---Advertisement---

Advertisement

“ಸಾವಿತ್ರಮ್ಮ..ಸಾವಿತ್ರಮ್ಮ…ಸಾವಿತ್ರಮ್ಮ..”

ದಿಢೀರ್ ಪ್ರಚಲಿತಕ್ಕೆ ಬಂದ ಹೆಸರಿದು..ದಿನ ಬೆಳಗಾಗುವುದರೊಳಗೆ ಎಲ್ಲರ ಕಿವಿ..ಬಾಯಲ್ಲಿ ಕೇಳಿ ಬರಲಿಕ್ಕೆ ಶುರು ವಾದ ಹೆಸರಿದು. ಮಾತೃ ಹೃದಯಿ.. ಅನಾಥ ಮರಿಗಳ ಪಾಲಿನ ಅಮ್ಮ,ತಬ್ಬಲಿತನ ನೀಗುವ ಕರುಣಾಮಯಿ, ದೀನತೆ ತುಂಬಿದ ಮಹಿಳೆ..ಹೀಗೆ ಏನೆಲ್ಲಾ..ಎಷ್ಟೆಲ್ಲಾ ಹೊಗಳಿಕೆ,ಬಿರುದು-ಪ್ರಶಂಸೆಗಳು..ತನ್ನ ಅಪರೂಪ-ಅಪೂರ್ವ-ಅಪ್ರತಿಮ ಕೆಲಸದ ಮೂಲಕ ದೇಶದ ತುಂಬೆಲ್ಲಾ ಹೆಸರಾದ ಸಾವಿತ್ರಮ್ಮ,ನಿಜಕ್ಕೂ ನಮ್ಮ ಕನ್ನಡದ ಹೆಮ್ಮೆ, ಗೌರ ವದ ಪ್ರತೀಕ.ವಿಶಿಷ್ಟ ಸಾಧಕಿ ಎನ್ನುವುದರಲ್ಲಿ ಸಂದೇಹವೇ ಇಲ್ಲ..

 

ಬನ್ನೇರುಘಟ್ಟ ಜೈವಿಕ ಉದ್ಯಾನವನ ದಲ್ಲಿ ತಬ್ಬಲಿ ಚಿರತೆ-ಹುಲಿ-ಸಿಂಹದ ಮರಿಗಳ ಪೋಷಣೆಯಲ್ಲಿ ನಿರತವಾಗಿ ರುವ ( ಹಲವಾರು ವರ್ಷಗಳಿಂದಲೂ ತಬ್ಬಲಿ ಮರಿಗಳ ಆರೈಕೆ-ಪೋಷಣೆ ಯಲ್ಲಿ ಸಾವಿತ್ರಮ್ಮ ನಿರತವಾಗಿದ್ದಾರೆ- 50ಕ್ಕೂ ಹೆಚ್ಚು ತಬ್ಬಲಿ ಮರಿಗಳನ್ನು ಪೊರೆದು ಪೋಷಣೆ ಮಾಡಿದ್ದಾರೆ.ಆದರೆ ಪ್ರಚಲಿತಕ್ಕೆ ಬಂದಿದ್ದು ಈಗ ಅಷ್ಟೇ) ಸಾವಿತ್ರಮ್ಮ ದೇಶದ ಇತಿಹಾಸದಲ್ಲೇ ಅಪರೂಪದ ಕೆಲಸ ಮಾಡುತ್ತಿದ್ದಾರೆ.ಅದು ಕಷ್ಟ ಅಷ್ಟೇ ಅಲ್ಲ ಸವಾಲಿನ ಕೆಲಸವೂ ಹೌದು. ಇಂತದ್ದೊಂದು ಕೆಲಸ ಮಾದ್ಯಮಗಳ ಮೂಲಕ ಜಗಜ್ಜಾಹೀರಾದದ್ದು ಸ್ವಾಗತಾರ್ಹ.

 

ಆದರೆ ಇಷ್ಟು ದಿನಗಳಲ್ಲಿ, ಸಾವಿತ್ರಮ್ಮರಂಥ ಮಾತೃಹೃದಯಿಯ ಬದುಕಿನ ಒಳಹೊಕ್ಕು ನೋಡುವ ಕೆಲಸ ನಡೆದಿದ್ದು ಅಷ್ಟಕ್ಕಷ್ಟೇ. ಬಹುತೇಕ ಮಾದ್ಯಮಗಳು ಸಾವಿತ್ರಮ್ಮರ ಬದುಕನ್ನು ಅನಾಥ-ತಬ್ಬಲಿ ಮರಿಗಳ ಲಾಲನೆ ಪಾಲನೆ ಮಾಡುವ ಪಶುಪಾಲಕಿ ಸ್ಥಾನಮಾನಕ್ಕೆಷ್ಟೇ ಸೀಮಿತಗೊಳಿಸಿದ್ವು.ಒಂದು ಸಣ್ಣ ಕುತೂಹಲಕ್ಕೋ.. ಕಾಳಜಿಗೋ.. ಸಾಮಾಜಿಕ ಬದ್ಧತೆಗೋ.. ಅದರಾಚೆ ಇಣುಕಿ ನೋಡುವ ಕೆಲಸ ನಡೆದದ್ದು ತೀರಾ ಕಡ್ಮೆ.

 

ಸಾವಿತ್ರಮ್ಮ ಯಾರು..? ಆಕೆಯ ಹಿನ್ನಲೆ ಏನು..? ಆಕೆಯ ಜೀವನ ನಿರ್ವಹಣೆ ಹೇಗೆ ನಡೆಯುತ್ತಿದೆ..? ಮರಿಗಳ ಲಾಲನೆ ಪಾಲನೆ ಮಾಡುವ ಆಕೆಯ ಹೊಟ್ಟೆಪಾಡು ಹೇಗಿದೆ..?ಆರಾಮಾಗಿದೆಯೋ,ಕಷ್ಟ ಸಂಕಷ್ಟಗಳಿಂದ ಕೂಡಿದೆಯೋ..? ಕಷ್ಟದಿಂದ ಕೂಡಿದ್ರೆ ಆಕೆಯ ಬದುಕನ್ನು ದಡಸೇರಿಸಲು ತತ್ ಕ್ಷಣಕ್ಕೆ ಆಗಬೇಕಿರುವುದೇನು…? ಏನ್ ಮಾಡಿದ್ರೆ ಆಕೆಯ ಬದುಕು ಹಸನಾಗುತ್ತೆ..? ಕಷ್ಟ ದೂರವಾಗುತ್ತೆ..? ಆಕೆಯ ಮುಖದಲ್ಲಿ ಮಂದಹಾಸ ಮೂಡುತ್ತೆ..? ಎನ್ನುವುದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನಗಳಾಗಿದ್ದು ಕಡಿಮೆ..ಆದರೆ ಅಂತದ್ದೊಂದು ಕೆಲಸವನ್ನು ನಾವು ಮಾಡುತ್ತಿದ್ದೇವೆ .ಆಕೆಯ ಬದುಕು ಸರಿಯಾಗಿ,ನಿರೀಕ್ಷೆಗಳು ಕೈ ಗೂಡಿ, ಮುಖದಲ್ಲೊಂದು ಮಂದಹಾಸ,ಬದುಕಿನಲ್ಲೊಂದು ನೆಮ್ಮದಿ ಮೂಡಿದ್ರೆ ಪ್ರಯತ್ನ ಸಾರ್ಥಕ ಎಂದು ಭಾವಿಸ್ತೇವೆ.

 

ಸಾವಿತ್ರಮ್ಮ ಯಾರು..ಆಕೆಯ ಹಿನ್ನಲೆ ಏನು..?:ಸಾವಿತ್ರಮ್ಮ ವಿಧವೆ.ಗಂಡನನ್ನು ಕಳೆದುಕೊಂಡು ವೈದವ್ಯವನ್ನು ಅನುಭವಿಸುತ್ತಿರುವ ಮಹಿಳೆ. ಸುಮಾರು 20 ವರ್ಷಕ್ಕಿಂತಲೂ ಹಿಂದೆ ಗಂಡನನ್ನು ಕೆಟ್ಟ ಸನ್ನಿವೇಶವೊಂದರಲ್ಲಿ ಕಳೆದುಕೊಂಡವರು ಸಾವಿತ್ರಮ್ಮ.ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರನಾಗಿದ್ದ ವೆಂಕಟರಾಜು ಸುವರ್ಣಮುಖಿ ಎನ್ನುವ ಬೀಟ್ ನಲ್ಲಿ ಅರೆಕಾಲಿಕ ವಾಚರ್ ( ಅರಣ್ಯ ವೀಕ್ಷಕ) ಆಗಿ ಕೆಲಸ ಮಾಡುತ್ತಿದ್ದರಂತೆ.

ಚಾಕು ಇರಿತಕ್ಕೊಳಗಾಗಿ ಗಂಡನನ್ನು ಕಳೆದುಕೊಂಡ ಹತಭಾಗ್ಯೆ ಸಾವಿತ್ರಮ್ಮ: ಯಾವುದೋ ಒಂದು ದಿನ ಕೆಲಸದಲ್ಲಿರುವಾಗ ವಿಷಮಘಳಿಗೆಯಲ್ಲಿ ದುಷ್ಕರ್ಮಿಗಳಿಂದ ಚಾಕು ಇರಿತಕ್ಕೆ ತುತ್ತಾಗಿ ವೆಂಕಟರಾಜು ಕೊನೆಯುಸಿರೆಳೆಯುತ್ತಾರೆ.ಗಂಡನನ್ನೇ ನೆಚ್ಚಿಕೊಂಡಿದ್ದ ಸಾವಿತ್ರಮ್ಮಗೆ ಆಕಾಶವೇ ಕಳಚಿಬಿದ್ದ ಅನುಭವ.ಬದುಕಿನುದ್ದಕ್ಕೂ ಜತೆಗಿರುತ್ತೇನೆಂದು ಮಾತು ಕೊಟ್ಟ ಗಂಡ ಬದುಕಿನ ಪಯಣದ ನಡುವೆ ಬಿಟ್ಟು ಹೋಗಿದ್ದನ್ನು ಅರಗಿಸಿಕೊಳ್ಳಲಾಗದ ಸ್ಥಿತಿ.ದಿಕ್ಕುತೋಚದಂತಾದ್ರು ಸಾವಿತ್ರಮ್ಮ.ಆದರೆ ತನ್ನ ಎರಡು ಮಕ್ಕಳಿಗಾಗಿಯಾದರೂ ಬದುಕಬೇಕೆನ್ನುವ ಇರಾದೆಯಲ್ಲಿ ಬದುಕನ್ನು ಸವಾಲಾಗಿ ಸ್ವೀಕರಿಸಿ ಕಠಿಣ ಸವಾಲು-ಸಂಕಷ್ಟದ ಎಷ್ಟೋ ಪರಿಸ್ತಿತಿಗಳಿಗೆ ಎದೆಯೊಡ್ಡಿದ ಗಟ್ಟಿಗಿತ್ತಿ.

 

ಎರಡು ಪುಟ್ಟ ಮಕ್ಕಳನ್ನಿಟ್ಟುಕೊಂಡು ಬದುಕು ನಡೆಸ್ಲಿಕ್ಕೆ ನಿರ್ದಾರ ಮಾಡಿದರಾದ್ರೂ ಜೀವನೋಪಾಯಕ್ಕೆ ಏನ್ ಮಾಡೋದೆನ್ನುವ ಪ್ರಶ್ನೆ ಸೃಷ್ಟಿಯಾದಾಗ ಅನುಕಂಪದ ಆಧಾರದಲ್ಲಿ ಕೆಲಸ ಸಿಗ್ತು.ತಿಂಗಳೆಲ್ಲಾ ದುಡಿದ್ರೂ ಸಿಗುತ್ತಿದ್ದ ಪುಡಿಗಾಸಿನ ಸಂಬಳದಲ್ಲಿ ಜೀವನ ನಡೆಸೋದು ದುಸ್ತರವಾಗುತ್ತಿತ್ತು.ಆದರೆ ಕಣ್ಣೀರು ನುಂಗಿ,ಕಷ್ಟಗಳಿಗೆ ಸಹಿಷ್ಣುಳಾದ ಸಾವಿತ್ರಮ್ಮ ಬದುಕು ಸವೆಸಿದ್ದು.ಮಕ್ಕಳನ್ನು ಬೆಳೆಸಿದ್ದು ಒಂದ್ ರೀತಿ ತಪಸ್ಸು ಎನ್ತಾರೆ ಸಂಬಂಧಿ ನರಸಿಂಹಮೂರ್ತಿ.

 

ಸಾವಿತ್ರಮ್ಮಗೆ ಇಬ್ಬರು ಮಕ್ಕಳು,ಶಶಿ ಎನ್ನುವ ದೊಡ್ಡ ಮಗ ಝೂನಲ್ಲೇ ಡ್ರೈವರ್ ಆಗಿ ಕೆಲಸ ಮಾಡ್ತಿದಾನಂತೆ. ಇನ್ನೊಬ್ಬ ಮಗ ಪರಶುರಾಮ ಓದಿಕೊಂಡು ಉದ್ಯೋಗನಿರೀಕ್ಷೆಯಲ್ಲಿದ್ದಾನಂತೆ.ಸಾವಿತ್ರಮ್ಮಗೆ ಬರೋ ಸಂಬಳ 20 ಸಾವಿರ.ಮಗ ಶಶಿಗೆ 10 ಸಾವಿರ ಸಂಬಳ.ಇಷ್ಟರಲ್ಲೇ ಸಂಸಾರ ನಡೆಯಬೇಕಿದೆ.ತೂಗಿ ಅಳೆದು ಸಂಸಾರ ನಡೆಸಬೇಕಾ ದ ಸ್ಥಿತಿಯಲ್ಲಿರುವ ಕುಟುಂಬಕ್ಕೆ ಆಸರೆ ಬೇಕಿದೆ.ಅದು ಒಂದು ಸೂರು ಮತ್ತು ಸಾವಿತ್ರಮ್ಮಳ ಉದ್ಯೋಗ ಖಾಯಂ ಆಗುವ ಮೂಲಕ.

 

ಸ್ವಂತ ಸೂರಿಲ್ಲ..ಹುದ್ದೆ ಖಾಯಂ ಆಗಿಲ್ಲ: ಜನತಾಸೈಟ್ ನಲ್ಲಿದ್ದ ಮನೆಯನ್ನು ಉರುಳಿಸಿ ಸಧ್ಯ ಬಾಡಿಗೆ ಮನೆಯಲ್ಲಿ ಸಾವಿತ್ರಮ್ಮ ಹಾಗೂ ಇಬ್ಬರು ಮಕ್ಕಳು ಬದುಕ್ತಿದಾರೆ.ಮನೆ ಕಟ್ಟಿಸುವ ಆಸೆಯಲ್ಲಿ ಅವರಿವರ ಬಳಿ ನೆರವಿಗೆ ಅಂಗಲಾಚ್ತಿದಾರೆ.ಆದರೆ ಸಿಕ್ಕ ಸಹಾಯ ಅಷ್ಟಕ್ಕಷ್ಟೆ..ಟಿವಿ-ಪೇಪರ್ ಗಳಲ್ಲಿ ಸಾವಿತ್ರಮ್ಮ ಫೇಮಸ್ ಆದ್ಮೇಲೆ,ಅವರಿಗೆ ಸಿಗ್ತಿರುವುದು ಪಬ್ಲಿಸಿಟಿ-ಹೊಗಳಿಕೆ ಬಿಟ್ಟರೆ ಇನ್ನೇನು ಅಲ್ಲ.ಈ ಪ್ರಚಾರದ ಅವಶ್ಯಕತೆ ಖಂಡಿತಾ ಅವರಿಗಿಲ್ಲವಂತೆ.ಅದರಿಂದ ಹೊಟ್ಟೆ ತುಂಬೋದು ಅಷ್ಟರಲ್ಲೇ ಇದೆ.ಸ್ವಂತಕ್ಕೊಂದು ಸೂರಾಗಬೇಕೆಂಬ ಕನಸನ್ನು ನನಸು ಮಾಡಿಕೊಳ್ಳೊಕ್ಕೆ ಹಗಲಿರುಳು ಶ್ರಮಿಸುತ್ತಿರುವ ಸಾವಿತ್ರಮ್ಮರಿಗೆ ಬೇಕಿರುವುದು ಆರ್ಥಿಕ ಸಹಾಯ ಹಸ್ತ..ಅದನ್ನು ಮಾಡಿಕೊಟ್ಟರೆ ಬಹಳ ಉಪಕಾರವಾಗುತ್ತೆ.ಆಕೆಯ ಬದುಕು ಹಸನಾಗುತ್ತೆ.ಇಷ್ಟು ವರ್ಷ ಕಷ್ಟಪಟ್ಟಿದ್ದೂ ಸಾರ್ಥಕವಾಗುತ್ತದೆ ಎನ್ನುತ್ತಾರೆ ಸಾವಿತ್ರಮ್ಮರ ನೆರೆಹೊರೆಯವರು.

 

ಇವತ್ತಿಗೆ 21 ವರ್ಷಗಳಾಗಿವೆ ಸಾವಿತ್ರಮ್ಮ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಭಾಗವಾಗಿ.ಆರಂಭದಲ್ಲಿ ಸಣ್ಣಪುಟ್ಟ ಕೆಲಸ ಮಾಡ್ಕೊಂಡಿದ್ದ ಸಾವಿತ್ರಮ್ಮಳ ಕಾಳಜಿ-ಬದ್ಧತೆ-ಶೃದ್ಧೆ ಆಕೆಯನ್ನು ಪಶುಪಾಲನೆ ಆಸ್ಪತ್ರೆಯಲ್ಲಿ ತಬ್ಬಲಿ ಪ್ರಾಣಿಗಳ ಮರಿಗಳ ಲಾಲನೆ-ಪಾಲನೆ ಹೊಣೆಗಾರಿಕೆವರೆಗೆ ತಂದು ನಿಲ್ಲಿಸಿದೆ. ಅಗಾಧ ಕಷ್ಟಗಳ ನಡುವೆ ಯೂ ತನ್ನ ಇಬ್ಬರು ಮಕ್ಕಳನ್ನು ಪ್ರೀತಿ-ಕಾಳಜಿಯಿಂದ ಬೆಳೆಸಿದ ತಾಯಿಗೆ ತಬ್ಬಲಿ ಮರಿಗಳನ್ನು ಸಾಕೋದು ಯಾವ ಕಷ್ಟ..ಗೋ ಹೆಡ್ ಎಂದು ಪ್ರೋತ್ಸಾಹಿಸಿತ್ತು ಪಶುಪಾಲನೆ ಆಸ್ಪತ್ರೆ ಆಡಳಿತ. ಅಧಿಕಾರಿಗಳು ತನ್ನಮೇಲೆ ಇಟ್ಟ ನಂಬಿಕೆಗೆ ಕಿಂಚಿತ್ ದ್ರೋಹ ಬಗೆಯದೆ ನಿಷ್ಕಲ್ಮಶ ಮನಸಿನಿಂದ ಕೆಲಸ ಮಾಡಿಕೊಂಡು ಬಂದಿದ್ದಾರೆ ಸಾವಿತ್ರಮ್ಮ.

 

ಮರಿಗಳನ್ನು ಕಂಡು ಮುದ್ದಾಡಿದ ಮೇಲೆಯೇ ಬೆಳಗಿನ ತಿಂಡಿ..: ಬೆಳಗ್ಗೆ 6 ಗಂಟೆಗೆ ಎದ್ದು ಮನೆ ಕೆಲಸವನ್ನೆಲ್ಲಾ ಮುಗಿಸಿ ಬನ್ನೇರುಘಟ್ಟದತ್ತ ಹೊರಡುವ ಸಾವಿತ್ರಮ್ಮ ತಿಂಡಿ ತಿನ್ನೋದೇ ತನ್ನ ನಿರೀಕ್ಷೆಯಲ್ಲೇ ಇರುವ ತಬ್ಬಲಿ ಪ್ರಾಣಿ ಮರಿಗಳಿಗೆ ಹಾಲುಣಿಸಿದ ಮೇಲೆ.ಅವು ಹಾಲು ಕುಡಿದು ಸಂತ್ರಪ್ತವಾಗಿದ್ದನ್ನು ಖಾತ್ರಿ ಮಾಡಿಕೊಂಡಿಯೇ ಸಾವಿತ್ರಮ್ಮ ತಿಂಡಿ ತಿನ್ತಾರೆ.ಆ ಮರಿಗಳು ಅಷ್ಟೇ ಸಾವಿತ್ರಮ್ಮ ಬಂದ ಮೇಲೆಯೇ ಹಾಲು ಕುಡಿಯೋದು.ಆಕೆ ಬರುತ್ತಿರುವುದನ್ನು ವಾಸನೆಯಲ್ಲೇ ಗ್ರಹಿಸುವ ಮರಿಗಳು,ಪಂಜರದ ಬಾಗಿಲು ತೆರೆಯುತ್ತಿದ್ದಂತೆ ಆಕೆಯ ಮೇಲೆ ಪ್ರೀತಿಯಿಂದ ಎರಗುತ್ತವೆ. ಪರಚುತ್ತವೆ.ಮುದ್ದಾಡುತ್ತವೆ.ಹೀಗೆ ಮುದ್ದಾಡುವಾಗ ಕೆಲವೊಮ್ಮೆ ತರಚಿದ ಗಾಯಗಳಾಗುವುದುಂಟು.ಆದರೆ ಅದಕ್ಕೆ ತಲೆಕೆಡಿಸಿಕೊಳ್ಳದೆ ಗಾಯಕ್ಕೆ ಮುಲಾಮು ಹಚ್ಚಿಕೊಂಡು ಮರಿಗಳ ಚಿನ್ನಾಟದ ನಡುವೆ ಎಲ್ಲಾ ನೋವನ್ನು ಮರೆಯುತ್ತಿದ್ದಾಳೆ ಈ ಮಾತೃಹೃದಯಿ.

 

ಸಾವಿತ್ರಮ್ಮಳ ಕೈಯಲ್ಲಿ ಹಾಲು ಕುಡಿದು, ಮಡಿಲಲ್ಲಿ ನಲಿದಾಡಿ ಝೂ ಸೇರಿರುವ ಎಷ್ಟೋ ಪ್ರಾಣಿಗಳು ಇಂದಿಗೂ ಪ್ರೀತಿ-ವಿಶ್ವಾಸ-ನಂಬುಗೆಯನ್ನು ಉಳಿಸಿಕೊಂಡಿವೆ ಎನ್ನುವುದು ಅಚ್ಚರಿ.ಆಗಾಗ ಝೂಗಳ ಬಳಿ ಹೋದಾಗ ಸಾವಿ ತ್ರಮ್ಮರ ನ್ನು ದೂರದಿಂದಲೇ ನೋಡುವ,ಆಕೆಯ ಧ್ವನಿಯಲ್ಲಿನ ಮಮಕಾರವನ್ನು ಪತ್ತೆ ಮಾಡುವ ಪ್ರಾಣಿಗಳು ಓಡೋಡಿ ಆಕೆ ಬಳಿ ಬರುತ್ವೆ.

ಆಕೆ ಹೇಳಿದ ಮಾತನ್ನು ಕೇಳುತ್ತವೆ.ಆಕೆ ನೀಡುವ ಸಲಹೆ-ಸೂಚನೆಗಳನ್ನು ಪಾಲಿಸುತ್ತವೆ.ಎಷ್ಟೇ ಕ್ರೂರ ಪ್ರಾಣಿಗಳಿರಲಿ,ಅವುಗಳನ್ನು ಪ್ರೀತಿಯಿಂದ ಗೆಲ್ಲಬಹುದು.ಅವಕ್ಕೆ ನಾವು ಪ್ರೀತಿ ಕೊಟ್ಟರ ಅವು ನಮಗೆ ಪ್ರೀತಿ ಕೊಡುತ್ತವೆ. ನಾವು ಮಾನವಸಹಜ ದರ್ಪದಿಂದ ಅವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳು ತ್ತೇವೆ ಎಂದುಕೊಂಡ್ರೆ ಅದು ಸಾಧ್ಯವೇ ಇಲ್ಲ ಎನ್ನುತ್ತಾರೆ ಸಾವಿತ್ರಮ್ಮ.

 

ಸಾವಿತ್ರಮ್ಮಗೆ ಬೇಕಿರುವುದು ಪ್ರಚಾರವಲ್ಲ.ಹೊಗಳಿಕೆಯಲ್ಲ… ಹುಲಿ,ಸಿಂಹ,ಚಿರತೆ,ಆನೆ,ಕರಡಿ..ಹೀಗೆ ತಾಯಿಂದ ಬೇರ್ಪಟ್ಟು ಮಾತೃತ್ವದ ಅನುಭವದಿಂದ ವಂಚಿತವಾಗುವ ಅನಾಥ-ತಬ್ಬಲಿ ಮರಿಗಳ ಪಾಲಿನ ತಾಯಿಯಾಗಿ ಅನೇಕ ವರ್ಷಗಳಿಂದ ಝೂನಲ್ಲಿ ಕೆಲಸ ಮಾಡುತ್ತಿರುವ ಮಾತೃಹೃದಯಿ ಸಾವಿತ್ರಮ್ಮಗೆ ಬೇಕಿರುವುದು ಪ್ರಚಾರವಲ್ಲ, ಹೊಗಳಿಕೆಯಲ್ಲ..ಮೆಚ್ಚುಗೆಯ ಮಾತುಗಳಲ್ಲ.. ಆಕೆಯ ಕೆಲಸ ಮೆಚ್ಚಿ ಕೆಲವರು ನೀಡುವ ಭಕ್ಷೀಷೂ ಅಲ್ಲ.

 

ಸಾವಿತ್ರಮ್ಮಗೆ ತತ್ಕ್ಷಣಕ್ಕೆ ಬೇಕಿರುವುದು ಒಂದು ಸ್ವಂತ ಸೂರು.ಜತೆಗೆ 20 ವರ್ಷಗಳಿಂದ ಮಾಡುತ್ತಿರುವ ಕೆಲಸದ ಖಾಯಮಾತಿ..ಇದಿಷ್ಟಾದ್ರೆ ಸಾಕು. ಬದುಕು ಹಸನಾಗುತ್ತೆ. ನಾನು ನೆಮ್ಮದಿಯಿಂದ ಝೂನಲ್ಲಿ ತಬ್ಬಲಿ ಮರಿಗಳ ನಡುವೆ ಸಂಪೂರ್ಣ ಜೀವನ ಕಳೆದುಬಿಡ್ತೇನೆ ಎನ್ನುವ ಸಾವಿತ್ರಮ್ಮರ ನಿಜವಾದ ಕನಸನ್ನು ನನಸು ಮಾಡಬೇಕಾದ ಹೊಣೆ ಸಮಾಜದ ಮೇಲಿದೆ.ಆಕೆಯ ಅತ್ಯದ್ಭುತ ಹಾಗೂ ಸಾಹಸ ಮನೋಭಾವದ ಕೆಲಸವನ್ನು ಮೆಚ್ಚುವಂಥ ಸರ್ಕಾರಕ್ಕಿದೆ.ಈ ಕೆಲಸದ ಮೂಲಕ ಸಮಾಜ ಸಾವಿತ್ರಮ್ಮರ ಕೆಲಸವನ್ನು ಗೌರವಿಸಬಹುದೇನೋ..ಅಲ್ವಾ..

By BPN

Leave a Reply

Your email address will not be published. Required fields are marked *