---Advertisement---

Advertisement

ಆತ್ಮೀಯ ಓದುಗರೇ ..
ನಮ್ಮ ಗುರುವಾರದ ಅತಿಥಿ ಲೇಖಕರು ನನ್ನ ಸಹೋದರಿ  ಶೈಲಜಾ ಹಾಸನ್ ರವರು.

ಲೇಖಕರ  ಪರಿಚಯ
ಹೆಸರು:ಎನ್. ಶೈಲಜಾ ಹಾಸನ. 
ಶಿಕ್ಷಣ: ಎಂ.ಎ ,ಬಿಎಡ್.
ವೃತ್ತಿ: ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ, ಶಾಂತಿಗ್ರಾಮ

ಎನ್.ಶೈಲಜಾ ಹಾಸನ ರಾಜ್ಯದ ಪ್ರಮುಖ ಕಾದಂಬರಿಗಾರ್ತಿಯಾಗಿದ್ದು ಇವರ ಅನೇಕ ಕಾದಂಬರಿಗಳು ಸುಧಾ,ತರಂಗ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿ ಓದುಗರನ್ನು ಯಶಸ್ವಿಯಾಗಿ ತಲುಪಿ ಅಪಾರ ಮೆಚ್ಚುಗೆ ಪಡೆದಿವೆ.ಕಥಾ ಸಂಕಲನ,ಕಾದಂಬರಿ,ಲೇಖನಗಳ ಸಂಕಲನ,ಕವನ ಸಂಕಲನ ,ಪ್ರಬಂಧ ಸಂಕಲನ ಹೀಗೆ ಒಟ್ಟು 25 ಕೃತಿಗಳು ಪುಸ್ತಕ ರೂಪದಲ್ಲಿ ಹೊರಬಂದಿದೆ.ಅನೇಕ ಪ್ರಶಸ್ತಿ ಪುರಸ್ಕಾರಗಳು ಈ ಕೃತಿಗಳಿಗೆ ಲಭಿಸಿದೆ.

ಇವರ ಸಾಹಿತ್ಯ ಸಮಾಜಮುಖಿಯಾಗಿದ್ದು, ಸಾಮಾಜಿಕ ಸಮಸ್ಯೆಗಳಾದ ವೃದ್ಯಾಪ್ಯ, ವೃದ್ಧಾಶ್ರಮ, ರೈತರ ಆತ್ಮಹತ್ಯೆ, ಅದಕ್ಕೆ ಪರಿಹಾರ,ಸಾವಯುವ ಕೃಷಿ ,ಅದರ ಮಹತ್ವ,ಶಿಕ್ಷಣದ ಜೊತೆಗೆ ವೃತ್ತಿ ಕೌಶಲ ಹದಿಹರೆಯದ ಮಕ್ಕಳ ಸಮಸ್ಯೆಗಳು,ಮಾನಸಿಕ ಅಸ್ವಸ್ಥರ ಬಗ್ಗೆ, ಹೆಣ್ಣು ಮಕ್ಕಳ ಶಿಕ್ಷಣ,ಭ್ರೂಣ ಹತ್ಯೆಯಂತಹ ಪ್ರಸ್ತುತ ವಿಚಾರದ ಬಗ್ಗೆ, ಸರಳ ವಿವಾಹ,ಹೆಣ್ಣು ಮಕ್ಕಳ ಸಬಲೀಕರಣ ಹೀಗೆ ಹಲವಾರು ಗಂಭೀರ ವಿಚಾರಗಳ ಬಗ್ಗೆ ಕಾದಂಬರಿಯ ವಸ್ತುವಾಗಿಸಿ ಬರೆದಿರುವ ಶೈಲಜಾ ಹಾಸನ ಅವರ ಸಾಹಿತ್ಯ, ಸಮಾಜವನ್ನು ಬದಲಾವಣೆ ತರುವ ನಿಟ್ಟಿನಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.

ಕೃತಿಗಳು:
1.ಚಿಲ್ಲರೆ ಪುರಾಣ(ಹಾಸ್ಯ ಸಂಕಲನ)

2. ಮತ್ತೊಂದು ಅಂಗಳ(ಕಥಾ ಸಂಕಲನ
3. ಬೊಗಸೆಯೊಳಗಿನ ಬಿಂದು (ಕವನ ಸಂಕಲನ)
4. ಮಂಥನ(ಕಾದಂಬರಿ)
5.ಶಿಕ್ಷಣದತ್ತ ಒಂದು ನೋಟ( ಲೇಖನಗಳು)
6.ಮುಸ್ಸಂಜೆಯ ಮಿಂಚು(ತರಂಗ ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಸಾರವಾದಕಾದಂಬರಿ)
7.ಇಳಾ( ಸುಧಾ ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಸಾರವಾದ ಕಾದಂಬರಿ)
9. ದರ್ಪಣ(ಕಥಾಸಂಕಲನ)
10.ಮೌನಮೀರಿದ ಹೊತ್ತು( ಅಂಕಣ ಬರಹಗಳ ಸಂಕಲನಗಳು)
11.ಮೋಹ( ಸುಧಾ ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಸಾರವಾದ ಕಾದಂಬರಿ)
12. ಮಕ್ಕಳ ಕಥಾಗುಚ್ಛ(ಸಂಪಾದಿತ ಸಂಕಲನ)
13.ಹಿಂದಿನ ಬೆಂಚಿನ ಹುಡುಗಿಯರು(ಕಥಾಸಂಕಲನ)
14. ಏನೊ ದಾಹ ಏನೊ ಮೋಹ( ಸುಧಾ ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಸಾರವಾದ ಕಾದಂಬರಿ)
15.ಬದುಕಿನ ಬೊಗಸೆಯೊಳಗೆ(ಅಂಕಣ ಬರಹಗಳ ಸಂಗ್ರಹ)
16.ಅಂತರ (ಕಾದಂಬರಿ)
17.ಸಿನಿಮಾ ಟಾಕೀಸು(ಪ್ರಬಂಧಗಳ ಸಂಕಲನ)
18.ಸವಾರಿಗಳು(ಪ್ರಬಂಧಗಳ ಸಂಕಲನ)
19.ನಕ್ಸಲೈಟ್(ಕಥಾಸಂಕಲನ)
20.ಹೋರಾಟದ ಹಾದಿಯಲ್ಲಿ ಬೆಳ್ಳಿ ಹೆಜ್ಜೆ(ಸಂಪಾದಿತ ಕೃತಿ)
22.ಮಕ್ಕಳ ಸಾಹಿತ್ಯ (ಸಂಪಾದಿತಕೃತಿ)
23.ನೆರೆಹೊರೆ(ಲೇಖನಗಳು ಸಂಗ್ರಹ)
24. ಗಂಗೆಯ ದಡದಲಿ    (ಪ್ರವಾಸಕಥನ)
25.ನಿಲ್ಲು ನಿಲ್ಲೆ ಪತಂಗ( ಕಥಾಸಂಕಲನ)

ಪ್ರಶಸ್ತಿಗಳು: 1. “ತ್ರೀವೇಣಿ ಸಾಹಿತ್ಯ ಪ್ರಶಸ್ತಿ’ ಮೋಹ ಕಾದಂಬರಿಗೆ, ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು.
1.ಭಾರತಿ ರಾಜರಾವ್ ಮಧ್ಯಸ್ತ ದತ್ತಿ ಪ್ರಶಸ್ತಿ( ಕನ್ನಡ ಸಾಹಿತ್ಯ ಪರಿಷತ್ತು,ಬೆಂಗಳೂರು)
2. ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ಬೆಂಗಳೂರು.
3.ಮಾಳಗಿ ಮಾಲತೇಶ್ವರ ಪ್ರಶಸ್ತಿ, ಹಾವೇರಿ.
4.ರುಕ್ಮಿಣಿಬಾಯಿ ಸ್ಮಾರಕ ಸಾಹಿತ್ಯಪ್ರಶಸ್ತಿ, ಬೆಂಗಳೂರು.
5.ಗೌರಿರಾಮಯ್ಯ ದತ್ತಿ ಪ್ರಶಸ್ತಿ(ಭಾರತೀಯ ಕರ್ನಾಟಕ ಸಂಘ, ಬೆಂಗಳೂರು)
6.ಉಮಾದೇವಿ ಶಂಕರರಾವ್ ದತ್ತಿ ಬಹುಮಾನ( ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು)
7.ರಾಘವೇಂದ್ರ ಪ್ರಕಾಶನ, ಅಂಕೋಲ ರಾಜ್ಯ ಮಟ್ಟದ ಕಥಾಸ್ಪರ್ಧೆಯಲ್ಲಿ ಬಹುಮಾನ.
8. ಮಲ್ಲಿಗೆ ಕಥಾ ಬಹುಮಾನ.
9. ಈ ಭಾನುವಾರ ಪತ್ರಿಕೆಯ ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಬಹುಮಾನ.
10. ಲೇಖಕಿಯರ ಟ್ರಸ್ಟ್ ಮೈಸೂರು, ರಾಜ್ಯ ಮಟ್ಟದ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ.
11. ಕರ್ನಾಟಕ ಲೇಖಕಿಯರ ಸಂಘದ ಉಮಾದೇವಿ ಶಂಕರರಾವ್ ದತ್ತಿ ಬಹುಮಾನ “ನಕ್ಸಲೈಟ್” ಕಥೆಗೆ.
12.ರಾಮಸ್ವಾಮಿ ಅಯ್ಯಂಗಾರ್ ಸಾಾಹಿತ್ಯ ಪ್ರಶಸ್ತಿ,ಸಾಾಹಿತ್ಯ ಪರಿಷತ್ತು,ಹಾಸನ.
13.ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಬೆಂಗಳೂರು. “ಮೌನ ಮೀರಿದ ಹೊತ್ತು” ಕೃತಿಗೆ
14.ಅನನ್ಯ ಪ್ರಕಾಶನ ಪುಸ್ತಕ ಪ್ರಶಸ್ತಿ, ಬೆಂಗಳೂರು.” ಏನುಮೋಹ ಯಾವ ದಾಹ”ಕೃತಿಗೆ.
15.ಡಾ:ಕರೀಂಖಾನ್ ಸಾಹಿತ್ಯ ಪ್ರಶಸ್ತಿ,ಕೇಂದ್ರ ಸಾಹಿತ್ಯ ವೇದಿಕೆ ,ಬೆಂಗಳೂರು.
16. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಸಾಹಿತ್ಯ ಪ್ರಶಸ್ತಿ, ಸಾಹಿತ್ಯ ಪರಿಷತ್ತು,ಹಾಸನ.
17.ಬಂದಮ್ಮ ಸಿದ್ದರಾಮಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ, ಜಿಲ್ಲಾ ಲೇಖಕಿಯರ ಬಳಗ,ಹಾಸನ.
18.”ಕನ್ನಡರತ್ನ” ಪ್ರಶಸ್ತಿ ,ವಚನ ಸಾಹಿತ್ಯ ಪರಿಷತ್ತು, ಬೆಂಗಳೂರು.
19.ವಿಶಿಷ್ಟಲೇಖಕಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು.
20.ಸಾಹಿತ್ಯಶ್ರಿ ಪ್ರಶಸ್ತಿ, ಹೆಣ್ಣು ಜಗದ ಕಣ್ಣು ಸಾಹಿತ್ಯ ವೇದಿಕೆ, ರಾಯಚೂರು.
21.ಸಂಜೆ ಸಾಹಿತ್ಯ ಪ್ರಶಸ್ತಿ,ಜಿವಾಜಿಮೆಹಂದಳೆ,  ನಿಲ್ಲು ನಿಲ್ಲೆ ಪತಂಗ ಕೃತಿಗೆ

ಹಾಗಾದ್ರೆ ಕಥೆ ಓದೋಣ ಪ್ರಿಯರೆ …

ಅವಸರ ಅವಸರವಾಗಿ ಮನೆಗೆ ಬಂದ ಮನು ಉದ್ವೇಗದಿಂದ “ಸರೂ,ಶರಭ ಭಾವನಿಗೆ ಲಕ್ವಾ ಹೊಡೆದಿದೆಯಂತೆ ಕಣೆ”ಅಂತ ಹೇಳಿದಾಗ ಆಘಾತವಾಗಿತ್ತು ಸರುವಿಗೆ. “ಹೌದಾ,ಯಾರು ಹೇಳಿದ್ದು ” ಕ್ಷೀಣವಾಗಿ ಕೇಳಿದಳು.
“ರಂಜು ಫೋನ್ ಮಾಡಿದ್ದ ಕಣೆ,ರಜೆ ಹಾಕಿ ಬಂದುಬಿಟ್ಟಿದ್ದೆನೆ, ಹೇಗಿದ್ದಾರೋ ಏನೋ,ನೀನೂ ಬಂದುಬಿಡು. ನೋಡಿಕೊಂಡು ಬರೋಣ” ಅಂತ ಹೇಳಿದ ಧ್ವನಿಯಲ್ಲಿ ಗಾಭರಿ ,ಆತಂಕ ಎರಡೂ ತುಂಬಿತ್ತು.
” ಅಯ್ಯೋ ದೇವರೇ, ಇದೇನಾಗಿ ಹೋಯ್ತು ಮನು, ಶರಭಣ್ಣ ಯಾವಾಗಲೂ ಪಾದರಸದಂತೆ ಓಡಾಡಿಕೊಂಡಿದ್ದರು.ಅತ್ತಿಗೆ ಹೋದ ಮೇಲೆಯೇ ಅವರು ಸೋತು ಹೋಗಿದ್ದು. ಅವರನ್ನು ಈ ಸ್ಥಿತಿಯಲ್ಲಿ ಹೇಗಪ್ಪಾ ನೋಡುವುದು” ಸರಿತಾಗೆ ನೋವು, ಕನಿಕರ, ಬೇಸರ ಒಟ್ಟೊಟ್ಟಿಗೆ ಒತ್ತಿಕೊಂಡು ಬಂದಿತ್ತು. ಆದರೆ ಈ ಕ್ಷಣವೇ ಹೊರಡಲು ಅವಳಿಗೆ ಕಷ್ಟ ಅನಿಸಿ
“ನೀವು ಹೋಗಿ ಬನ್ನಿ ಮನು, ಅಭಿ ಬರುತ್ತಾನಲ್ಲ,ಅವನು,ನಾನು ಹೋಗಿ ಬರುತ್ತೇವೆ, ಅವನಿಗೂ ಮಾವ ಅಂದ್ರೆ ತುಂಬಾ ಪ್ರೀತಿ” ಅಂದಾಗ ಹೆಚ್ಚು ಬಲವಂತಿಸದೆ ಸರಿ ನಾನು ಹೋಗಿ ಬರುತ್ತೇನೆ ಅಂತ ಹೊರಟು ಬಿಟ್ಟನು.

ಮನು ಹೋದ ಮೇಲೂ ಸರಿತಾಳ ಮನಸ್ಸು ಭಾರವಾಗಿಯೇ ಇತ್ತು. ಕೆಲಸ ಮಾಡಲು ಮೂಡಿಲ್ಲದೆ ಸುಮ್ಮನೆ ಕುಳಿತು ಬಿಟ್ಟಳು.ಬೇಡವೆಂದರೂ ಶರಭಣ್ಣ ನೆನಪು ಒತ್ತಿಕೊಂಡು ಬರಲಾರಂಭಿಸಿತು. ಶರಭಣ್ಣ ಮನುವಿನ ಅಕ್ಕ ಮೀನಾ ಅತ್ತಿಗೆಯ ಗಂಡ.
ಸರಿತಾಳ ಜೀವನದಲ್ಲಿ ಶರಭಣ್ಣನ ಪಾತ್ರ ಅಗಾಧವಾಗಿಯೆ ಇತ್ತು.ಮದುವೆಗೂ ಮೊದಲೆ ಸರಿತಳನ್ನು ನೋಡಿ, ಒಳ್ಳೆಯ ಹುಡುಗಿ, ಮನುವಿಗೆ ಸರಿಯಾದ ಜೋಡಿ ಅಂತ ಅತ್ತೆ ಮನೆಯವರಿಗೆ ರೆಕ್ಮಂಡ್ ಮಾಡಿದ್ದೆ ಈ ಶರಭಣ್ಣ. ಮನೆಯಲ್ಲಿ ಸರಿತಾಗೆ ಗಂಡು ಹುಡುಕುತ್ತಿದ್ದರು.ಮನು ತಂದೆ ತಾಯಿ ಜೊತೆ ಸರಿತಾಳನ್ನು ನೋಡಿ ಹೋದ ಮೇಲೆ ತಿಂಗಳಾದರೂ ಅವರಿಂದ ಉತ್ತರ ಬಂದಿರಲಿಲ್ಲ.ಆಗ ಅಮ್ಮನ ಚಡಪಡಿಕೆ ಜಾಸ್ತಿಯಾಗಿತ್ತು. ಈ ಗಂಡು ತಮ್ಮ ಮಗಳಿಗೆ ಎಲ್ಲ ರೀತಿಯಲ್ಲೂ ಸರಿಹೊಂದುತ್ತದೆ,ಈ ಮದುವೆ ಆಗಿಬಿಟ್ಟರೆ ಮಗಳು ಸುಖವಾಗಿರುತ್ತಾಳೆ ಅನ್ನೊದು ಅಮ್ಮನ ನಂಬಿಕೆ.ಆದರೆ ಅವರು ಏನೂ ಹೇಳದೆ ಇದ್ದಾಗ ಅವರ ಮೇಲಿನ ಅಸಮಾಧಾನ ಹೆಚ್ಚಾಗಿತ್ತು.

“ಒಪ್ಪಿಗೆ ಅನ್ನಬೇಕು , ಇಲ್ಲದಿದ್ದರೆ ಒಪ್ಪಿಗೆ ಆಗಲಿಲ್ಲ ಅಂತನಾದ್ರೂ ಹೇಳಬೇಕು, ಹೀಗೆ ಸುಮ್ಮನೆ ಇದ್ದು ಬಿಟ್ಟರೆ ನಾವು ಏನು ಅಂದುಕೋಬೇಕು “ಅಂತ ಅಮ್ಮ ಹೇಳ್ತಾನೆ ಇದ್ದಾಗ “ಬಿಡಮ್ಮ, ಪ್ರಪಂಚದಲ್ಲಿ ಇವನೊಬ್ಬನೆ ಗಂಡಾ ಇರೋದು,ಇವನಲ್ಲದಿದ್ದರೆ ಇವನಪ್ಪನಂತವನು ಸಿಗುತ್ತಾನೆ” ಅಂತ ಅಣ್ಣ ಹೇಳುತ್ತಿದ್ದ. ಸರಿತಾಗೂ ಅದು ಸರಿ ಅನಿಸಿ ಅಣ್ಣನನ್ನು ಸಪೋರ್ಟ್ ಮಾಡುತ್ತಿದ್ದಳು.ಆದರೆ ಮಕ್ಕಳಿಬ್ಬರ ಮಾತುಗಳು ಅಮ್ಮನಿಗೆ ಇಷ್ಟವಾಗುತ್ತಿರಲಿಲ್ಲ “ನಿಮಗೆಲ್ಲ ನನ್ನ ಪರಿಸ್ಥಿತಿ ಅರ್ಥ ಆಗಲ್ಲ, ಬೆಂಕಿನಾ ಸೆರಗಲ್ಲಿ ಕಟ್ಟಿಕೊಂಡು ಒದ್ದಾಡ್ತಾ ಇದ್ದಿನಿ” ಅಂತ ಮಾಮೂಲಿ ಡೈಲಾಗ್ ಹೊಡೆದಾಗ” ನಾನೇನು ಬೆಂಕಿನಾ” ಅಂತ ಸರಿತಾ ಜಗಳಕ್ಕೆ ನಿಂತು ಬಿಡುತ್ತಿದ್ದಳು.ಮಗಳಿಂದ ಬೈಸಿಕೊಂಡು ಗೊಣಗಿಕೊಂಡು ಸುಮ್ಮನಾಗುತ್ತಿದ್ದರು.
ಸರಿತ ಉದ್ಯೋಗ ನಿಮಿತ್ತ ಬೇರೆ ಊರಿನಲ್ಲಿ ಇದ್ದದ್ದುರಿಂದ ಅಮ್ಮನ ಹತ್ತಿರ ಹೆಚ್ಚು ಜಗಳ ಮಾಡದೆ ಇರಬೇಕಿತ್ತು.ತಿಂಗಳಿಗೊಮ್ಮೆ ಊರಿಗೆ ಬರುವ ಅವಳು ಒಳ್ಳೆಯ ನೆನಪುಗಳನ್ನು ಮಾತ್ರ ಹೊತ್ತೊಯ್ಯುವ ಹಂಬಲದಿಂದ ಅಮ್ಮನನ್ನ ಹೆಚ್ಚು ಗೋಳು ಹುಯ್ದು ಕೊಳ್ಳಬಾರದೆಂದು ನಿರ್ಧರಿಸಿದ್ದಳು.

ಒಂದೆರಡು ದಿನಗಳಲ್ಲಿ ಸರಿತಾ ಉದ್ಯೋಗ ಮಾಡುತ್ತಿದ್ದ ಸ್ಥಳಕ್ಕೆ ಒಬ್ಬ ವ್ಯಕ್ತಿ ಹುಡುಕಿಕೊಂಡು ಬಂದರು.ತಾವೇ ತಮ್ಮನ್ನು ಪರಿಚಯಿಸಿಕೊಂಡು “ನಾನು ಶರಭಣ್ಣ, ನಿನ್ನನ್ನು ನೋಡಿ ಕೊಂಡು ಹೋಗಿದ್ದ ಹುಡುಗನ ಭಾವ. ಈ ಕಡೆ ಬಂದಿದ್ದೆ, ಹಾಗೆ ನಿನ್ನನ್ನು ನೋಡಿ ಕೊಂಡು, ಮಾತನಾಡಿಸಿಕೊಂಡು ಹೋಗೋಣ ಅಂತ ಬಂದೆ ” ಅಂತ ಅಂದಾಗ ಆಶ್ಚರ್ಯ ಆಗಿತ್ತು. ಬಹಳ ಆತ್ಮೀಯವಾಗಿ ಮಾತನಾಡಿ ಸಂಕೋಚ ಹೋಗಲಾಡಿಸಿದ್ದರಿಂದ ಸರಿತಾ ಸಹಜವಾಗಿಯೇ ಅವರೊಂದಿಗೆ ಮಾತನಾಡಿದ್ದಳು. ಸ್ವಲ್ಪ ಹೊತ್ತು ಅವಳೊಂದಿಗೆ ಅವಳ ಉದ್ಯೋಗ,ಅವಳ ಮನೆಯವರ ಬಗ್ಗೆ ಮಾತನಾಡಿ ಅವರ ಭಾವಮೈದನನ ಬಗ್ಗೆಯೂ ಮಾತನಾಡಿ ಹೊರಡುತ್ತೆನೆ ಅಂತ ಹೊರಟು ಬಿಟ್ಟಿದ್ದರು.ನಂತರ ಅವಳ ಕೆಲಸದ ಒತ್ತಡದಲ್ಲಿ ಆ ವಿಷಯ ಮರೆತೂ ಬಿಟ್ಟಿದ್ಧಳು.
ಅದಾಗಿ ಮುಂದಿನ ವಾರವೆ ಗಂಡಿನ ಕಡೆಯವರು ದಿಢೀರನೇ ಬಂದು ನಿಮ್ಮ ಹುಡುಗಿ ನಮಗೆ ಒಪ್ಪಿಗೆ, ಮಾತುಕತೆ ನಡೆಸೋಣ ಬನ್ನಿ ಅಂತ ತಮ್ಮ ಮನೆಗೆ ಬರಲು ಆಹ್ವಾನ ನೀಡಿದಾಗ ಅಮ್ಮನಿಗೆ ಹೆಚ್ಚು ಖುಷಿಯಾಗಿತ್ತು. ಗಂಡು ಮಕ್ಕಳೊಂದಿಗೆ ಗಂಡಿನ ಮನೆಗೆ ಹೋಗಿ ಮನೆ ನೋಡಿ,ಗಂಡಿನವರ ನಡೆನುಡಿ ಬಹಳಷ್ಟು ಹಿಡಿಸಿ ಮನಃಪೂರ್ವಕವಾಗಿ ಒಪ್ಪಿ ತನ್ನ ಮಗಳು ಇದೆ ಮನೆ ಸೊಸೆ ಅಂತ ಮನದಲ್ಲಿ ನಿಶ್ಚಯಿಸಿಕೊಂಡು ಬಂದಿದ್ದರು. ಆಗೆಲ್ಲ ಫೋನ್, ಮೊಬೈಲ್ ಇಲ್ಲದ ಕಾಲ.ಇದ್ಯಾವೂದು ಸರಿತಾಗೆ ತಿಳಿದಿರಲಿಲ್ಲ.

ಭಾನುವಾರ ಎಂದಿನಂತೆ ಅವಳು ಮನೆಗೆ ಬಂದಾಗಲೇ ಗೊತ್ತಾಗಿದ್ದು ತನಗೇ ಗೊತ್ತಿಲ್ಲದೆ ತನ್ನ ಮದುವೆ ನಿಶ್ಚಯವಾಗಿರುವುದು. ಬೇಡವೆನ್ನಲು ಅವಳಿಗೂ ಕಾರಣ ಇರಲಿಲ್ಲ.ಹಾಗಾಗಿ ಮಾತುಕತೆ ನಡೆದು ನಿಶ್ಚಿತಾರ್ಥವೂ ನಡೆದುಹೋಯಿತು. ನಿಶ್ಚಿತಾರ್ಥದಲ್ಲಿ ಗಂಡಿನವರು ಹೆಣ್ಣಿನ ಕಡೆಯವರು ಅನ್ನೋ ಭೇದವಿಲ್ಲದೆ ಒಂದೆಮನೆಯವರಂತೆ ಸಂಭ್ರಮದಲ್ಲಿ ಓಡಾಡುತ್ತಿದ್ದ ಗಂಡಿನವರ ಸರಳತೆ ಎಲ್ಲರಿಗೂ ಇಷ್ಟವಾಗಿತ್ತು.

ಅದರಲ್ಲೂ ಶರಭಣ್ಣ,ಮೀನಾ ಅತ್ತಿಗೆ ಅಂತೂ ನಾವೀಗ ಹೆಣ್ಣಿನ ಕಡೆಯವರು ಅಂತ ಹೇಳುತ್ತಾ ಹೆಣ್ಣಿನವರೊಂದಿಗೆ ಸೇರಿಕೊಂಡಿದ್ದು, ಅವರು ತೋರಿದ ಆತ್ಮೀಯತೆ ಪ್ರೀತಿ ಸರಿತಾಗೆ ಇದ್ದ ಒಂದಿಷ್ಟು ಆತಂಕವನ್ನೂ ದೂರಮಾಡಿತ್ತು. ಮದುವೆಯಲ್ಲಿಯೂ ಹಾಗೆ ಓಡಾಡಿ ಮದುವೆ ನಿರ್ವಿಘ್ನವಾಗಿ ನೆರವೇರಲು ಕಾರಣಕರ್ತರಾದರು. ಮದುವೆಯಾದ ಮೇಲೂ ಈ ಸಂಬಂಧ ಹಾಗೆ ಮುಂದುವರಿಯಿತು.ತೌರುಮನೆಗೆ ಹೋಗುವಂತೆ ಮೀನಾ ಅತ್ತಿಗೆ ಮನೆಗೆ ಹೋಗಿ ವಾರಗಟ್ಟಲೆ ಸರಿತಾ ಉಳಿಯುತ್ತಿದ್ದಳು. ಹೆಣ್ಣು ಮಕ್ಕಳು ಇಲ್ಲದ ಅತ್ತಿಗೆಗೆ ಸರಿತಾಳೆ ಮಗಳಾಗಿದ್ದಳು.ಅಭಿ ಹುಟ್ಟಿದ ಮೇಲಂತೂ ಅವನು ಅವರ ಮನೆಯ ಕಣ್ಮಣಿಯೆ ಆಗಿಬಿಟ್ಟನು. ಸರಿತಾ ವರ್ಷಕ್ಕೆರಡು ಸಲ ಅವರ ಮನೆಗೆ ಮಗನೊಂದಿಗೆ ಹೋಗಿ ತಿಂಗಳುಗಟ್ಟಲೆ ಇದ್ದು ಬರುತ್ತಿದ್ದಳು. ಅಲ್ಲಿರುವ ತನಕ ಮಗನನ್ನು ಶರಭಣ್ಣ ಕೆಳಗೆ ಇಳಿಸುತ್ತಿರಲಿಲ್ಲ. ಅವನನ್ನು ಹೆಗಲಮೇಲೆ ಹೊತ್ತುಕೊಂಡು ತೋಟವನ್ನೆಲ್ಲ ಸುತ್ತಿ,ದನ ಕರು ತೋರಿಸುತ್ತಾ ಹೊಳೆ, ಗದ್ದೆಯಲ್ಲೆಲ್ಲ ಓಡಾಡಿಸುತ್ತಾ ಪ್ರಕೃತಿಯ ಮಗನಾಗಿಸಿ ಬಿಟ್ಟಿದ್ದರು.ಅವನಿಗೂ ಶರಭಮಾವ ಅಂದರೆ ಪಂಚಪ್ರಾಣ.ಮಾಮಾ ಮಾಮ ಅಂತ ಅವರ ಹಿಂದೆ ಮುಂದೆ ಸುತ್ತುತ್ತಲೆ ಇರುತ್ತಿದ್ದನು.ಅತ್ತಿಗೆಯ ವಾತ್ಸಲ್ಯದ ಉಪಚಾರ, ಮಕ್ಕಳ ಒಡನಾಟ,ಶರಭಣ್ಣನ ಮಮತೆಯಲ್ಲಿ ದಿನಗಳು ಉರುಳಿದ್ದೆ ತಿಳಿಯುತ್ತಿರಲಿಲ್ಲ. ಅಲ್ಲಿಂದ ವಾಪಾಸು ಬರಲು ಮನಸ್ಸು ಇರದಿದ್ದರೂ ಮನು ಒಬ್ಬನೆ ಇರುತ್ತಾನೆಂದು ಬೇಸರದಿಂದಲೆ ವಾಪಸ್ ಬರುತ್ತಿದ್ದಳು.

ಈ ಮಧುರ ಸಂಬಂಧ ಹೀಗೆ ಮುಂದುವರೆದರೆ ಚೆನ್ನಾಗಿರುತ್ತಿತ್ತೆನೊ. ಆದರೆ ಶರಭಣ್ಣನ ಕೆಲವು ಧೋರಣೆಯಿಂದ ಮನಸ್ಸು ಮುರಿಯತೊಡಗಿತು. ಮೀನಾ ಅತ್ತಿಗೆ ತಮ್ಮನ ಮನೆಗೆ ಎಂದೂ ಒಂಟಿಯಾಗಿ ಬರುತ್ತಿರಲಿಲ್ಲ. ಬರುತ್ತಿರಲಿಲ್ಲ ಅನ್ನುವುದಕ್ಕಿಂತಲೂ ಬರಲು ಶರಭಣ್ಣ ಬಿಡುತ್ತಿರಲಿಲ್ಲ ಅನ್ನೋದೆ ಸರಿ.ಸದಾ ಮೀನತ್ತಿಗೆಯನ್ನು ಎಲ್ಲಾ ವಿಷಯಗಳಲ್ಲೂ ನಿಯಂತ್ರಿಸುತ್ತಿದ್ಧ ಅವರ ಹಿಟ್ಲರ್ ಬುದ್ಧಿ ಸರಿತಾಗೆ ಹಿಡಿಸದೆ ಅತ್ತಿಗೆಯ ಪರ ಸದಾ ವಾದಕ್ಕೆ ನಿಲ್ಲುತ್ತಿದ್ದಳು. ಆದರೂ ಗೆಲುವೇನು ಅವಳಿಗೆ ದಕ್ಕುತ್ತಿರಲಿಲ್ಲ. ಅತ್ತಿಗೆಯ ಕಣ್ಣಲ್ಲಿ ನೋವಿನ ಎಳೆ ಕಂಡಾಗ ಶರಭಣ್ಣನ ಮೇಲಿನ ಅಸಮಾಧಾನ ಮತ್ತಷ್ಟು ಹೆಚ್ಚಾಗುತ್ತಿತ್ತು.ಅತ್ತಿಗೆ ಒಂದಿಷ್ಟು ದಿನ ತಮ್ಮ ಮನೆಯಲ್ಲಿ ಇರಲಿ ಎಂದು ಸರಿತಾ ಆಶಿಸುತ್ತಿದ್ದಳು. ಅತ್ತಿಗೆ ಮಾತ್ರ ತೌರು ಮನೆಯಲ್ಲಿ ಉಳಿಯಲು ಇಷ್ಟವಿದ್ದರೂ ಗಂಡನನ್ನು ಎದುರು ಹಾಕಿಕೊಳ್ಳದೆ ಅವರು ಕರೆದು ಕ್ಷಣವೆ ಅವರ ಹಿಂದೆ ಹೊರಟು ಬಿಡುತ್ತಿದ್ದರು. ಆದರೆ ಅವರ ಕಣ್ಣುಗಳಲ್ಲಿ ಮಡುಗಟ್ಟಿದ ನೋವು ಸರಿತಾಳನ್ನು ಕದಡಿ ಬಿಡುತ್ತಿತ್ತು. ಆ ನೋವು ಕಡಿಮೆ ಮಾಡುವ ಅವಕಾಶವನ್ನು ಕೊಡದ ಶರಭಣ್ಣನ ಮೇಲೆ ಸಹಜವಾಗಿಯೇ ಅಸಮಾಧಾನ ,ಕೋಪ ,ಅಸಹನೆ ಮೂಡುತ್ತಿತ್ತು.

ಆ ಅಸಮಾಧಾನ ,ಕೋಪ ಮತ್ತಷ್ಟು ಹೆಚ್ಚಾಗಲು ಕಾರಣವಾದ್ದು ಅವರ ಮಗ ರಂಜು ಮದುವೆ. ರಂಜುವಿಗೆ ಹೆಣ್ಣು ನೋಡುವುದರಿಂದ ಹಿಡಿದು ಮದುವೆ ಮಾತುಕಥೆ, ನಿಶ್ಚಿತಾರ್ಥ,ಮದುವೆ ಬಟ್ಟೆ ,ಒಡವೆ ಕೊಳ್ಳುವುದರಿಂದ ಹಿಡಿದು ಎಲ್ಲಾ ಓಡಾಟವೂ ಸರಿತಾ ಮತ್ತು ಮನುವಿನದೆ. ಎಂಟು ದಿನ ಮುಂಚೆಯೆ ಮದುವೆ ಮನೆಗೆ ಹೋಗಿ ಮದುವೆ ಮನೆ ಜವಾಬ್ದಾರಿ ತೆಗೆದುಕೊಂಡು ಓಡಾಡಿದ್ದರು. ಮದುವೆ ಮನೆಯಲ್ಲಿ ಎಲ್ಲದಕ್ಕೂ ಅತ್ತಿಗೆ ಸರಿತಾಳನ್ನೆ ಕರೆಯುತ್ತಿದ್ದರು.ಅವಳಿಗೂ ಸಂಭ್ರಮವೆ.ಆದರೆ ಆ ಸಂಭ್ರಮ ಶರಭಣ್ಣನ ಧೋರಣೆಯಿಂದ ಎರಡೇ ದಿನದಲ್ಲಿ ಕರಗಿ ಹೋಯಿತು.ಮದುವೆ ,ಬೀಗರೂಟ ಎಲ್ಲಾ ಮುಗಿಸಿ,ಮದುವೆ ಚೆನ್ನಾಗಿ ಆಯಿತಲ್ಲ ಅನ್ನೋ ಸಂತೋಷದಿಂದಲೆ ಮನು ಸರಿತಾ ಹೊರಟು ನಿಂತಾಗ ಶರಭಣ್ಣ ಈಗ ಹೊರಡೋದು ಬೇಡ ಇನ್ನೂ ಒಂದು ವಾರ ಇಲ್ಲೆ ಇರಬೇಕು ಅಂತ ಹಟ ಮಾಡಿದರು.

ಅಭಿಗೆ ಸ್ಕೂಲ್ ಇದೆ,ಮನುಗೂ ,ನನಗೂ ರಜೆ ಇಲ್ಲ ಅಂತ ಸರಿತಾ ಎಷ್ಟು ಹೇಳಿದರೂ ಕೇಳ್ತಾ ಇಲ್ಲ. ಕೊನೆಗೆ ಬೇಸತ್ತು ಸುಮ್ಮನೆ ಲಗೇಜ್ ಹಿಡಿದು ಹೊರಟುಬಿಟ್ಟರು.ಮನೆ ಮಗಳಂತೆ ಓಡಾಡಿದ ಅಕ್ಕರೆಯ ನಾದಿನಿಗೆ ಕುಂಕುಮ ಕೊಡೋಕೂ ಅವಕಾಶ ಕೊಡಲಿಲ್ಲ ಅನ್ನೋ ಕೊರಗು ಅತ್ತಿಗೆಗೆ ಸದಾ ಕಾಡುವಂತೆ ಮಾಡಿದ ಶರಭಣ್ಣನನ್ನು ಸರಿತಾ ಕ್ಷಮಿಸುವಂತೆಯೆ ಇರಲಿಲ್ಲ. ಅಷ್ಟೇಲ್ಲ ಓಡಾಡಿ ಕೊನೆಗೂ ಹಾಗೆ ಬೇಸರದಿಂದ ಅವರ ಮನೆಯಿಂದ ಬಂದಿದ್ದು ತುಂಬಾ ಪೆಚ್ಚೆನಿಸಿತ್ತು.
ಆದರೆ ಕೆಲವೆ ದಿನಗಳಲ್ಲಿ ಆ ಬೇಸರ ಕೋಪ ಎಲ್ಲವೂ ಕರಗಿಹೋಗುವಂತೆ ಮಾಡಿಬಿಟ್ಟರು ಶರಭಣ್ಣ. ಮನು ಹೊಸ ಮನೆ ಕಟ್ಟಲು ಶುರು ಮಾಡಿದಾಗ ಶರಭಣ್ಣ ಊರಿನಿಂದ ಬಂದು ತಾವೇ ಮುಂದೆ ನಿಂತು ಎಲ್ಲಾ ಜವಾಬ್ದಾರಿಯನ್ನು ಹೊತ್ತಾಗ ಮನೆ ಕಟ್ಟಿಸಲು ಹೆಚ್ಚು ಕಷ್ಟವಾಗಲಿಲ್ಲ.ಅವರನ್ನು ಮತ್ತೆ ಹಚ್ಚಿಕೊಂಡರು.ಅವರ ಮೇಲಿದ್ದ ಅಭಿಮಾನ,ಗೌರವ ಹೆಚ್ಚಾಯಿತು.ಆದರೆ ಅವರ ಸಣ್ಣ ಬುದ್ಧಿ ಮಾತ್ರ ಬದಲಾಗಲೆ ಇಲ್ಲ. ಮನೆ ಕಟ್ಟುವಾಗ ಅಷ್ಟೆಲ್ಲ ಓಡಾಡಿ ಗೃಹಪ್ರವೇಶಕ್ಕೂ ತಾವೆ ಮುಂದೆ ನಿಂತು ಗೃಹಪ್ರವೇಶ ಸಾಂಗವಾಗಿ ನೆರವೇರುವಂತೆ ಮಾಡಿದ ಶರಭಣ್ಣ ಉಡುಗೊರೆ ಕೊಡುವಾಗ ಮಾತ್ರ ರಂಜುವಿಗೆ ಮದುವೆಯಲ್ಲಿ ಕೊಟ್ಟ ಉಂಗುರವನ್ನೆ ವಾಪಸ್ಸು ಮನುಗೆ ಉಡುಗೊರೆಯಾಗಿ ನೀಡಿ,ತಾವು ಹೇಳಿದಂತೆ ಮಗನ ಮದುವೆಯಲ್ಲಿ ಉಳಿಯಲಿಲ್ಲ ಅನ್ನೋ ಕೋಪವನ್ನು ಹೀಗೆ ತೀರಿಸಿಕೊಂಡಿದ್ದು ತೀವ್ರ ಅಪಮಾನ ಎನಿಸಿದ್ದು ಸುಳ್ಳಲ್ಲ.ಅದೆ ಕೋಪದಲ್ಲಿ ಅತ್ತಿಗೆ ನೊಂದುಕೊಳ್ಳುತ್ತಾರೆ ಅಂತ ಗೊತ್ತಿದ್ದರೂ ಮತ್ತೆ ಅವರ ಮನೆಗೆ ಹೋಗುವುದನ್ನು ಸರಿತಾ ಬಿಟ್ಟು ಬಿಟ್ಟಳು. ಆದರೆ ಶರಭಣ್ಣ ಮಾತ್ರ ಏನೂ ಆಗಿಲ್ಲ ಅನ್ನುವಂತೆ ಅತ್ತಿಗೆ ಜೊತೆ ಮನೆಗೆ ಬಂದು ಉಳಿದು ಹೋಗುತ್ತಿದ್ದರು. ಬಂದು ಹೋದ ಮೇಲೆ ಸುಮ್ಮನೇನು ಇರುತ್ತಿರಲಿಲ್ಲ. ನೆಂಟರಿಷ್ಟರ ಬಳಿ ಮನು ಮತ್ತು ಅವನ ಹೆಂಡತಿ ಸದಾ ಜಗಳ ಆಡುತ್ತಿರುತ್ತಾರೆ, ಅವರ ಜಗಳ ನೋಡೋಕೆ ಆಗಲ್ಲ ಅಂತ ಹೇಳಿಕೊಂಡು ಬರೋ ಕೆಟ್ಟ ಚಾಳಿ ಬೇರೆ ಶುರುಮಾಡಿಕೊಂಡಿದ್ದರು. ಅದು ಗೊತ್ತಾದ ಮೇಲೂ ಅತ್ತಿಗೆಗಾಗಿ ಶರಭಣ್ಣನನ್ನು ಸಹಿಸಿಕೊಳ್ಳಲೆ ಬೇಕಿತ್ತು.

ಮನೆ ಅಂದ ಮೇಲೆ ಮಾತುಕತೆ ಇದ್ದೆ ಇರುತ್ತದೆ.ಆದರೆ ಅದನ್ನೆ ಜಗಳ ಅಂತ ಊರೆಲ್ಲೆಲ್ಲಾ ಹೇಳಿಕೊಂಡು ಬರ್ತಾ ಇದ್ರೆ ಸಹಿಸೋದಾದ್ರೂ ಹೇಗೆ. ಇದು ಮನುಗೂ ಇರಿಸುಮುರಿಸು ಆಗ್ತಾ ಇತ್ತು. ಆದರೆ ಭಾವ ಆದ್ದರಿಂದ ಸಹಿಸಿಕೊಳ್ಳಬೇಕು ಅಂತ ಸುಮ್ಮನಾಗುತ್ತಿದ್ದನು. ಆದರೆ ಸರಿತಾಗೆ ಸಹಿಸಿಕೊಂಡು ಇರಲಾಗುತ್ತಿರಲಿಲ್ಲ. ಶರಭಣ್ಣ ಎದುರಿಗೆ ಸಿಕ್ಕಾಗಲೆಲ್ಲಾ ರೇಗುತ್ತಿದ್ದಳು.ಅವರೇನು ಅದಕ್ಕೆಲ್ಲ ಸೊಪ್ಪು ಹಾಕದೆ ತಮ್ಮ ಎಂದಿನ ವರಸೆ ಮುಂದುವರಿಸಿದ್ದರು.ಹಾಳಾಗಿ ಹೋಗಲಿ ಅಂತ ಇವರೆ ಸುಮ್ಮನಾಗಬೇಕಿತ್ತು. ಹಾಗೆ ಸುಮ್ಮನಾಗಿದ್ದರು ಕೂಡಾ.
ಆದರೆ ವಿಧಿ ಬೇರೆಯೇ ಬರೆದಿತ್ತು. ಹೊಟ್ಟೆ ನೋವು ಅಂತ ಆಸ್ಪತ್ರೆಗೆ ತೋರಿಸಿದ ಮೀನಾಗೆ ಕ್ಯಾನ್ಸರ್ ಅಂತ ಗೊತ್ತಾದಾಗ, ಶರಭಣ್ಣ ಮಗುವಿನಂತೆ ಅಳುತ್ತಾ
ಫೋನ್ ಮಾಡಿದ್ದರು. ಸರಿತಾ ,ಮನು ಭೂಮಿಗಿಳಿದು ಹೋದರು. ತಕ್ಷಣವೇ ಒಳ್ಳೆಯ ಕಡೆ ಚಿಕಿತ್ಸೆ ಕೊಡಿಸಿ ಮೀನಳನ್ನು ಉಳಿಸಿಕೊಳ್ಳಬೇಕು ಅಂತ ಮನು ಸರಿತಾ ಮೀನಾ ಮನೆಗೆ ಓಡೋಡಿ ಹೋದರು. ಶರಭಣ್ಣ ಮಾತ್ರ ಹೆಂಡತಿಯನ್ನು ಕಳಿಸಲು ಒಪ್ಪಲೆ ಇಲ್ಲ. “ನನ್ನ ಹೆಂಡತಿನಾ ನಾನೇ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೆನೆ, ನಿಮಗ್ಯಾಕೆ ತೊಂದರೆ “ಅಂತ ಮುಖಕ್ಕೆ ಹೊಡೆದ ಹಾಗೆ ಹೇಳಿಬಿಟ್ಟಾಗ ಪೆಚ್ಚಾಗಿ ಬಿಟ್ಟರು.

ಮೀನಾ ಅಸಹಾಯಕತೆಯಿಂದ ಸರಿತಾ ಕಡೆ ನೋಡಿದಾಗ ಸರಿತಾಗೆ ಕರುಳು ಕತ್ತರಿಸಿದಂತಾಯಿತು. ಮೀನತ್ತಿಗೆ ಗಂಡನ ನಡೆಯಿಂದ ಕುಗ್ಗಿಹೋದರು . ಮೊದಲೆ ಹೆದರಿಕೆಯಿಂದ ಅರ್ಧ ಸತ್ತಿದ್ದ ಮೀನತ್ತಿಗೆ ಈಗ ಗಂಡನ ಮೊಂಡು ಹಠ, ತಮ್ಮನಿಗೆ ಆತ ನೀಡಿದ ಉತ್ತರದಿಂದ ಪೂರ್ತಿ ಸತ್ತಂತಾದರು.
ಅದು ಸಾಲದೆಂಬಂತೆ ಹೆಂಡತಿಯನ್ನು ಮನು ಸರಿತಳ ಮುಂದೆಯೇ” ನಿನಗೇನು ಆಗಲ್ಲ ಮೀನಾ,ನನಗೆ ಗೊತ್ತಿರುವವರು ಇದಕ್ಕೆ ಔಷಧಿ ಕೊಡುತ್ತಾರೆ, ನಾಳೆ ಅಲ್ಲಿಗೆ ಕರೆದುಕೊಂಡು ಹೋಗುತ್ತೆನೆ,ಒಂದೇ ತಿಂಗಳಲ್ಲಿ ನಿನ್ನ ಖಾಯಿಲೆ ಹೆದರಿ ಓಡಿ ಹೋಗುತ್ತೆ” ಆ ಮಾತುಗಳಲ್ಲಿ ಉಡಾಫೆ ಕಂಡಂತಾಗಿ ಮನುವಿಗೆ ರೇಗಿ ಹೋಯಿತು.
“ಅಕ್ಕ, ಹೊರಡು ನಮ್ಮ ಜೊತೆ,ಭಾವ ನೀವೂ ಹೊರಡಿ .ಒಂದುಸಲ ಒಳ್ಳೆ ಆಸ್ಪತ್ರೆಗೆ ಕರೆದುಕೊಂಡು ತೋರಿಸೋಣ, ಆಮೇಲೆ ನಿಮಗೆ ಗೊತ್ತಿರುವವರ ಬಳಿ ಕರೆದುಕೊಂಡು ಹೋಗುವಿರಂತೆ ” ಗಟ್ಟಿ ಧ್ವನಿಯಲ್ಲಿ ಮನು ಹೇಳಿದನು.ಶರಭಣ್ಣ ಮಾತ್ರ ಕುಳಿತ ಕಡೆಯಿಂದ ಅಲ್ಲಾಡಲಿಲ್ಲ.

“ಅಕ್ಕ ,ಭಾವ ಬರದೆ ಇದ್ದರೂ ಪರವಾಗಿಲ್ಲ,ನೀನು ಹೊರಡು,ನಾವು ಇರುತ್ತೆವಲ್ಲ.ಭಾವ ಆಮೇಲೆ ಬರ್ತರೆ” ಮೀನಳನ್ನು ಮನು ಬಲವಂತಿಸಿದ. ಸರಿತಾ ಕೂಡಾ” ಇದನ್ನೆಲ್ಲ ನಿರ್ಲಕ್ಷ್ಯ ಮಾಡಬಾರದು ಅತ್ತಿಗೆ, ಮೊದಲು ಒಳ್ಳೆಯ ಡಾಕ್ಟರ್ ಹತ್ತಿರ ತೋರಿಸೋಣ, ತಡ ಮಾಡೊದು ತುಂಬಾ ಅಪಾಯ,ಹೊರಡಿ , ಅತ್ತಿಗೆ ” ಮೀನಳನ್ನು ಬಲವಂತಿಸಿದಳು.ಗಂಡ ಏನು ಹೇಳುತ್ತಾರೊ ಅಂತ ದೈನ್ಯದಿಂದ ಮೀನತ್ತಿಗೆ ಅವರನ್ನೆ ನೋಡಿದಳು. ಅವರು ಏನೂ ಹೇಳದಿದ್ದಾಗ ಮೀನಾಗೆ ಹೊರಡುವ ಧೈರ್ಯ ಬರಲಿಲ್ಲ.
ಮನುಗೂ ತಾಳ್ಮೆ ಮೀರಿತು.”ಸರಿ ಹಾಗಾದ್ರೆ, ನಿನ್ನ ಹಣೆಬರಹ, ನಾವು ಏನು ಮಾಡೋಕೆ ಆಗುತ್ತೆ ,ನಾವು ಹೊರಡುತ್ತೆವೆ” ದುರ್ದಾನತೆಗೆದುಕೊಂಡವನಂತೆ ದಢಾರನೆ ಎದ್ದು ನಿಂತನು. ಇಂತ ಸಮಯದಲ್ಲಿಯೂ ಕೂಡ ಗಂಡನ ಮಾತು ಮೀರದ ಅಕ್ಕನ ಮೇಲೆ ಕೋಪ ಬಂದು ಮುನಿಸಿನಿಂದ ಮನು ಸರಿತಾಳನ್ನು ಬಲವಂತವಾಗಿ ಹೊರಡಿಸಿಕೊಂಡು ಹೊರಟೆ ಬಿಟ್ಟ. ಮನೆಗೆ ಹೋದ ಮೇಲೂ ಸರಿತಾ,ಮನು ಫೋನ್ ಮೇಲೆ ಫೋನ್ ಮಾಡಿದರೂ ಶರಭಣ್ಣ ತಮ್ಮ ಹಟ ಬಿಡಲಿಲ್ಲ. ಹತಾಶರಾಗಿಬಿಟ್ಟರು ಇಬ್ಬರೂ. ಆತಂಕದಿಂದಲೇ ದಿನ ಕಳೆಯುವಂತಾಗಿತ್ತು
ಅದಾಗಿ ನಾಲ್ಕೈದು ತಿಂಗಳು ಕಳೆದಿರಬಹುದು.ಸರಿತಾಗೆ ಮೀನಾಳಿಂದ ಫೋನ್ ಬಂತು. “ಸರು,ನನ್ನ ಕರ್ಕೊಂಡು ಹೋಗೆ,ಈ ನೋವು ಸಹಿಸೋಕೆ ಆಗ್ತಾ ಇಲ್ಲ,ಇಲ್ಯಾರು ನನ್ನ ನೋಡ್ಕೊತ್ತಿಲ್ಲ,ನೀನು ಬರದೆ ಇದ್ದರೆ ನಾನು ಸತ್ತೆ ಹೋಗುತ್ತೆನೆ” ಅಂತ ಹೇಳಿಕೊಂಡು ಅತ್ತಾಗ ಸರಿತಾಗೆ ತಡೆದುಕೊಳ್ಳಲಾಗದೆ ಅವರೊಂದಿಗೆ ತಾನೂ ಅತ್ತು ಬಿಟ್ಟಳು.
ಅಳುತ್ತಲೆ “ಬರುತ್ತೇನೆ ಅತ್ತಿಗೆ,ನೀವು ಸಾಯೋಕೆ ಬಿಡಲ್ಲ ನಾನು,ಈಗಲೆ ಮನುಗೆ ಫೋನ್ ಮಾಡಿ ಅವರನ್ನು ಕರ್ಕೋಂಡು ಬರ್ತಿನಿ ,ನೀವು ಧೈರ್ಯವಾಗಿರಿ” ಅಂತ ಸಮಾಧಾನಿಸಿ ತಕ್ಷಣವೆ ಹೊರಟಳು.ಮನು ಕೂಡ ಒಂದೂ ಮಾತಾಡದೆ ಅವಳ ಜೊತೆ ಬಂದನು.

ಮೀನಳ ಸ್ಥಿತಿ ನೋಡಿ ದಂಪತಿಗಳ ಧೈರ್ಯವೆ ಉಡುಗಿ ಹೋಯಿತು. ಸಾವಿಗೆ ಸಮೀಪದಲ್ಲಿ ಇದ್ದಾಳೆ ಅನ್ನೋದು ಗೊತ್ತಾಗಿ ಹೋಯಿತು. ಕಣ್ಣೀರು ಹಾಕುತ್ತಲೆ ಮೀನಳನ್ನು ಕಾರಿಗೆ ಹತ್ತಿಸಿಕೊಂಡು ಹೊರಟಾಗ ಶರಭಣ್ಣ ಮೆಲ್ಲನೆ ಹೆಂಡತಿ ಜೊತೆ ಅವಳ ಮೆಡಿಕಲ್ ರಿಪೋರ್ಟ್ ಹಿಡಿದು ಕಾರು ಹತ್ತಿದ್ದನ್ನು ಕಂಡಾಗ ಜುಗುಪ್ಸೆ ಮೂಡಿತು.ಕಂಡರೂ ಕಾಣದಂತೆ ನಿರ್ಲಕ್ಷ್ಯ ಮಾಡುತ್ತಾ ಮನು ಕಾರು ಚಲಾಯಿಸಿದ.ಸೀದಾ ದೊಡ್ಡ ನರ್ಸಿಂಗ್ ಹೋಂ ಬಳಿ ಕಾರು ನಿಲ್ಲಿಸಿ ಮೊದಲು ಮನು ಒಳಹೋಗಿ ಅಕ್ಕನಿಗೆ ಬೇಕಾದ ವೈದ್ಯರು ಇರುವುದನ್ನು ಖಚಿತ ಪಡಿಸಿಕೊಂಡು ನಂತರ ಮೀನಳನ್ನು ಕರೆದೊಯ್ದನು. ಅವರ ಸಂದೇಹ ಸರಿಯಾಗಿಯೇ ಇತ್ತು. ಮೀನಳನ್ನು ಪರೀಕ್ಷಿಸಿದ ವೈದ್ಯರು ಮನುವನ್ನು ಹೊರಗೆ ಕರೆದು ಕಾಲಮೀರಿಹೋಗಿದೆ, ಇರುವಷ್ಟು ದಿನ ಚೆನ್ನಾಗಿ ನೋಡಿಕೊಳ್ಳಿ ಎಂದು ಬಿಟ್ಟರು. ವಿಷಯ ಗೊತ್ತಾದ ಮೇಲೂ ಶರಭಣ್ಣ ಮೀನಕ್ಕಳನ್ನು ತವರು ಮನೆಗೆ ಕಳಿಸಲು ಒಪ್ಪದೆ ತಮ್ಮ ಜೊತೆ ಕರೆದುಕೊಂಡು ಹೋಗಲು ಸಿದ್ಧವಾಗಿಬಿಟ್ಟರು. ಮನು ಸರಿತಾ ಎಷ್ಟು ಕೇಳಿಕೊಂಡರೂ ಕೇಳಲಿಲ್ಲ.
ಮೀನಕ್ಕಳನ್ನು ತಮ್ಮ ಉಡಾಫೆ, ಕೆಟ್ಟ ಹಟದಿಂದ ಸಾವಿಗೆ ಸಮೀಪ ಕರೆದೊಯ್ದ ,ಕೊನೆಯ ದಿನಗಳನ್ನಾದರೂ ನೆಮ್ಮದಿಯಾಗಿ ಕಳೆಯಲೂ ಬಿಡದ ಶರಭಣ್ಣನ ಮೇಲೆ ಸರಿತಳಿಗೆ ಶಾಶ್ವತವಾಗಿ ದ್ವೇಷ, ಜುಗುಪ್ಸೆ,ಬೇಸರ ,ಕೋಪ ನೋವು ಉಳಿದು ಬಿಟ್ಟಿತು. ಹೆಂಡತಿ ಹೋದಮೇಲೆಯೇ ಅವಳ ಬೆಲೆ ಗೊತ್ತಾಗೋದು ಅಂದುಕೊಂಡು ಸುಮ್ಮನಾಗಿ ಬಿಟ್ಟರು. ಅದು ಹಾಗೆ ಆಯಿತು.ಮೀನತ್ತಿಗೆ ನರಳಿ ನರಳಿ ಅಂತ್ಯ ಕಂಡರು.ಅಂತಹ ದುರಂತ ಪರಿಸ್ಥಿತಿ ತಂದಿದ್ದು ಶರಭಣ್ಣ. ಈಗ ಅದೆ ಮನುಷ್ಯನಿಗೆ ಹುಷಾರಿಲ್ಲ ಅಂತ ಅಂದಾಗ ಹೋಗಲು ಮನಸ್ಸೇ ಬರುವುದೆ, ಕಠಿಣಳಾಗಿ ಮನೆಯಲ್ಲಿ ಉಳಿದುಬಿಟ್ಟಳು.

ಅಂದೇ ವಾಪಸ್ಸಾದ ಮನು “ಸರೂ ,ಭಾವ ತುಂಬಾ ಸೋತು ಹೋಗಿದ್ದಾರೆ ಕಣೆ, ಮಕ್ಕಳು,ಸೊಸೆಯರು ತೀರಾ ನಿಕೃಷ್ಟವಾಗಿ ಕಾಣ್ತರೆ ಅಂತ ಕಾಣುತ್ತೆ. ಹಾಸಿಗೆ ಮೇಲೆಯೇ ಎಲ್ಲಾ.ಮಕ್ಕಳೆ ಮಾಡಬೇಕು,ಇವರಿಗೊ ತುಂಬಾ ಆತ್ಮಾಭಿಮಾನ, ಸಹಿಸಿಕೊಳ್ಳೊಕೆ ಆಗ್ತಾ ಇಲ್ಲ ಅನ್ನಿಸುತ್ತೆ,ಊಟನೆ ಬಿಟ್ಟು ಬಿಟ್ಟಿದ್ದಾರೆ .ನನ್ನ ನೋಡಿದ ಕೂಡಲೇ ಮಗುವಿನಂತೆ ಅತ್ತು ಬಿಟ್ಟರು.ನೀನೂ ಬರುತ್ತೀಯಾ ಅಂತ ನಿರೀಕ್ಷಿಸಿದ್ದರು ಅಂತ ಕಾಣುತ್ತೆ,ನೀನು ಬಂದಿಲ್ಲ ಅಂತ ಪೆಚ್ಚಾಗಿ ಬಿಟ್ಟರು,ನಾಳೆನೆ ಹೋಗಿ ಬಾ ಸರು” ಭಾರವಾದ ಧ್ವನಿಯಲ್ಲಿ ಹೇಳಿದಾಗ ಸರಿತಾಗೆ ನಿಜಕ್ಕೂ ನೋವಾಯಿತು.ಅವರು ಏನೇ ಮಾಡಿದ್ದರೂ ನನ್ನ ಪ್ರೀತಿಯ ಮೀನತ್ತಿಗೆಯ ಗಂಡ ಅವರು.ಅವರಿಗೆ ಇಂತಹ ಸ್ಥಿತಿ ಬರಬಾರದಿತ್ತು ಅಂತ ಸರಿತಾ ಮರುಗಿದಳು.ಆದರೆ ನಾಳೆಯೂ ಹೋಗಲಾಗಲಿಲ್ಲ. ಶರಭಣ್ಣನನ್ನು ಆ ಹೀನಾಯ ಸ್ಥಿತಿಯಲ್ಲಿ ನೋಡಬಾರದೇನೋ ಎಂಬಂತೆ ಅವರ ಸಾವಿನ ಸುದ್ದಿ ಬಂದೆ ಬಿಟ್ಟಿತು. ಆ ಕ್ಷಣದಲ್ಲಿ ದುಃಖ ಉಮ್ಮಳಿಸಿ ಬಂತು.ಭಾರವಾದ ಮನಸ್ಸಿನಿಂದಲೇ ಹೋದಾಗ ಮುಖ ಕಂಡ ಕೂಡಲೆ “ಈಗ ಬಂದ್ರಲ್ಲ ಅತ್ತೆ, ಅಪ್ಪ ನಿಮ್ಮನ್ನು ತುಂಬಾ ನೆನೆಸಿಕೊಳ್ಳುತ್ತಿದ್ದರು,ಅಭಿನಂತು ನೋಡಬೇಕು ಅಂತ ಹಂಬಲಿಸುತ್ತಿದ್ದರು .ಕೊನೆಗೂ ನೀವು ಬರಲೆ ಇಲ್ಲ” ರಂಜಿತ್ ಹನಿಗಣ್ಣಾದಾಗ ಪಶ್ಚಾತ್ತಾಪದ ಉರಿ ಸರಿತಾಳನ್ನು ತಾಗಿ ನೋವಿನಿಂದ ಅವಳ ಕಣ್ಣುಗಳಲ್ಲಿ ದಳದಳನೆ ಕಣ್ಣೀರು ಇಳಿಯಿತು.

ಮತ್ತೆ ಭಾನುವಾರವೂ ಸಹ ಸಹೋದರಿ ಶೈಲಜಾ ಹಾಸನ್ ರವರ ಮತ್ತೊಂದು ಕಥೆಯೊಡನೆ ಭೇಟಿಯಾಗೋಣ ಪ್ರಿಯರೆ .

BPN ಸುದ್ಧಿ ವಾರಕ್ಕೊಂದು ಕಥೆ ವಿಭಾಗ     

Belagaviphotonews.com

By BPN

One thought on “ವಾರಕ್ಕೊಂದು ಕಥೆಯಲ್ಲಿ ಅತಿಥಿ ಲೇಖಕರ ಕಥೆ”

Leave a Reply

Your email address will not be published. Required fields are marked *