ಕೆಯುಡಬ್ಲ್ಯೂಜೆ
ಶ್ರೀಮತಿ ಯಶೋದಮ್ಮ ಜಿ ನಾರಾಯಣ ಪ್ರಶಸ್ತಿಗೆ ನಾಗಮಣಿ ಎಸ್ ರಾವ್ ಆಯ್ಕೆ
ಬೆಂಗಳೂರು:BPN ಸುದ್ಧಿ: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಶ್ರೀಮತಿ ಯಶೋದಮ್ಮ ಜಿ. ನಾರಾಯಣ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ ನಾಗಮಣಿ ಎಸ್ ರಾವ್ ಆಯ್ಕೆ ಆಗಿದ್ದಾರೆ.
ವರದಿಗಾರರಾಗಿ ಪತ್ರಿಕೋದ್ಯಮ ಪ್ರವೇಶ ಮಾಡಿದ ಅವರು ಆಕಾಶವಾಣಿ ಸೇರಿದರು. ಅವರ ಕಂಚಿನ ಕಂಠದ ಪ್ರದೇಶ ಸಮಾಚಾರ ವಾರ್ತೆ ಮೂಲಕ ಮನೆಮಾತಾದವರು.
ವಿಧಾನ ಸಭೆ ಅಧಿವೇಶನ, ಭಾರತ ಪಾಕ್ ಯುದ್ಧದ ವರದಿಗಳನ್ನು ಆ ಕಾಲಘಟ್ಟದಲ್ಲಿ ಮನತಟ್ಟುವ ರೀತಿಯಲ್ಲಿ ಕಟ್ಟಿಕೊಟ್ಟದ್ದು ವಿಶೇಷ.
ಎಂಬತ್ತೇಳನೇ ವಸಂತಕ್ಕೆ ಕಾಲಿಟ್ಟಿರುವ ಅವರು
ಸುದ್ದಿ ಮನೆಯಲ್ಲಿ ದಶಕಗಳ ಕಾಲ ದಣಿವರಿಯದೆ ಕೆಲಸ ಮಾಡಿದವರು. ಅವರ ಸುಧೀರ್ಘ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು
ಪ್ರಶಸ್ತಿಯು 5 ಸಾವಿರ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಮೈಸೂರಿನಲ್ಲಿ ನಡೆಯುವ ಕೆಯುಡಬ್ಲ್ಯೂಜೆ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ವಿವರ:
ನಾಗಮಣಿ.ಎಸ್.ರಾವ್ ವಾರ್ತೆಗಳನ್ನು ಓದುವ ಶೈಲಿಯೇ ವಿಶಿಷ್ಟವಾದದ್ದು ಆಗಿತ್ತು. ಸ್ಪುಟ, ಸ್ಪಷ್ಟ ಮಧುರವಾಣಿ ಅವರದು.
ಆಕಾಶವಾಣಿ ಸುದ್ದಿ ವಿಭಾಗದಲ್ಲಿ ಭಾರತೀಯ ಸಮಾಚಾರ ಸೇವೆಯ ಅಧಿಕಾರಿಯಾಗಿ, ಸಹಾಯಕ ಸಂಪಾದಕಿಯಾಗಿ ಅತ್ಯಂತ ಸಂಕೀರ್ಣವಾದ ಪರಿಸ್ಥಿತಿಗಳಲ್ಲಿ ಅವರು ನಿರ್ವಹಿಸಿದ ಪಾತ್ರ ಮಹತ್ತರವಾದುದು.
1962 ರ ಭಾರತ — ಚೀನಾ ಸಮರ, 1965 ರ ಭಾರತ-ಪಾಕ್ ಯುದ್ಧ, 1971 ರ ಬಾಂಗ್ಲಾ ವಿಮೋಚನಾ ಸಮರ, 1962-94 ರ ನಡೆದ ಸಾರ್ವತ್ರಿಕ ಚುನಾವಣೆಗಳು, ದುರಂತಗಳು, ಅಪಘಾತಗಳು ಮುಂತಾದ ಸಂದರ್ಭಗಳಲ್ಲಿ ಅವರು ಪ್ರಸಾರ ಕಾರ್ಯಕ್ರಮಗಳನ್ನು ಕಟ್ಟಿಕೊಡುತ್ತಿದ್ದ ರೀತಿ ಅನನ್ಯವಾದದುದಾಗಿತ್ತು.
ಹಣಕಾಸು ನಿರ್ವಹಣೆ, ಮೂಢನಂಬಿಕೆಗಳ ನಿವಾರಣೆ, ವೈಜ್ಞಾನಿಕ ಮನೋಭಾವದ ಬೆಳವಣಿಗೆ, ಸಾಮಾಜಿಕ ಬದಲಾವಣೆ, ಮಹಿಳಾ ಜಾಗೃತಿ ಮೊದಲಾದ ವಿಷಯಗಳ ಬಗೆಗೆ ಲೇಖನಗಳನ್ನು ಬರೆದು ಗಮನಸೆಳೆದವರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಕಾರ್ಯದರ್ಶಿ ಮತ್ತು ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಇಂದಿರಾ ಗಾಂಧಿ ಅವರು ಬೆಂಗಳೂರು ಕೆ.ಜಿ.ರಸ್ತೆಯಲ್ಲಿನ ಕಲ್ಲಿನಕಟ್ಟಡದಲ್ಲಿದ್ದ ಕೆಯುಡಬ್ಲ್ಯೂಜೆ ಕಚೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರನ್ನು ಸ್ವಾಗತ ಮಾಡಿದ ಆ ಕಾಲ ಘಟ್ಟದ ಏಕೈಕ ಮಹಿಳಾ ಪತ್ರಕರ್ತೆಯೂ ಹೌದು.
1992 ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ, ಪಡೆದ ಪ್ರಥಮ ಮಹಿಳಾ ಪತ್ರಕರ್ತೆ ನಾಗಮಣಿ.ಎಸ್. ರಾವ್ ಅವರು. 1993 ರಲ್ಲಿ ಆರಂಭವಾದ ಟಿಯೆಸ್ಸಾರ್ ಪ್ರಶಸ್ತಿಯನ್ನು 11 ವರ್ಷಗಳ ನಂತರ ಆ ಪ್ರಶಸ್ತಿಗೆ ಪಾತ್ರರಾದ ಮೊದಲ ಪತ್ರಕರ್ತೆ.
ಆರ್ಯಭಟ ಪ್ರಶಸ್ತಿ, ಸ್ವರ ಲಿಪಿ ಪ್ರತಿಷ್ಠಾನದ ಲಿಪಿಪ್ರಾಜ್ಞೆ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳೂ ಅವರಿಗೆ ಸಂದಿವೆ.
ಸ್ತ್ರೀಪಥ, ಧೀಮತಿಯರು ಇನ್ನೂ ಮುಂತಾದವು ನಾಗಮಣಿ.ಎಸ್.ರಾವ್ ಅವರ ಮಹತ್ವದ ಕೃತಿಗಳಾಗಿವೆ. ಏಕಲವ್ಯ ಮಕ್ಕಳ ಸಾಹಿತ್ಯ, ಸಂವರ್ಧಿನೀ, ಲೇಖ-ಲೋಕ-2, ಧೀಮಂತ ಪತ್ರಕರ್ತ ‘ತಾಯಿನಾಡು’ ಪಿ.ಆರ್.ರಾಮಯ್ಯ, ರಂಗಲೇಖಕಿ, ಬಸ್ಸಿನೊಳಗೊಂದು ಪ್ರಜಾಪ್ರಭುತ್ವ ಮತ್ತು ಇತರ ನಾಟಕಗಳಲ್ಲದೇ, ಚಿಂತಲಪಲ್ಲಿ ವೆಂಕಟರಾವ್, ಟಿ.ಸುನಂದಮ್ಮ, ಮದರ್ ತೆರೇಸಾ ಮುಂತಾದವು ಅವರ ಕೃತಿಗಳು.
ಪ್ರಶಸ್ತಿಗೆ ಭಾಜನರಾಗಿರುವ
ನಾಗಮಣಿ ಎಸ್ ರಾವ್
ಅವರಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಭಿನಂದನೆ ಸಲ್ಲಿಸುತ್ತದೆ.
ಬೆಳಗಾವಿ ಫೋಟೋ ನ್ಯೂಸ್ ವತಿಯಿಂದ ಅಭಿನಂದನೆಗಳು