್ವಲ್ಪ ತಡವೇ ಆಗಿ ಬಿಟ್ಟಿತ್ತು, ಹೋದವರ ಮನೆಯಲ್ಲಿ ಕಾಫಿ, ಟೀ ಅಂತ ಬಲವಂತವಾಗಿ ಕೂರಿಸಿಕೊಂಡು ಬಿಡುತ್ತಿದ್ದರು. ಹಾಗಾಗಿ ಮಗು ಎದ್ದು ಎಲ್ಲಿ ಹಠ ಮಾಡುತ್ತಿದೆಯೋ, ಶಶಾಂಕನಿಗೆ ಮೊದಲೆ ಮಗಳನ್ನು ಸುಧಾರಿಸಲು ಬರುವುದಿಲ್ಲ, ಅನ್ನೊ ಆತಂಕದಿಂದ ಚಡಪಡಿಸುತ್ತಲೇ ಎಲ್ಲರಿಗು ಹೇಳಿ ಬಂದಳು. ಮನೆಯ ಹತ್ತಿರ ಬಂದರೂ ಮನೆಯಲ್ಲಿ ಮಗಳ ಗದ್ದಲ ಕೇಳಲಿಲ್ಲವಾಗಿ ಸದ್ಯ ಮಗಳು ಎದ್ದಿಲ್ಲ ಅಂದುಕೊಂಡು ಸಮಾಧಾನದಿಂದ  ಮನೆಯ ಲಾಕ್ ತೆಗೆದು ಒಳಬಂದಳು. ಶಶಾಂಕ ಮಲಗಿದ್ದ ಕೋಣೆಯತ್ತ ಇಣುಕಿ ನೋಡಿದಳು. ಅವನಿನ್ನು ಗಾಢ ನಿದ್ದೆಯಲ್ಲಿದ್ದದ್ದನ್ನು ಕಂಡು ಇವರನ್ನ ನಿಚ್ಚಿಕೊಂಡು ನಾನು ಹೇಗೆ ನಾಳೆ ಮಗಳ ಹುಟ್ಟು ಹಬ್ಬ ಆಚರಿಸುವುದೊ ಅಂತ ಅಂದು ಕೊಳ್ಳುತ್ತಾ ಮಗಳು ಮಲಗಿದ ಕೋಣೆಗೆ ಬಂದಳು. ಬಾಗಿಲು ತೆರೆದಂತಿತ್ತು. ನಾನು ಹೋಗುವಾಗ ಬಾಗಿಲು ಮುಚ್ಚಿದ್ದೆನಲ್ಲ, ಬಾಗಿಲು ಯಾರು ತೆಗೆದದ್ದು ,ಶಶಾಂಕ ಏನಾದ್ರು ಎದ್ದು ಬಂದು ಒಮ್ಮೆ ಮಗಳನ್ನು ನೋಡಿ ಹೋಗಿರ ಬಹುದು. ತನಗೆ ತಾನೆ ಮಾತನಾಡಿಕೊಳ್ಳುತ್ತಾ ಮಂಚದ ಹತ್ತಿರ ಬಂದಳು. ಮಗಳು ಅಲ್ಲಿ ಮಲಗಿಲ್ಲದ್ದನ್ನ ಕಂಡು  ಅವಳೆದೆ ದಸ್ಸಕ್ಕೆಂದಿತು. ಕೆಳಗೆನಾದ್ರೂ ಬಿದ್ದಿರ ಬಹುದೇ ಅಂತ ” ನಿಶಾ. ನಿಶಾ ‘ ಅಂತ ಕೂಗುತ್ತಾ ಮಂಚದ ಅಕ್ಕ ಪಕ್ಕ ಬಗ್ಗಿ ನೋಡಿದಳು. ನಿಶಾ ಅಲ್ಲೇಲ್ಲೂ ಕಾಣದೇ,ಆತಂಕದಿಂದ ಶಶಾಂಕ ಏನಾದ್ರೂ ಮಲಗಿಸಿಕೊಂಡಿರ ಬಹುದೇ ಅಂತ ಆವನು ಮಲಗಿದ್ದ ರೂಮಿಗೆ ಧಾವಿಸಿದಳು. ಶಶಾಂಕ ಹೊದ್ದಿದ್ದ ಹೊದಿಕೆ ಕಿತ್ತೆಸೆಯುತ್ತ ಮಗಳನ್ನು ಹುಡುಕಿದಳು. ಅಲ್ಲಿಯೂ ಮಗಳಿರಲಿಲ್ಲ. ಗಾಭರಿಯಾದ ವಿನಂತಿ ಶಶಾಂಕನನ್ನು ಎಬ್ಬಿಸುತ್ತ ”  ಶಶಾಂಕ ,ಪಾಪು ಎಲ್ಲಿ. ಆ ರೂಮಿನಲ್ಲೂ ಇಲ್ಲ, ಅಲ್ಲೂ ಇಲ್ಲ,” ಹೆಚ್ಚು ಕಡಿಮೆ ಕೂಗಿದಳು. ಧಡಕ್ಕೆನೆ ಎದ್ದು ಕುಳಿತ ಶಶಾಂಕ “ಪಾಪು ಅಲ್ಲೆ ಮಲಗಿದ್ದಳಲ್ಲ. ಅವಳು ಮಲಗಿದ್ದಾಳೆ ಅಂತ ತಾನೇ ನಾನು ಈ ರೂಮಿನಲ್ಲಿ ಮಲಗಿದ್ದು.  ನನಗೆ ಚೆನ್ನಾಗಿ ನಿದ್ರೆ ಬಂದು ಬಿಟ್ಟಿತ್ತು. ಈಗ ನೀನು ಏಳಿಸಿದಾಗಲೇ ನನಗೆ ಎಚ್ಚರವಾಗಿದ್ದು.” ಎಂದವನೇ ಮಂಚದಿಂದಿಳಿದು  ಮನೆಯ ಎಲ್ಲ ಕಡೆ ಹುಡುಕಲು ಓಡಿದ. ಅವನ ಹಿಂದೆಯೇ ವಿನಂತಿಯೂ ಓಡಿದಳು. ಅಡುಗೆ ಮನೆ. ಹಾಲು, ವರಾಂಡ ಎಲ್ಲ ಕಡೆ ಹುಡುಕಿದರೂ ಮಗು ಮಾತ್ರ ಪತ್ತೆ ಇಲ್ಲ, ವಿನಂತಿ ಗಾಭರಿಯಿಂದ ಅಳಲು ಪ್ರಾರಂಭಿಸಿದ್ದಳು. “ಮನೆಗೆ ಯಾರಾದ್ರೂ ಬಂದು ಕರೆದು ಕೊಂಡು ಹೋಗಿರ ಬಹುದೆ” ಶಶಾಂಕ ಅನುಮಾನಿಸಿದ. ” ಅಯ್ಯೋ ಮನೆಗೆ ಬೀಗ ನಾನೆ ಹಾಕಿಕೊಂಡು ಹೋಗಿದ್ದೆನಲ್ಲ, ಬೀಗ ಹಾಕಿದ ಮನೆಗೆ ಯಾರು ಬರೋಕೆ ಸಾದ್ಯಾ” ಅಳುತ್ತಲೆ ಉತ್ತರಿಸಿದಳು. ಮಲಗಿದ ಮಗು ಇಲ್ಲ ಅಂತ  ಅಂದ್ರೆ ನಂಬೊಕೆ ಆಗ್ತ ಇಲ್ಲ. ಒಂದು ವರ್ಷದ ಮಗು ಎಲ್ಲಾದ್ರು ಹೋಗೊಕೆ ಸಾದ್ಯನಾ , ಗಂಡ ಹೆಂಡತಿಗೆ ದಿಗ್ಭ್ರಮೆ ಆಗಿತ್ತು. ಗಂಟೆಯ ಹಿಂದಷ್ಟೆ ಮಲಗಿಸಿದ್ದ ಮಗು ಈಗ  ಮನೆಯಲ್ಲಿ ಇಲ್ಲ. ಆ ಸತ್ಯನಾ ಅರಗಿಸಿಕೊಳ್ಳಲಾರದೆ  ಇಬ್ಬರಿಗೂ ಶಾಕ್ ಆಗಿತ್ತು. ದುಃಖ ತಡೆಯದೆ ಅಳುತ್ತಿದ್ದ ವಿನಂತಿಯನ್ನು  ಸಮಾಧಾನಿಸುವ ಸ್ಥಿತಿಯಲ್ಲಿರದ ಶಶಾಂಕ ಏನು ಮಾಡಲು     ತೋಚದೆ ವಿನಂತಿಯಂತೆ ಅಳಲೂ ಆಗದೆ, ಮಗಳು ಎಲ್ಲಿ  ಹೋದಳು ಅನ್ನುವ ನೋವನ್ನೂ ಸಹಿಸಲಾರದೆ ಕಂಗಾಲಾಗಿ ಸುಮ್ಮನೆ ಕುಳಿತು ಬಿಟ್ಟ. ಅಷ್ಟರಲ್ಲಿ ಮನೆಗೆ ವಿನಂತಿಯ ಅಪ್ಪ ಅಮ್ಮ  ಕಾರಿನಿಂದಿಳಿದು ಮನೆಯೊಳಗೆ ಬಂದರು. ಮೊಮ್ಮಗಳ ಹುಟ್ಟು ಹಬ್ಬದ ಸಂಭ್ರಮದಲ್ಲಿರ ಬೇಕಾದ ಮಗಳು ಅಳಿಯನ ತಲೆ ಮೇಲೆ ಆಕಾಶ ಕಳಿಚಿದಂತೆ ಇರುವ ಅವರ ವರ್ತನೆ ನೋಡಿ  ಆತಂಕಗೊಂಡು.ಏನಾಯ್ತು ಇವರಿಗೆ, ಯಾಕೆ ಹೀಗಿದ್ದಾರೆ ಮಗುವಿಗೇನಾದ್ರು ಹುಷಾರಿಲ್ಲವೇ, ಅಥವ ಅವರ ಕಡೆಯವರಿಗೇನಾದ್ರು ಕೆಡುಕುಂಟಾಗಿರ ಬಹುದೆ ಹೀಗೆ ಏನೇನೊ ಕೆಟ್ಟ ಯೋಚನೆಗಳು ಬಂದು ಹೋದವು. ಅತ್ತೆ ಮಾವನನ್ನು ಕಂಡ ಶಶಾಂಕನಿಗೆ ನಿಶಾ ಕಾಣೆಯಾಗಿರುವುದರ ಬಗ್ಗೆ ಹೇಗೆ ಹೇಳುವುದೆಂದು ಹಿಂದೆ ಮುಂದೆ ನೋಡುತ್ತಿರುವಂತೆಯೇ ವಿನಂತಿ ಅಪ್ಪ ಅಮ್ಮನನ್ನು ನೋಡಿ ಅವರ ತೆಕ್ಕೆಗೆ ಬಿದ್ದು ಗೋಳೊ ಅಂತ ಅಳುತ್ತ ನಿಶಾ ಇಲ್ಲದಿರುವುದನ್ನು ತಿಳಿಸಿ ಮತ್ತಷ್ಟು ಅತ್ತಳು. ಮಗಳು ಹೇಳಿದ್ದನ್ನು ಕೇಳಿ ದಿಗ್ಭ್ರಾಂತರಾಗಿ ಮನೆಯಲ್ಲಿ  ಮಲಗಿದ್ದ ಮಗು ಇಲ್ಲವೆಂದರೆ ಹೇಗೆ, ಇದನ್ನು ನಂಬುವುದೇ, ಇವರೇನು ನಿಜಾ ಹೇಳುತ್ತಿದ್ದಾರೆಯೊ ಅಥವಾ ಹುಡುಗಾಟವಾಡುತ್ತಿದ್ದಾರೆಯೊ ಎಂದು ಸಂದೇಹಕ್ಕೊಳಗಾದರೂ .  ಶಶಾಂಕನ ಮೌನ, ಮಗಳ ಅಳು ಅವರನ್ನು ನಂಬುವಂತೆ ಮಾಡುತ್ತಿದೆ. ಮಗು ಒಳಗೆಲ್ಲೊ ಇರಬಹುದೆಂದು  ಒಳಗೆಲ್ಲ ಹುಡುಕಿದರು. ಮೊಮ್ಮಗಳ ಸುಳಿವು ಕಾಣದೆ ಕಂಗೆಟ್ಟ ಸುಧಾಕರ   ಯಾವುದೊ ದೂರದ ಭರವಸೆಯ ಎಳೆಯ ಹಿಡಿದು” ಯಾರಾದ್ರು ಬಂದು ಮಗುನಾ ಕರೆದು ಕೊಂಡು ಹೋಗಿರ ಬಹುದೆ” ಅಂತ ಕೇಳಿದರು. “ಇಲ್ಲ ಡ್ಯಾಡಿ, ಸಾದ್ಯನೇ ಇಲ್ಲ. ನಿಶಾ ಮಲಗಿದ ಮೇಲೆ ಶಶಾಂಕ ಕೂಡಾ ಮಲಗಿದ್ರು. ಅದಕ್ಕೆ ನಾನೇ ಹೊರಗಿನಿಂದ ಲಾಕ್ ಮಾಡಿಕೊಂಡು ಹೋಗಿದ್ದೆ. ನಾನು ಬಂದ ಮೇಲೆಯೇ ಶಶಾಂಕನ ಏಳಿಸಿದೆ.  ಅವರೂ ಎದ್ದು ನೋಡಿದ್ರೆ ನಿಶಾ ಇಲ್ಲ”  ಬಿಕ್ಕಳಿಸಿದಳು. ಅದಕ್ಕೆ ವಿನಂತಿಯ  ಅಮ್ಮಾ “ಮಲಗಿದ ಮಗು ಇಲ್ಲ ಅಂದ್ರೆ ಹೇಗೆ ವಿನಂತಿ ಬೀಗ ಹಾಕಿದ ಮನೆಯಿಂದ  ಅಷ್ಟು ಸಣ್ಣ ಮಗು ಹೊರಗೆ ಹೋಗಾದಾದ್ರು ಹೇಗೆ ಸಾಧ್ಯ” ಅವರಿಗೂ ದುಃಖ ಉಮ್ಮಳಿಸಿ ಬಂದಿತು. ಕ್ಷಣ ಆಲೋಚಿಸಿದ ಸುಧಾಕರ್” ನಿಮ್ಮನ್ನ ಹೆದರಿಸ ಬೇಕು ಅಂತ ಬೇಕಾಗಿಯೇ ಯಾರೊ ಗೊತ್ತಿರುವರು ನಕಲಿ ಕೀ ಬಳಸಿ ಮಗುನಾ ಎತ್ತಿ ಕೊಂಡು ಹೋಗಿರ ಬಹುದೇ? ” ಅನುಮಾನಿಸಿದರು.” ಇವರು ಮನೆಯಲ್ಲಿಯೇ ಇರುವಾಗ ಯಾರಪ್ಪ ಬರೋಕೆ ಸಾದ್ಯಾ ” ಅವರ ಸಂದೇಹವನ್ನು ತಳ್ಳಿ ಹಾಕಿದಳು. ಮತ್ತೇನು ತೋಚದೆ ಆಘಾತಗೊಂಡು ಕುಳಿತು ಬಿಟ್ಟರು, ಹೆಂಡತಿ, ಮಗಳ ದುಃಖವನ್ನು ನೋಡಲಾರದೆ ಮುದ್ದು ಮೊಮ್ಮಗಳನ್ನು ಕಾಣದೆ ಸುಧಾಕರ್ ತಲೆ ಮೇಲೆ ಕೈ ಹೊತ್ತು ಕುಳಿತು ಬಿಟ್ಟರು. ಶಶಾಂಕ ತನಗಾಗುತ್ತಿರುವ ಸಂಕಟವನ್ನು ವ್ಯಕ್ತಪಡಿಸಲೂ ಆಗದೇ ಮರೆಮಾಚಲೂ ಆಗದೆ ಊಟದ ಟೇಬಲ್ಲಿಗೆ ಮುಖ ಮುಚ್ಚಿ ಅಳುವನ್ನು ನಿಯಂತ್ರಿಕೊಳ್ಳುತ್ತಿದ್ದ. ನಿಧಾನವಾಗಿ ಸುಧಾಕರರೆ ಚೇತರಿಸಿಕೊಂಡು
“ಯಾವುದಕ್ಕೂ ಪೋಲೀಸರಿಗೆ ತಿಳಿಸಿ ಬಿಡೋಣ, ನಮ್ಮ ರಾಹುಲ್ಗೆ ಕೇಳಿ ನೋಡೋಣ. ಮಲಗಿದ್ದ ಮಗು ಮನೆಯಲ್ಲಿ ಇಲ್ಲ ಅಂದ್ರೆ ಏನು” ಅಂತ ಹೇಳುತ್ತಾ ತಮ್ಮ ಸ್ನೇಹಿತನ ಮಗ ರಾಹುಲ್ ಇಲ್ಲಿನ ಪೋಲೀಸ್ ಸ್ಟೇಷನ್ನಿನಲ್ಲಿ ಇನ್‍ಸ್ಪೆಕ್ಟರ್ ಆಗಿದ್ದು ಅವನ ನೆರವು ಪಡೆಯಲು ನಿರ್ಧರಿಸಿ ಅವನಿಗೆ ಫೋನ್ ಮಾಡಿದರು. ರಾಹುಲ್‍ಗೆ ಇವರೆಂದರೆ ಗೌರವ, ತನ್ನ ವಿದ್ಯಾಭ್ಯಾಸದ ದಿನಗಳಲ್ಲಿ ತಮ್ಮ ಮನೆಯಲ್ಲಿಯೇ ಎರಡು ವರ್ಷ ಇರಿಸಿಕೊಂಡು ಓದಿಸಿದ ಬಗ್ಗೆ ಕೃತಜ್ಞತೆ ಅವನಿಗಿತ್ತು. ಹಾಗಾಗಿ ಫೋನ್ ಮಾಡಿದ ಕೂಡಲೆ  ಇಲ್ಲಿಗೆ ಬಂದು ಬಿಟ್ಟ. ವಿಷಯ ತಿಳಿದು ಅವನಿಗೂ ಅಚ್ಚರಿಯಾಗಿತ್ತು. ಮಲಗಿದ ಮಗು ಕಾಣೆಯಾಗಿದೆ ಅಂದರೆ ,ಅದೂ ಮನೆಗೆ ಹೊರಗಿನಿಂದ ಬೀಗ ಹಾಕಿದ್ದು, ಮನೆಯಲ್ಲಿ ಶಶಾಂಕ ಮಲಗಿರುವಾಗ ಹೇಗೆ ಕಾಣೆಯಾಗಲು ಸಾದ್ಯ, ತನ್ನ ವೃತ್ತಿಯಲ್ಲಿಯೇ ಇಂತದನ್ನು ಕಂಡಿರದ ರಾಹುಲ್ ತಾನೂ ಕೂಡಾ ಒಮ್ಮೆ  ಎಲ್ಲಾ ಹುಡುಕಾಡಿದ. ವಿನಂತಿಯನ್ನು ಶಶಾಂಕನನ್ನು ಅನೇಕ ಪ್ರಶ್ನೆಗಳನ್ನು ಕೇಳಿ ತನ್ನ ಅನುಮಾನ ಪರಿಹರಿಸಿ ಕೊಳ್ಳುತ್ತಿದ್ದ. ಅವನ ಮನದಲ್ಲೂ ನೂರು ಸಂದೇಹಗಳು ಹುಟ್ಟಿಕೊಂಡವು. ಯಾರೋ ಹಣಕ್ಕಾಗಿ ಮಗುವನ್ನು ಕಿಡ್ನಾಪ್ ಮಾಡಿರ ಬಹುದು. ವಿನಂತಿ ಹೊರಹೋಗಿದ್ದನ್ನು ಖಚಿತ ಪಡಿಸಿಕೊಂಡು  ಯಾರೋ ಗೊತ್ತಿರುವವರೆ ಈ ಕೆಲಸಮಾಡಿದ್ದಾರೆ ಅನ್ನುವ ನಿರ್ಧಾರಕ್ಕೆ ಬಂದ ರಾಹುಲ್ ” ವಿನಂತಿ ಮೊದಲು ಒಂದು ಕಂಪ್ಲೆಂಟು ಕೊಡು, ಮುಂದಿನದನ್ನ ನಾನು ನೋಡಿ ಕೊಳ್ಳುತ್ತೆನೆ, ನಿನ್ನ ಮಗಳು ಎಲ್ಲೇ ಇರಲಿ ಅವಳನ್ನು ಹುಡುಕಿ ಕೊಡುವ ಜವಾಬ್ದಾರಿ ನನ್ನದು, ನೀನೇನು ಚಿಂತೆ ಮಾಡಬೇಡಾ “ಅಂತ ಸಮಾಧಾನಿಸಿ ಹೊರಡಲು ಅನುವಾಗುವಷ್ಟರಲ್ಲಿ ಬಚ್ಚಲಿಗೆ ಹೋಗಿದ್ದ ವಿನಂತಿಯ ಅಮ್ಮ  ಅಲ್ಲಿಂದಲೇ ಜೋರಾಗಿ ಕೂಗಿಕೊಂಡರು . ಏನಾಯಿತಪ್ಪ ಅಂತ ಎಲ್ಲರೂ ಅಲ್ಲಿಗೆ ಓಡಿದರು. ಏನಾಯಿತಮ್ಮ ಯಾಕೆ ಹಾಗೆ ಕೂಗಿ ಕೊಂಡೆ ಅಂತ ಕೇಳಿದ ವಿನಂತಿಯನ್ನು ನೋಡುತಾ ಬಾಯಿಂದ ಶಬ್ದ ಹೊರಡದೆ ಗಡ ಗಡನೇ ನಡುಗುತಾ ಗೋಡೆಯ ಕಡೆ ಕೈ ತೋರಿದರು . ಅವಳಿಗೆ ಏನೂ ಅರ್ಥವಾಗದೆ” ಮಾತಾಡಮ್ಮ ಏನಿದೆ ಅಲ್ಲಿ ” ಅಮ್ಮನನ್ನು ಅಲುಗಾಡಿಸಿದಳು. ಮುಂದೆ ಬಂದ ಸುಧಾಕರರವರು “ಅಯ್ಯೊ ವಿನಂತಿ ಮಗು ಇಲ್ಲೆ ಇದೆಯಲ್ಲೆ” ಅಂತ ಆರ್ತನಾದ ಮಾಡಿದರು. ಅಲ್ಲಿನ ದೃಶ್ಯ ಭೀಭತ್ಸ್ಯವಾಗಿತ್ತು. ರಾಹುಲನಾದಿಯಾಗಿ ಎಲ್ಲರೂ  ನಡುಗಿ ಹೋದರು. ಮಗು ನಿಶಾ ನೀರು ತುಂಬಿದ ಬಕೆಟಿನಲ್ಲಿ ತಲೆಕೆಳಗಾಗಿ ಬಿದ್ದಿದ್ದಳು. ತಲೆ ನೀರಿನಲ್ಲಿ ಕಾಲುಗಳು ಮೇಲೆ ಇದ್ದವು. ಪ್ರಾಣ ಹೋಗಿ ಎಷ್ಟೋತ್ತಾಗಿತ್ತೊ. ಅದನ್ನು ನೋಡುತಿದ್ದಂತೆ ವಿನಂತಿ ಪ್ರಜ್ಷೆ ತಪ್ಪಿ   ಬಿದ್ದು ಬಿಟ್ಟಳು. ಶಶಾಂಕ ಜೋರಾಗಿ ಕಿರುಚಿಕೊಂಡ. ” ಅಯ್ಯೊ ಚಿನ್ನು ನಿನ್ನ ಹುಟ್ಟಿದ ಹಬ್ಬಕ್ಕೆ ಅಂತ ತಂದಿದ್ದ ಬಕೆಟೇ ನಿಂಗೆ ಕಂಟಕವಾಯ್ತೆ, ಮನೆಗೆ ಎಲ್ಲಾ ನೆಂಟರು ಬರ್ತರೆ, ನೀರು ತುಂಬಲು ದೊಡ್ಡ ಬಕೇಟು ಬೇಕು ಅಂತ ವಿನಂತಿ ಇದನ್ನತರಿಸಿಕೊಂಡದ್ದಳು. ಸಾವನ್ನೆ ಮನೆಗೆ ತಂದಂಗಾಯಿತಲ್ಲ ಅಯ್ಯೊ ದೇವರೆ ನನ್ನ ಮಗುವೇ ನಿಂಗೆ ಬೇಕಾಯ್ತ ‘ಅಂತ ಗಟ್ಟಿಯಾಗಿ ಅಳಲು ಪ್ರಾರಂಭಿಸಿದ. ನಿಶಾ ನಿದ್ದೆಯಿಂದ ಎದ್ದು ಅಮ್ಮನನ್ನು ಹುಡುಕಿಕೊಂಡು ಇಲ್ಲಿಗೆ ಬಂದಿದಾಳೆ. ಬಕೇಟಿನಲ್ಲಿರುವ ನೀರನ್ನು ನೋಡಿ ಆಟವಾಡುತ್ತ ಬಗ್ಗಿರ ಬೇಕು, ಮುಗ್ಗರಿಸಿ ಬಕಿಟಿನೊಳಗೆ ತಲೆಕೆಳಗಾಗಿ ಬಿದ್ದುದರಿಂದ ಮೇಲೇಳಲು ಆಗದೆ ಹಾಗೆಯೇ ಪ್ರಾಣ ಹೋಗಿರ ಬೇಕೆಂದು  ತರ್ಕಿಸಿದರು.

ಮನೆಯ ತುಂಬ ಜನ ತುಂಬಿದ್ದಾರೆ, ಹುಟ್ಟಿದ ಹಬ್ಬಕ್ಕೆ ಬಂದವರೆಲ್ಲಾ ಸಾವಿನ ಸೂತಕಕ್ಕೆ ಬಂದಂತಾಗಿತ್ತು. ಮನೆಯ ತುಂಬಾ ದುಃಖದ ಮಡುವು ತುಂಬಿದೆ, ಎಲ್ಲರ ಮನಸ್ಸಿನಲ್ಲು ನೋವಿನ ವಿಷಾದ. ಮಗುವಿನ ಬಗ್ಗೆ ,  ಅವಳ ದುರಂತ ಸಾವಿನ ಬಗ್ಗೆ, ಮಗಳ  ದಾರುಣ ಅಂತ್ಯದಿಂದ ಶೋಕದ ಮಹಾ ಸಾಗರದಲ್ಲಿ ಮುಳುಗಿರುವ ವಿನಂತಿಯ ಬಗ್ಗೆ ,ಶಶಾಂಕನ ಬಗ್ಗೆ ಎಲ್ಲರಿಗೂ ಅನುಕಂಪದ ಮಹಾ ಪೂರವೇ ಹರಿಯುತ್ತಿದೆ, ಮಗುನನ್ನು ಅಂತಿಮ ಸಂಸ್ಕಾರಕ್ಕೆ ಕೊಂಡೊಯ್ಯವಾಗ ಹೆತ್ತವರ, ಮನೆಯವರ ರೋಧನ ನೋಡಲಾರದೆ ಅಲ್ಲಿದ್ದವರೆಲ್ಲರೂ ಕಣ್ಣೀರಿಟ್ಟರು. ವಿನಂತಿಯನ್ನು ಹಿಡಿಯಲಾಗುತ್ತಲೆ ಇಲ್ಲ. ನನ್ನಿಂದಲೆ ನನ್ನ ಮಗಳು ಸತ್ತದ್ದು, ನಾನು ಪಾಪಿ ಅವಳನ್ನು ಬಿಟ್ಟು ನಾನು ಹೊರ ಹೋಗಬಾರದಿತ್ತು.ಅವಳು ಸಾಯಲೆಂದೆ  ಹೊಸ ಬಕೆಟು ತಂದೆನೇನೊ ಅಂತ ತಲೆ ಚಚ್ಚಿ ಕೊಂಡು ಅಳುತ್ತಿದ್ದರೆ ನೋಡುಗರ ಹೃದಯ ನೋವಿನಿಂದ ಮಿಡಿಯುತ್ತಿತ್ತು. ನಿಶಾ ತನ್ನ ಮೊದಲ ಹುಟ್ಟಿದ ಹಬ್ಬ ಆಚರಿಸಿ ಕೊಳ್ಳುವ ಮೊದಲೆ ಅವಳ ಅಧ್ಯಾಯ ಮುಗಿದು ಹೋಗಿತ್ತು.
ರಾಹುಲ್ ಪ್ರತಿದಿನ ಮನೆಗೆ ಬಂದು ಮನೆಯವರನ್ನು ಸಮಾಧಾನಿಸಲು  ಪ್ರಯತ್ನಿಸುತ್ತಿದ್ದ. ಅವನು ಪ್ರತಿ ದಿನ ಬರಲು ಕಾರಣವೂ ಇತ್ತು. ನಿಶಾಳ ಸಾವು ಯಾಕೊ ಅವನಲ್ಲಿ ಒಂದು ಅನುಮಾನದ ಎಳೆಯನ್ನು ಹುಟ್ಟು ಹಾಕಿತ್ತು. ಮನೆಗೆ ಬಂದವನೇ ಬಚ್ಚಲು ಮನೆಗೆ ಹೋಗಿ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದ. ನಿಶಾ ಬಿದ್ದ ಬಕೇಟು ನಿಶಾಳಿಗಿಂತ ಎತ್ತರವಾಗಿತ್ತು. ಅವಳು ಅದರೊಳಗೆ ಕೈ ಹಾಕಿ ಆಡಲು ಸಾದ್ಯವೇ, ಆಡುವಾಗ ಆಕಸ್ಮಿಕವಾಗಿ ಬೀಳಲು ಸಾದ್ಯಾವೇ, ಅಂತ ಮೇಲಿಂದ, ಮೇಲೆ ಯೋಚಿಸುತ್ತಿದ್ದ. ಆದರೆ ತನ್ನ ಅನುಮಾನ ಯಾರಿಗೂ ಗೊತ್ತಾಗದ ಹಾಗೆ ಎಚ್ಚರವಾಗಿದ್ದ. ಒಂದು ವೇಳೆ ತನ್ನ ಅನುಮಾನ ಸುಳ್ಳಾಗಿ ಬಿಟ್ಟರೆ ಅಂತ ಜಾಗರೂಕನಾಗಿದ್ದ. ಹಾಗೆ ಬಂದು ವಿನಂತಿಯ ಜೊತೆ ಮಾತಾನಾಡುತ್ತ ಕುಳಿತಿದ್ದಾಗಲೇ ನಿಶಾಳಿಗೆ ನೀರೆಂದರೆ ತುಂಬ ಭಯ, ಅವಳು ಯಾವತ್ತೂ ನೀರಿನಲ್ಲಿ ಆಟವಾಡಲು ಆಸೆ ಪಡುತ್ತಿರಲಿಲ್ಲ. ಸ್ನಾನ ಅಂದರೆ ಅವಳಿಗೆ ಅಲರ್ಜಿ. ಬಚ್ಚಲಿಗೆ ಕರೆದುಕೊಂಡು ಬಂದರೆ ಸಾಕು ತುಂಬ  ಅಳುತ್ತಿದ್ದಳು.  ಬಚ್ಚಲು ಮನೆ ಅಂದರೆ ಸ್ನಾನ, ಬಿಸಿ ನೀರು ಅನ್ನೊ ಕಲ್ಪನೆ ಅವಳದು ಹಾಗಾಗಿ ಬಚ್ಚಲು ಮನೆಯನ್ನು ತಿರುಗಿಯೂ ನೋಡುತ್ತಿರಲಿಲ್ಲ. ಅದು ಹೇಗೆ ಅವಳು ಅವತ್ತು ಬಚ್ಚಲು ಮನೆಗೆ ಹೋಗಿ ನೀರಿನಲ್ಲಿ ಆಡಲು ಹೋದಳೊ ಅಂತ ಮಾತಿನ ಮಧ್ಯೆ  ವಿನಂತಿ ಹೇಳಿದಾಗ ರಾಹುಲನ ಅನುಮಾನಕ್ಕೆ ಮತ್ತಷ್ಟು  ಪುಷ್ಟಿ ದೊರಕಿದಂದಾಯಿತು. ಅದಷ್ಟೆ ಅವನ ಅನುಮಾನಕ್ಕೆ ಜೀವ ಬರುವಂತಿರಲಿಲ್ಲ. ಮತ್ತೂ ಆಳವಾಗಿ ಪುರಾವೆಗಾಗಿ ಹುಡುಕಾಟ ನಡೆಸಿದ್ದ. ಶಶಾಂಕನಿಗೆ ಮತ್ತೊಂದು ಮಗುವಿನ ಆಸೆ ಇತ್ತು. ಆದರೆ ನಾನೆ ನಿಶಾ ಒಬ್ಬಳೇ ಸಾಕು ಅಂತ ತೀರ್ಮಾನಿಸಿದ್ದೆ. ನಿಶಾಳ ಹುಟ್ಟಿದ ಹಬ್ಬ ಆದ ಕೂಡಲೇ ಫ್ಯಾಮಿಲಿ ಪ್ಲಾನಿಂಗೆ ಆಪರೇಷನ್ನಿಗೆ ಹೋಗುವವಳಿದ್ದೆ. ಅಷ್ಟರೊಳಗೆ ಈ ದುರಂತ ಸಂಭವಿಸಿ ಬಿಟ್ಟಿತು ಅಂತ ವಿನಂತಿ ಕಣ್ಣೀರು ಹಾಕುತ್ತಾ ಹೇಳಿದಾಗ ರಾಹುಲನ ಅನುಮಾನದ ಕೊಂಡಿ ಗಟ್ಟಿಯಾಯಿತು. ಇನ್ನು ಅನುಮಾನ ಬೇಡಾ,  ಕೊಲೆಗಾರ ಸಿಕ್ಕಿ ಹಾಕಿಕೊಂಡು ಬಿಟ್ಟ. ಕೊಲೆಗಾರನಿಗೆ ಶಿಕ್ಷೆಯಾಗಲೆ ಬೇಕು ಅಂತ ಆ ಕ್ಷಣವೇ ತೀರ್ಮಾನಿಸಿ ಬಿಟ್ಟ.
ಅವತ್ತು ಬೆಳಗ್ಗೆನೇ ತನ್ನ ಸಿಬ್ಬಂದಿಯೊಂದಿಗೆ ಹಾಜರಾದ ರಾಹುಲ್ , ರೂಮಿನಲ್ಲಿ ಮಲಗಿದ್ದ ಶಶಾಂಕನ ಕೈಗೆ ಕೋಳ ಹಾಕಿ” ಏಳೊ ಪಾಪಿ, ಹೆತ್ತ ಮಗಳನ್ನೆ ಕೊಂದ ದುಷ್ಟ, ಗೋಮುಖ ವ್ಯಾಘ್ರ ನೀನು , ಈ ಮನೆಯಲ್ಲಿರಲು ನಿನಗೆ ಅರ್ಹತೆ ಇಲ್ಲ. ಮುದ್ದು ಮಗುವನ್ನು ಕೊಲ್ಲಲು ನಿನಗೆ ಮನಸ್ಸಾದರೂ ಹೇಗೆ ಬಂತು” ಜೋರಾಗಿ ಗರ್ಜಿಸುತ್ತ ಒದ್ದು ಎಳೆದು ಕೊಂಡು ಬಂದಾಗ ವಿನಂತಿ “ರಾಹುಲ್ ಏನು ಮಾಡ್ತಾ
ಇದ್ದಿಯಾ ನೀನು” ಆಘಾತ ಗೊಂಡು ಕೂಗಿದಳು. ಸುಧಾಕರ್ ,ವಿನಂತಿಯ ಅಮ್ಮ. ಶಶಾಂಕನ ಅಪ್ಪ ಅಮ್ಮ ಎಲ್ಲರೂ  ಶಾಕಿನಿಂದ ಸ್ತಬ್ಧರಾಗಿ ನಿಂತು ಬಿಟ್ಟಿದ್ದರು,
” ಇವನೆಂತ ರಾಕ್ಷಸ ಗೊತ್ತಾ ನಿಮಗೆ, ಇವನಿಗೆ ಹೆಣ್ಣು ಮಕ್ಕಳೆಂದರೆ ಇಷ್ಟವಿಲ್ಲ. ತನಗೆ ಮಗನೇ ಹುಟ್ಟಬೇಕೆಂದು ಬಯಸಿದ್ದ, ಅದಕ್ಕೆ ನಿಶಾ ಹುಟ್ಟಿದಾಗ ಅವಳನ್ನು ನೋಡಲು ತುಂಬಾ ದಿನದ ವರೆಗೆ ಹೋಗಿಯೇ ಇರಲಿಲ್ಲ. ಅವಳನ್ನು ನಿವಾರಿಸಿಕೊಳ್ಳಲು  ಬಹಳ ಚೆನ್ನಾಗಿಯೇ ಪ್ಲಾನ್ ಮಾಡಿದ್ದ. ಮಗುವಿನ ಬಗ್ಗೆ ಪ್ರೀತಿ ಇರುವಂತೆ ನಟಿಸುತ್ತಿದ್ದ. ಬೇರೆಯವರಂತೆ ದುಡುಕಿ ಸಾರ್ವಜನಿಕವಾಗಿ ಒದೆ ತಿನ್ನುವುದು ಅವನಿಗೆ ಇಷ್ಟವಿರಲಿಲ್ಲ. ಹಾಗಾಗಿಯೇ ನಿಶಾಳನ್ನು ಕೊಲ್ಲಲು ಹುಟ್ಟಿದ ಹಬ್ಬದ ಹಿಂದಿನ ದಿನವನ್ನು ಆರಿಸಿಕೊಂಡ. ಅದಕ್ಕೆ ಸಾಕ್ಷಿ ಅವನು ನಿಶಾಳ ಹುಟ್ಟಿದ ದಿನ ಆಚರಿಸಲು ಯಾವ ಹೋಟಲನ್ನೂ ಬುಕ್ ಮಾಡಿಸಿರಲಿಲ್ಲ. ಕ್ಯಾಟರಿಂಗ್ ಕೂಡಾ ಕೊಟ್ಟಿರಲಿಲ್ಲ.  ಆ ಹೋಟೆಲಿನಲ್ಲಿ ಅದೇ ದಿನ ನನ್ನ ಕೊಲೀಗ್ ತಂಗಿಯ  ಎಂಗೇಜ್‍ಮೆಂಟ್ ಇತ್ತು. ನೋಡಿ ಇನ್ವಟೇಷನ್ ಕಾರ್ಡು.  ಈ  ಇನ್ವಟೇಷನ್ ಕಾರ್ಡು ನನಗೆ ಆಮೇಲೆ ಸಿಕ್ಕಿತು.  ನನಗೆ ಅವತ್ತೆ  ಅನುಮಾನ ಬಂದಿತ್ತು. ಬಕೆಟ್ ನಿಶಾಗಿಂತ ಎತ್ತರವಾಗಿತ್ತು , ಮಗು ತಾನಾಗಿಯೇ ಬೀಳುವುದು ಸಾದ್ಯವಿಲ್ಲ ಅಂತ ಅನ್ನಿಸಿತ್ತು. ಅಲ್ಲದೆ ನಿಶಾಗೆ ನೀರೆಂದರೆ ಭಯ ಅಂತ ಹೇಳಿದ್ದು, ಇವನಿಗೆ ಮತ್ತೊಂದು ಮಗು ಬೇಕಾಗಿದದ್ದು, ನೀನು ಆಪರೇಷನ್ನಿಗೆ ಸಿದ್ದವಾದದ್ದುಎಲ್ಲವೂ  ನನ್ನ ಅನುಮಾನವನ್ನು ಬಲಗೊಳಿಸಿದವು.  ಇವನಿಗೆ ಹೆಣ್ಣು ಮಕ್ಕಳೆಂದರೆ ಇಷ್ಟವಿಲ್ಲ ಅಂತ ಅವನ ತಂಗಿ   ಹೇಳಿದ್ದು  ನನಗೆ ನೆನಪಿತ್ತು. ಆದರೆ ಇವನು ನಾಟಕ ಆಡ್ತ ಇದ್ದಾನೆ ಅಂತ ಯಾರಿಗೂ ಗೊತ್ತಾಗಲಿಲ್ಲ . ಎಲ್ಲರನ್ನು ಯಾಮಾರಿಸ ಬಹುದು ಅಂತ ಅಂದು ಕೊಂಡು ಬಿಟ್ಟಿದ್ದ, ಆದರೆ ಅದೃಷ್ಟ ಅವನಿಗೆ ನನ್ನ ರೋಪದಲ್ಲಿ ಕೈ ಕೊಟ್ಟು ಬಿಟ್ಟಿತು. ಪಾಪಿ ಕೊನೆಗೂ ಸಿಕ್ಕಿಕೊಂಡು ಬಿಟ್ಟ, ಮಲಗಿದ್ದ ಮಗುವನ್ನು ಎತ್ತಿಕೊಂಡು ಬಂದು ಬಕೇಟಿನಲ್ಲಿದ್ದ ನೀರಿನಲ್ಲಿ ಮುಳುಗಿಸಿ ಸಾಯಿಸಿದ್ದಾನೆ. ಹೆತ್ತ ಮಗುವನ್ನು ಅದು ಆ ಮುದ್ದು ಕಂದಮ್ಮನನ್ನು  ಕೊಲ್ಲಲು ಮನಸ್ಸಾದರು ಹೇಗೆ ಬಂತೂ ಬಾಷ್ಟರ್ಡ ನಿಂಗೆ” ಕೆನ್ನೆಗೊಂದು ಜೋರಾಗಿ ಬಿಗಿದು ಕೇಳಿದ. ಸಿಕ್ಕಿಕೊಂಡ ಆಘಾತದಲ್ಲಿ ದಿಗ್ಮೂಢನಾಗಿ ನಿಂತು ನಿಂತು ಬಿಟ್ಟಿದ್ದ ಕೊಲೆಗಾರ. ಹೆತ್ತ ಮಗು ಸತ್ತ ದುಃಖಕ್ಕಿಂತ ಗಂಡನೇ ತನ್ನ ಕರುಳ ಕುಡಿಯ ಕೊಲೆಗಾರ ಅನ್ನುವ ದುಃಖವೇ ಹೆಚ್ಚಾಗಿ ಅದನ್ನು ಅರಗಿಸಿಕೊಳ್ಳಲಾರದ ವಿನಂತಿಗೆ ಮನಸಿಕವಾಗಿ ಆಘಾತವಾಗಿತ್ತು. ಅವಳೀಗ ಪಿಳಿ ಪಿಳಿ ಕಣ್ಣು ಬಿಡುತಾ ಯಾವುದೋ ಲೋಕಕ್ಕೆ ಹೋಗಿಬಿಟ್ಟಿದ್ದಳು.

ನಿಗೂಢ ಕಥೆಯನ್ನು ಓದಿದ್ರಲ್ಲ ನನ್ನ ಪ್ರಿಯರೇ ಮತ್ತೆ ಮುಂದಿನವಾರ ಮತ್ತೊಂದು ವಿಶೇಷ ಕಥೆ ಯೊಂದಿಗೆ ಬೆಟ್ಟಿ ಆಗೋಣ ನಮಸ್ಕಾರ  ಶುಭವಾರ.

ಕಳೆದ ಭಾನುವಾರದ ಕನಸಿನ ಮರ ಕಥೆ ಓದಿದ ನಮ್ಮ ಪ್ರಿಯಾ ಓದುಗರ ಅನಿಸಿಕೆ ಕಳುಹಿಸಿದ್ದಾರೆ ಅವರೆಲ್ಲರಿಗೂ, ಕಥೆ ಬರೆದ ಶೈಲಜಾ ಹಾಸನ್ ರವರಿಗೆ ಧನ್ಯವಾದಗಳು

1 .Kanasina mara thumba chennagide idu namma Indian Dina nithyadalli nedeyuva Ella ghatanegalu mattu vyaktigalige sambanda pattaddu kevala tengina marakee mathrakke seemithavagilla 👍👍🙏🙏 ಶಂಕರ,ಬಾಂಬೆ

2. ಕಷ್ಟಪಟ್ಟು ದುಡಿಮೆ ಮಾಡಿ ಬದುಕುವ ಜನರನ್ನು ನೋಡಿ ಸಹಿಸುವುದಿಲ್ಲ ಮೇಡಂ….. ಬಹಳ ಅರ್ಥಪೂರ್ಣ ಬರಹ..ಮೇಡಂ…ಅಭಿನಂದನೆಗಳು🙏💐🌹 ಸುಭದ್ರ, ಬೆಂಗಳೂರು

3. ಈ ವಾರದ ಕಥೆ ಕನ್ಸಿನ ಮರ ಈ ಕಥೆ ಗಮನಿಸಿದಾಗ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಎಂಥಾ ಹೇಯ ಕೃತ್ಯ ಕೈಗೊಳ್ಳಲು ಸಿದ್ದ ಮನೆ ನಿರ್ಮಾಣಕ್ಕಾಗಿ ಕಷ್ಟಪಟ್ಟು ಬೆಳಸಿದ ತೆಂಗಿನ ಮರದ ನಾಶಕ್ಕಾಗಿ ಈ ಅನ್ಯಾಯಕ್ಕೆ ಪ್ರತಿಭಟನೆ ಮಾಡಿದವರ ಕೈಯನ್ನೇ ಕತ್ತರಿಸಿದ ಈ ಕಥೆ ಮನ ಮಿಡಿಯುವಂತಿದೆ ಇಂಥ ಕಥೆ ರಚಿಸಿದ ಶೈಲಜಾ ಹಾಸನ ಮೇಡಂ ಅವರಿಗೂ ಹಾಗೂ ಇಂಥ ಕಥೆ ಪ್ರಕಟಿಸಿದ್ದಕ್ಕಾಗಿ ಬೆಳಗಾವಿ ಪೋಟೋ ನ್ಯೂಸ್ ಚಾನಲ್ ಸಂಚಾಲಕರಾದ ಟೈಗರ್ ಸರ್ ನಿಮಗೂ ಕೂಡ ಹೃದಯ ಪೂರ್ವಕ ಧನ್ಯವಾದಗಳು. ಅರುಣ್ ದೇಶಪಾಂಡೆ ಹುಬ್ಬಳ್ಳಿ




By BPN

Leave a Reply

Your email address will not be published. Required fields are marked *